ಸುಬ್ರಹ್ಮಣ್ಯ :ಸುಬ್ರಹ್ಮಣ್ಯ ಸಮೀಪದ ಮಲೆಯಾಳ ಬಳಿ ಕಾಲಿಗೆ ಗಾಯಗೊಂಡು ಅನಾಥವಾಗಿ ಕಂಡು ಬಂದ ಹೋರಿ ಕರುವನ್ನು ರಕ್ಷಿಸಿದ ಸುಬ್ರಹ್ಮಣ್ಯ ಕೆಎಸ್‍ಎಸ್ ಕಾಲೇಜಿನ ಎಬಿವಿಪಿ ವಿದ್ಯಾರ್ಥಿಗಳು ಕರುವನ್ನು ಸಂಪುಟ ಶ್ರೀ ನರಸಿಂಹ ಸ್ವಾಮಿ ಮಠದ ಗೋಶಾಲೆಗೆ ಸೇರಿಸಿದ್ದಾರೆ.
ಕೆಲ ದಿನಗಳ ಹಿಂದೆ ಯಾರೋ ಕಿಡಿಗೇಡಿಗಳು ರಾತ್ರಿ ಹೊತ್ತು ಹೋರಿ ಕರುವೊಂದನ್ನು ಸುಬ್ರಹ್ಮಣ್ಯ –ಜಾಲ್ಸೂರು ಸಂಪರ್ಕ ರಸ್ತೆಯ ಮಲೆಯಾಳ ಬಳಿ ತಂದು ಬಿಟ್ಟು ಹೋಗಿದ್ದರು. ಅಂದಿನಿಂದ ಸ್ಥಳಿಯವಾಗಿ ಕರುವುದು ತಿರುಗಾಡಿಕೊಂಡಿತ್ತು. ಬುಧವಾರ ಕಾಲಿಗೆ ಏಟು ಮಾಡಿಕೊಂಡ ಸ್ಥಿತಿಯಲ್ಲಿ ಕರು ರಸ್ತೆ ಬದಿ ಇರುವುದನ್ನು ಗಮನಿಸಿದ ವಿದ್ಯಾರ್ಥಿಗಳು ಸುಬ್ರಹ್ಮಣ್ಯ ಸಂಪುಟ ಶ್ರೀ ನರಸಿಂಹ ಸ್ವಾಮಿ ಮಠದ ಆಡಳಿತಾಧಿಕಾರಿ ಸುದರ್ಶನ ಜೋಯಿಸ ಅವರ ಗಮನಕ್ಕೆ ತಂದಿದ್ದರು.
ಕರುವಿಗೆ ಮಠದ ಗೋಶಾಲೆಯಲ್ಲಿ ಆಶ್ರಯ ಒದಗಿಸುವ ಕುರಿತು ಅವರಿಂದ ಭರವಸೆ ವ್ಯಕ್ತಗೊಂಡಿತ್ತು. ಜತೆಗೆ ಮಠದಿಂದ ವಾಹನವನ್ನು ಸಿಬಂದಿಗಳನ್ನು ಮಕ್ಕಳ ಜತೆ ಕಳಿಸಿಕೊಟ್ಟು ವ್ಯವಸ್ಥೆ ಕಲ್ಪಿಸಿದ್ದರು. ಅದರಂತೆ ಸಿಬಂದಿಗಳ ನೆರವಿನಿಂದ ವಿದ್ಯಾರ್ಥಿಗಳು ಕರುವನ್ನು ಹಿಡಿದು ತಂದು ಮಠಕ್ಕೆ ಒಪ್ಪಿಸಿದ್ದು ಮಠದಲ್ಲಿ ಕರುವಿಗೆ ಚಿಕಿತ್ಸೆ ನೀಡಿ ಆಶ್ರಯ ನೀಡಲಾಗಿದೆ.