ಸುಳ್ಯದ “ಪವರ್ ಪ್ರಾಬ್ಲಂ” ತಾಲೂಕಿನ ಅಭಿವೃದ್ಧಿ ಮೇಲೆ ಹೊಡೆತ….!

May 8, 2019
1:00 PM

ಸುಳ್ಯ: ತಾಲೂಕಿನ ವಿದ್ಯುತ್ ಸಮಸ್ಯೆ ಬಗ್ಗೆ ಮಾತನಾಡಿದರೆ ಅನೇಕರು ಉರಿದು ಬೀಳುತ್ತಾರೆ. ಸುಳ್ಯ ತಾಲೂಕಿನ ಅಭಿವೃದ್ಧಿ, ಇಲ್ಲಿನ ಕೃಷಿ ಬೆಳವಣಿಗೆ, ಕೈಗಾರಿಕೆಗಳ ಬೆಳವಣಿಗೆ ಯೋಚಿಸಿದರೆ ವಿದ್ಯುತ್ ಮಾತು ಹೆಚ್ಚಾಗಲೇಬೇಕಾದ ಅನಿವಾರ್ಯತೆ ಇದೆ.

Advertisement

 

ಕಳೆದ ಹಲವಾರು ವರ್ಷಗಳಿಂದ ಸುಳ್ಯ ತಾಲೂಕಿಗೆ ವಿದ್ಯುತ್ ಸಮಸ್ಯೆ ಇದೆ. ಪ್ರತೀ ಬಾರಿ ಮಾತನಾಡುವಾಗಲೂ ಸುಳ್ಯಕ್ಕೆ 110 ಕೆವಿ ಲೈನ್ ಬಂದರೆ ಎಲ್ಲವೂ ಸರಿಯಾಗುತ್ತದೆ ಎಂಬುದು ಒಂದು ಉತ್ತರವಾದರೆ, ಮಾಡಾವು ಸಬ್ ಸ್ಟೇಶನ್ ಆದರೆ ಸರಿಯಾಗುತ್ತದೆ ಎಂಬುದು ಇನ್ನೊಂದು ಉತ್ತರ. ಸುಬ್ರಹ್ಮಣ್ಯ ಸಬ್ ಸ್ಟೇಶನ್ ಕೂಡಾ ಗುಣಮಟ್ಟದ ವಿದ್ಯುತ್ ಗೆ ಕಾರಣವಾಗುತ್ತದೆ ಎಂಬುದು ಇತ್ತು. ಆದರೆ ಇದ್ಯಾವುದೂ ಇಂದು ಪರಿಹಾರವಾಗಿ ಕಂಡಿಲ್ಲ. ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಇದೊಂದು ಇಶ್ಯೂ ಆಗಿತ್ತು. ಹೋರಾಟದ ಹಂತದವರೆಗೂ ಹೋಗಿತ್ತು. ಆದರೆ ಚುನಾವಣೆಯ ನಂತರ ವಿದ್ಯುತ್ ಕೆಲಸ ಆಗುತ್ತದೆ ಎನ್ನಲಾಗಿತ್ತು. ಈಗ ಲೋಕಸಭಾ ಚುನಾವಣೆಯೂ ಕಳೆದುಹೋಗಿದೆ. ಯಾವುದೇ ನಿರೀಕ್ಷಿತ ಪ್ರಗತಿ ಆಗಿಲ್ಲ.

ಗುಜರಾತ್ ಮಾದರಿ ಅಭಿವೃದ್ಧಿ ಎಂದು ಪ್ರತೀ ಬಾರಿಯೂ ಅನೇಕರು ಹೇಳುತ್ತಾರೆ. ಗುಜರಾತ್ ಅಭಿವೃದ್ಧಿಗೆ ಮೊದಲ ಹೆಜ್ಜೆಯೇ ವಿದ್ಯುತ್ ವ್ಯವಸ್ಥೆ. ಸೋಲಾರ್ ವಿದ್ಯುತ್, ವಿಂಡ್ ಪವರ್ ಸೇರಿದಂತೆ ಜಲವಿದ್ಯುತ್ ಅಲ್ಲಿ ಬಳಕೆಯಾಗುತ್ತದೆ. ಅದರಿಂದ ಗುಣಮಟ್ಟದ ವಿದ್ಯುತ್ ಪೂರೈಕೆಯ ಕಾರಣದಿಂದ ಕೃಷಿ ಅಭಿವೃದ್ಧಿಯ ಜೊತೆಗೆ ಕೈಗಾರಿಕೆಗಳು ಅಭಿವೃದ್ಧಿಯಾದವು. ಇದೇ ಮಾದರಿ ಗಮನಿಸಿದರೆ ಸುಳ್ಯ ಬಹುಪಾಲು ಹಿಂದಿದೆ.

ಸುಳ್ಯದಲ್ಲಿ ಒಂದೇ ಒಂದು ಕೈಗಾರಿಕೆ ಸರಿಯಾಗಿ ನಡೆಸಲು ಸಾಧ್ಯವಾಗುತ್ತಿಲ್ಲ. ಈ ಕಾರಣದಿಂದ ಯುವಕರು ನಗರದತ್ತ ಮುಖ ಮಾಡಲೇಬೇಕಾದ ಅನಿವಾರ್ಯತೆ ಇದೆ. ಏಕೆಂದರೆ ಇತ್ತೀಚೆಗೆ ಪಂಜದ ಬಳಿ ಸಣ್ಣ ಕೈಗಾರಿಕೆ ಆರಂಭಿಸಿದ ಯುವಕ ವಿದ್ಯುತ್ ಸಮಸ್ಯೆ ಕಾರಣದಿಂದಲೇ ಕೈಗಾರಿಕೆ ನಿಲ್ಲಿಸಿ ಬೆಂಗಳೂರು ಪ್ರವೇಶ ಮಾಡಿದ. ಕೃಷಿ ಜೊತೆಗೆ ಕೈಗಾರಿಕೆಯ ಕನಸು ಕಂಡಿದ್ದ ಯುವಕ ಕೃಷಿಯನ್ನೂ ಬಿಟ್ಟು ರಾಜಧಾನಿಗೆ ತೆರಳಿದ. ಕೈಕೊಡುವ ವಿದ್ಯುತ್ ಕಾರಣದಿಂದಲೇ ಇಂದು ಸಂಪರ್ಕ ವ್ಯವಸ್ಥೆಗೂ ಕಷ್ಟವಾಗಿದೆ. ಆಗಾಗ ಮೊಬೈಲ್ ಕೈಕೊಡುತ್ತದೆ ಡಿಜಿಟಲ್ ಇಂಡಿಯಾದ ಕನಸಿನಲ್ಲಿ ಇರುವ ಭಾರತದಲ್ಲಿರುವ ಸುಳ್ಯಕ್ಕೆ ಈಗ ವಿದ್ಯುತ್ ಬಹುದೊಡ್ಡ ಸಮಸ್ಯೆಯಾಗಿ ಕಾಡಿದೆ.

ಕೃಷಿಯ ಸಮಸ್ಯೆಯೂ ಇದೇ ಹಾದಿಯಲ್ಲಿದೆ. ಇಲ್ಲಿ ಆಗಾಗ ಕೈಕೊಡುವ ವಿದ್ಯುತ್ ಒಂದು ಕಡೆಯಾದರೆ ಲೋವೋಲ್ಟೇಜ್ ಇನ್ನೊಂದು ಸಮಸ್ಯೆ. ಪಂಪ್ ಚಾಲೂ ಆಗದ ಸ್ಥಿತಿ ಇದೆ. ಚಾಲೂ ಆದರೂ ನೀರು ಹಾಯಿಸುವುದು ಕಷ್ಟವಾಗುತ್ತದೆ. ವಾರಕ್ಕೊಮ್ಮೆಯಾದರೂ ನೀರುಣಿಸಲು ಅನೇಕರಿಗೆ ಕಷ್ಟವಾಗಿದೆ. ಮಳೆಗಾಲದಲ್ಲಿ ಕೊಳೆರೋಗವಾದರೆ ಬೇಸಗೆ ಕಾಲದಲ್ಲಿ ನೀರಿದ್ದರೂ ವಿದ್ಯುತ್ ಸಮಸ್ಯೆ ಹಲವರಿಗೆ.

ಇದೆಲ್ಲಾ ಕಾರಣದಿಂದ ವಿದ್ಯುತ್ ಹೆಸರಿನಲ್ಲಿ ಹೋರಾಟಗಳು ಸುಳ್ಯದಲ್ಲಿ ಎಷ್ಟಾದವು. ರಾಜ್ಯದಲ್ಲಿ ಆಡಳಿತ ಪಕ್ಷ ಇರುವಾಗ ವಿಪಕ್ಷಗಳು ಬೊಬ್ಬೆ ಹೊಡೆದವು, ಆಡಳಿತ  ಇರುವ ಪಕ್ಷ ಮೌನವಾಯಿತು. ಸಮಸ್ಯೆ ಎಲ್ಲಿ ಅಂತ ತಿಳಿದುಕೊಂಡು ಇಡೀ ವರ್ಷ ಫಾಲೋಅಪ್ ಮಾಡುವ ಮಂದಿ ಇಲ್ಲವಾಗಿದೆ. ಬೇಸಗೆಯಲ್ಲಿ ಹೋರಾಟ ನಡೆಸಿದರೆ ಮಳೆಗಾಲದ ಆರಂಭದ ಹೊತ್ತಿಗೆ ತಣ್ಣಗಾದರೆ ನಂತರ ಮುಂದಿನ ವರ್ಷವೇ…!. ಈ ನಡುವೆ ತಾಲೂಕಿನಲ್ಲಿ ವಿದ್ಯುತ್ ಸಮಸ್ಯೆ ಇದ್ದರೂ  ಅಕ್ರಮ ಸಕ್ರಮ ನಡೆಯುತ್ತಲೇ ಇದೆ. ವಿದ್ಯುತ್ ಸರಬರಾಜು ಇಲ್ಲದ ಮೇಲೂ ವಿದ್ಯುತ್ ಸಂಪರ್ಕ ನೀಡುವ ಇಲಾಖೆಯ ಅಧಿಕಾರಿಗಳೀಗೂ ವಿದ್ಯುತ್ ಹೆಚ್ಚುವರಿಯಾಗಿ ಬರಿಸುವ ಶಕ್ತಿಯೂ ಇಲ್ಲವೇ ಎಂಬುದೂ ಪ್ರಶ್ನೆಯಾಗಿದೆ.

ಕಳೆದ ಬಾರಿ ಕಾಂಗ್ರೆಸ್, ಬಿಜೆಪಿ ವಿದ್ಯುತ್ ಸಮಸ್ಯೆ ಬಗ್ಗೆ ಮುಂಚೂಣಿಯಲ್ಲಿ ನಿಂತು ಪ್ರತಿಭಟನೆ ಮಾಡಿದರು. ಅದರ ಜೊತೆಗೆ ವಿವಿಧ ಸಂಘಸಂಸ್ಥೆಗಳೂ ಹೋರಾಟ ಮಾಡಿದವು. ಎಲ್ಲರಿಗೂ ಇಲಾಖೆ ನೀಡಿದ ಉತ್ತರ 110 ಕೆವಿ ಆದರೆ ಎಲ್ಲಾ ಸರಿಯಾಗುತ್ತದೆ. ಸದ್ಯಕ್ಕೆ 33 ಕೆವಿ ಆಗ್ತದೆ ಸ್ವಲ್ಪ ಪರಿಹಾರ ಆಗ್ತದೆ ಎಂದು. ಈಗ 33 ಕೆವಿ ಆದರೂ ಸಂಪೂರ್ಣ ಪರಿಹಾರ ಕಂಡಿಲ್ಲ. ಹೋರಾಟ ಮಾಡಿದವರೂ ಈಗ ಪ್ರಶ್ನೆ ಮಾಡಿಲ್ಲ.

ಇತ್ತೀಚೆಗೆ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲೂ ಚರ್ಚೆ ಶುರುವಾಗಿದೆ. ಕೆಲವರು ಸಂಬಂಧಿತ ಅಧಿಕಾರಿಗಳ ಜೊತೆ ಚರ್ಚೆ ಮಾಡಿದ್ದಾರೆ. ಸಮಸ್ಯೆ ಏನು, ಯಾರು ಮಾತನಾಡಿದರೆ, ಸಭೆ ನಡೆಸಿದರೆ ಈ ಸಮಸ್ಯೆಗೆ ಮುಕ್ತಿ ಸಿಗುತ್ತದೆ ಎಂದೂ ಹೇಳಿದ್ದಾರೆ. ಈಗ ಆ ನಿರೀಕ್ಷೆ ಇದೆ.

ವಾರದ ಹಿಂದೆ ಭಾರತೀಯ ಕಿಸಾನ್ ಸಂಘದ ಪದಾಧಿಕಾರಿಗಳು ಮಾಡಾವು ಸಬ್ ಸ್ಟೇಶನ್ ಕಾಮಗಾರಿ ವೀಕ್ಷಣೆ ಮಾಡಿದ ಬಳಿಕ ಪದಾಧಿಕಾರಿಗಳು ಹೇಳುವಂತೆ ಒಂದು ತಿಂಗಳಲ್ಲಿ ಕೆಲಸ ಪೂರ್ತಿಯಾದೀತು.

ಈ ನಡುವೆ ಸಾಮಾಜಿಕ ಜಾಲತಾಣದಲ್ಲಿ ಒಬ್ಬರು ಹೀಗೆ ಬರೆದುಕೊಂಡಿದ್ದಾರೆ ,  ಬೆಳ್ಳಾರೆ ಪೇಟೆ ದಿನದಿಂದ ದಿನಕ್ಕೆ ಬೆಳೆಯುತ್ತಿದೆ ಆದರೆ ಮೆಸ್ಕಾಂ ಮಾತ್ರ ನಿದ್ದೆಯಿಂದ ಎದ್ದಂತಿಲ್ಲ ಪೇಟೆಯ ಗ್ರಾಹಕರು ನಿರಂತರ ವಿದ್ಯುತ್ ನೀಡಲು ಡೌನ್ ಪೀಡರ್ ಆಗಬೇಕೆಂದು ಬೇಡಿಕೆ ಇಡುತ್ತಲೇ ಬಂದಿದ್ದಾರೆ. ಇದೆಲ್ಲವೂ ಕೋಣನ ಮುಂದೆ ಕಿನ್ನರಿ ಬಾರಿಸಿದಂತಾಗಿದೆ. ಜನಪ್ರತಿನಿಧಿಗಳ ಭರವಸೆ ಚುನಾವಣೆಗೆ ಮಾತ್ರ ಸೀಮಿತವಾಗಿದೆ.

ಇಷ್ಟೆಲ್ಲಾ ವಿದ್ಯುತ್ ಕಣ್ಣು ಮಚ್ಚಾಲೆ ನಡಿತಿದ್ರೂ ವರ್ತಕರ ಸಂಘ ಹೋರಾಟ ನಡೆಸುತ್ತಿಲ್ಲ ,  ಕೆಇಬಿ ವಿಚಾರಿಸಿದ್ರೆ ಸಿಟಿಯಲ್ಲಿ ಒವರ್ ಲೋಡ್ ಎಂಬ ಉತ್ತರ.  ಒಂದು ವರ್ಷದ ಮುಂಚೆ ಸಿಟಿ ಪೀಡರ್ ಮಾಡಿಸ್ತೀವಿ ಅಂತ ಮಂಗ ಮಾಡಿದ್ದಾರೆ. ಹೀಗೆ ‌ನಡಿತ ಇದ್ರೆ ಕರೆಂಟ್ ಇಲ್ಲದೆ ವ್ಯಾಪಾರಿಗಳು ಅಂಗಡಿ ಬಾಗಿಲು ಮುಚ್ಚುವ ಪರಿಸ್ಥಿತಿ ಖಂಡಿತ ಎಂದು ನೋವನ್ನು ತೊಡಿಕೊಂಡಿದ್ದಾರೆ.

ಮತ್ತೊಬ್ಬರು ಹೀಗೆ ಬರೆದಿದ್ದಾರೆ, ಮೋದಿಜೀ, ಇನ್ನು 5 ವರ್ಷ ಬೇರೆ ಯಾವುದೇ ಯೋಜನೆ ಮಾಡದೇ , ವಿದ್ಯುತ್ ವಿಭಾಗವನ್ನು ರಾಷ್ಟ್ರೀಕರಣಗೊಳಿಸಿ , ಎಲ್ಲಾ ಹಳ್ಳಿಗಳಿಗೂ 24 ಗಂಟೆ ವಿದ್ಯುತ್ ಪೂರೈಕೆ ಮಾಡಿದರೆ ಸಾಕು. ಭಾರತ ಅಭಿವೃದ್ಧಿ ಹೊಂದಿ ರಾಷ್ಟ್ರಗಳಲ್ಲಿ ಒಂದಾಗಿರುತ್ತದೆ.

ಕಲ್ಮಡ್ಕದ ಕೃಷಿಕ ಸುರೇಶ್ಚಂದ್ರ ಅವರು ನಿರಂತರವಾಗಿ ವಿದ್ಯುತ್ ಸಮಸ್ಯೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆಯುತ್ತಿದ್ದಾರೆ. ಅದನ್ನು  ಎಲ್ಲಾ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಟ್ಯಾಗ್ ಮಾಡುತ್ತಿದ್ದಾರೆ. ಒಬ್ಬ ನಾಗರಿಕನಾಗಿ ಸದ್ದಿಲ್ಲದೆ ಪ್ರಯತ್ನ ಮಾಡುತ್ತಿದ್ದಾರೆ. ಹಲವು ಬಾರಿ ಮೆಸ್ಕಾಂ ಅಧಿಕಾರಿಗಳನ್ನು ಮಾತನಾಡಿಸಿ ಪರಿಹಾರ ಹೇಗೆ ಎಂದು ಚರ್ಚೆ ಮಾಡಿದ್ದಾರೆ. ಈಗ ಪಾಸಿಟಿವ್ ಫಲಿತಾಂಶ ಬಂದಿದೆ , ಆದರೆ  ಕಾದು ನೋಡಬೇಕು ಎಂದು ಅವರೇ ಹೇಳುತ್ತಾರೆ

ಯಾರೇ, ಏನೇ ಮಾಡಿದರೂ ಸಭೆ ನಡೆಸುವವರೇ ಸಭೆ ನಡೆಸಿ ತರಾಟೆಗೆ ತೆಗೆದುಕೊಳ್ಳಬೇಕು, ಸಮಸ್ಯೆ ಪರಿಹಾರಕ್ಕೆ ಪ್ರಯತ್ನ ಮಾಡಬೇಕು. ಪರಿಹಾರ ಧನಕ್ಕಾಗಿಯೇ ಒಂದಷ್ಟು ಅನುದಾನ ಇರಿಸಿಕೊಳ್ಳಬೇಕು. ಯಾರೇ ಎಷ್ಟೇ ಬರೆದರೂ, ಹೋರಾಟ ಮಾಡಿದರೂ ಇಚ್ಛಾ ಶಕ್ತಿಯೇ ಇಲ್ಲದೇ ಇದ್ದರೆ ಪ್ರಯೋಜನ ಏನು?.

“ಬರೆದಷ್ಟು ಸುಲಭ ಇಲ್ಲ” ಎಂದು  ಹೇಳಿ ಮುಗಿಸಿಬಹುದು. ಮುಂದಿನ ವರ್ಷವೂ ಇದೇ ಸಮಸ್ಯೆ ಪುನರಾವರ್ತನೆಯಾಗುತ್ತದೆ ಅಷ್ಟೇ.

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಮಹೇಶ್ ಪುಚ್ಚಪ್ಪಾಡಿ

ಕೃಷಿಕ ಹಾಗೂ ಕೃಷಿ ಪತ್ರಕರ್ತ | 2007 ರಿಂದ ವಿವಿಧ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಉಷಾಕಿರಣ, ಹೊಸದಿಗಂತ, ವಿಜಯವಾಣಿ ಹಾಗೂ ಸುವರ್ಣ ನ್ಯೂಸ್‌ ಚಾನೆಲ್‌ನಲ್ಲಿ ವರದಿಗಾರರಾಗಿ, ವಿಭಾಗ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ. ಗ್ರಾಮೀಣಾಭಿವೃದ್ಧಿ ಹಾಗೂ ಕೃಷಿ ಇವರ ಆಸಕ್ತಿಯ ವಿಷಯವಾಗಿದೆ.  

ಇದನ್ನೂ ಓದಿ

ಸಂಜೀವಿನಿ ಸ್ವ ಸಹಾಯ ಸಂಘಗಳ ಸದಸ್ಯರ ಉತ್ಪನ್ನಗಳ ಪ್ರದರ್ಶನ ಮಾರಾಟ ಮೇಳ | ಜಿಲ್ಲೆಯ ಅತ್ಯುತ್ತಮ ಕೃಷಿ ಸಖಿ ಪ್ರಶಸ್ತಿ ಸಂಪಾಜೆ ಮೋಹಿನಿ ವಿಶ್ವನಾಥ್ ಅವರಿಗೆ
April 24, 2025
9:47 PM
by: ದ ರೂರಲ್ ಮಿರರ್.ಕಾಂ
ಯಾಣವನ್ನು ಪ್ಲಾಸ್ಟಿಕ್ ಮುಕ್ತವಾಗಿಸಲು ಪಣ | ಅರಣ್ಯ ಇಲಾಖೆಯಿಂದ ಹಲವು ಕ್ರಮ
April 18, 2025
6:35 AM
by: The Rural Mirror ಸುದ್ದಿಜಾಲ
ಪಟ್ಟೆ ವಿದ್ಯಾ ಸಂಸ್ಥೆಗಳು ಬಡಗನ್ನೂರು ಇನ್ನು ದ್ವಾರಕಾ ಪ್ರತಿಷ್ಠಾನ ಪುತ್ತೂರಿಗೆ ಸೇರ್ಪಡೆ
April 12, 2025
11:50 AM
by: The Rural Mirror ಸುದ್ದಿಜಾಲ
ಪಿಯುಸಿ ಫಲಿತಾಂಶ | ಶ್ರೇಯನ್‌ ಕಾವಿನಮೂಲೆ | ಸುಳ್ಯ ತಾಲೂಕು ಟಾಪರ್‌ | ರಾಜ್ಯಮಟ್ಟದಲ್ಲಿ 8 ನೇ ಸ್ಥಾನ |
April 9, 2025
2:58 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group