ಸುಬ್ರಹ್ಮಣ್ಯ: ಜೀವ ಮುಕ್ತವಾದ ಶರೀರ ಶವ. ಆ ಶವ ಸಂಸ್ಕಾರ ಮಾಡುವಾಗ ಇರುವ ಭಾವ ಸ್ವರ್ಗಸ್ಥರಾಗಲಿ, ದೇಹಾಂತದ ಯಾತ್ರೆ ಸುಗಮವಾಗಲಿ. ಹೀಗಾಗಿ ಸಂಸ್ಕಾರ ಮಾಡುವ ಪ್ರದೇಶವೂ ವೇದನೆಯ ನಡುವೆ ಆ ಭಾವವನ್ನು ಭರಿಸುವಂತಿರಬೇಕು. ಮೂಲಭೂತ ಸೌಕರ್ಯಗಳು ಇರಬೇಕು. ಇಂತಹ ಸೌಕರ್ಯವನ್ನು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವತಿಯಿಂದ ನಗರದ ಇಂಜಾಡಿ ಬಳಿ ನಿರ್ಮಾಣಗೊಂಡಿರುವ ಚಿತಾಗಾರ ಹೊಂದಿದೆ.
ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವತಿಯಿಂದ ನಗರದ ಇಂಜಾಡಿ ಬಳಿ ನಿರ್ಮಾಣಗೊಂಡಿರುವ 58.06 ಲಕ್ಷ ರೂ ವೆಚ್ಚದ ಚಿತಾಗಾರ ಆಧುನಿಕ ವ್ಯವಸ್ಥೆ ಹೊಂದಿದೆ. ಸುಬ್ರಹ್ಮಣ್ಯ ಸಮೀಪದ ಇಂಜಾಡಿ ಬಳಿ ಹರಿಶ್ಚಂದ್ರ ಘಾಟ್ ಮಾದರಿಯಲ್ಲಿ ನಿರ್ಮಾಣಗೊಂಡಿರುವ ರುದ್ರಭೂಮಿಯಲ್ಲಿ ಅಡಿ ಎತ್ತರದ ಧ್ಯಾನಸ್ಥ ಶಿವನ ವಿಗ್ರಹವಿದೆ. ಆವರಣದೊಳಗೆ 4 ಅಡಿ ಎತ್ತರದ ಶಿವ ಪೀಠ, ಹಿಂಭಾಗದಲ್ಲಿ 12 ಅಡಿ ಎತ್ತರದ ಕೈಲಾಸ, 28 ಅಡಿ ಎತ್ತರದ ತ್ರಿಶೂಲ ಹಾಗೂ ಡಮರುಗ, 6 ಅಡಿ ಎತ್ತರದ ಹರಿಶ್ಚಂದ್ರ ಮೂರ್ತಿ ಹಾಗೂ 4 ಅಡಿ ಎತ್ತರದ ಪೀಠ ನಿರ್ಮಾಣಗೊಂಡಿದೆ.
ಆವರಣದೊಳಗೆ ಸುಂದರ ಹಸಿರು ಗಾರ್ಡನ್ ನಿರ್ಮಿಸಲಾಗಿದೆ. ಸುತ್ತಲು ಕೂರಲು ಅನುಕೂಲವಾದ ತೆರೆದ ಪ್ರಾಂಗಣ ಸೇರಿದಂತೆ ಮೂಲ ಸೌಕರ್ಯ ಒದಗಿಸಲಾಗಿದೆ. ನೆಲಕ್ಕೆ ಇಂಟರ್ ಲಾಕ್ ಅಳವಡಿಸಲಾಗಿದೆ. ಆವರಣದ ಗೋಡೆಗಳಲ್ಲಿ ವಿವಿಧ ಭಂಗಿಯ ವರ್ಲಿ ಚಿತ್ರಗಳನ್ನು ರಚಿಸಲಾಗಿದೆ. ವಿದ್ಯುತ್, ಅನಿಲ, ಕೊಟ್ಟಿಗೆ ಸೇರಿದಂತೆ ಎಲ್ಲ ರೀತಿಯ ಚಿತಾಗಾರ ಕುಲುಮೆಗಳು ಒಂದೆ ಸೂರಿನಡಿ ಒದಗಿಸಲಾಗಿದೆ. ಉಳ್ಳಾಲದ ಬಾಲು ಆಟ್ರ್ಸ್ ಮುಕ್ತಿಧಾಮದ ಗಾರ್ಡನ್, ವರ್ಲಿ ಚಿತ್ತಾರ ನಿರ್ಮಾಣ ನಡೆಸಿದ್ದಾರೆ.
ಬೆಳೆಯುತ್ತಿರುವ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಹೆಣ ಸುಡಲು ಸೂಕ್ತ ವ್ಯವಸ್ಥೆ ಇರಲಿಲ್ಲ. ಆಧುನಿಕ ಶವಗಾರದ ಅವಶ್ಯಕತೆ ಕುರಿತು ಕಳೆದ ಹತ್ತಾರು ವರ್ಷಗಳಿಂದ ಬೇಡಿಕೆಗಳಿತ್ತು. ಆದರೇ ಈಡೇರುವ ಲಕ್ಷಣ ಇರಲಿಲ್ಲ. ಇದುವೆರೆಗೆ ಇಲ್ಲಿ ಉರುವಲು ಚಿತಗಾರಕ್ಕೆ ತೃಪ್ತಿ ಪಟ್ಟುಕೊಳ್ಳಬೇಕಿತ್ತು. ಇದನ್ನು ಮನಗಂಡ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಮಂಡಳಿಯವರು ಇಲ್ಲಿ ಸುಸಜ್ಜಿತ ರೀತಿಯಲ್ಲಿ ಆಧುನಿಕ ಶೈಲಿಯಲ್ಲಿ ಮುಕ್ತಿಧಾಮ ನಿರ್ಮಿಸಲು ನಿರ್ಧರಿಸಿದ್ದರು. ಅದೀಗ ಸಾಕಾರಗೊಂಡಿದೆ.
ಸುಬ್ರಹ್ಮಣ್ಯ ಗ್ರಾ.ಪಂ ವ್ಯಾಪ್ತಿಯ ಇಂಜಾಡಿ ಬಳಿ ಒಂದು ಎಕರೆ ಭೂಮಿಯಲ್ಲಿ ಕೇವಲ 10 ಸೆಂಟ್ಸ್ ಸೆಂಟ್ಸ್ ಜಾಗದಲ್ಲಿ ಸಾರ್ವಜನಿಕ ಹಿಂದೂ ರುದ್ರಭೂಮಿ ಇತ್ತು. ಇಲ್ಲಿ ಶವಗಳನ್ನು ಉರುವಲು ಬಳಸಿ ಸುಡಲಾಗುತ್ತಿತ್ತು. ರುದ್ರಭೂಮಿ ಗಿಡಗಂಟಿಗಳಿಂದ ತುಂಬಿತ್ತು. ನೀರು ರಸ್ತೆ ಸಂಪರ್ಕವಿಲ್ಲದೆ ಇಲ್ಲಿ ಪೊದೆಗಳನ್ನು ಸರಿಸಿ ಕಟ್ಟಿಗೆ ರಾಶಿ ಹಾಕಿ ಶವಸಂಸ್ಕಾರ ನಡೆಸಬೇಕಿತ್ತು. ಕಟ್ಟಿಗೆ ಸಂಗ್ರಹವೂ ದೊಡ್ಡ ಸವಾಲಾಗಿತ್ತು.
ನಗರದಲ್ಲಿ ಚಿತಾಗಾರ ಇಲ್ಲದೆ ಬಹಳಷ್ಟು ಸಮಸ್ಯೆಯಾಗುತ್ತಿತ್ತು. ಇದನ್ನು ಮನಗಂಡ ವ್ಯವಸ್ಥಾಪನಾ ಸಮಿತಿ ಇಲ್ಲಿ ಆಧುನಿಕ ಚಿತಾಗಾರ ನಿರ್ಮಿಸಿದೆ. ಕ್ಷೇತ್ರದಲ್ಲಿ ಹಲವು ವರ್ಷಗಳಲ್ಲಿ ಈಡೇರದ ಕೆಲ ಬೇಡಿಕೆಗಳನ್ನು ಈಡೇರಿಸುವಲ್ಲಿ ಗಮನಹರಿಸಲಾಗಿದೆ. – ನಿತ್ಯಾನಂದ ಮುಂಡೋಡಿ. ಅಧ್ಯಕ್ಷರು, ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ