ಸುಳ್ಯ-ಕರಿಕೆ-ಮಡಿಕೇರಿ ರಸ್ತೆಗೆ ಅಭಿವೃದ್ಧಿ ಭಾಗ್ಯವಿಲ್ಲ: ಡಿ.4 ರಂದು ಕರಿಕೆ ಬಂದ್ ಮಾಡಿ ಪ್ರತಿಭಟನೆಗೆ ನಿರ್ಧಾರ

December 3, 2019
9:31 AM

ಸುಳ್ಯ: ಸುಳ್ಯ-ಪಾಣತ್ತೂರು-ಮಡಿಕೇರಿ ಸಂಪರ್ಕಿಸುವ ಭಾಗಮಂಡಲ-ಕರಿಗೆ ರಸ್ತೆ ಅಭಿವೃದ್ಧಿ ಕಾಣದೆ ದಶಕಗಳೇ ಕಳೆದಿದ್ದು, ಇದೀಗ ಈ ರಸ್ತೆ ವಾಹನ ಸಂಚಾರಕ್ಕೆ ಮಾತ್ರವಲ್ಲದೆ, ಕಾಲ್ನಡಿಗೆಗೂ ಯೋಗ್ಯವಿಲ್ಲದಂತಾಗಿದೆ. ಇದನ್ನು ಪ್ರತಿಭಟಿಸಿ ಡಿ.4ರಂದು ಕರಿಕೆ ಬಂದ್ ಮಾಡಿ ತೀವ್ರ ಪ್ರತಿಭಟನೆ ನಡೆಸಲು ಸಾರ್ವಜನಿಕರು ನಿರ್ಧರಿಸಿದ್ದಾರೆ.

Advertisement

ಕೊಡಗಿನ ಗಡಿಭಾಗವಾದ ಕರಿಕೆ ಗ್ರಾಮ ಕೇರಳದ ಕಾಸರಗೋಡು ಜಿಲ್ಲೆಗೆ ಹೊಂದಿಕೊಂಡಿದ್ದು, ಇದರೊಂದಿಗೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿಗೆ ಸಮೀಪದಲ್ಲಿದೆ. ಕರಿಕೆಯಿಂದ ಕೊಡಗಿನ ಜಿಲ್ಲಾ ಕೇಂದ್ರವಾದ ಮಡಿಕೇರಿಗೆ ಸುಮಾರು 70 ಕಿ.ಮೀ. ದೂರವಿದ್ದರೆ, ಸುಳ್ಯ ತಾಲೂಕು ಕೇಂದ್ರ ಕೇವಲ 25 ಕಿ.ಮೀ. ಅಂತರದಲ್ಲಿದೆ. ಕೇರಳದ ಪ್ರಮುಖ ಪಟ್ಟಣಗಳಲ್ಲೊಂದಾದ ಕಾಂಞಂಗಾಡ್‍ಗೆ 50 ಕಿ.ಮೀ ಅಂತರವಿದೆ. ಆದರೆ ಕೊಡಗು ಜಿಲ್ಲೆಗೆ ಸೇರಿದ ಕರಿಕೆ ಗ್ರಾಮ ಪಂಚಾಯಿತಿಯ ಜನರು ತಮ್ಮ ಕೆಲಸ ಕಾರ್ಯಗಳಿಗೆ 70 ಕಿ.ಮೀ. ದೂರದಲ್ಲಿರುವ ತಾಲೂಕು ಹಾಗೂ ಜಿಲ್ಲಾ ಕೇಂದ್ರವಾದ ಮಡಿಕೇರಿಗೆ ಪ್ರತಿನಿತ್ಯ ಸಂಚರಿಸಬೇಕಾಗಿದ್ದು, ಅವರ ಸಂಚಾರಕ್ಕೆ ಇರುವ ಅತಿ ಹತ್ತಿರದ ಸಂಪರ್ಕ ರಸ್ತೆಯೆಂದರೆ ಅದು ಭಾಗಮಂಡಲ-ಕರಿಕೆ ರಸ್ತೆ.

Advertisement

 

ಹೆಸರಿಗೆ ಭಾಗಮಂಡಲ-ಕರಿಕೆ ರಸ್ತೆ ಅಂತರರಾಜ್ಯಗಳ ಸಂಪರ್ಕ ರಸ್ತೆಯಾಗಿದ್ದರೂ, ಲೋಕೋಪಯೋಗಿ ಇಲಾಖೆಯ ದಾಖಲೆಗಳ ಪ್ರಕಾರ ಇದು ಜಿಲ್ಲಾ ಮುಖ್ಯ ರಸ್ತೆ (ಎಂಡಿಆರ್)ಯಾಗಿದೆ. ಆದರೆ ಈ ರಸ್ತೆಗೆ ಕಾಯಕಲ್ಪ ನೀಡುವ ಬಗ್ಗೆ ಲೋಕೋಪಯೋಗಿ ಇಲಾಖೆಯಾಗಲಿ, ಕರ್ನಾಟಕ ರಾಜ್ಯ ಸರಕಾರವಾಗಲಿ ಆಸಕ್ತಿ ತೋರುತ್ತಿಲ್ಲ ಎಂಬುದಕ್ಕೆ ಈ ರಸ್ತೆಯ ಇಂದಿನ ದುಸ್ಥಿತಿಯೇ ಉದಾಹರಣೆಯಾಗಿದೆ ಎಂದು ಕರಿಕೆ ಗ್ರಾಮ ಪಂಚಾಯತ್ ಅಧ್ಯಕ್ಷ ಎನ್.ಬಾಲಚಂದ್ರ ನಾಯರ್ ಹೇಳಿದ್ದಾರೆ. ಭಾಗಮಂಡಲ- ಕರಿಕೆ ರಸ್ತೆಯು ಅಂತಾರಾಜ್ಯ ಸಂಪರ್ಕ ರಸ್ತೆಯಾಗಿರುವುದು ಮಾತ್ರವಲ್ಲದೆ, ಕೊಡಗಿನ ಪ್ರಮುಖ ತೀರ್ಥಕ್ಷೇತ್ರವಾದ ತಲಕಾವೇರಿ ಹಾಗೂ ಇಸ್ಲಾಂನ ಧಾರ್ಮಿಕ ಕೇಂದ್ರ ಎಮ್ಮೆಮಾಡು ಕ್ಷೇತ್ರಗಳನ್ನು ಸಂಪರ್ಕಿಸುವ ರಸ್ತೆಯೂ ಆಗಿರುವುದರಿಂದ ಈ ರಸ್ತೆ ಮಹತ್ವವನ್ನು ಪಡೆದುಕೊಂಡಿದೆ. ಅಲ್ಲದೆ ಕೊಡಗು ಮತ್ತು ರಾಜ್ಯದ ಪ್ರವಾಸೋದ್ಯಮದ ಅಭಿವೃದ್ಧಿಗೂ ಈ ರಸ್ತೆ ಪೂರಕವಾಗಿದೆ.
2018ರಲ್ಲಿ ಕೊಡಗು ಜಿಲ್ಲೆಯಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಮಡಿಕೇರಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿ ಸಂಪರ್ಕ ಕಡಿದುಕೊಂಡಿತ್ತು. ಅಂತಹ ಸಂದರ್ಭದಲ್ಲಿ ಹಲವು ತಿಂಗಳುಗಳ ಕಾಲ ಭಾಗಮಂಡಲ- ಕರಿಕೆ ರಸ್ತೆಯೇ ದಕ್ಷಿಣ ಕನ್ನಡ ಜಿಲ್ಲೆಗೆ ಸಂಪರ್ಕ ರಸ್ತೆಯಾಗಿ ಬಳಕೆಯಾಗಿತ್ತು.

Advertisement

ಆದರೂ ಅದೇಕೋ ಈ ರಸ್ತೆಯ ಬಗ್ಗೆ ಸಂಬಂಧಿಸಿದ ಇಲಾಖೆಗಳಾಗಲಿ, ಜನಪ್ರತಿನಿಧಿಗಳಾಗಲಿ, ರಾಜ್ಯ ಸರಕಾರವಾಗಲಿ, ಕೇಂದ್ರ ಸರಕಾರವಾಗಲಿ ಗಮನಹರಿಸಿದಂತೆ ಕಾಣುತ್ತಿಲ್ಲ.
ಈ ರಸ್ತೆ ಭಾಗಮಂಡಲದಿಂದ ಕರಿಕೆವರೆಗೂ ರಕ್ಷಿತಾರಣ್ಯದ ನಡುವೆಯೇ ಸಾಗುತ್ತಿರುವುದರಿಂದ ದಾರಿಯುದ್ದಕ್ಕೂ ಇರುವ ಮರಗಳಿಂದ ಬೀಳುವ ನೀರಿನ ಹೊಡೆತ ಹಾಗೂ ಅತಿಯಾದ ತೇವಾಂಶದಿಂದಾಗಿ ಈ ರಸ್ತೆ ತನ್ನ ಧಾರಣಾ ಶಕ್ತಿಯನ್ನು ಕಳೆದುಕೊಳ್ಳುತ್ತದೆ. ಹಾಳಾಗುತ್ತದೆ. ಅಂತಹದ್ದರಲ್ಲಿ ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಬಹುತೇಕ ಎಲ್ಲಾ ವಾಹನಗಳು ಈ ರಸ್ತೆಯ ಮೂಲಕವೇ ಸಂಚರಿಸಿದ್ದರಿಂದಾಗಿ ಮೊದಲೇ ಗುಂಡಿಮಯವಾಗಿದ್ದ ರಸ್ತೆ ಇದೀಗ ವಾಹನ ಸಂಚಾರಕ್ಕೆ ಅಯೋಗ್ಯವಾಗಿದೆ.

ಈ ರಸ್ತೆಯ ಸುಮಾರು 16 ಕಿ.ಮೀ.ಕರಿಕೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿದ್ದು, ಈ ಭಾಗದ ರಸ್ತೆ ನಡೆದಾಡಲೂ ಯೋಗ್ಯವಿಲ್ಲದಂತಾಗಿದೆ. 2018-19ನೇ ಸಾಲಿನಲ್ಲಿ ಸುಮಾರು 1.29 ಕಿ.ಮೀ ದೂರವನ್ನು ಮರು ಡಾಮರೀಕರಣ ಮಾಡಲಾಗಿತ್ತದರೂ, ಅದು ಸಂಪೂರ್ಣ ಕಿತ್ತುಹೋಗಿದೆ. ಮಳೆಗಾಲದಲ್ಲಿ ಅಲ್ಲಲ್ಲಿ ಮಣ್ಣು ಕುಸಿದು ರಸ್ತೆಯ ಮೇಲೆ ಬಿದ್ದಿದ್ದು, ಮೊದಲೇ ಅಗಲ ಕಿರಿದಾಗಿರುವ ಈ ರಸ್ತೆಯ ಮಣ್ಣು ತೆರವುಗೊಳಿಸದ ಪರಿಣಾಮ ವಾಹನ ಸಂಚಾರಕ್ಕೆ ತೀರಾ ತೊಡಕಾಗಿದೆ. ಸಾಮಾನ್ಯವಾಗಿ ತಲಕಾವೇರಿ ಜಾತ್ರೆಯ ಸಂದರ್ಭ ರಸ್ತೆಯ ಇಕ್ಕೆಲಗಳ ಮಣ್ಣು ತೆರವುಗೊಳಿಸುವ ಕಾರ್ಯ ನಡೆಯುತ್ತಿದಾರೂ ಈ ಬಾರಿ ಆ ಕಾರ್ಯವನ್ನೂ ನಡೆಸಿಲ್ಲ.  ಈ ರಸ್ತೆಯನ್ನು ಕಾಂಞಂಗಾಡ್‍ನಿಂದ ಕಾಟಕೇರಿ ಮೂಲಕ ಮಡಿಕೇರಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕ ರಸ್ತೆಯನ್ನಾಗಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ 2017ರಲ್ಲಿ ರಾಷ್ಟ್ರೀಯ ರಸ್ತೆ ಅಭಿವೃದ್ಧಿ ನಿಗಮದ ವತಿಯಿಂದ ಸಮೀಕ್ಷೆ ನಡೆಸಿ ವಿಸ್ತೃತ ಯೋಜನಾ ವರದಿ ತಯಾರಿಸಲು ಕೇಂದ್ರ ಸರಕಾರ ನಿರ್ದೇಶನ ನೀಡಿದೆ. ಅದರನ್ವಯ ಕೇರಳ ರಾಜ್ಯ ಸರಕಾರವು ತನ್ನ ರಾಜ್ಯದ ಗಡಿಭಾಗದವರೆಗೆ ಸರ್ವೆ ಮಾಡಿ ಯೋಜನಾ ವರದಿ ತಯಾರಿಸಿದ್ದರೂ, ಕರ್ನಾಟಕದ ಭಾಗದಲ್ಲಿ ಮಾತ್ರ ಈ ಕಾರ್ಯ ನಡೆಯದೆ ಇಂದಿಗೂ ನೆನೆಗುದಿಗೆ ಬಿದ್ದಿದೆ. ಮಾತ್ರವಲ್ಲದೆ, 2004ರಿಂದೀಚೆಗೆ ಈ ರಸ್ತೆಯ ಅಗಲೀಕರಣಕ್ಕೂ ಸರಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎನ್ನುತ್ತಾರೆ ಬಾಲಚಂದ್ರ ನಾಯರ್.

ಡಿ.4 ರಂದು ಕರಿಕೆ ಬಂದ್ : ಈ ಮಧ್ಯೆ ಮಡಿಕೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಎಸ್.ರಮಾನಾಥ್  ಡಿ.4 ರಂದು ಕರಿಕೆ ಬಂದ್ ಮಾಡಿ ಪ್ರತಿಭಟನೆ ನಡೆಸುವುದಾಗಿ ಪ್ರಕಟಿಸಿದರು. ರಾಜ್ಯ ಸರಕಾರ, ಲೋಕೋಪಯೋಗಿ ಇಲಾಖೆ ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯ ಧೋರಣೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅವರು ಭಾಗಮಂಡಲ-ಕರಿಕೆ ರಸ್ತೆಯನ್ನು ಅಭಿವೃದ್ಧಿಪಡಿಸಲು ಇದುವರೆಗೆ ಕರಿಕೆ ವ್ಯಾಪ್ತಿಯ ಎಲ್ಲಾ ಜನರು ವಿವಿಧ ಸಂದರ್ಭಗಳಲ್ಲಿ ಜನಪ್ರತಿನಿಧಿಗಳನ್ನು ವಿನಂತಿಸಿಕೊಂಡಿದ್ದಾರೆ. ಆದರೂ ಶಾಸಕರು, ಸಂಸದರಾದಿಯಾಗಿ ಎಲ್ಲರೂ ರಸ್ತೆಯ ಅಭಿವೃದ್ಧಿಯನ್ನು ನಿರ್ಲಕ್ಷಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಹೋರಾಟ ನಡೆಸುವುದೊಂದೇ ಪರ್ಯಾಯ ಮಾರ್ಗವಾಗಿರುವುದರಿಂದ ಕರಿಕೆ ವಲಯ ಕಾಂಗ್ರೆಸ್ ಸಮಿತಿ ನೇತೃತ್ವದಲ್ಲಿ ಸಾರ್ವಜನಿಕರು ಡಿ.4ರಂದು ಕರಿಕೆ ಬಂದ್ ಮೂಲಕ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಕರಿಕೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಎನ್.ಬಾಲಚಂದ್ರ ನಾಯರ್, ಕರಿಕೆ ವಲಯ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬೇಕಲ್ ಡಿ.ದೇವರಾಜ್ ಹಾಗೂ ಕರಿಕೆ ಗ್ರಾ.ಪಂ. ಸದಸ್ಯ ಬಿ.ಕೆ.ಪುರುಷೋತ್ತಮ ಉಪಸ್ಥಿತರಿದ್ದರು.

Advertisement
Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಕೃಷಿಯಲ್ಲಿ ಮೀಥೇನ್ ಕಡಿತದ ಗುರಿ | ವಿಯೆಟ್ನಾಂನಲ್ಲಿ ವಿಶೇಷ ಮಾರ್ಗಸೂಚಿ
August 4, 2025
9:42 PM
by: The Rural Mirror ಸುದ್ದಿಜಾಲ
ಅರ್ಜುನ ಆನೆ ಹೆಸರಿನಲ್ಲಿ ಪ್ರಶಸ್ತಿ
August 4, 2025
9:15 PM
by: The Rural Mirror ಸುದ್ದಿಜಾಲ
ಅರಣ್ಯ ಇಲಾಖೆ ಕಾರ್ಯಾಚರಣೆ ಕಾಡಾನೆ ಸೆರೆ
August 4, 2025
9:07 PM
by: The Rural Mirror ಸುದ್ದಿಜಾಲ
ಮಹೇಂದ್ರ ಏಂಡ್ ಮಹೇಂದ್ರ ಕಂಪೆನಿಯ ಹೊಸ ಮಾದರಿಯ 6 ಕಾರು ಧರ್ಮಸ್ಥಳಕ್ಕೆ ಕೊಡುಗೆ
August 4, 2025
7:26 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror

Join Our Group