ಸುಳ್ಯ: ಕಳೆದ 15 ದಿವಸಗಳ ಹಿಂದೆ ವ್ಯಾಪಕವಾಗಿ ಹರಡುತ್ತಿದ್ದ ವೈರಲ್ ಜ್ವರ ಸ್ವಲ್ಪಮಟ್ಟಿಗೆ ಇಳಿಮುಖವಾಗಿದೆ. ಸುಳ್ಯ ತಾಲೂಕು ಆಸ್ಪತ್ರೆಯಲ್ಲಿ ಜ್ವರ ಬಾಧಿತರಾಗಿ 200 ಕ್ಕೂ ಹೆಚ್ಚು ಮಂದಿ ಪ್ರತಿದಿನ ಚಿಕಿತ್ಸೆಗೆ ಆಗಮಿಸುತ್ತಿದ್ದಲ್ಲಿ ಈಗ ಸ್ವಲ್ಪ ಕಡಿಮೆಯಾಗಿದೆ. ಆದರೂ ದಿನಂಪ್ರತಿ ಸುಮಾರು 100 ಮಂದಿ ಜ್ವರ ಬಾಧೆಯಿಂದ ಆಸ್ಪತ್ರೆಗೆ ಆಗಮಿಸುತ್ತಿದ್ದಾರೆ.
ಡೆಂಘೆ ಜ್ವರದ ಲಕ್ಷಣಗಳೂ ಅಲ್ಲಲ್ಲಿ ಕೆಲವು ಕಡೆ ಕಂಡು ಬಂದಿದೆ. ಈಗ ಐದು ಮಂದಿ ಡೆಂಘೆ ಶಂಕಿತರೂ ಸೇರಿ ಒಟ್ಟು 28 ಮಂದಿ ಜ್ವರ ಬಾಧೆಯಿಂದ ಒಳ ರೋಗಿಗಳಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಳೆದ ಒಂದು ತಿಂಗಳ ಅವಧಿಯಲ್ಲಿ 35 ಮಂದಿಯಲ್ಲಿ ಶಂಕಿತ ಡೆಂಘೆ ಪ್ರಕರಣ ಕಂಡು ಬಂದಿತ್ತು ಇವರಲ್ಲಿ ಬಹುತೇಕ ಮಂದಿ ಗುಣಮುಖರಾಗಿದ್ದಾರೆ ಎಂದು ತಾಲೂಕು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ. ಸುಳ್ಯ ತಾಲೂಕಿನಲ್ಲಿ ಜನವರಿಯಿಂದ ಇದುವರೆಗೆ ಒಟ್ಟು 18 ಡೆಂಘೆ ಪ್ರಕರಣ ದೃಢಪಟ್ಟಿದೆ ಎಂದು ಸುಳ್ಯ ತಾಲೂಕು ಆರೋಗ್ಯಾಧಿಕಾರಿ ಡಾ.ಸುಬ್ರಹ್ಮಣ್ಯ ತಿಳಿಸಿದ್ದಾರೆ.
ಸುಳ್ಯ ತಾಲೂಕಿನಲ್ಲಿ ಮಳೆಯ ಕಣ್ಣಾ ಮುಚ್ಚಾಲೆ ಮತ್ತು ಹವಾಮಾನ ವೈಪರೀತ್ಯ ಜನರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತಿದೆ. ತಲೆ ನೋವು, ಮೈ ಕೈ ನೋವು, ಶೀತ, ಜ್ವರಹೀಗೆ ಹತ್ತು ಹಲವು ಸಮಸ್ಯೆಗಳು ಜನರನ್ನು ಕಾಡುತಿದೆ. ಸುಳ್ಯ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಮತ್ತು ಗಡಿ ಗ್ರಾಮಗಳಲ್ಲಿ ಸುಮಾರು ಒಂದು ತಿಂಗಳಿನಿಂದ ಜ್ವರದ ಬಾದೆ ಕಂಡು ಬಂದಿದೆ. ಸುಳ್ಯ ತಾಲೂಕು, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವಿವಿಧ ಖಾಸಗೀ ಆಸ್ಪತ್ರೆಗಳಲ್ಲಿ ಜ್ವರ ಬಾಧಿಸಿ ಚಿಕಿತ್ಸೆಗಾಗಿ ಆಗಮಿಸುತ್ತಿರುವವರೇ ಕಂಡು ಬರುತ್ತಿದ್ದರು. ಇದೀಗ ಜ್ವರ ಸ್ವಲ್ಪ ಇಳಿ ಮುಖವಾಗಿರುವುದು ಕೊಂಚ ನೆಮ್ಮದಿ ತಂದಿದೆ.
ಸುಳ್ಯ ತಾಲೂಕಿನ ಕೆಲವು ಭಾಗಗಳಲ್ಲಿ ಡೆಂಘೆ ಜ್ವರದ ಲಕ್ಷಣಗಳು ಕೂಡ ಕಂಡು ಬಂದಿದೆ. ಶಂಕಿತ ಡೆಂಘೆ ಜ್ವರದ ಲಕ್ಷಣಗಳು ಕಂಡು ಬಂದರೆ ಅದನ್ನು ಅದನ್ನು ಹೆಚ್ಚಿನ ಪರೀಕ್ಷೆಗಾಗಿ ಕಳುಹಿಸಲಾಗುತ್ತದೆ. ಈ ವರ್ಷ ಜನವರಿಯಿಂದ ಇದುವರೆಗೆ ಒಟ್ಟು 18 ಡೆಂಘೆ ಖಚಿತ ಪ್ರಕರಣಗಳು ಕಂಡು ಬಂದಿದೆ ಎನ್ನುತ್ತಾರೆ ಸುಳ್ಯ ತಾಲೂಕು ಆರೋಗ್ಯಾಧಿಕಾರಿ ಡಾ.ಸುಬ್ರಹ್ಮಣ್ಯ. ಡೆಂಘೆ ಲಕ್ಷಣಗಳು ಕಂಡು ಬಂದರೆ ವಿಶೇಷ ನಿಗಾ ವಹಿಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಕೈಕೊಟ್ಟ ಮಳೆ-ಕೆಡುತ್ತಿರುವ ಆರೋಗ್ಯ:
ಜುಲೈ ತಿಂಗಳು ಅರ್ಧ ಮುಗಿದರೂ ಸರಿಯಾಗಿ ಮಳೆ ಸುರಿಯದೆ ಇರುವ ಕಾರಣ ಮಲೆನಾಡಾದ ಸುಳ್ಯದಲ್ಲಿ ಜ್ವರ ಸೇರಿದಂತೆ ಸಾಂಕ್ರಾಮಿಕ ರೋಗಗಳು ಹರಡಲು ಕಾರಣವಾಗುತ್ತಿದೆ. ಹವಾಮಾನ ವೈಪರೀತ್ಯದಿಂದ ಕೂಡಿದ್ದು ಸರಿಯಾಗಿ ಮಳೆ ಸುರಿದು ನೀರು ಹರಿದಿಲ್ಲ ಬಿಸಿಲು ಮತ್ತು ಸೆಕೆಯ ವಾತಾವರಣ ಜನರ ಆರೋಗ್ಯದ ಮೇಲೂ ಗಂಭೀರ ಪರಿಣಾಮ ಬೀರಿದೆ. ನೀರು ಸರಿಯಾಗಿ ಹರಿದು ಹೋಗದ ಕಾರಣ ರೋಗ ವಾಹಕಗಳಾದ ಸೊಳ್ಳೆಗಳು ಹರಡುತಿದೆ.
ಎಚ್ಚೆತ್ತುಗೊಂಡಿರುವ ಆರೋಗ್ಯ ಇಲಾಖೆ:
ಜ್ವರ ಮತ್ತು ಆರೋಗ್ಯ ಸಮಸ್ಯೆಗಳು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಎಚ್ಚೆತ್ತುಕೊಂಡಿರುವ ಆರೋಗ್ಯ ಇಲಾಖೆ ವಿವಿಧ ಮುಂಜಾಗೃತಾ ಕ್ರಮಗಳನ್ನು ಕೈಗೊಂಡಿದೆ. ಆಶಾ ಕಾರ್ಯಕರ್ತರು ಮತ್ತು ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರ ಮೂಲಕ ಮನೆ ಮನೆ ಭೇಟಿ ನೀಡಿ ಜ್ವರ ಸಮೀಕ್ಷೆ ನಡೆಸಲಾಗುತ್ತಿದ್ದು ಜನರಿಗೆ ಆರೋಗ್ಯ ಮಾಹಿತಿ ನೀಡಿ, ಜ್ವರ ಕಂಡು ಬಂದರೆ ಆಸ್ಪತ್ರೆಗೆ ಸೇರುವಂತೆ ಜಾಗೃತಿ ಮೂಡಿಸಲಾಗುತ್ತದೆ. ಗ್ರಾಮ ಪಂಚಾಯತ್‍ಗಳೊಂದಿಗೆ ಕೈ ಜೋಡಿಸಿ ಸೊಳ್ಳೆ ನಾಶಪಡಿಸಲು ಫಾಗಿಂಗ್ ಮತ್ತಿತರ ಕ್ರಮಗಳನ್ನು ಕೈಗೊಳ್ಳಲಾಗುತಿದೆ. ಎಲ್ಲೆಡೆ ಸೊಳ್ಳೆ ನಾಶಕ್ಕೆ ಕ್ರಮ ಜರುಗಿಸಲಾಗುತಿದೆ.
ಜಿಲ್ಲೆಯಲ್ಲಿ ಡೆಂಘೆ ಪ್ರಕರಣ ಹೆಚ್ಚಳ:
ಜಿಲ್ಲೆಯ ರಾಜಧಾನಿ ಮಂಗಳೂರು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಭಾಗಗಳಲ್ಲಿ ಡೆಂಘೆ ಪ್ರಕರಣ ವಿಪರೀತ ಹೆಚ್ಚಳವಾಗಿದೆ. ಮಂಗಳೂರು ನಗರದ ಕೆಲವು ಭಾಗದಲ್ಲಿ ಜುಲೈ ತಿಂಗಳಲ್ಲಿ ಡೆಂಘೆಯಲ್ಲಿ ವಿಪರೀತ ಏರಿಕೆ ಕಂಡಿದೆ. ಮಂಗಳೂರು ನಗರದಲ್ಲಿ ಮಾತ್ರ 200 ಕ್ಕೂ ಹೆಚ್ಚು ಡೆಂಘೆ ಪ್ರಕರಣಗಳು ವರದಿಯಾಗಿದೆ. ಜಿಲ್ಲೆಯಲ್ಲಿ ಇದುವರೆಗೆ ಒಟ್ಟು 350ಕ್ಕೂ ಹೆಚ್ಚು ಡೆಂಘೆ ಪ್ರಕರಣಗಳು ವರದಿಯಾಗಿದೆ. ಜಿಲ್ಲೆಯ ಮಂಗಳೂರು, ಬಂಟ್ವಾಳ, ಕಡಬ ತಾಲೂಕುಗಳ ವಿವಿಧ ಭಾಗಗಳಲ್ಲಿ ಡೆಂಘೆ ಪ್ರಕರಣಗಳು ವರದಿಯಾಗಿದೆ. ಡೆಂಘೆ ತಡೆಗೆ ಜಿಲ್ಲಾಡಳಿತ, ಆರೋಗ್ಯ ಇಲಾಖೆ ಮುಂಜಾಗೃತಾ ಕ್ರಮಗಳನ್ನು ಕೈಗೊಂಡಿದ್ದು ಅಭಿಯಾನ ಆರಂಭಿಸಿದೆ.
ಎಚ್ಚರ ವಹಿಸಲು ಪತ್ರಕರ್ತರ ಸಂಘ ಮನವಿ:
ಮಳೆಗಾಲದ ವಾತಾವರಣ ಬದಲಾವಣೆಯಿಂದ ಮಂಗಳೂರು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಡೆಂಘೆ ಜ್ವರ ವ್ಯಾಪಕವಾಗಿ ಕಂಡು ಬರುತಿದೆ. ಹಲವು ಮಂದಿ ಪತ್ರಕರ್ತರಿಗೂ ತೀವ್ರ ತರಹದ ಡೆಂಘೆ ಜ್ವರ ಬಾಧೆ ಕಂಡು ಬಂದಿದೆ. ಪತ್ರಕರ್ತರು ಡೆಂಘೆ ಜ್ವರ ಇರುವ ಪ್ರದೇಶದಲ್ಲಿ ವರದಿಗೆ ತೆರಳುವ ಸಂದರ್ಭದಲ್ಲಿ ಸಾಕಷ್ಟು ಮುಂಜಾಗೃತೆ ವಹಿಸಬೇಕು. ಜ್ವರ ಲಕ್ಷಣ ಕಂಡು ಬಂದರೆ ಪತ್ರಕರ್ತರು, ಸಾರ್ವಜನಿಕರು ಕೂಡಲೇ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದುಕೊಳ್ಳಬೇಕು. ಈ ಕುರಿತು ಸಾರ್ವಜನಿಕರು ಮತ್ತು ಎಲ್ಲಾ ಪತ್ರಕರ್ತರು ಎಚ್ಚರಿಕೆ ವಹಿಸಬೇಕೆಂದು ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಮನವಿ ಮಾಡಿದ್ದಾರೆ.
ಮೊಗ್ರದಲ್ಲಿ ಕಾಲಾವಧಿ ಜಾತ್ರೆ ನಡೆಯಿತು.
ಸಿರಿಧಾನ್ಯಗಳ ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕೃಷಿ ಇಲಾಖೆ “ಸಿರಿಧಾನ್ಯ ಓಟ…
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ…
20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…
ಬೀದರ್ ನ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಶ್ವವಿದ್ಯಾಲಯದ 20 ನೇ ಸಂಸ್ಥಾಪನಾ…