ಸುಳ್ಯ: ಕರ್ನಾಟಕ ಲೋಕಾಯುಕ್ತ ಮಂಗಳೂರು ಮತ್ತು ಸುಳ್ಯ ತಾಲೂಕು ಆಡಳಿತದ ಸಂಯುಕ್ತ ಆಶ್ರಯದಲ್ಲಿ ಸುಳ್ಯ ತಾಲೂಕು ಮಟ್ಟದ ಸಾರ್ವಜನಿಕ ದೂರು ಸ್ವೀಕಾರ ಸಭೆ ಶುಕ್ರವಾರ ತಾಲೂಕು ಕಚೇರಿ ಸಭಾಂಗಣದಲ್ಲಿ ನಡೆಯಿತು. ತಾಲೂಕಿನ ವಿವಿಧ ಸಾರ್ವಜನಿಕ ಮತ್ತು ವೈಯುಕ್ತಿಕ ಸಮಸ್ಯೆಗಳಿಗೆ ಸಂಬಂಧಪಟ್ಟು ಒಟ್ಟು 19 ದೂರುಗಳು ದಾಖಲಾದವು.
ಲೋಕಾಯುಕ್ತ ಅಧಿಕಾರಿಗಳು ಮತ್ತು ವಿವಿಧ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು. ದೂರುಗಳ ಪರಿಶೀಲನೆ ನಡೆಸಿ ಕೆಲವು ದೂರುಗಳ ಪರಿಹಾರಕ್ಕೆ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳಿಗೆ ಸೂಚಿಸಲಾಯಿತು. ಕೆಲವು ದೂರುಗಳ ಬಗ್ಗೆ ಪ್ರಕರಣ ದಾಖಲಿಸಲು ಸೂಚಿಸಲಾಯಿತು.
ನಗರ ಪಂಚಾಯತ್ ಮುಂಭಾಗದಲ್ಲಿ ವಾಹನ ಪಾರ್ಕಿಂಗ್‍ಗೆಂದು ನಿರ್ಮಿಸಿದ ಕಟ್ಟಡದಲ್ಲಿ ತ್ಯಾಜ್ಯ ತುಂಬಿಸಿರುವುದರ ಬಗ್ಗೆ ಲೋಕಾಯುಕ್ತಕ್ಕೆ ದೂರು ನೀಡಲಾಯಿತು. ಕಟ್ಟಡ ಪೂರ್ತಿ ತ್ಯಾಜ್ಯ ತುಂಬಿ ತುಳುಕಿದ್ದು ಪರಿಸರವಿಡೀ ದುರ್ನಾತ ಬೀರುತಿದೆ ಈ ಕುರಿತು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಮಾಹಿತಿ ಹಕ್ಕು ಕಾರ್ಯಕರ್ತ ಡಿ.ಎಂ.ಶಾರಿಖ್ ದೂರು ನೀಡಿದ್ದಾರೆ. ಈ ಕುರಿತು ನಗರ ಪಂಚಾಯತ್ ಮುಖ್ಯಾಧಿಕಾರಿ ಮತ್ತು ಇಂಜಿನಿಯರ್ ಲೋಕಾಯುಕ್ತ ಅಧಿಕಾರಿಗಳು ಪ್ರಶ್ನಿಸಿದರು. ಎರಡು ತಿಂಗಳಲ್ಲಿ ತ್ಯಾಜ್ಯ ಸಂಪೂರ್ಣ ವಿಲೇವಾರಿ ಮಾಡಲು ಕ್ರಮ ಕೈಗೊಳ್ಳುವುದಾಗಿ ನಗರ ಪಂಚಾಯತ್ ಅಧಿಕಾರಿಗಳು ಮಾಹಿತಿ ನೀಡಿದರು. ಇದಕ್ಕೆ ಉತ್ತರಿಸಿದ ಲೋಕಾಯುಕ್ತ ಡಿವೈಎಸ್‍ಪಿ ವಿಜಯಪ್ರಸಾದ್ ಸ್ವಲ್ಪ ಕಾಲಾವಕಾಶ ನೀಡಲಾಗುವುದು ತ್ಯಾಜ್ಯವನ್ನು ವಿಲೇವಾರಿ ಮಾಡಿ ವರದಿ ಸಲ್ಲಿಸಬೇಕೆಂದು ಸೂಚನೆ ನೀಡಿದರು. ಸಾರ್ವಜನಿಕ ಉದ್ದೇಶಕ್ಕೆ ಭೂಮಿ ಮೀಸಲಿಡದ ಕಾರಣ ತ್ಯಾಜ್ಯ ವಿಲೇವಾರಿ ಮತ್ತಿತರ ವ್ಯವಸ್ಥೆಗಳಿಗೆ ಸುಳ್ಯದಲ್ಲಿ ಭೂಮಿ ಇಲ್ಲದೇ ಇರುವುದು ಸಮಸ್ಯೆ ಆಗಿದೆ ಎಂದು ತಹಶೀಲ್ದಾರ್ ಎನ್.ಎ.ಕುಂಞ ಅಹಮ್ಮದ್ ಹೇಳಿದರು.
ನಗರ ಪಂಚಾಯತ್ ಒಳಚರಂಡಿ ಕಾಮಗಾರಿ ಅಸಮರ್ಪಕವಾಗಿದ್ದು ಮ್ಯಾನ್‍ಹೋಲ್‍ಗಳ ನೀರು ರಸ್ತೆಯಲ್ಲಿಯೇ ಹರಿಯುತಿದೆ. ನಗರ ಪಂಚಾಯತ್ ಒಳಾಂಗಣ ಕ್ರೀಡಾಂಗಣ ಕಾಮಗಾರಿ ನಿಗದಿತ ಸಮಯದಲ್ಲಿ ಮುಗಿಸದ ಕಾರಣ ಹೆಚ್ಚು ಹಣ ಖರ್ಚಾಗಿದೆ ಮತ್ತು ಒಳಾಂಗಣ ಕ್ರೀಡಾಂಗಣ ಲೀಸ್‍ಗೆ ನೀಡಿದ್ದು ಅಲ್ಲಿ ಸಾರ್ವಜನಿಕರಿಂದ ಅಧಿಕ ಹಣ ಸಂಗ್ರಹ ಮಾಡಲಾಗುತಿದೆ ಮತ್ತಿತರ ದೂರುಗಳನ್ನು ಡಿ.ಎಂ.ಶಾರಿಖ್ ಲೋಕಾಯುಕ್ತಕ್ಕೆ ಸಲ್ಲಿಸಿದರು. ಈ ಕುರಿತು ಪರಿಶೀಲನೆ ನಡೆಸಿ ನಗರ ಪಂಚಾಯತ್ ಅಧಿಕಾರಿಗಳಿಂದ ಮಾಹಿತಿ ಪಡೆದ ಲೋಕಾಯುಕ್ತ ಅಧಿಕಾರಿಗಳು ಈ ಕುರಿತು ವರದಿ ಸಲ್ಲಿಸುವಂತೆ ನಗರ ಪಂಚಾಯತ್ ಅಧಿಕಾರಿಗಳಿಗೆ ಸೂಚಿಸಿದರು.
ದೇವಚಳ್ಳ ಶಾಲೆಯ ಕ್ರೀಡಾಂಗಣ ವಿಸ್ತರಣೆಗೆ ಕಾಮಗಾರಿ ನರೇಗಾ ಯೋಜನೆಯಲ್ಲಿ ನಡೆಸಲಾಗಿದ್ದು, ಯಂತ್ರಗಳನ್ನು ಬಳಸಿ ಕಾಮಗಾರಿ ನಡೆಸಿದ್ದು ಹೆಚ್ಚು ಹಣ ಬಳಕೆ ಮಾಡಿರುವುದು ಕಂಡು ಬಂದಿದೆ ಈ ಕುರಿತು ತನಿಖೆ ನಡೆಸಬೇಕು ಎಂದು ಹರಿಪ್ರಸಾದ್ ದೂರು ನೀಡಿದರು. ಅಲ್ಲದೆ ಶಾಲಾ ಆವರಣದಲ್ಲಿನ ಮರವನ್ನು ಕಡಿಯಲಾಗಿದ್ದು ಇದರ ಕುರಿತು ತನಿಖೆ ನಡೆಸಬೇಕು ಎಂದು ಅವರು ದೂರು ನೀಡಿದರು. ದೂರಿನ ವಿಚಾರಣೆ ನಡೆಸಿದ ಅಧಿಕಾರಿಗಳು ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳಿಂದ ಮಾಹಿತಿ ಪಡೆದರು. ಕಾಮಗಾರಿ ಕುರಿತು ತನಿಖೆ ನಡಸಲು ಮೇಲಧಿಕಾರಿಗಳಿಂದ ಸೂಚನೆ ಬಂದಿದೆ ಒಂದೆರಡು ದಿನದಲ್ಲಿ ಸ್ಥಳ ಪರಿಶೀಲನೆ ನಡೆಸಿ ವರದಿ ಸಲ್ಲಿಸಲಾಗುವುದು ಎಂದು ತಾ.ಪಂ.ಕಾರ್ಯನಿರ್ವಹಣಾಧಿಕಾರಿಗಳು ತಿಳಿಸಿದರು. ಈ ಕುರಿತು ವರದಿ ಸಲ್ಲಿಸುವಂತೆ ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗೆ ಸೂಚಿಸಿದ ಲೋಕಾಯುಕ್ತ ಅಧಿಕಾರಿಗಳು ಈ ಕುರಿತು ತನಿಖೆ ನಡೆಸಲಾಗುವುದು ಎಂದು ಹೇಳಿದರು.
ಬಾಳುಗೋಡು ಸಮೀಪದ ಹಿರಿಯಡ್ಕ ಹೊಳೆಗೆ ನಿರ್ಮಿಸಿದ ಸೇತುವೆ ಅರ್ಧಕ್ಕೆ ನಿಂತಿದೆ ಇದರಿಂದ ಸಾರ್ವಜನಿಕರಿಗೆ ಸಮಸ್ಯೆ ಆಗಿದೆ ಎಂದು ಶಾರೀಖ್ ಮತ್ತೊಂದು ದೂರು ನೀಡಿದರು. ಸೇತುವೆ ಪೂರ್ಣಗೊಳ್ಳಲು ಇನ್ನೂ 35 ಲಕ್ಷ ರೂ ಬೇಕಾಗಿದೆ ಎಂದು ಜಿ.ಪಂ. ಇಂಜಿನಿಯರ್ ತಿಳಿಸಿದರು. ಈ ಕುರಿತು ಕ್ರಮ ಕೈಗೊಳ್ಳುವುದಾಗಿ ಡಿವೈಎಸ್‍ಪಿ ತಿಳಿಸಿದರು. ಡಿಸಿ ಮನ್ನಾ ಭೂಮಿಯ ಗಡಿ ಗುರುತು ಮಾಡಬೇಕು, ಅಕ್ರಮ ಸಕ್ರಮ, 94ಸಿ ಸ್ಥಳ ಮಂಜೂರಾತಿ, ಕಟ್ಟಡ ತೆರಿಗೆ ಹೆಚ್ಚಳ ಮತ್ತಿತರ ವಿಷಯಗಳ ಬಗ್ಗೆ ದೂರುಗಳು ಸಲ್ಲಿಕೆಯಾಗಿದ್ದವು.
ಲೋಕಾಯುಕ್ತ ಡಿವೈಎಸ್‍ಪಿಗಳಾದ ವಿಜಯಪ್ರಸಾದ್, ಕಲಾವತಿ, ಸುಳ್ಯ ತಹಶೀಲ್ದಾರ್ ಎನ್.ಎ.ಕುಂಞ ಅಹಮ್ಮದ್, ಲೋಕಾಯುಕ್ತ ಇನ್ಸ್ ಪೆಕ್ಟರ್ ಭಾರತಿ, ಸಿಬ್ಬಂದಿಗಳಾದ ಶಶಿಧರ್, ಸುರೇಂದ್ರ, ಪ್ರದೀಪ್, ಲೋಕೇಶ್, ರಾಧೇಶ್, ಸುಳ್ಯ ತಾಲೂಕು ಪಂಚಾಯತ್ ಅಧ್ಯಕ್ಷ ಚನಿಯ ಕಲ್ತಡ್ಕ, ತಾ.ಪಂ.ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭವಾನಿಶಂಕರ್, ವೃತ್ತ ನಿರೀಕ್ಷಕ ಸತೀಶ್‍ಕುಮಾರ್, ಎಸ್‍ಐ ಹರೀಶ್ ಎಂ.ಆರ್., ವಲಯ ಅರಣ್ಯಾಧಿಕಾರಿಗಳಾದ ಎನ್.ಮಂಜುನಾಥ್, ತ್ಯಾಗರಾಜ್, ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಸಣ್ಣೇ ಗೌಡ, ಜಿ.ಪಂ.ಇಂಜಿನಿಯರ್ ಹನುಮಂತಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಪಿ.ಮಹದೇವ್, ತಾಲೂಕು ಆರೋಗ್ಯಾಧಿಕಾರಿ ಡಾ.ಸುಬ್ರಹ್ಮಣ್ಯ, ಮತ್ತಿತರ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.
ಎಲ್ಲಾ ಇಲಾಖೆಗಳ ಮೇಲೆ ಲೋಕಾಯುಕ್ತ ನಿಗಾ: ವಿವಿಧ ಇಲಾಖೆಗಳ ಕಾರ್ಯವೈಖರಿಯ ಬಗ್ಗೆ ಸಾರ್ವಜನಿಕರಿಂದ ಲೋಕಾಯುಕ್ತಕ್ಕೆ ದೂರುಗಳು ಬರುತ್ತಲೇ ಇರುತ್ತದೆ. ಆದುದರಿಂದ ಪ್ರತಿಯೊಂದು ಇಲಾಖೆಗಳ ಮೇಲೂ ಲೋಕಾಯುಕ್ತ ನಿಗಾ ಇರಿಸಿದೆ ಎಂದು ಲೋಕಾಯುಕ್ತ ಡಿವೈಎಸ್‍ಪಿ ವಿಜಯಪ್ರಸಾದ್ ಹೇಳಿದ್ದಾರೆ.
ಸುಳ್ಯ ತಾಲೂಕಿನ ವಿವಿಧ ಇಲಾಖೆಗಳ ಅಧಿಕಾರಿಗಳನ್ನುದ್ದೇಶಿಸಿ ಮಾತನಾಡಿದ ಅವರು ಪಾರದರ್ಶಕ ಆಡಳಿತ ಸಾಧ್ಯವಾಗಬೇಕು ಎಂಬ ನೆಲೆಯಲ್ಲಿ ಲೋಕಾಯುಕ್ತ ಕೆಲಸ ಮಾಡುತಿದೆ. ಕಚೇರಿಗೆ ಬಂದ ಯಾವುದೇ ಸಾರ್ವಜನಿಕರನ್ನೂ ಸತಾಹಿಸುವುದಾಗಲೀ, ಅಲೆದಾಡಿಸುವುದಾಗಲೀ ಮಾಡಬೇಡಿ. ಅರ್ಜಿಗಳನ್ನು ವಿನಾ ಕಾರಣ ತಿರಸ್ಕರಿಸುವಂತಿಲ್ಲ. ಅರ್ಜಿ ಬಂದಾಗ ಅದಕ್ಕೆ ಸ್ವೀಕೃತಿ ಪತ್ರ ನೀಡಬೇಕು. ಅರ್ಜಿ ವಿಲೇವಾರಿ ಪ್ರಕ್ರಿಯೆಗಳ ಬಗ್ಗೆ ಮತ್ತು ತಿರಸ್ಕೃತವಾದಲ್ಲಿ ಅದರ ಮಾಹಿತಿಯ ಹಿಂಬರಹವನ್ನು ಅರ್ಜಿದಾರನಿಗೆ ನೀಡಬೇಕು. ಇಲಾಖೆಗಳಿಂದ ತಿರಸ್ಕೃತಗೊಂಡ ಕಡತಗಳ ಬಗ್ಗೆ ಲೋಕಾಯುಕ್ತ ಪರಿಶೀಲನೆ ನಡೆಸಲಿದೆ. ವಿನಾ ಕಾರಣ, ಜನರನ್ನು ಸತಾಯಿಸುವ ಉದ್ದೇಶಕ್ಕೆ ಅರ್ಜಿ ತಿರಸ್ಕೃತಗೊಂಡಿದ್ದಲ್ಲಿ ಅದಕ್ಕೆ ಸಂಬಂಧಪಟ್ಟ ಅಧಿಕಾರಿಗಳನ್ನು ಜವಾಬ್ದಾರರನ್ನಾಗಿ ಮಾಡಲಾಗುವುದು. ಕಡತ ಲಭ್ಯವಿಲ್ಲ ಎಂಬ ಕಾರಣ ನೀಡಿದರೆ ಆ ಕಡತ ಸಂಬಂಧಿಸಿ ಎಲ್ಲಾ ಪ್ರಶ್ನೆಗಳಿಗೂ ಅವರೇ ಉತ್ತರಿಸಬೇಕಾದೀತು. ಕಚೇರಿಯಲ್ಲಿ ಸಮಯ ಪಾಲನೆ, ಹಾಜರಾತಿ, ಕೆಲಸ ಕಾರ್ಯಗಳ ದಾಖಲಾತಿ ಖಡ್ಡಾಯ. ಪ್ರತಿಯೊಬ್ಬರೂ ಸಮಗ್ರ ಜ್ಞಾನವನ್ನು ಹೊಂದಿರಬೇಕು. ಹುದ್ದೆಗಳ ಗೌರವವನ್ನು ಉಳಿಸುವ ರೀತಿಯಲ್ಲಿ ವರ್ತಿಸಬೇಕು. ಆಯಾ ಇಲಾಖೆಗಳ ಹಿರಿಯ ಅಧಿಕಾರಿಗಳು ಕೆಳ ಹಂತದ ಅಧಿಕಾರಿಗಳನ್ನು ಮತ್ತು ಸಿಬ್ಬಂದಿಗಳನ್ನು ಆ ರೀತಿಯಲ್ಲಿ ತರಬೇತಿ ನೀಡಿ ರೂಪಿಸಬೇಕು ಎಂದು ಸಲಹೆ ನೀಡಿದರು. ಲೋಕಾಯುಕ್ತ ಅಧಿಕಾರಿಗಳು ಅಂಗನವಾಡಿ, ಆಸ್ಪತ್ರೆ, ವಸತಿ ನಿಲಯಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸರಕಾರಕ್ಕೆ ವರದಿ ನೀಡಲಾಗುತ್ತಿದೆ ಎಂದು ಅವರು ತಿಳಿಸಿದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಮುಖ ವಾಣಿಜ್ಯ ಬೆಳೆಯಾಗಿರುವ ಅಡಿಕೆಗೆ ಎಲೆಚುಕ್ಕಿ ಹಾಗೂ ಹಳದಿ…
ಸಮಾಜದಲ್ಲಿ ಯಾಕೆ ಇಷ್ಟೊಂದು ಸಿಟ್ಟು? ಅತ್ಯಂತ ಗಂಭೀರವಾದ ಪ್ರಶ್ನೆಗೆ ಬಂದಿರುವ ಉತ್ತರ ಪ್ರತಿಕ್ರಿಯೆಗಳಲ್ಲಿ…
ಈಗಿನಂತೆ ನವೆಂಬರ್ 29 ರಿಂದ ದಕ್ಷಿಣ ಒಳನಾಡು ಹಾಗೂ 30 ರಿಂದ ಮಲೆನಾಡು…
ಅಡಿಕೆಯ ಮೇಲೆ ಕ್ಯಾನ್ಸರ್‌ಕಾರಕ ಎನ್ನುವ ಅಪವಾದ ನಿರಂತರವಾಗಿದೆ. ಈ ಬಗ್ಗೆ ವೈಜ್ಞಾನಿಕ ಅಧ್ಯಯನ…
ಎಂಟು ಶತಮಾನಗಳ ಭವ್ಯ ಇತಿಹಾಸ ಮತ್ತು ಪರಂಪರೆಯನ್ನು ಹೊಂದಿರುವ ನಾಡಿನ ಪವಿತ್ರ ಕ್ಷೇತ್ರ…
ಖಾದಿ ದೇಶದ ಅಸ್ಮಿತೆಯಾಗಿದ್ದು, ಇದನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಉತ್ತೇಜನ-ಪ್ರೋತ್ಸಾಹ ಅತ್ಯಗತ್ಯವಾಗಿದೆ ಎಂದು…