ಸುಬ್ರಹ್ಮಣ್ಯ : ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಹೆಸರಿನಲ್ಲಿ ಅನಧಿಕೃತ ಪೂಜೆ ನಡೆಸುವುದು, ದೇವಸ್ಥಾನಕ್ಕೆ ಬರುವ ಭಕ್ತರನ್ನು ದಾರಿ ತಪ್ಪಿಸಿ ಮಠದಲ್ಲಿ ಹಾಗೂ ಖಾಸಗಿ ಸ್ಥಳಗಳಲ್ಲಿ ಮಾಡುವುದು, ಬೇರೆ ಕಡೆ ಪೂಜೆ ಮಾಡಲು ಪ್ರೇರಣೆ ನೀಡುವ ವ್ಯಕ್ತಿಗಳನ್ನು ವಿರೋಧಿಸಿದ್ದಕ್ಕೆ ಮಠದ ಬೆಂಬಲಿಗರು ಎನಿಸಿಕೊಂಡವರು ಸುಳ್ಳು ಕೇಸು ದಾಖಲಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮಾಜಿ ಟ್ರಸ್ಟಿಗಳ ಸಭೆ ನಡೆಸಲು ನಿರ್ಧರಿಸಲಾಗಿದೆ ಎಂದು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಮಾಜಿ ಸದಸ್ಯ ಕಿಶೋರ್ ಶಿರಾಡಿ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಬೌದ್ಧಿಕ ಮತ್ತು ಆಧ್ಯಾತ್ಮಿಕ ನೆಲೆಯಲ್ಲಿ ಕಾನೂನು ಚೌಕಟ್ಟಿನೊಳಗೆ ಹೋರಾಟ ನಡೆಸಲು ದೇಗುಲದ ಮಾಜಿ ಟ್ರಸ್ಟಿಗಳು, ದೇವಸ್ಥಾನದ ಹಿತ ಬಯಸುವ ಹಿಂದೂ ಸಂಘಟನೆಗಳ ಕಾರ್ಯಕರ್ತರ ಹಾಗೂ ದೇವಸ್ಥಾನದ ಭಕ್ತರ ಸಭೆಯನ್ನು ಅ.5 ರಂದು ಸುಬ್ರಹ್ಮಣ್ಯ ದೇವಸ್ಥಾನದ ಉತ್ತರಾಧಿ ಮಠದಲ್ಲಿ ಕರೆಯಲಾಗಿದೆ. ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಭಕ್ತರ ಹಿತಾರಕ್ಷಣಾ ವೇದಿಕೆ ತಾಲೂಕು ಸಮಿತಿ ನೇತೃತ್ವದಲ್ಲಿ ಈ ಸಭೆ ನಡೆಯಲಿದೆ ಎಂದು ಹೇಳಿದರು.
ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಡೆಯವ ಪ್ರಮುಖ ಸೇವೆಗಳನ್ನು ಮಠ ಹಾಗೂ ಖಾಸಗಿ ಸ್ಥಳಗಳಲ್ಲಿ ನಡೆಸುತ್ತಿರುವುದು ಸರಿಯಲ್ಲ. ಇದರಿಂದ ಅಹಿತಕರ ಘಟನೆಗಳಿಗೆ ಎಡೆ ಮಾಡಿ ಕೊಡುತ್ತಿದೆ. ದೇವಸ್ಥಾನಕ್ಕೆ ಸೇವೆ ಸಲ್ಲಿಸಲು ಬರುವ ಭಕ್ತರನ್ನು ದಾರಿ ತಪ್ಪಿಸಿ ಖಾಸಗಿಯಾಗಿ ನಡೆಸುವುದು ತಪ್ಪು. ಅದು ಮಠ, ಮನೆ ಅಥವಾ ಖಾಸಗಿ ಸ್ಥಳವೇ ಆಗಿದ್ದರೂ ಅದನ್ನು ವಿರೋಧಿಸುತ್ತೇವೆ. ಅನಾಧಿಕೃತ ಸೇವೆ ನಡೆಸುವುದಷ್ಟೆ ಅಲ್ಲ ಅನಧಿಕೃತವಾಗಿ ಬೇರೆ ಕಡೆ ಪೂಜೆ ನಡೆಸುವಂತೆ ಪ್ರೇರೆಪಿಸುವುದು ಕೂಡ ತಪ್ಪು ಹೀಗಾಗಿ ಇದೆಲ್ಲವನ್ನು ನಿಲ್ಲಿಸುವ ವ್ಯವಸ್ಥೆ ಆಗಬೇಕು ಎಂದು ಆಗ್ರಹಿಸಿದರು.
ಮಠದಲ್ಲಿ ನಡೆಯುತ್ತಿರುವ ಅನಧಿಕೃತ ಪೂಜೆ ವಿರುದ್ಧ ಧ್ವನಿ ಎತ್ತಿದವರ ಮತ್ತು ದೇವಸ್ಥಾನದ ಪರವಿರುವ ಕೆಲ ಮಾಜಿ ಟ್ರಸ್ಟಿಗಳ ವಿರುದ್ಧ ರಾಜಕೀಯ ಒತ್ತಡ ತಂದು ಸುಳ್ಳು ಕೇಸು ಹಾಕುತ್ತಿರುವುದು ಮಠದವರಿಗೆ ಶೋಭೆ ತರುವಂತದಲ್ಲ, ಹಿಂದೂ ದೇವಸ್ಥಾನದ ಉಳಿತಿಗಾಗಿ ಹೋರಾಟ ನಡೆಸುತ್ತಿರುವವರ ವಿರುದ್ಧ ಈ ರೀತಿ ಸುಳ್ಳು ಕೇಸು ದಾಖಲಿಸಿ ಮಟ್ಟ ಹಾಕುವುದು ಗಂಭೀರ ವಿಚಾರ. ಮುಂದೆ ದೇವಸ್ಥಾನದ ಪರ ಮಾತನಾಡುವುದೇ ತಪ್ಪು ಎನ್ನುವ ಭಾವನೆಯೂ ಉಂಟಾಗುವುದು. ಇದು ಆತಂಕಕಾರ ಬೆಳವಣಿಗೆ. ನಿರಂತರವಾಗಿ ಕೇಸು ದಾಖಲಿಸುವುದು, ಲಾಯರ್ ನೊಟೀಸ್ ನೀಡುವುದು ಹೋರಾಟವನ್ನು ಹತ್ತಿಕ್ಕುವ ಷಡ್ಯಂತ್ರ ಎಂದು ಹೇಳಿದರು. ಈ ನಿಟ್ಟಿನಲ್ಲಿ ಅ.5 ರಂದು ನಡೆಯುವ ಸಭೆಯಲ್ಲಿ ಚರ್ಚಿಸಿ ಮುಂದಿನ ಕ್ರಮಗಳ ಕುರಿತು ಚರ್ಚಿಸಲಾಗುವುದು. ಪಕ್ಷಭೇಧ ಮರೆತು ಎಲ್ಲ ಮಾಜಿ ಟ್ರಸ್ಟಿಗಳು ಅಂದಿನ ಸಭೆಯಲ್ಲಿ ಪಾಲ್ಗೋಳ್ಳಲು ವಿನಂತಿಸಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ವ್ಯವಸ್ಥಾಪನ ಸಮಿತಿ ಮಾಜಿ ಸದಸ್ಯರಾದ ಮೋನಪ್ಪ ಮಾನಾಡು, ಜಯಪ್ರಕಾಶ ಕೂಜುಗೋಡು ಮತ್ತು ಹಿಂದೂ ಮುಖಂಡ ಅಶೋಕ ಆಚಾರ್ಯ ಉಪಸ್ಥಿತರಿದ್ದರು.