ಸುಳ್ಯ: ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ನೇತೃತ್ವದಲ್ಲಿ ಎಲಿಮಲೆ ಸರಕಾರಿ ಪ್ರೌಢ ಶಾಲೆಯಲ್ಲಿ ಜ.19 ರಂದು ನಡೆಯಲಿರುವ ಸುಳ್ಯ ತಾಲೂಕು 24 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಸಾಹಿತಿ ಕೃ.ಶಾ.ಮರ್ಕಂಜ (ಕೃಷ್ಣಶಾಸ್ತ್ರಿ ಮರ್ಕಂಜ) ಆಯ್ಕೆಯಾಗಿದ್ದಾರೆ.
ಸಾಹಿತ್ಯ ಪರಿಷತ್ ಮತ್ತು ಸಂಘಟನಾ ಸಮಿತಿ ಪದಾಧಿಕಾರಿಗಳ ಸಭೆಯಲ್ಲಿ ಸಮ್ಮೇಳನಾಧ್ಯಕ್ಷರಾಗಿ ಕೃ.ಶಾ.ಮರ್ಕಂಜ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಚಂದ್ರಶೇಖರ ಪೇರಾಲು ಸುಳ್ಯ ನ್ಯೂಸ್.ಕಾಂಗೆ ತಿಳಿಸಿದ್ದಾರೆ.
ಕೃ.ಶಾ.ಮರ್ಕಂಜ ಪರಿಚಯ: ಬಂಟ್ವಾಳ ತಾಲೂಕು ಕೇಪು ಗ್ರಾಮದ ಕೋಡಂದೂರು ಎಂಬಲ್ಲಿ ಮೇ 22, 1963 ರಲ್ಲಿ ಜನಿಸಿದರು. ಅಮೈ, ಅಡ್ಯನಡ್ಕ, ಪುತ್ತೂರುಗಳಲ್ಲಿ ವಿದ್ಯಾಭ್ಯಾಸ ಪಡೆದರು. 1983 ರಿಂದ ಸುಳ್ಯ ತಾಲೂಕು ಮರ್ಕಂಜ ಗ್ರಾಮದ ದೋಳ ಎಂಬಲ್ಲಿ ಪಿತ್ರಾರ್ಜಿತ ಆಸ್ತಿಯಲ್ಲಿ ಕೃಷಿಕನಾಗಿ ವಾಸ್ತವ್ಯ. ಪ್ರೌಢಶಾಲೆಯ ದಿನಗಳಲ್ಲಿ ಅಧ್ಯಾಪಕರೂ ಖ್ಯಾತ ಸಾಹಿತಿಗಳೂ ಆಗಿದ್ದ ವಿ . ಗ . ನಾಯಕ ಹಾಗೂ ಶ್ರೀಕೃಷ್ಣ ಚೆನ್ನಂಗೋಡು ಇವರಿಂದ ಸಾಹಿತ್ಯ ಕ್ಷೇತ್ರದಲ್ಲಿ ಆಸಕ್ತಿ. 1983ರಲ್ಲಿ ‘ಮೌನ ಪಿಟಕ ‘ಕವನ ಸಂಕಲನ ಪ್ರಕಟ.
ನವ್ಯ, ಬಂಡಾಯ, ದಲಿತ ಸಾಹಿತ್ಯದ ಕಾಲಘಟ್ಟದಲ್ಲಿ ಅದಕ್ಕಿಂತ ಭಿನ್ನ ಕಳಕಳಿಯ ಸಮನ್ವಯದ ನೆಲೆಯೊಂದರ ಹುಡುಕಾಟದ ಪ್ರಯತ್ನವೊಂದನ್ನು ಈ ಸಂಕಲನದಲ್ಲಿ ಗುರುತಿಸಬಹುದು. ಹಾಗೆಯೇ ಪತ್ರಿಕೆಗಳಲ್ಲಿ, ಸ್ಮರಣ ಸಂಚಿಕೆ – ಆಕರ ಗ್ರಂಥ, ಅಭಿನಂದನ ಗ್ರಂಥಗಳಲ್ಲಿ ಅನೇಕ ವಿಮರ್ಶ ಲೇಖನಗಳು, ಲಲಿತ ಪ್ರಬಂಧಗಳು, ಲಘು ಬರಹಗಳು, ಸಮೀಕ್ಷಾ ಪ್ರಬಂಧಗಳು, ಕವಿತೆ – ವೈಚಾರಿಕ ಲೇಖನಗಳು ಪ್ರಕಟವಾಗಿವೆ. ದಕ್ಷಿಣ ಕನ್ನಡ ಹಾಗೂ ಕಾಸರಗೋಡು ಜಿಲ್ಲೆಗಳ ಹಲವೆಡೆ ಅನೇಕ ಸಭೆ – ಸಮಾರಂಭ, ಸಾಹಿತ್ಯ ಸಮ್ಮೇಳನಗಳಲ್ಲಿ ವಿವಿಧ ಗೋಷ್ಠಿಗಳ ಅಧ್ಯಕ್ಷತೆ, ಪ್ರಬಂಧ ಮಂಡನೆ, ಉಪನ್ಯಾಸ, ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದಾರೆ. ಭಾಷಾಧ್ಯಯನ, ವಿಚಾರ ಸಾಹಿತ್ಯಗಳಲ್ಲಿ ವಿಶೇಷ ಒಲವು. ಸುಳ್ಯ ತಾಲೂಕು 21 ನೆಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನಿತರಾಗಿದ್ದರು. ಇದೀಗ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ಗೌರವ ಒಲಿದು ಬಂದಿದೆ.