ಸುಳ್ಯ: ಸುಳ್ಯ ತಾಲೂಕು ಪಂಚಾಯತ್ ಕೆ.ಡಿ.ಪಿ ಮಾಸಿಕ ಪ್ರಗತಿ ಪರಿಶೀಲನಾ ಸಭೆಗೆ ತಾಲೂಕು ಮಟ್ಟದ ಅಧಿಕಾರಿಗಳು ಬಾರದಿರುವುದಕ್ಕೆ ಸಭೆಯಲ್ಲಿ ಆಕ್ರೋಶ ವ್ಯಕ್ತವಾದ ಘಟನೆ ನಡೆದಿದೆ.
ಸುಳ್ಯ ತಾಲೂಕು ಪಂಚಾಯತ್ ಅಧ್ಯಕ್ಷ ಚನಿಯ ಕಲ್ತಡ್ಕ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಅಧಿಕಾರಿಗಳ ಹಾಜರಾತಿ ಕರೆದಾಗ ತಹಶೀಲ್ದಾರ್ ಸೇರಿದಂತೆ ಇತರ ಕೆಲವು ಅಧಿಕಾರಿಗಳು ಗೈರಾಗಿದ್ದರು. ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದರು. ಇಂದು ಈ ಸಭೆಯಲ್ಲಿ ನೆರೆ ವಿಚಾರವಾಗಿ ಪ್ರಸ್ತಾಪವಾಗಲಿದೆ. ಅದಕ್ಕೆ ತಹಶೀಲ್ದಾರ್ ಏನು ಕ್ರಮ ಕೈಗೊಂಡಿದ್ದಾರೆ ಎಂದು ತಿಳಿಯಬೇಕಿದೆ. ಬಳಿಕ ನಾವು ಶಾಸಕರಿಗೆ ವಿವರ ನೀಡಬೇಕು. ಅವರ ಅಗತ್ಯ ಇವತ್ತಿನ ಸಭೆಗೆ ಇದೆ. ಅಲ್ಲಿನ ಸಿಬ್ಬಂದಿಯನ್ನು ಕಳುಹಿಸಿದರೆ ಎಷ್ಟರ ಮಟ್ಟಿಗೆ ಉತ್ತರ ಕೊಟ್ಟಾರು. ಅಧಿಕಾರಿಗಳು ಬರುವುದಿಲ್ಲವಾದರೆ ಅವರು ಇರುವ ದಿನವೇ ಸಭೆ ಕರೆಯಿರಿ ಎಂದು ಸ್ಥಾಯಿ ಸಮಿತಿ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು ಹೇಳಿದರು. ಸುಬ್ರಹ್ಮಣ್ಯದ ದೇವರಹಳ್ಳಿ ಪ್ರಾಥಮಿಕ ಶಾಲೆಯ ಜಾಗದ ಸರ್ವೇ ಕಾರ್ಯದ ಬಗ್ಗೆ ಕಳೆದ ಒಂದು ವರ್ಷದಿಂದ ಚರ್ಚೆ ನಡೆಯುತ್ತಿದೆ. ಇಲ್ಲಿಯವರೆಗೆ ಪೂರ್ಣಗೊಂಡಿಲ್ಲ. ಕಂದಾಯ ಮತ್ತು ಶಿಕ್ಷಣಾ ಇಲಾಖೆ ಕೂಡಲೇ ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಸ್ಥಾಯಿ ಸಮಿತಿ ಅಧ್ಯಕ್ಷರು ಹೇಳಿದರು.
ಲೋಕೋಪಯೋಗಿ ಇಲಾಖೆಯ ರಸ್ತೆಗಳ ಇಕ್ಕೆಲಗಳಲ್ಲಿ ಇರುವ ಚರಂಡಿಗಳ ದುರಸ್ತಿ ಮಾಡಲಾಗಿದೆ ಎಂದು ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ ನೀಡಿದ ವರದಿಗೆ ಆಕ್ಷೇಪ ವ್ಯಕ್ತ ಪಡಿಸಿದ ರಾಧಾಕೃಷ್ಣ ಬೊಳ್ಳೂರು ಪಿಡಬ್ಯುಡಿ ಇಲಾಖೆಗೆ ಸೇರಿದ ತಾಲೂಕಿನ 12 ರಸ್ತೆಗಳಲ್ಲಿ ಸರಿಯಾದ ಚರಂಡಿ ವ್ಯವಸ್ಥೆ ಈ ಮಳೆಗಾಲದಲ್ಲಿ ಆಗಿಲ್ಲ. ಪಿಡಬ್ಯುಡಿ ರಸ್ತೆಯಿಂದ ಖಾಸಾಗಿ ರಸ್ತೆಗಳಿಗೆ ಸಂಪರ್ಕ ಇರುವ ಕಡೆಗಳಲ್ಲಿ ಚರಂಡಿ ವ್ಯವಸ್ಥೆ ಮಾಡದೇ ರಸ್ತೆ ನಿರ್ಮಾಣ ಮಾಡಿದ್ದಾರೆ. ಇಂತಹ ಕಡೆಗಳಲ್ಲಿ ಇರುವ ರಸ್ತೆಯನ್ನು ಕೂಡಲೇ ತೆರವುಗೊಳಿಸಬೇಕು. ಈ ಬಗ್ಗೆ ನಿರ್ಲಕ್ಷ್ಯ ವಹಿಸುವುದು ಸರಿಯಲ್ಲ ಎಂದು ಸ್ಥಾಯಿ ಸಮಿತಿ ಅಧ್ಯಕ್ಷರು ಹೇಳಿದರು.
ಸುಳ್ಯ ತಾಲೂಕಿನಲ್ಲಿ ಸುರಿದ ಮಹಾಮಳೆಗೆ ಮತ್ತು ಪ್ರಾಕೃತಿಕ ವಿಕೋಪಗಳಿಗೆ 49 ಮನೆಗಳಲ್ಲಿ 6 ಮನೆಗಳು ಪೂರ್ಣ ಹಾನಿಯಾಗಿದೆ. 43 ಮನೆಗಳು ಭಾಗಶಃ ಹಾನಿಯಾಗಿದೆ. ಕಂದಾಯ ವರ್ಷದಲ್ಲಿ ತಾಲೂಕಿನಲ್ಲಿ 12,57,416 ಲಕ್ಷ ರೂಪಾಯಿ ನಷ್ಟ ಅನುಭವಿಸಿದೆ ಎಂದು ತಾಲೂಕು ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಭವಾನಿಶಂಕರ್ ಹೇಳಿದರು. ಪ್ರಾಕೃತಿಕ ವಿಕೋಪಕ್ಕೆ ತಾಲೂಕಿನ ಕೊಲ್ಲಮೊಗ್ರ ಗ್ರಾ.ಪಂ ವ್ಯಾಪ್ತಿಯಲ್ಲಿ ಗುಡ್ಡ ಕುಸಿದು ಮನೆಕಳೆದುಕೊಂಡವರಿಗೆ ಸರಕಾರದ ವತಿಯಿಂದ ಅಲ್ಲಿನ ಜನರನ್ನು ಸ್ಥಳಾತಂರ ಮಾಡಿ ನಿವೇಶನ ನೀಡಬೇಕು. ಇದಕ್ಕಾಗಿ ಕೊಲ್ಲಮೊಗ್ರದ ಪನ್ನೆ ಎಂಬಲ್ಲಿ ಸಾಮಾಜಿಕ ಅರಣ್ಯಕ್ಕೆ ಸೇರಿದ 4 ಏಕರೆ ಜಾಗ ಗುರುತು ಮಾಡಲಾಗಿದೆ. ಇದನ್ನು ಕೂಡಲೇ ಕಂದಾಯ ಇಲಾಖೆ ಹಸ್ತಾಂತ ಮಾಡುವ ಕೆಲಸ ಆಗಬೇಕು ಎಂದು ತಾಲೂಕು ಪಂಚಾಯತ್ ಅಧ್ಯಕ್ಷ ಚನಿಯ ಕಲ್ತಡ್ಕ ಹೇಳಿದರು.
ಮಹಾ ಮಳೆಗೆ ತಾಲೂಕಿನಲ್ಲಿ ಹಾನಿಯಾದ ರಸ್ತೆಗಳನ್ನು ತುರ್ತು ದುರಸ್ತಿ ಮಾಡಬೇಕು ಇದಕ್ಕೆ ತಾಲೂಕು ಪಂಚಾಯತ್ ಗ್ರಾಮ ಪಂಚಾಯತ್‍ಗಳಿಗೆ ಸೂಕ್ತ ನಿರ್ದೇಶನ ಸುತ್ತೋಲೆ ಕಳಿಸಬೇಕು ಎಂದು ಸ್ಥಾಯಿ ಸಮಿತಿ ಅಧ್ಯಕ್ಷ ರಾಧಾಕೃಷ್ಣ ಬೊಳ್ಳುರು ಹೇಳಿದರು.
ಸಭೆಯಲ್ಲಿ ತಾ.ಪಂ. ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಎನ್. ಭವಾನಿಶಂಕರ್, ಉಪಾಧ್ಯಕ್ಷೆ ಶುಭದಾ ಎಸ್. ರೈ ವಿವಿಧ ಇಲಾಖೆಯಗಳ ಅಧಿಕಾರಿಗಳು ಉಪಸ್ಥಿತರಿದ್ದರು.