ಸುಳ್ಯ: ಸುಳ್ಯ ತಾಲೂಕು ನಾಡಹಬ್ಬಗಳ ದಿನಾಚರಣಾ ಸಮಿತಿಯ ಆಶ್ರಯದಲ್ಲಿ ಸುಳ್ಯ ತಾಲೂಕು ಪಂಚಾಯತ್ ಸಭಾಭವನದಲ್ಲಿ ಶ್ರೀ ಮಹರ್ಷಿ ವಾಲ್ಮಿಕಿ ಜಯಂತಿ ಆಚರಣೆ ನಡೆಯಿತು.
ಸಮಾರಂಭವನ್ನು ಉದ್ಘಾಟಿಸಿದ ಸುಳ್ಯ ತಹಶೀಲ್ದಾರ್ ಎನ್.ಎ.ಕುಂಞ ಅಹ್ಮದ್ ಮಾತನಾಡಿ ಶ್ರೀರಾಮ ಆದರ್ಶತೆಗೆ ಮತ್ತೊಂದು ಹೆಸರು. ಮಹರ್ಷಿ ವಾಲ್ಮೀಕಿ ಮತ್ತು ಅವರು ಮಾಡಿದ ಕಾರ್ಯ ಶ್ರೀರಾಮನ ಕೀರ್ತಿಯಷ್ಟೆ ಅಜರಾಮರವಾದದ್ದು. ಸಮುದಾಯವನ್ನು ಮೀರಿದ ಸಾಧಕ ವಾಲ್ಮೀಕಿ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ತಾಲೂಕು ಪಂಚಾಯತ್ ಉಪಾಧ್ಯಕ್ಷೆ ಶುಭದಾ ಎಸ್.ರೈ ಮಾತನಾಡಿ, ವಾಲ್ಮೀಕಿಯಂತಹ ಮಹನೀಯರ ಸಾಧನೆ ಮತ್ತು ರಾಮಾಯಣದ ಮೂಲಕ ಅವರು ಕೊಟ್ಟ ಮೌಲ್ಯಗಳನ್ನು ಮಕ್ಕಳಿಗೆ ತಿಳಿಸುವ ಪ್ರಯತ್ನ ಆಗಬೇಕು ಎಂದು ಹೇಳಿದರು. ಪತ್ರಕರ್ತ ದುರ್ಗಾಕುಮಾರ್ ನಾಯರ್ಕೆರೆ ವಾಲ್ಮೀಕಿ ಜಯಂತಿಯ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಸಮಾಜ ಕಲ್ಯಾಣ ಇಲಾಖೆಯ ಪ್ರಭಾರ ಸಹಾಯಕ ನಿರ್ದೇಶಕಿ ಎ.ಎಸ್.ಲಕ್ಷ್ಮೀದೇವಿ ಉಪಸ್ಥಿತರಿದ್ದರು. ವಾರ್ಡನ್ ಕೃಷ್ಣಪ್ಪ ಗೌಡ ಸ್ವಾಗತಿಸಿ, ಶಿಕ್ಷಕಿ ಕವಿತಾ ವಂದಿಸಿದರು. ಅರ್ಶಿಯಾ ಕಾರ್ಯಕ್ರಮ ನಿರೂಪಿಸಿದರು.