ಸುಳ್ಯ: ಲೋಕೋಪಯೋಗಿ ಸುಳ್ಯ ಉಪವಿಭಾಗದ ಪ್ರಮುಖ ಸೇತುವೆಗಳ ತಪಾಸಣಾ ಕಾರ್ಯ ನಡೆಸಲಾಗುತ್ತಿದೆ. ಲೋಕೋಪಯೋಗಿ ಇಲಾಖೆಯ ಯೋಜನೆ ಮತ್ತು ರಸ್ತೆಗಳ ಆಸ್ತಿ ನಿರ್ವಹಣಾ ಕೇಂದ್ರದ ಸೇತುವೆ ತಪಾಸಣಾ ವಾಹನವು ದಕ್ಷಿಣ ಕನ್ನಡ ಜಿಲ್ಲೆಗೆ ಆಗಮಿಸಿದ್ದು ರಾಜ್ಯ ಹೆದ್ದಾರಿ ಮತ್ತು ಜಿಲ್ಲಾ ಮುಖ್ಯ ರಸ್ತೆಗಳಲ್ಲಿನ ಪ್ರಮುಖ ಲೋಕೋಪಯೋಗಿ ಇಲಾಖೆಯ ಸೇತುವೆಗಳ ತಪಾಸಣೆ ನಡೆಸಲಾಗುತ್ತಿದೆ. ಮಂಗಳವಾರ ಸುಳ್ಯ ತಾಲೂಕಿನ ಪ್ರಮುಖ ಸೇತುವೆಗಳ ತಪಾಸಣೆ ನಡೆಸಲಾಗಿದ್ದು ಬುಧವಾರವೂ ಸೇತುವೆಗಳ ಬಲ ಪರೀಕ್ಷೆ ಮುಂದುವರಿಯಲಿದೆ.
ಆಧುನಿಕ ತಪಾಸಣಾ ವಾಹನದ ಸಹಾಯದಿಂದ ಸೇತುವೆಗಳ ಇಂಚು ಇಂಚನ್ನು ಪರಿಶೀಲಿಸುತ್ತಾರೆ. ಸೇತುವೆಗಳ ಫಿಲ್ಲರ್, ಸ್ಲಾಬ್, ಗರ್ಡರ್ ಮತ್ತಿತರ ಭಾಗಗಳನ್ನು ತಪಾಸಣೆ ನಡೆಸಲಾಗುತ್ತದೆ. ಸೇತುವೆಯ ಸಂಪೂರ್ಣ ಪರೀಕ್ಷೆ ನಡೆಸಿ ಸೇತುವೆಯ ಯಾವುದಾದರೂ ಭಾಗಗಳಿಗೆ ಹಾನಿ ಉಂಟಾಗಿದೆಯೇ ಅಥವಾ ಸೇತುವೆ ಶಿಥಿಲಗೊಂಡಿದೆಯೇ ಎಂದು ಪತ್ತೆ ಹಚ್ಚಲಾಗುತ್ತದೆ. ತಪಾಸಣೆ ನಡೆಸಿದ ಬಳಿಕ ಸೇತುವೆಯ ಕುರಿತು ವಿಸ್ತೃತ ವರದಿಯಯನ್ನು ಸಲ್ಲಿಸಲಾಗುತ್ತದೆ. ಈ ವರದಿಯ ಆಧಾರದಲ್ಲಿ ಸೇತುವೆಯ ದುರಸ್ಥಿ, ನವೀಕರಣ ಅಥವಾ ಪುನರ್ ನಿರ್ಮಾಣ ಕಾರ್ಯ ನಡೆಸಲಾಗುತ್ತದೆ.
ಸುಳ್ಯ ತಾಲೂಕಿನಲ್ಲಿ ಲೋಕೋಪಯೋಗಿ ಇಲಾಖೆ ವ್ಯಾಪ್ತಿಯಲ್ಲಿನ ಅಡ್ಕಾರು, ಏನೆಕಲ್ಲು, ಸುಬ್ರಹ್ಮಣ್ಯ, ಪುಳಿಕುಕ್ಕು ಮತ್ತಿತರ ಪ್ರಮುಖ ಸೇತುವೆಗಳ ಪರಿಶೀಲನಾ ಕಾರ್ಯ ನಡೆಸಲಾಗುತ್ತದೆ. ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಕಾಂತಮಂಗಲ ಸೇತುವೆ, ನಾಗಪಟ್ಟಣ ಸೇತುವೆಗಳ ತಪಾಸಣೆಯನ್ನೂ ನಡೆಸಲಾಗುತ್ತದೆ. ತಪಾಸಣೆಯ ವರದಿ ದೊರೆತ ಬಳಿಕ ಸೇತುವೆಗಳ ನಿರ್ವಹಣೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಸುಳ್ಯ ಲೋಕೋಪಯೋಗಿ ಉಪವಿಭಾಗದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಸಣ್ಣೇ ಗೌಡ ತಿಳಿಸಿದ್ದಾರೆ.
ಕಳೆದ ವರ್ಷ ನವೀಕರಣಗೊಂಡ ಕಾಂತಮಂಗಲ ಸೇತುವೆಯನ್ನು ಮಂಗಳವಾರ ಮಧ್ಯಾಹ್ನ ಪರಿಶೀಲಿಸಲಾಯಿತು. ಲೋಕೋಪಯೋಗಿ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಸಣ್ಣೇ ಗೌಡ, ಸೇತುವೆ ತಪಾಸಣಾ ವಾಹನದ ಇಂಜನಿಯರ್‍ಗಳಾದ ಚೆನ್ನಬಸವೇಶ್, ಮಧು ಗೌಡ, ಯತೀಶ್, ಸುಳ್ಯ ಜಿಲ್ಲಾ ಪಂಚಾಯತ್ ಇಂಜಿನಿಯರಿಂಗ್ ವಿಭಾಗದ ಇಂಜಿನಿಯರ್ ಗ ಳಾದ ಮಣಿಕಂಠ, ಎಸ್.ಎಸ್.ಹುಕ್ಕೇರಿ, ನೀರು ಸರಬರಾಜು ವಿಭಾಗದ ಎಇಇ ಸುರೇಶ್, ಕೆವಿಜಿ ಇಂಜಿನಿಯರಿಂಗ್ ಕಾಲೇಜಿನ ಪ್ರೊ.ಚಂದ್ರಶೇಖರ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ತಪಾಸಣಾ ವಾಹನವು ಜಿಲ್ಲೆಯಾದ್ಯಂತ ಸೇತುವೆಗಳ ತಪಾಸಣೆ ನಡೆಸಲಿದೆ ಎಂದು ಇಂಜಿನಿಯರ್ ಗಳು ತಿಳಿಸಿದ್ದಾರೆ.