ಸುಳ್ಯ: ಗ್ರಾಮೀಣ ಭಾಗದ ಆರ್ಥಿಕ ಶಕ್ತಿಯಾದ ಸಹಕಾರಿ ರಂಗದ ಚುನಾವಣೆ ನಡೆಯುತ್ತಿದೆ. ಈಗಾಗಲೇ ಕೆಲವು ಸಹಕಾರಿ ಸಂಘಗಳಲ್ಲಿ ಅವಿರೋಧ ಆಯ್ಕೆ ನಡೆದಿದೆ. ಇನ್ನುಳಿದ ಕಡೆ ಚುನಾವಣೆ ನಡೆಯುತ್ತಿದೆ.
ಹಿಂದಿನಿಂದಲೂ ತಕ್ಕಮಟ್ಟಿನ ರಾಜಕೀಯ ಇದ್ದ ಸಹಕಾರಿ ಕ್ಷೇತ್ರದಲ್ಲಿ ಈ ಬಾರಿ ಸಾಕಷ್ಟು ರಾಜಕೀಯ ಮೇಳೈಸಿರುವುದು ಪ್ರಮುಖ ಅಂಶವಾಗಿದೆ. ಮಡಪ್ಪಾಡಿಯಲ್ಲಿ ಕಾಂಗ್ರೆಸ್ ಬೆಂಬಲಿತರು ಮೇಲುಗೈ ಸಾಧಿಸಿದರೆ ಮರ್ಕಂಜದಲ್ಲಿ ಸಹಕಾರ ಭಾರತಿ-ಬಿಜೆಪಿ ಬೆಂಬಲಿತರು ಮೇಲುಗೈ ಸಾಧಿಸಿದ್ದಾರೆ. ಉಳಿದಂತೆ ಕಲ್ಮಡ್ಕ, ಪಂಬೆತ್ತಾಡಿಯಲ್ಲಿ ರಾಜಕೀಯ ಬದಿಗಿಟ್ಟು ಸಹಕಾರಿ ತತ್ತ್ವವನ್ನು ಪಾಲನೆ ಮಾಡಿದ್ದಾರೆ. ಕನಕಮಜಲು ಸಹಕಾರಿ ಸಂಘದಲ್ಲಿ ಸಹಕಾರ ಭಾರತಿ-ಬಿಜೆಪಿ ಮೇಲುಗೈ ಸಾಧಿಸಿದ್ದಾರೆ. ಉಳಿದ ಕಡೆಗಳಲ್ಲಿ ಚುನಾವಣೆ ನಡೆಯುತ್ತಿದೆ.
ಈ ಬಾರಿ ವಿಶೇಷವಾಗಿ ಅರಂತೋಡು , ಐವರ್ನಾಡು, ಪಂಜ, ಆಲೆಟ್ಟಿ ವಿಶೇಷವಾಗಿ ಗಮನ ಸೆಳೆದಿದೆ. ಈ ಹಿಂದೆ ಸಹಕಾರ-ಭಾರತಿ ಬಿಜೆಪಿ ಬೆಂಬಲಿತರೇ ಅಧಿಕಾರ ನಡೆಸುತ್ತಿದ್ದ ಸಹಕಾರಿ ಸಂಘದಲ್ಲಿ ಈ ಬಾರಿ ತಳಮಳವಾಗಿದೆ. ಕಳೆದ ಬಾರಿ ಡಿ ಸಿ ಸಿ ಚುನಾವಣೆಯ ಅಡ್ಡ ಮತದಾನದ ಬಳಿಕ ಅಡ್ಡಮತದಾನ ಮಾಡಿದವರ ಪತ್ತೆ ಮಾಡುವ ದೈವದಿಂದ ದೇವರವರೆಗೆ ಮಾಡಿದ ಎಲ್ಲಾ ಪ್ರಯತ್ನಗಳೂ ಕೈಗೂಡದ ಬಳಿಕ ಈ ಬಾರಿ ಸಹಕಾರಿ ಸಂಘದ ಚುನಾವಣೆಗೆ ಡಿ ಸಿ ಸಿ ಬ್ಯಾಂಕ್ ಚುನಾವಣೆಯಲ್ಲಿ ಭಾಗವಹಿಸಿದವರು ಸ್ಫರ್ಧೆ ಮಾಡದಂತೆ ಬಿಜೆಪಿ ಹಾಗೂ ಸಹಕಾರ ಭಾರತಿ ನಿರ್ಧಾರ ಕೈಗೊಂಡಿತ್ತು. ಆದರೆ ಈ ಸೂಚನೆಯನ್ನು ಪಾಲಿಸದೆ ತಂಡವಾಗಿ ಸ್ಫರ್ಧೆ ಮಾಡಲು ಇಳಿದವರನ್ನು ಈಗಾಗಲೇ ಅಧಿಕೃತ ಅಭ್ಯರ್ಥಿಯಲ್ಲ ಎಂದು ಘೋಷಣೆ ಮಾಡಿದೆ. ಹೀಗಾಗಿ ಇಲ್ಲಿ ಚುನಾವಣೆಯು ಕಾಂಗ್ರೆಸ್ ಬೆಂಬಲಿತರು ಹಾಗೂ ಸಹಕಾರ ಭಾರತಿ-ಬಿಜೆಪಿ ಬೆಂಬಲಿತರ ನಡುವೆ ಇರುವ ಬದಲು ಸ್ವಪಕ್ಷೀಯರ ನಡುವೆಯೇ ಇರುವುದು ವಿಶೇಷವಾಗಿದೆ. ಕಾಂಗ್ರೆಸ್ ಪಕ್ಷವು ಸಹಕಾರಿ ಕ್ಷೇತ್ರದ ಕಡೆಗೆ ಹೆಚ್ಚು ಆಸಕ್ತವಾಗದೇ ಇರುವುದು , ಸೂಕ್ತ ಅಭ್ಯರ್ಥಿಗಳ ಕೊರತೆ ಇರುವುದರಿಂದ ಬಿಜೆಪಿ-ಸಹಕಾರ ಭಾರತಿಯ ಒಳಜಗಳದ ಲಾಭ ಪಡೆಯಲು ಶಕ್ತವಾಗುತ್ತಿಲ್ಲ.
ಮುರುಳ್ಯ-ಎಣ್ಮೂರು, ಹರಿಹರ ಪಲ್ಲತ್ತಡ್ಕ ಸಹಕಾರಿ ಸಂಘ , ಸುಳ್ಯ ಭೂ ಅಭಿವೃದ್ಧಿ ಬ್ಯಾಂಕ್, ಬೆಳ್ಳಾರೆ ಸಹಕಾರಿ ಸಂಘ, ಸುಬ್ರಹ್ಮಣ್ಯ-ಐನೆಕಿದು ಸಹಕಾರಿ ಸಂಘದಲ್ಲಿ ಚುನಾವಣೆ ನಡೆಯುತ್ತಿದೆ. ಐವರ್ನಾಡು ಸಹಕಾರಿ ಸಂಘದ ಚುನಾವಣೆಗೂ ಮುನ್ನವೇ 4 ಮಂದಿ ಅವಿರೋಧ ಆಯ್ಕೆಯಾಗಿದ್ದಾರೆ.
ಸಹಕಾರಿ ಸಂಘದ ಚುನಾವಣೆಯ ಬಳಿಕ ಗ್ರಾಮ ಪಂಚಾಯತ್ ಚುನಾವಣೆಯೂ ಬರಲಿದೆ. ಹೀಗಾಗಿ ರಾಜಕೀಯ ಲೆಕ್ಕಾಚಾರಗಳು ಈಗ ಆರಂಭವಾಗಿದೆ.
ಸಹಕಾರಿ ಕ್ಷೇತ್ರವು ಪ್ರತೀ ಗ್ರಾಮದ ಕೃಷಿಕರ ಹಾಗೂ ಗ್ರಾಮದ ಜನರ ಆರ್ಥಿಕ ಶಕ್ತಿ. ಗ್ರಾಮದ ಅಭಿವೃದ್ಧಿಗೆ ಕೂಡಾ ಸಹಕಾರಿ ಸಂಘದ ಕೊಡುಗೆ ಅಪಾರವಿದೆ. ಹೀಗಾಗಿ ಸಹಕಾರಿ ಕ್ಷೇತ್ರದಲ್ಲಿ ಸ್ಫರ್ಧೆ ಮಾಡುವ ವ್ಯಕ್ತಿಗಳು ರಾಜಕೀಯ ರಹಿತವಾಗಿ, ಪ್ರಾಮಾಣಿಕತೆ, ಸಹಕಾರಿ ಮನೋಭಾವ, ಆರ್ಥಿಕ ವ್ಯವಹಾರದಲ್ಲಿ ಶುದ್ಧತೆ ಇರಬೇಕು . ಇಲ್ಲಿ ಸಹಕಾರಿ ಮನೋಭಾವ ಮುಖ್ಯ ರಾಜಕೀಯಕ್ಕೆ ಎರಡನೇ ಸ್ಥಾನ ಎಂಬುದು ಸಹಕಾರಿ ಪಿತಾಮಹ ಮೊಳಹಳ್ಳಿ ಶಿವರಾಯರ ಕಾಲದಿಂದಲೂ ನಡೆದುಕೊಂಡು ಬಂದಿರುವ ಅಲಿಖಿತ ಸಿದ್ಧಾಂತ. ಈಚೆಗೆ ಈ ಸಿದ್ಧಾಂತಗಳು ಬದಲಾಗಿ ಅಧಿಕಾರ ಮುಖ್ಯವಾಗುತ್ತಿದೆ. ಸಹಕಾರಿ ಸಂಘದ ಅಧ್ಯಕ್ಷರಾಗಿ, ನಿರ್ದೇಶಕರಾಗಿ ಸಾಲ ಮರುಪಾವತಿ ಮಾಡದೇ ಇರುವುದೇ ಅಧಿಕಾರ ಎಂದೂ ಭಾವಿಸಲಾಗುತ್ತಿದೆ. ಹೀಗಾಗಿ ಸಹಕಾರಿ ಕ್ಷೇತ್ರ ಈ ಹಂತದಲ್ಲಿ ಬಲಿಷ್ಟ ಹಾಗೂ ಉತ್ತಮಗೊಳ್ಳಲು ಪಕ್ಷಗಳು, ಸಂಘಟನೆಗಳು ಕಳಂಕ ರಹಿತ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಬೇಕಾಗಿದೆ.
Advertisement
ಕಳೆದ ಒಂದು ವಾರದಲ್ಲಿ ಚಾರ್ಮಾಡಿ ಘಾಟ್ನಲ್ಲಿ ಉಂಟಾದ ಎರಡನೇ ಕಾಡ್ಗಿಚ್ಚು ಪ್ರಕರಣ ಇದಾಗಿದೆ.…
ಅಡಿಕೆ ಆಮದು ವ್ಯವಹಾರದಲ್ಲಿ ತಪ್ಪು ಮಾಹಿತಿ ನೀಡಿ ವಿದೇಶದಿಂದ ಕಳ್ಳಸಾಗಾಣಿಕೆ ಮಾಡುತ್ತಿದ್ದ ಪ್ರಕರಣದಲ್ಲಿ ತೂತುಕುಡಿಯ…
ಸಾರಡ್ಕದ ಆರಾಧನಾ ಕಲಾಭವನದಲ್ಲಿ ಜ.26 ರಂದು ಕೃಷಿ ಹಬ್ಬ ನಡೆಯಲಿದೆ.ಬೆಳಗ್ಗೆ ಉದ್ಘಾಟನೆಗೊಳ್ಳುವ ಕೃಷಿ…
ಆಮದು ಸುಂಕವನ್ನು ತಪ್ಪಿಸಲು ಹುರಿದ ಅಡಿಕೆಯನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ಹುರಿದ ಅಡಿಕೆಯ ಆಮದು…
ಇತ್ತೀಚಿನ ಅಧ್ಯಯನಗಳ ಪ್ರಕಾರ, ಭಾರತವು ಜಾಗತಿಕವಾಗಿ ಪ್ಲಾಸ್ಟಿಕ್ ತ್ಯಾಜ್ಯದ ಅಗ್ರ ಉತ್ಪಾದಕ ಎಂದು…
115 ವರ್ಷಗಳ ಇತಿಹಾಸ ಇರುವ ಹಾಗೂ ರಾಜ್ಯದಲ್ಲಿ ನಿರ್ಮಾಣವಾದ ಮೊದಲ ಜಲಾಶಯ ವಾಣಿವಿಲಾಸ…