ಸುಳ್ಯ: ದೇಶವು ಅತ್ಯಂತ ವೇಗವಾಗಿ ಬೆಳೆಯುತಿದೆ. ದೇಶವು ವಿಶ್ವಕ್ಕೆ ಮಾದರಿಯಾಗುವ ನೆಲೆಯಲ್ಲಿ ಬೆಳವಣಿಗೆಯಾಗಲು ಎಲ್ಲರೂ ಕೊಡುಗೆ ನೀಡಬೇಕು, ಪ್ರತಿಯೊಬ್ಬರೂ ದೇಶಕ್ಕೆ ಮೊದಲ ಆದ್ಯತೆ ನೀಡಬೇಕು ಎಂದು ಶಾಸಕ ಎಸ್.ಅಂಗಾರ ಕರೆ ನೀಡಿದ್ದಾರೆ. ಸುಳ್ಯ ತಾಲೂಕು ರಾಷ್ಟ್ರೀಯ ಹಬ್ಬಗಳ ದಿನಾಚರಣಾ ಸಮಿತಿಯ ವತಿಯಿಂದ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ನಡೆದ ಗಣರಾಜ್ಯೋತ್ಸವ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸುಳ್ಯ ತಹಶೀಲ್ದಾರ್ ಎನ್.ಎ.ಕುಂಞಅಹಮದ್ ಧ್ವಜಾರೋಹಣ ನೆರವೇರಿಸಿ ಗೌರವ ವಂದನೆ ಸ್ವೀಕರಿಸಿ ಗಣರಾಜ್ಯೋತ್ಸವ ಸಂದೇಶ ನೀಡಿ ನಮ್ಮ ಸಂವಿಧಾನ ಜಗತ್ತಿನ ಅತ್ಯಂತ ಶ್ರೇಷ್ಠ ಮೌಲ್ಯಗಳನ್ನು ಒಳಗೊಂಡಿದೆ. ದೇಶದಲ್ಲಿ ಹುಟ್ಟಿದ ಎಲ್ಲರೂ ಪರಸ್ಪರ ಪ್ರೀತಿಯಿಂದ, ಗೌರವದಿಂದ, ಸಹಕಾರದಿಂದ, ಸಹಬಾಳ್ವೆಯಿಂದ ಬದುಕುವ ಅಗತ್ಯವಿದೆ. ನಮ್ಮ ಸಂವಿಧಾನದ ಆಶಯ ಮತ್ತು ಬದುಕು ಅದೇ ಆಗಿದೆ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ತಾಲೂಕು ಪಂಚಾಯತ್ ಅಧ್ಯಕ್ಷ ಚನಿಯ ಕಲ್ತಡ್ಕ, ಅರೆಭಾಷೆ ಸಂಸ್ಕೃತಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಲಕ್ಷ್ಮೀನಾರಾಯಣ ಕಜೆಗದ್ದೆ, ಎಪಿಎಂಸಿ ಅಧ್ಯಕ್ಷ ದೀಪಕ್ ಕುತ್ತಮೊಟ್ಟೆ, ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಅಧ್ಯಕ್ಷ ಡಾ. ಕೆ.ವಿ. ಚಿದಾನಂದ, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಎನ್.ಭವಾನಿಶಂಕರ, ಪೊಲೀಸ್ ವೃತ್ತ ನಿರೀಕ್ಷಕ ನವೀನ್‍ಚಂದ್ರ ಜೋಗಿ ಮೊದಲಾದವರು ಉಪಸ್ಥಿತರಿದ್ದರು. ಸಮಾರಂಭಕ್ಕೆ ಮುನ್ನ ಆಕರ್ಷಕ ಪಥ ಸಂಚಲನ ನಡೆಯಿತು.