ಸುಳ್ಯ: ಸುಳ್ಯ ತಾಲೂಕು ಪಂಚಾಯತ್ ಪ್ರಗತಿ ಪರಿಶೀಲನಾ ಸಭೆ ತಾಲೂಕು ಪಂಚಾಯತ್ ಅಧ್ಯಕ್ಷ ಚನಿಯ ಕಲ್ತಡ್ಕ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆಯಿತು. ಅಧಿಕಾರಿಗಳು ವಿವಿಧ ಇಲಾಖೆಗಳ ಮಾಹಿತಿ ನೀಡಿದರು.
ಕಲ್ಮಕಾರಿನಲ್ಲಿ ಪ್ರಕೃತಿವಿಕೋಪದಲ್ಲಿ ಮನೆಗೆ ಹಾನಿ ಸಂಭವಿಸಿದವರಿಗೆ ಮತ್ತು ಭೂ ಕುಸಿತದ ಅಪಾಯದ ಸ್ಥಳದ ಕುಟುಂಬಗಳಿಗೆ ಮನೆ ನಿರ್ಮಿಸಲು ಗ್ರಾಮದ ಪನ್ನೆ ಎಂಬಲ್ಲಿ ಸ್ಥಳ ಗುರುತಿಸಿ ಸರ್ವೆ ನಡೆಸಲಾಗಿದೆ. ಆದರೆ ಆ ಸ್ಥಳ ಡೀಮ್ಡ್ ಫಾರೆಸ್ಟ್ ಆಗಿರುವುದರಿಂದ ಗ್ರಾಮದ ಪದ್ನಡ್ಕ ಎಂಬಲ್ಲಿ ಬೇರೆ ಸ್ಥಳ ಗುರುತಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ಮರ್ಕಂಜ, ಮಡಪ್ಪಾಡಿ, ಜಾಲ್ಸೂರು ಸೇರಿ ವಿವಿಧ ಕಡೆಗಳಲ್ಲಿ ಆರು ಮನೆಗಳನ್ನು ಪ್ರಕೃತಿ ವಿಕೋಪದಲ್ಲಿ ಸೇರ್ಪಡೆ ಮಾಡಬೇಕೆಂದು ಈ ಹಿಂದಿನ ಸಭೆಯಲ್ಲಿ ನಿರ್ದೇಶನ ನೀಡಲಾಗಿದೆ ಅದರ ಪ್ರಗತಿ ಏನಾಗಿದೆ ಎಂದು ತಾ.ಪಂ.ಅಧ್ಯಕ್ಷರು ಪ್ರಶ್ನಿಸಿದರು. ಮರ್ಕಂಜದ್ದು ಸೇರ್ಪಡೆ ಆಗಿದೆ ಉಳಿದವು ಪರಿಶೀಲನೆಯಲ್ಲಿದೆ ಎಂದು ಕಂದಾಯ ಇಲಾಖೆಯ ಅಧಿಕಾರಿ ತಿಳಿಸಿದರು. ರಸ್ತೆಯ ಬದಿಯಲ್ಲಿ ಕಟ್ಟಡ ನಿರ್ಮಿಸುವುದನ್ನು ಆರಂಭದಲ್ಲಿಯೇ ತಡೆಯಲು ಕ್ರಮ ಕೈಗೊಳ್ಳಬೇಕು. ನಿರ್ಮಾಣ ಆದ ಮೇಲೆ ಮತ್ತೆ ತೆರವು ಮಾಡುವುದು ಸಮಸ್ಯೆ ಸೃಷ್ಠಿಸುತ್ತದೆ. ಸಮಸ್ಯೆ ಸೃಷ್ಠಿಗೆ ಆಸ್ಪದ ನೀಡಬೇಡಿ ಎಂದು ಅಧ್ಯಕ್ಷರು ಜಿ.ಪಂ.ಇಂಜಿನಿಯರ್‍ಗಳಿಗೆ ಸೂಚನೆ ನೀಡಿದರು.
ಓವರ್ ಲೋಡ್ ಆಗುತ್ತದೆ ಎಂಬ ಕಾರಣ ಬಾಳಿಲ ಕ್ಷೇತ್ರದಲ್ಲಿ ಮೂರು ಕಡೆ ವಿದ್ಯುತ್ ಟಿಸಿ ಅಳವಡಿಸಲು ಕ್ರಿಯಾ ಯೋಜನೆ ತಯಾರಿಸಿ ಎರಡು ವರ್ಷ ಕಳೆದರೂ ಲೈನ್‍ನ ಟಿಸಿ ಅಳವಡಿಸಿಲ್ಲ. ತಾಲೂಕಿನಾದ್ಯಂತ ಈ ಸಮಸ್ಯೆ ಇದೆ ಈ ರೀತಿಯ ನಿರ್ಲಕ್ಷ್ಯ ಯಾಕೆ ಎಂದು ಸ್ಥಾಯಿ ಸಮಿತಿ ಅಧ್ಯಕ್ಷೆ ಜಾಹ್ನವಿ ಕಾಂಚೋಡು ಮೆಸ್ಕಾಂ ಇಂಜನಿಯರ್‍ನ್ನು ಪ್ರಶ್ನಿಸಿದರು. ಒಂದು ತಿಂಗಳಲ್ಲಿ ಟಿಸಿ ಅಳವಡಿಕೆಗೆ ಕ್ರಮ ಕೈಗೊಳ್ಳುವುದಾಗಿ ಮೆಸ್ಕಾಂ ಇಂಜಿನಿಯರ್ ಸಭೆಗೆ ತಿಳಿಸಿದರು. ಒಬ್ಬೊಬ್ಬರು ಇಂಜಿನಿಯರ್ ಒಂದೊಂದು ಸಭೆಗೆ ಬರುವ ಕಾರಣ ಮೆಸ್ಕಾಂನಿಂದ ಸಮರ್ಪಕವಾದ ಮಾಹಿತಿ ಸಭೆಗೆ ಸಿಗುತ್ತಿಲ್ಲ. ಸಭೆಗೆ ಬರುವಾಗ ಹಿಂದಿನ ಸಭೆಯ ಮಾಹಿತಿಯನ್ನು ಪಡೆದುಕೊಂಡು ಬನ್ನಿ ಎಂದು ಅಧ್ಯಕ್ಷ ಚನಿಯ ಕಲ್ತಡ್ಕ ಸೂಚಿಸಿದರು.
ಅರಂಬೂರಿನಲ್ಲಿ ನಿರ್ಮಾಣ ಹಂತದಲ್ಲಿರುವ ಸೇತುವೆ ಮುಂದಿನ ಮಾರ್ಚ್ ವೇಳೆಗೆ ಪೂರ್ತಿಯಾಗಲಿದೆ ಎಂದು ಲೋಕೋಪಯೋಗಿ ಇಲಾಖೆ ಇಂಜಿನಿಯರ್ ತಿಳಿಸಿದರು. ತಾಲೂಕಿನ 1258 ವಿದ್ಯಾರ್ಥಿಗಳಿಗೆ ಸೈಕಲ್ ವಿತರಣೆ ಆಗಿದೆ ಎರಡನೇ ಹಂತದ ಸಮವಸ್ತ್ರ ಕೆಲವು ವಿಭಾಗಗಳಲ್ಲಿ ಬಿಡುಗಡೆ ಆಗಿದೆ ಉಳಿದಲ್ಲಿ ಕೂಡಲೇ ಬಿಡುಗಡೆ ಆಗಲಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ತಿಳಿಸಿದರು. ಜಲಾಮೃತ ಯೋಜನೆಯಲ್ಲಿ ಅರಂತೋಡು, ತೊಡಿಕಾನ, ಸಂಪಾಜೆ ಗ್ರಾಮಗಳು ಆಯ್ಕೆಯಾಗಿದೆ ಎಂದು ಕೃಷಿ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ಕೃಷಿ, ಅರಣ್ಯ, ತೋಟಗಾರಿಕಾ ಇಲಾಖೆಯ ಉದ್ಯೋಗ ಖಾತರಿ ಯೋಜನೆಯಲ್ಲಿ ಇಲ್ಲಿ ಕೃಷಿ ಕಾರ್ಯಗಳು ನಡೆಯಲಿದೆ ಎಂದರು. ಕಟ್ಟಡ ಕಾರ್ಮಿಕರ ನೋಂದಾವಣೆ ನಡೆಯುತಿದೆ ಎಂದು ಕಾರ್ಮಿಕ ಇಲಾಖೆಯ ಅಧಿಕಾರಿ ತಿಳಿಸಿದರು. ಅರಣ್ಯ ಇಲಾಖೆಯ ವತಿಯಿಂದ ನೆಡುತೋಪು ನಿರ್ಮಾಣ, ಸಸ್ಯಗಳ ಪೋಷಣೆ ಕಾರ್ಯ ನಡೆಯುತ್ತಿದೆ. ಮುಂದಿನ ವರ್ಷಕ್ಕೆ ಒಟ್ಟು 1.29 ಲಕ್ಷ ಗಿಡಗಳನ್ನು ಬೆಳೆಸಲಾಗುತಿದೆ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ಗಿಡ ನೆಡುವ ಸಂದರ್ಭದಲ್ಲಿ ರಸ್ತೆ ಮಾರ್ಜಿನ್ ಬಿಟ್ಟು ನೆಡಲು ಗಮನ ಹರಿಸಿ ಎಂದು ಅಧ್ಯಕ್ಷರು ಸೂಚಿಸಿದರು. ಅ.22ರಿಂದ ನ.6ರ ತನಕ ಜಾನುವಾರುಗಳಿಗೆ ಕಾಲು ಬಾಯಿ ರೋಗದ ಲಸಿಕೆ ಹಾಕುವ ಅಭಿಯಾನ ನಡೆಯುತಿದೆ. ತಾಲೂಕಿನಲ್ಲಿ 29 ಸಾವಿರ ಜಾನುವಾರುಗಳಿಗೆ ಲಸಿಕೆ ಹಾಕಲಾಗುವುದು. ಇದಕ್ಕಾಗಿ ನಾಲ್ಕು ತಂಡ ರಚಿಸಲಾಗಿದೆ ಎಂದು ಪಶು ಸಂಗೋಪನಾ ಇಲಾಖೆಯ ಅಧಿಕಾರಿ ಮಾಹಿತಿ ನೀಡಿದರು.
ಎಲ್ಲಾ ಇಲಾಖೆಗಳೂ ತಮ್ಮ ಅನುದಾನವನ್ನು ಮುಂದಿನ ಫೆಬ್ರವರಿ ತಿಂಗಳ ಮುಂಚಿತವಾಗಿ ಮುಗಿಸಲು ಪ್ರಯತ್ನಿಸಿ ಎಂದು ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಭವಾನಿಶಂಕರ ಸೂಚಿಸಿದರು.
ಕೇಂದ್ರ ಸರ್ಕಾರದ ಈ ಬಾರಿ ಬಜೆಟ್ ಮೇಲೆ ರೈತಾಪಿ ವರ್ಗ ಬಹಳ ನಿರೀಕ್ಷೆ…
ಸಾರಡ್ಕದಲ್ಲಿ ನಡೆದ ಕೃಷಿಹಬ್ಬದ ಬಗ್ಗೆ ಸಾವಯವ ಕೃಷಿಕ ಎ ಪಿ ಸದಾಶಿವ ಅವರ…
ಕಳೆದ ಒಂದು ವಾರದಲ್ಲಿ ಚಾರ್ಮಾಡಿ ಘಾಟ್ನಲ್ಲಿ ಉಂಟಾದ ಎರಡನೇ ಕಾಡ್ಗಿಚ್ಚು ಪ್ರಕರಣ ಇದಾಗಿದೆ.…
ಅಡಿಕೆ ಆಮದು ವ್ಯವಹಾರದಲ್ಲಿ ತಪ್ಪು ಮಾಹಿತಿ ನೀಡಿ ವಿದೇಶದಿಂದ ಕಳ್ಳಸಾಗಾಣಿಕೆ ಮಾಡುತ್ತಿದ್ದ ಪ್ರಕರಣದಲ್ಲಿ ತೂತುಕುಡಿಯ…
ಸಾರಡ್ಕದ ಆರಾಧನಾ ಕಲಾಭವನದಲ್ಲಿ ಜ.26 ರಂದು ಕೃಷಿ ಹಬ್ಬ ನಡೆಯಲಿದೆ.ಬೆಳಗ್ಗೆ ಉದ್ಘಾಟನೆಗೊಳ್ಳುವ ಕೃಷಿ…
ಆಮದು ಸುಂಕವನ್ನು ತಪ್ಪಿಸಲು ಹುರಿದ ಅಡಿಕೆಯನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ಹುರಿದ ಅಡಿಕೆಯ ಆಮದು…