ಸುಳ್ಯ: ಸುಳ್ಯ ತಾಲೂಕು ಪಂಚಾಯತ್ ಗೆ ಸುಂದರ ಮತ್ತು ಸುಸಜ್ಜಿತ ನೂತನ ಕಟ್ಟಡ ತಲೆ ಎತ್ತಿದ್ದು ಉದ್ಘಾಟನೆಗೆ ಸಿದ್ಧಗೊಳ್ಳುತ್ತಿದೆ. 2.80 ಕೋಟಿ ವೆಚ್ಚದಲ್ಲಿ ಎರಡು ಅಂತಸ್ಥಿನ ಕಟ್ಟಡ ಮತ್ತು ಸಭಾಭವನದೊಂದಿಗೆ ಕಟ್ಟಡ ನಿರ್ಮಾಣ ಮಾಡಲಾಗಿದೆ. ಜಿಲ್ಲಾ ಪಂಚಾಯತ್ ಕಟ್ಟಡ ನಿರ್ಮಾಣ ಮತ್ತು ನಿರ್ವಹಣೆ ಯೋಜನೆಯಡಿಯಲ್ಲಿ ನೂತನ ಕಟ್ಟಡಕ್ಕೆ ಅನುದಾನ ಬಿಡಿಗಡೆ ಮಾಡಲಾಗಿದೆ.
5,750 ಚದರ ಅಡಿ ವಿಸ್ತೀರ್ಣದ ಎರಡು ಅಂತಸ್ತಿನ ಕಟ್ಟಡ ಮತ್ತು ಮೇಲೆ 5,750 ಚದರ ಅಡಿ ವಿಸ್ತೀರ್ಣದ ಸಭಾ ಭವನ ನಿರ್ಮಾಣ ಮಾಡಲಾಗಿದೆ. ಕೆಳಗಿನ ಅಂತಸ್ತಿನಲ್ಲಿ ಸಾರ್ವಜನಿಕರಿಗೆ ಕುಳಿತುಕೊಳ್ಳಲು ವಿಶಾಲವಾದ ಸಭಾಂಗಣ, ತಾಲೂಕು ಪಂಚಾಯತ್ ಆಡಳಿತ ಕಚೇರಿ, ಶಾಸಕರ ಕಚೇರಿ, ತಾಲೂಕು ಪಂಚಾಯತ್ ಅಧ್ಯಕ್ಷರ ಕಚೇರಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕಚೇರಿ ಕಾರ್ಯನಿರ್ವಹಿಸಲಿದೆ. ಪ್ರಥಮ ಅಂತಸ್ತಿನಲ್ಲಿ ವಸತಿ ಯೋಜನೆ, ಅಕ್ಷರ ದಾಸೋಹ, ಮಹಾತ್ಮಗಾಂಧೀ ಗ್ರಾಮೀಣ ಉದ್ಯೋಗ ಖಾತರಿ ಕಚೇರಿ, ಕೈಗಾರಿಕಾ ವಿಸ್ತರಣಾಧಿಕಾರಿ ಮತ್ತಿತರ ವಿವಿಧ ಇಲಾಖೆಗಳ ಕಚೇರಿ, ತಾಲೂಕು ಪಂಚಾಯತ್ ಉಪಾಧ್ಯಕ್ಷರ ಕಚೇರಿ, ಸ್ಥಾಯಿ ಸಮಿತಿ ಅಧ್ಯಕ್ಷರ ಕಚೇರಿ, ತಾಲೂಕು ಪಂಚಾಯತ್ ಸದಸ್ಯರ ವಿಶ್ರಾಂತಿ ಕೊಠಡಿ, ಕಂಪ್ಯೂಟರ್ ನಿಯಂತ್ರಣ ಕೊಠಡಿ, ಮಿನಿ ಮೀಟಿಂಗ್ ಹಾಲ್ ಕಾರ್ಯನಿರ್ವಹಿಸಲಿದೆ. ಇದರ ಮೇಲೆ ಸಭಾ ಭವನ ನಿರ್ಮಾಣಗೊಂಡಿದೆ. ಕಟ್ಟಡ ನಿರ್ಮಾಣ ಕಾರ್ಯ ಬಹುತೇಕ ಪೂರ್ಣಗೊಂಡಿದ್ದು ಅಂತಿಮ ಹಂತದ ಕಾಮಗಾರಿಗಳು ನಡೆಯುತ್ತಿದೆ. ಆಗಸ್ಟ್ 15ರ ಬಳಿಕ ಉದ್ಘಾಟನೆ ನಡೆಯಲಿದೆ.
ಸುಮಾರು ಆರ್ಧ ಶತಮಾನಕ್ಕಿಂತ ಹಿಂದೆ ನಿರ್ಮಾಣಗೊಂಡ ಹಳೆಯ ಕಟ್ಟಡದಲ್ಲಿ ತಾಲೂಕು ಪಂಚಾಯತ್ ಕಾರ್ಯಾಚರಿಸುತ್ತಿತ್ತು. ಹಳೆಯ ಕಟ್ಟಡವನ್ನು ಕೆಡವಿ ಕಳೆದ ವರ್ಷ ಹೊಸ ಕಟ್ಟಡ ನಿರ್ಮಾಣ ಆರಂಭಿಸಲಾಗಿದೆ. ಹಳೆಯ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿದ್ದ ತಾಲೂಕು ಪಂಚಾಯತ್ ಕಚೇರಿಗಳನ್ನು ಸಮೀಪದ ಕಟ್ಟಡಗಳಿಗೆ ಸ್ಥಳಾಂತರ ಮಾಡಿ ಹೊಸ ಕಟ್ಟಡ ನಿರ್ಮಾಣ ಕಾರ್ಯ ಆರಂಭಿಸಲಾಗಿತ್ತು. ಇದೀಗ ಒಂದು ವರ್ಷದ ಒಳಗೆ ನೂತನ ಕಟ್ಟಡ ನಿರ್ಮಾಣವಾಗಿದೆ. 1965 ರಲ್ಲಿ ಸುಳ್ಯ ತಾಲೂಕು ರಚನೆಗೊಂಡಿತ್ತು. 1966ರಲ್ಲಿ ತಾಲೂಕು ಅಭಿವೃದ್ಧಿ ಮಂಡಳಿ (ತಾಲೂಕು ಬೋರ್ಡ್) ಅಸ್ತಿತ್ವಕ್ಕೆ ಬಂದಿತು. ಬಳಿಕ ತಾಲೂಕು ಪಂಚಾಯತ್ ಅಸ್ತಿತ್ವಕ್ಕೆ ಬಂದ ಬಳಿಕವೂ ಹಳೆಯ ಕಟ್ಟಡದಲ್ಲಿಯೇ ಕಾರ್ಯಾಚರಿಸುತ್ತಿತ್ತು.
ಒಂದು ಕೋಟಿಯ ಹೆಚ್ಚುವರಿ ಪ್ರಸ್ತಾವನೆ:
ಸುಸಜ್ಜಿತ ತಾಲೂಕು ಪಂಚಾಯತ್ ಕಟ್ಟಡದಕ್ಕೆ ಎಸಿ, ಲಿಪ್ಟ್ ನಿರ್ಮಾಣ, ಪೀಠೋಪಕರಣ ಮತ್ತಿತರ ಅಗತ್ಯತೆಗಳಿಗಾಗಿ ಒಂದು ಕೋಟಿ ರೂಗಳ ಹೆಚ್ಚುವರಿ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಾಲೂಕು ಪಂಚಾಯತ್ ಅಧ್ಯಕ್ಷ ಚನಿಯ ಕಲ್ತಡ್ಕ ತಿಳಿಸಿದ್ದಾರೆ. ತಾಲೂಕು ರಚನೆಯಾಗಿ ಸುವರ್ಣ ಮಹೋತ್ಸವ ಪೂರ್ತಿಗೊಂಡಿರುವ ಹಿನ್ನಲೆಯಲ್ಲಿ ತಾಲೂಕು ಪಂಚಾಯತ್ ಗೆ ಸುಸಜ್ಜಿತ ಕಟ್ಟಡ ನಿರ್ಮಾಣ ಆಗಬೇಕೆಂಬ ಗುರಿ ಇತ್ತು. ಅದು ಸಾಕಾರಗೊಂಡಿದೆ ಆಗಸ್ಟ್ ತಿಂಗಳ ಕೊನೆಯೊಳಗೆ ನೂತನ ಕಟ್ಟಡದ ಉದ್ಘಾಟನೆಯಾಗಲಿದೆ ಎಂದು ಅವರು ತಿಳಿಸಿದ್ದಾರೆ.