ಸಾಲಮನ್ನಾ ಹಣ ರೈತರ ಖಾತೆಗೆ ಪಾವತಿಗೆ 15 ದಿನದ ಗಡುವು : ಸುಳ್ಯ ತಾ.ಪಂ ಸಭೆಯಲ್ಲಿ ಖಡಕ್ ಸೂಚನೆ

February 12, 2020
8:39 PM

ಸುಳ್ಯ: ಹಸಿರು ಪಟ್ಟಿಯಲ್ಲಿ ಹೆಸರು ಸೇರ್ಪಡೆಯಾದ ಎಲ್ಲಾ ರೈತರ ಖಾತೆಗೆ ಮುಂದಿನ 15 ದಿನದಲ್ಲಿ ಸಾಲಮನ್ನಾ ಹಣ ಪಾವತಿ ಆಗಬೇಕು. ಈ ಕುರಿತು ಸಮಗ್ರ ಮಾಹಿತಿಯನ್ನು ಒಂದು ವಾರದಲ್ಲಿ ಸಲ್ಲಿಸಬೇಕು ಎಂದು ಸುಳ್ಯ ತಾಲೂಕು ಪಂಚಾಯತ್ ಸಾಮಾನ್ಯ ಸಭೆ ಸಹಕಾರ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದೆ.

ತಾ.ಪಂ.ಅಧ್ಯಕ್ಷ ಚನಿಯ ಕಲ್ತಡ್ಕ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ರೈತರ ಖಾತೆಗೆ ಸಾಲ ಮನ್ನಾ ಹಣ ಪಾವತಿಯಾಗದ ಬಗ್ಗೆ ಚರ್ಚೆ ನಡೆಯಿತು. ಸುಳ್ಯ ತಾಲೂಕಿನಲ್ಲಿ ಒಟ್ಟು 14,113 ಮಂದಿ ರೈತರಲ್ಲಿ 10,884 ರೈತರ ಹೆಸರು ಗ್ರೀನ್ ಲಿಸ್ಟ್ ಗೆ ಸೇರ್ಪಡೆ ಆಗಿದೆ 9,047 ಮಂದಿಯ ಖಾತೆಗೆ ಹಣ ಜಮೆ ಆಗಿದ್ದು 1,837 ರೈತರ ಖಾತೆಗೆ ಹಣ ಪಾವತಿಗೆ ಬಾಕಿ ಇದೆ ಎಂದು ಸಹಕಾರ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದರು. ಪಡಿತರ ಚೀಟಿ, ಆಧಾರ್ ಕಾರ್ಡ್, ಆರ್‍ಟಿಸಿ ಮತ್ತಿತರ ದಾಖಲೆ ಹೊಂದಿಕೆ ಆಗದ ಮತ್ತಿತರ ತಾಂತ್ರಿಕ ಸಮಸ್ಯೆಗಳಿಂದ ಬಾಕಿ ಉಳಿದಿದೆ. ತಿದ್ದುಪಡಿಗೆ ಅವಕಾಶ ದೊರೆತ ಕೂಡಲೇ ಅದನ್ನು ಸರಿಪಡಿಸಲಾಗುವುದು ಎಂದು ಅಧಿಕಾರಿಗಳು ಹೇಳಿದರು.

ಆರಂಭದಲ್ಲಿ ಖಾತೆ ಸಂಖ್ಯೆಯ ಸ್ಥಳದಲ್ಲಿ ಸೊನ್ನೆ ಹಾಕಲು ಹೇಳಿದ ಕಾರಣ ಮತ್ತು ಇಲಾಖೆಯ ಕೆಲವು ತಪ್ಪು ನಿರ್ಧಾರದಿಂದ ರೈತರಿಗೆ ಹಣ ಬಾರದೆ ಸಮಸ್ಯೆ ಆಗಿದೆ ಎಂದು ಸದಸ್ಯ ರಾಧಾಕೃಷ್ಣ ಬೊಳ್ಳುರು ಹೇಳಿದರು.

ಸಾಲ ಮನ್ನಾ ಪಾವತಿಯಲ್ಲಿ ಹಲವು ನ್ಯೂನತೆಗಳು ಇದೆ ಎಂದು ಸದಸ್ಯರಾದ ಅಶೋಕ್ ನೆಕ್ರಾಜೆ, ಉದಯ ಕೊಪ್ಪಡ್ಕ ಹೇಳಿದರು. ಸಮಸ್ಯೆಯನ್ನು ಕೂಡಲೇ ಸರಿಪಡಿಸಿದರೆ ಮಾತ್ರ ಹಣ ಬರಬಹುದು.

ಬಜೆಟ್ ಕಳೆದ ಮೇಲೆ ಮತ್ತೆ ಹಣ ಬರುವ ಸಾಧ್ಯತೆ ಇಲ್ಲ ಆದುದರಿಂದ ಕೂಡಲೇ ಸರಿಪಡಿಸಲು ಕ್ರಮ ಕೈಗೊಳ್ಳಿ ಎಂದು ಜಿಲ್ಲಾ ಪಂಚಾಯತ್ ಸದಸ್ಯ ಹರೀಶ್ ಕಂಜಿಪಿಲಿ ಹೇಳಿದರು. ಈ ಕುರಿತು ಬಹಳ ಹೊತ್ತು ಚರ್ಚೆ ನಡೆಯಿತು. 15 ದಿವಸದಲ್ಲಿ ಅರ್ಹರಾದ ಉಳಿದ ಎಲ್ಲಾ ರೈತರ ಖಾತೆಗೂ ಸಾಲಮನ್ನಾ ಹಣ ಪಾವತಿ ಮಾಡಲು ಕ್ರಮ ಕೈಗೊಳ್ಳಿ ಎಂದು ಅಧ್ಯಕ್ಷ ಚನಿಯ ಕಲ್ತಡ್ಕ ಸೂಚಿಸಿದರು.

ನಗರದ ಚರಂಡಿ ವ್ಯವಸ್ಥೆ- ನಗರಾಭಿವೃದ್ಧಿ ಸಚಿವರಿಗೆ ದೂರು:

ಸುಳ್ಯ ನಗರದಲ್ಲಿ ಸರಿಯಾಗಿ ಒಳಚರಂಡಿ ಮತ್ತು ಚರಂಡಿ ವ್ಯವಸ್ಥೆ ಇಲ್ಲದೆ ಕೊಳಚೆ ನೀರು ಹರಿಯದೆ ನಗರದಲ್ಲಿ ಕೊಳಚೆ ಸಮಸ್ಯೆ ಉಲ್ಬಣಗೊಂಡಿದೆ ಈ ಕುರಿತು ರಾಜ್ಯ ನಗರಾಭಿವೃದ್ಧಿ ಸಚಿವರಿಗೆ ಲಿಖಿತ ದೂರು ನೀಡುವುದಾಗಿ ಸದಸ್ಯ ರಾಧಾಕೃಷ್ಣ ಬೊಳ್ಳೂರು ಹೇಳಿದರು. ನಗರದ ಹಾಸ್ಟೇಲ್‍ಗಳ, ಆಸ್ಪತ್ರೆಗಳ ಕೊಳಚೆ ನೀರು ಸರಿಯಾಗಿ ಹರಿಯುತ್ತಿಲ್ಲ. ಚರಂಡಿ ವ್ಯವಸ್ಥೆ ಇಲ್ಲದೆ ಕೊಳಚೆ ನೀರು ರಸ್ತೆಗಳಲ್ಲಿ ಹರಿಯುತಿದೆ ಮತ್ತು ಪಯಸ್ವಿನಿ ನದಿಯ ಒಡಲು ಸೇರುತಿದೆ. ಕೋಟ್ಯಾಂತರ ರೂ ವ್ಯಯಿಸಿ ನಿರ್ಮಾಣ ಮಾಡಿದ ಒಳಚರಂಡಿ ವ್ಯವಸ್ಥೆ ವ್ಯರ್ಥವಾಗಿದೆ. ಅಲ್ಲಲ್ಲಿ ಕೊಳಚೆ ನೀರು ಸಂಗ್ರಹವಾಗಿ ರೋಗ ವಾಹಕ ಕೇಂದ್ರಗಳಾಗುತಿದೆ ಎಂದು ಹೇಳಿದ ಅವರು ಈ ಕುರಿತು ನಗರ ಪಂಚಾಯತ್ ಮುಖ್ಯಾಧಿಕಾರಿಯನ್ನು ಪ್ರಶ್ನಿಸಿದರು. ಬಹಳ ಹೊತ್ತು ಈ ಕುರಿತು ಚರ್ಚೆ, ವಾಗ್ವಾದ ನಡೆಯಿತು. ನಗರದಲ್ಲಿ ಚರಂಡಿ, ಒಳಚರಂಡಿ ವ್ಯವಸ್ಥೆಯನ್ನು ಸಮರ್ಪಕವಾಗಿ ನಿರ್ವಹಿಸುವುದು ಸ್ಥಳೀಯಾಡಳಿತಗಳ ಜವಾಬ್ದಾರಿ ಎಂದು ಸದಸ್ಯರು ಹೇಳಿದರು. ನಗರದ ಸ್ವಚ್ಛತೆಗೆ ಆದ್ಯತೆ ನೀಡುವಂತೆ ತಾ.ಪಂ.ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೂಚಿಸಿದರು. ನಗರದ ನೈರ್ಮಲ್ಯ ಹದಗೆಟ್ಟಿರುವ ಬಗ್ಗೆ ಸಚಿವರ ಗಮನಕ್ಕೆ ಬರುವುದಾಗಿ ರಾಧಾಕೃಷ್ಣ ಬೊಳ್ಳೂರು ಹೇಳಿದರು.

ನಗರದ ಕಸ ಜಾಲ್ಸೂರಿಗೆ ಹಾಕಲು ವಿರೋಧ:

ನಗರದ ತ್ಯಾಜ್ಯ ಸಂಸ್ಕರಣಾ ಕೇಂದ್ರ ಜಾಲ್ಸೂರಿನಲ್ಲಿ ಮಾಡುವುದಕ್ಕೆ ಗ್ರಾಮಸ್ಥರ ವಿರೋಧ ಇದೆ. ಅಲ್ಲಿ ಕಸ ಹಾಕುವುದು ಬೇಡ ಎಂದು ಗ್ರಾಮ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ ಎಂದು ತೀರ್ಥರಾಮ ಜಾಲ್ಸೂರು ಹೇಳಿದರು. ಡಂಪಿಂಗ್ ಯಾರ್ಡ್ ಮಾಡುವುದಲ್ಲ ಅಲ್ಲಿ ಕಸವನ್ನು ವೈಜ್ಞಾನಿಕವಾಗಿ ಸಂಸ್ಕರಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಮುಖ್ಯಾಧಿಕಾರಿ ತಿಳಿಸಿದರು. ವೈಜ್ಞಾನಿಕವಾಗಿ ಮಾಡುವುದಿದ್ದರೆ ಬೇರೆ ಸ್ಥಳ ಯಾಕೆ. ಈಗ ಇರುವ ಕಲ್ಚರ್ಪೆಯಲ್ಲಿಯೇ ವೈಜ್ಞಾನಿಕವಾಗಿ ಕಸ ವಿಲೇವಾರಿಗೆ ಕ್ರಮ ಕೈಗೊಳ್ಳಿ ಎಂದು ಅಧ್ಯಕ್ಷರು ಸೂಚಿಸಿದರು.
ವಿವಿಧ ಸ್ಥಳಗಳಲ್ಲಿ ಅಂಬೇಡ್ಕರ್ ಭವನ ನಿರ್ಮಾಣದ ಸ್ಥಳ ಗುರುತಿಸುವಿಕೆ ವಿಳಂಬದ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು. ಇಂದಿರಾ ಕ್ಯಾಂಟೀನ್ ಉದ್ಘಾಟನೆಗೆ ಜನಪ್ರತಿನಿಧಿಗಳನ್ನು ಕಡೆಗಣಿಸಿದ್ದಾರೆ ಎಂದು ಕೆಲವು ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು.

ತಾ.ಪಂ.ಉಪಾಧ್ಯಕ್ಷೆ ಶುಭದಾ ಎಸ್.ರೈ, ಸ್ಥಾಯಿ ಸಮಿತಿ ಅಧ್ಯಕ್ಷೆ ಜಾಹ್ನವಿ ಕಾಂಚೋಡು, ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಭವಾನಿಶಂಕರ್, ತಹಶೀಲ್ದಾರ್ ಅನಂತಶಂಕರ ಉಪಸ್ಥಿತರಿದ್ದರು.

 

 

ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಒಂದು ವರ್ಷದಲ್ಲಿ 10 ಲಕ್ಷ ಮನೆಗಳಿಗೆ ಸೌರ ಫಲಕ
March 14, 2025
6:57 AM
by: The Rural Mirror ಸುದ್ದಿಜಾಲ
ನಂದಿನಿ ಹಾಲಿನ ದರ ಏರಿಕೆಗೆ ಕರ್ನಾಟಕ ರಾಜ್ಯ ಹೋಟೆಲ್‌ಗಳ ಸಂಘ ವಿರೋಧ
March 14, 2025
6:54 AM
by: The Rural Mirror ಸುದ್ದಿಜಾಲ
ಹೆಚ್ಚುತ್ತಿರುವ ಸೈಬರ್ ಅಪರಾಧ ಪ್ರಕರಣಗಳು | ಒಂದು ವರ್ಷದಲ್ಲಿ 22 ಸಾವಿರ ಸೈಬರ್ ಪ್ರಕರಣ ದಾಖಲು |
March 14, 2025
6:51 AM
by: The Rural Mirror ಸುದ್ದಿಜಾಲ
ಬೆಳ್ಳಿ ಧರಿಸುವುದು ಎಲ್ಲಾ ರಾಶಿಯವರಿಗೆ ಉತ್ತಮವೇ…? | ಯಾವೆಲ್ಲಾ ರಾಶಿಗಳಿಗಳಿಗೆ ಹಾನಿ..?
March 14, 2025
6:37 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror