ಸುಳ್ಯ: ಸಾರ್ವಜನಿಕರಿಗೆ ಕಡಿಮೆ ದರದಲ್ಲಿ ಊಟ ಮತ್ತು ಉಪಹಾರ ನೀಡಬೇಕು ಎಂಬ ನೆಲೆಯಲ್ಲಿ ರಾಜ್ಯ ಸರ್ಕಾರ ಅನುಷ್ಠಾನಕ್ಕೆ ತಂದಿರುವ ಇಂದಿರಾ ಕ್ಯಾಂಟೀನ್ ಸುಳ್ಯ ತಾಲೂಕು ಕಚೇರಿ ಸಮೀಪ ಗುರುವಾರ ಕಾರ್ಯಾರಂಭ ಮಾಡಿದೆ.
ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಉದ್ಘಾಟಿಸಿದರು. ಶಾಸಕ ಎಸ್.ಅಂಗಾರ ಮತ್ತು ಇತರ ಜನಪ್ರತಿನಿಧಿಗಳು, ಅಧಿಕಾರಿಗಳು ಉಪಸ್ಥಿತರಿದ್ದರು. ಬೆಳಗ್ಗೆ 7.30ರಿಂದ ರಾತ್ರಿ 8 ಗಂಟೆ ತನಕ ಕ್ಯಾಂಟೀನ್ ತೆರೆದಿರುತ್ತದೆ. 10 ರೂಗೆ ಊಟ ಮತ್ತು ಐದು ರೂಗೆ ಉಪಹಾರವನ್ನು ನೀಡಲಾಗುತ್ತದೆ. ಬೆಳಗ್ಗೆ 7.30ರಿಂದ 10ರ ತನಕ ಉಪಹಾರದ ಸಮಯ. ಇಡ್ಲಿ, ಸಾಂಬಾರ್, ರೈಸ್ ಬಾತ್, ವಾಂಗಿ ಬಾತ್ ಮತ್ತಿತರ ಉಪಹಾರ ಇರಲಿದೆ. ಮಧ್ಯಾಹ್ನ 12.30 ರಿಂದ 3 ಗಂಟೆ ವರೆಗೆ ಊಟದ ಸಮಯ ಅನ್ನ, ಸಾಂಬಾರ್, ಪಲ್ಯ, ಉಪ್ಪಿನ ಕಾಯಿ ಮೆನು ಇರಲಿದೆ. ಸಂಜೆ 5.30 ರಿಂದ 8 ಗಂಟೆ ತನಕ ಸಂಜೆಯ ಉಪಹಾರದ ಸಮಯ ರೈಸ್ ಬಾತ್, ವಾಂಗಿ ಬಾತ್ ಪುಳಿಯೊಗರೆ ಮತ್ತಿತರ ರೈಸ್ ಐಟಂ ಇರಲಿದೆ ಎಂದು ಇಂದಿರಾ ಕ್ಯಾಂಟೀನ್‍ನ ವ್ಯವಸ್ಥಾಪಕ ಕ್ಯಾಪ್ಟನ್ ಗೌರಿ ಶಂಕರ ಪ್ರಸಾದ್ ತಿಳಿಸಿದ್ದಾರೆ. ಗುರುವಾರದಿಂದಲೇ ಕ್ಯಾಂಟೀನ್‍ನಲ್ಲಿ ಊಟ ಮತ್ತು ಉಪಹಾರ ವಿತರಣೆ ಆರಂಭಗೊಂಡಿದೆ. ಉದ್ಘಾಟನೆ ಪ್ರಯುಕ್ತ ನಿನ್ನೆ ಬೆಳಗ್ಗೆ ಉಪಹಾರವನ್ನು ಎಲ್ಲರಿಗೂ ಉಚಿತವಾಗಿ ನೀಡಲಾಯತು. ಬಳಿಕ ಕ್ಯಾಂಟೀನ್‍ನಲ್ಲಿ ವ್ಯಾಪಾರ ಆರಂಭಗೊಂಡಿದೆ.
ವಾರದ ಎಲ್ಲಾ ದಿನವೂ ಕ್ಯಾಂಟೀನ್ ಕಾರ್ಯಾಚರಿಸಲಿದೆ. ಪಾರ್ಸೆಲ್ ನೀಡುವುದಿಲ್ಲ. ಆಸ್ಪತ್ರೆಗಗಳ ಒಳ ರೋಗಿಗಳಿಗೆ ಮಾತ್ರ ಪಾತ್ರ ತಂದಲ್ಲಿ ಊಟ ಉಪಹಾರವನ್ನು ಪಾರ್ಸೆಲ್ ನೀಡಲಾಗುವುದು ಎಂದು ಜಿ.ಎಸ್.ಪ್ರಸಾದ್ ತಿಳಿಸಿದರು.