ಸುಳ್ಯ: ಯಾವುದೇ ಜನಪ್ರತಿನಿಧಿ ಭೇಟಿಯಾಗಬೇಕಾದರೆ ಕೆಲವು ದಿನಗಳ ಮುಂದೆಯೇ ಮಾತುಕತೆ ಮಾಡಬೇಕು. ಇಷ್ಟೆಲ್ಲಾ ಆದರೂ ಭೇಟಿಯ ಸಮಯ ಕೆಲವೇ ನಿಮಿಷ ಮಾತ್ರಾ. ಆದರೆ ಕೆಲವು ಜನಪ್ರತಿನಿಧಿಗಳು ಸಿಂಪಲ್ ಆಗಿರುತ್ತಾರೆ, ಇದಕ್ಕೊಂದು ಉದಾಹರಣೆ ಶಿಕ್ಷಣ ಸಚಿವ ಸುರೇಶ್ ಕುಮಾರ್.
ಶನಿವಾರ ಮಡಿಕೇರಿ ಕಡೆಗೆ ಭೇಟಿ ನೀಡುವ ವೇಳೆ ಸುಳ್ಯದ ಹೋಟೆಲ್ ಬಳಿ ಚಹಾಕ್ಕೆಂದು ನಿಲ್ಲಿಸಿದ್ದರು. ಈ ಸಂದರ್ಭ ಸುಳ್ಯದ ಹಲವು ಮಂದಿಯನ್ನು ಮಾತನಾಡಿಸಿದರು. ಇವರಲ್ಲಿ ಪುತ್ತೂರು ತಾಲೂಕಿನ ಪಾಪೆಮಜಲು ಸರಕಾರಿ ಪ್ರೌಢಶಾಲೆಯ ಗಣಿತ ಶಿಕ್ಷಕರಾದ ಪ್ರಕಾಶ ಮೂಡಿತ್ತಾಯ ಹಾಗೂ ಸುಳ್ಯ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿರುವ ಶಿಕ್ಷಕ ಡಾ. ಸುಂದರ ಕೇನಾಜೆ ಸಚಿವರ ಗಮನ ಸೆಳೆಸಿದ್ದಾರೆ. ಈ ಬಗ್ಗೆ ಸಚಿವರು ತಮ್ಮ ಪೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ. ಎಲ್ಲೇ ಭೇಟಿ ನೀಡಿದರೂ ಜನಸಾಮಾನ್ಯರ ಬಗ್ಗೆ, ಉತ್ತಮ ಚಟುವಟಿಕೆಗಳ ಬಗ್ಗೆ ಪೇಸ್ ಬುಕ್ ನಲ್ಲಿ ಬರೆದುಕೊಳ್ಳುವ ಸಚಿವರು ಕೆಲವು ಸಮಸ್ಯೆಗಳಿಗೆ ಸ್ವತ: ಪ್ರತಿಕ್ರಿಯೆ ನೀಡುತ್ತಾರೆ, ಸಮಸ್ಯೆ ಪರಿಹಾರಕ್ಕೆ ಪ್ರಯತ್ನ ಮಾಡುತ್ತಾರೆ. ಹೀಗಾಗಿ ರಾಜ್ಯದ ಜನಪ್ರಿಯ ಸಚಿವ ಎನಿಸಿಕೊಂಡಿದ್ದಾರೆ ಮಾತ್ರವಲ್ಲ ಉತ್ತಮ ಆಡಳಿತ ನಡೆಸುವ ಸಚಿವರೂ ಆಗಿದ್ದಾರೆ.
ಸುಳ್ಯದಲ್ಲಿ ಭೇಟಿಯಾದ ಪ್ರಕಾಶ ಮೂಡಿತ್ತಾಯ ಹಾಗೂ ಡಾ. ಸುಂದರ ಕೇನಾಜೆ ಯಕ್ಷಗಾನ ಕುರಿತ ಪಠ್ಯಪುಸ್ತಕವನ್ನು ನೀಡಿದ್ದರು. ಈ ಬಗ್ಗೆ ಆಸಕ್ತ ಹಾಗೂ ಸಂತಸ ವ್ಯಕ್ತ ಪಡಿಸಿದ ಸಚಿವರು “ಇಂತಹ ಸೃಜನಶೀಲ ಶಿಕ್ಷಕರ ಭೇಟಿ ಆದಾಗ ನನ್ನ ಉತ್ಸಾಹ ನೂರ್ಪಾಲು ಹೆಚ್ಚುತ್ತದೆ “ ಎಂದು ಹೇಳಿಕೊಂಡಿದ್ದಾರೆ.