ಸುಳ್ಯ: ತ್ಯಾಜ್ಯ ಹಾಕಲು, ವಿಲೇವಾರಿ ಮಾಡಲು ಸ್ಥಳವಿಲ್ಲ ಎಂದು ನಗರ ಪಂಚಾಯತ್ ಆವರಣದಲ್ಲಿಯೇ ಕಸ ಹಾಕಿರುವ ವಿಚಿತ್ರ ಪ್ರಸಂಗ ಸುಳ್ಯ ನಗರದಲ್ಲಿ ಕಂಡು ಬರುತಿದೆ. ಕಳೆದ ಒಂದು ವರುಷದಿಂದ ಈ ರೀತಿ ನಗರ ಪಂಚಾಯತ್ ಆವರಣದಲ್ಲಿ ಕಸ ತುಂಬಿಡಲಾಗುತ್ತಿದ್ದು ಸುಳ್ಯ ನಗರ ಪಂಚಾಯತ್ ಪರಿಸರ ಅಕ್ಷರಷಃ ಡಂಪಿಂಗ್ ಯಾರ್ಡ್ ಆಗಿ ಪರಿವರ್ತನೆಯಾಗಿದೆ. ನಗರ ಪಂಚಾಯತ್‍ನ ಹಿಂದಿನ ಕಟ್ಟಡ, ಎದುರಿನ ವಾಹನ ಪಾರ್ಕಿಂಗ್ ಶೆಡ್ ಪೂರ್ತಿಯಾಗಿ ಕಸದ ರಾಶಿ ತುಂಬಿ ತುಳುಕಿದ್ದು ಈಗ ನಗರ ಪಂಚಾಯತ್ ಕಟ್ಟಡದ ಹಿಂಭಾಗದಲ್ಲಿ ತ್ಯಾಜ್ಯವನ್ನು ತಂದು ಹಾಗೆ ಸುರಿಯಲಾಗುತಿದೆ. ಪರಿಣಾಮ ನಗರ ಪಂಚಾಯತ್ ಸುತ್ತಲೂ ಕಸದ ರಾಶಿಯೇ ರಾರಾಜಿಸುತಿದೆ.
ಪರಸರವಿಡೀ ದುರ್ವಾಸನೆ ಬೀರುತಿದೆ: ಆರಂಭದಲ್ಲಿ ಬೇರ್ಪಡಿಸಿದ ಪ್ಲಾಸ್ಟಿಕ್ ಮತ್ತಿತರ ಒಣ ಕಸವನ್ನು ನಗರ ಪಂಚಾಯತ್ ಮುಂಭಾಗದ ಕಟ್ಟಡದಲ್ಲಿ ತುಂಬಿಡಲಾಗುತ್ತಿತ್ತು. ಆದರೆ ಕ್ರಮೇಣ ಬೇರ್ಪಡಸದೆ ಕಸವನ್ನು ಹಾಗೆಯೇ ತುಂಬಿಡಲು ಆರಂಭವಾಯಿತು. ನಗರದಿಂದ ಸಂಗ್ರಹಿಸುವ ಕಸದಲ್ಲಿ ಹಸಿ ಕಸವನ್ನು ಕೃಷಿಕರೋರ್ವರ ತೋಟಕ್ಕೆ ಗೊಬ್ಬರ ತಯಾರಿಸಲೆಂದು ಕೊಂಡೊಯ್ಯಲಾಗುತ್ತಿತ್ತು. ಪ್ಲಾಸ್ಟಿಕ್ ಮತ್ತಿತರ ಒಣ ಕಸವನ್ನು ನಗರ ಪಂಚಾಯತ್‍ನ ಕಟ್ಟಡದಲ್ಲಿ ಸುಮಾರು 11 ತಿಂಗಳಿನಿಂದ ಸಂಗ್ರಹಿಸಲಾಗುತ್ತಿತ್ತು. ಆದರೆ ಇತ್ತೀಚಿನ ಕೆಲವು ದಿನಗಳಿಂದ ಹಸಿ ಕಸವನ್ನು ಗೊಬ್ಬರ ಮಾಡಲು ಕಳಿಸುವುದು ಸ್ಥಗಿತಗೊಂಡಿದೆ. ಪರಿಣಾಮ ಎಲ್ಲಾ ರೀತಿಯ ಕಸವನ್ನೂ ನಗರ ಪಂಚಾಯತ್ ಪರಿಸರದಲ್ಲೇ ಹಾಕಿಡಲಾಗುತ್ತಿದ್ದು ಎಲ್ಲೆಡೆ ದುರ್ವಾಸನೆ ಹರಡಿದೆ. ದುರ್ವಾಸನೆ ಹರಡುವುದರ ಜೊತೆಗೆ ನೊಣಗಳು ಹಾರಾಡುತ್ತಿದ್ದು ಪರಿಸರವೇ ಕೆಟ್ಟು ಹೋಗಿದೆ.
ಸಚಿವರೇ ಆದೇಶಿಸಿದರೂ ಕಸ ತೆರವಾಗಿಲ್ಲ: ನಗರ ಪಂಚಾಯತ್ ಕಟ್ಟಡವೇ ಡಂಪಿಂಗ್ ಯಾರ್ಡ್ ಆಗಿರುವ ವಿಚಾರ ಬಾರೀ ವಿವಾದ ಸೃಷ್ಠಿಸಿದ ಹಿನ್ನಲೆಯಲ್ಲಿ ಈ ಹಿಂದಿನ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಯು.ಟಿ.ಖಾದರ್ ಸ್ಥಳಕೆ ಭೇಟಿ ನೀಡಿ ಕೂಡಲೇ ನಗರ ಪಂಚಾಯತ್ ಅಂಗಳದಿಂದ ಕಸವನ್ನು ತೆರವು ಮಾಡಲು ಸೂಚಿಸಿದ್ದರು. ಆದರೆ ಬಳಿಕ ಹಲವು ತಿಂಗಳುಗಳೇ ಕಳೆದರೂ ಕಸ ತೆರವಾಗಿಲ್ಲ. ಮಾತ್ರವಲ್ಲದೆ ಕಸದ ರಾಶಿ ಇನ್ನಷ್ಟು ಹೆಚ್ಚಿದೆ. ಶಾಸಕ ಎಸ್.ಅಂಗಾರ, ಈಗಿನ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹಿಂದೆ ಸುಳ್ಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಕಸಕ್ಕೆ ಮುಕ್ತಿ ನೀಡಲು ಸೂಚನೆ ನೀಡಿದ್ದರು. ಆದರೆ ಇದುವರೆಗೂ ನಗರ ಪಂಚಾಯತ್ ಅವರಣದ ಕಸಕ್ಕೆ ಮುಕ್ತಿ ನೀಡಲು ಸಾಧ್ಯವಾಗಿಲ್ಲ.
ಕಲ್ಚರ್ಪೆ ಡಂಪಿಂಗ್ ಯಾರ್ಡ್ ಫುಲ್ ಫುಲ್:ಕಲ್ಚರ್ಪೆಯಲ್ಲಿರುವ ಸುಳ್ಯ ನಗರದ ತ್ಯಾಜ್ಯ ವಿಲೇವಾರಿ ಘಟಕದ ಫುಲ್ ಆದ ಕಾರಣ ಅಲ್ಲಿ ಕಸ ಹಾಕುವುದನ್ನು ಕಳೆದ ಒಂದು ವರ್ಷದಿಂದ ನಿಲ್ಲಿಸಲಾಗಿದೆ. ಕಳೆದ ಹಲವು ವರ್ಷಗಳಿಂದ ಕಸವನ್ನು ಕೊಂಡೊಯ್ದು ಹಾಗೆಯೇ ಸುರಿಯುವ ಕಾರಣ ಕಲ್ಚರ್ಪೆಯಲ್ಲಿ ದೊಡ್ಡ ತ್ಯಾಜ್ಯ ಪರ್ವತವೇ ನಿರ್ಮಾಣವಾಗಿದೆ. ಇಲ್ಲಿ ಕಸ ಹಾಕುವುದು ಅಸಾಧ್ಯವಾದ ಕಾರಣ ತ್ಯಾಜ್ಯ ಹಾಕುವುದನ್ನು ನಿಲ್ಲಿಸಲಾಗಿತ್ತು. ಬಳಿಕ ಹಸಿ ಕಸವನ್ನು ಗೊಬ್ಬರ ಮಾಡಲು ಕಳಿಸಲಾಗುತ್ತಿತ್ತು ಮತ್ತು ಒಣ ಕಸವನ್ನು ನಗರ ಪಂಚಾಯತ್ ಎದುರಿನ ಕಟ್ಟಡದಲ್ಲಿ ತುಂಬಿಡಲಾಗುತ್ತಿತ್ತು. ಇದೀಗ ಹಸಿ ಕಸವನ್ನು ಕಲ್ಚರ್ಪೆಗೆ ಮತ್ತೆ ಕೊಂಡೊಯ್ಯಲು ಆರಂಭಿಸಲಾಗಿದ್ದರೂ ಅಲ್ಲಿ ಸಾರ್ವಜನಿಕರು ಪ್ರತಿಭಟನೆ ನಡೆಸಿದ್ದಾರೆ.
ವಾರದಿಂದ ಕಸ ಸಂಗ್ರಹ ಸ್ಥಗಿತ: ಕಸ ಹಾಕಲು ಸ್ಥಳವಿಲ್ಲ ಎಂದು ಕಳೆದ ಒಂದು ವಾರದಿಂದ ಸುಳ್ಯ ನಗರದ ಮನೆಗಳಿಂದ ಮತ್ತು ನಗರದಲ್ಲಿ ಕಸ ಸಂಗ್ರಹ ಮಾಡುವುದು ಸ್ಥಗಿತಗೊಂಡಿದೆ. ಇದರಿಂದ ಕಸ ಮನೆಗಳಲ್ಲಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿಯೇ ಕೊಳೆಯುತಿದೆ. ಕಸ ಸಂಗ್ರಹ ಸ್ಥಗಿತವಾಗಿರುವುದು ತೀವ್ರ ಸಮಸ್ಯೆ ಸೃಷ್ಠಿಸಲಿದೆ ನಗರದ 20 ವಾರ್ಡ್‍ಗಳಲ್ಲಿಯೂ ವಾಹನ ತೆರಳಿ ಕಸ ಸಂಗ್ರಹಿಸುವುದು ನಿಲ್ಲಿಸಲಾಗಿದೆ.
ನಗರ ಪಂಚಾಯತ್ ಸಮೀಪದ ಕಟ್ಟಡದಲ್ಲಿ ಮತ್ತು ಇತರ ಕಡೆ ಸಂಗ್ರಹಿಸಲಾಗಿರುವ ಕಸವನ್ನು ವಿಲೇವಾರಿ ನಡೆಸಲು ಕೂಡಲೇ ಕ್ರಮ ಕೈಗೊಳ್ಳಲಾಗುವುದು. ಅಲ್ಲದೆ ಕಸ ಹಾಕಲು ಸೂಕ್ತ ಸ್ಥಳ ಗುರುತಿಸುವ ಕಾರ್ಯ ಪ್ರಗತಿಯಲ್ಲಿದೆ ನಗರದ ಕಸ ಸಂಗ್ರಹ ಕಾರ್ಯವನ್ನು ಶೀಘ್ರದಲ್ಲಿಯೇ ಆರಂಭಿಸಲಾಗುವುದು – ಮತ್ತಡಿ ,ನಗರ ಪಂಚಾಯತ್ ಮುಖ್ಯಾಧಿಕಾರಿ.
Advertisement
ನಗರದ ಕಸ ಕಡಿಮೆ ಮಾಡಲು ಪೈಪ್ ಕಂಪೋಸ್ಟ್ ಪದ್ಧತಿಯನ್ನು ಅಳವಡಿಸುವುದು ಸೂಕ್ತ. ಪ್ರತಿ ಮನೆಗೆ ಪೈಪ್‍ಗಳನ್ನು ನೀಡಿ ಹಸಿ ಕಸವನ್ನು ಕಂಪೋಸ್ಟ್ ಮಾಡಬೇಕು. ಯಾವುದೇ ಹಸಿ ಕಸ ಮನೆಗಳಿಂದ ಹೊರ ಬರದಂತೆ ಆಗಬೇಕು. ಜೊತೆಗೆ ಪ್ರತಿ ಮನೆಯಿಂದ ಬೇರ್ಪಡಿಸಿದ ಒಣ ಕಸಗಳನ್ನು ಸಂಗ್ರಹಿಸಿ ಅದನ್ನು ಮರು ಬಳಕೆಗೆ ಕ್ರಮ ಕೈಗೊಳ್ಳಬೇಕು –
ಶರೀಫ್ ಕಂಠಿ , ನಗರ ಪಂಚಾಯತ್ ಸದಸ್ಯ.
ಕಾಸರಗೋಡು ಸೇರಿದಂತೆ ಕರ್ನಾಟಕದ ರಾಜ್ಯದಾದ್ಯಂತ ಒಣ ಹವೆ ಮುಂದುವರಿಯಲಿದೆ.
ಪರಿಸರ ಜಾಗೃತಿ ಮೂಡಿಸುವ ಬಣ್ಣ ಬಣ್ಣದ ಚಿತ್ತಾರಗಳು, ಬಹು ಉತ್ಸುಕರಾಗಿ ತಮ್ಮ ಕಲ್ಪನೆಯ…
ಪ್ರಕೃತಿ ಸಂರಕ್ಷಿಸುವುದರ ಜೊತೆಗೆ ಆರೋಗ್ಯ ಕಾಪಾಡಿಕೊಳ್ಳುವುದು ಅವಶ್ಯವಾಗಿರುವುದರಿಂದ ಸಾವಯವ ಕೃಷಿಯತ್ತ ಒಲವು ತೋರಬೇಕೆಂದು…
ಕ್ಯೂಆರ್ ಕೋಡ್ ಬಳಸಿಕೊಂಡು ಗೇರು ತಳಿಗಳ ಮಾಹಿತಿ ಪಡೆಯಲು ಪುತ್ತೂರಿನ ಗೇರು ಸಂಶೋಧನಾ…
ಅಡಿಕೆಗೆ ಹಳದಿ ಎಲೆರೋಗದಿಂದ ಅಡಿಕೆ ಮರಗಳು ನಾಶವಾಗುತ್ತಿವೆ. ಹೀಗಾಗಿ ದಕ್ಷಿಣ ಕನ್ನಡ ಜಿಲ್ಲೆಯ…
ಅಡಿಕೆ ನಮ್ಮ ಆರ್ಥಿಕ, ಸಾಂಸ್ಕೃತಿಕ, ಮತ್ತು ಸಾಮಾಜಿಕ ಜೀವತಂತ್ರದ ಒಂದು ಅವಿಭಾಜ್ಯ ಭಾಗವಾಗಿದೆ.…