ಸುಳ್ಯ: ಸುಳ್ಯ ನಗರ ಪಂಚಾಯತ್ ವ್ಯಾಪ್ತಿಯಲ್ಲಿ ಇರುವ ಜ್ವಲಂತ ಸಮಸ್ಯೆಗಳ ಅವಲೋಕನ ನಡೆಸಲು ಕಾಂಗ್ರೆಸ್ ತಂಡ ನಗರ ಪರ್ಯಟನೆ ನಡೆಸಿದೆ.
ನಗರ ಪಂಚಾಯತ್ ಮಾಜಿ ಅಧ್ಯಕ್ಷ ಹಾಗೂ ಕೆಪಿಸಿಸಿ ಕಾರ್ಯದರ್ಶಿ ಎಂ.ವೆಂಕಪ್ಪ ಗೌಡ ನೇತೃತ್ವದ ತಂಡ ಸೋಮವಾರ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಒಳಚರಂಡಿ ಶುದ್ದೀಕರಣ ಘಟಕ, ಒಳಚರಂಡಿ ವೆಟ್ ವೆಲ್, ನಗರದ ಕೊಳಚೆ ನೀರು ಸೇರುವ ಕಂದಡ್ಕ ಹೊಳೆಯ ಪ್ರದೇಶ, ನಗರ ಪಂಚಾಯತ್ ನ ಕಲ್ಲುಮುಟ್ಲು ಪಂಪ್ ಹೌಸ್, ಕಲ್ಚರ್ಪೆಯ ತ್ಯಾಜ್ಯ ವಿಲೇವಾರಿ ಘಟಕ ಮತ್ತಿತರ ಕಡೆಗಳಿಗೆ ತಂಡ ಭೇಟಿ ನೀಡಿ ಅವಲೋಕನ ನಡೆಸಿತು.
ಕಳೆದ ಮೂರು ಚುನಾವಣೆಯ ಸಂದರ್ಭದಲ್ಲಿಯೂ ಒಳಚರಂಡಿ, ಕುಡಿಯುವ ನೀರಿನ ಸಮಸ್ಯೆ, ತ್ಯಾಜ್ಯ ವಿಲೇವಾರಿ ಘಟಕ ಸಮಸ್ಯೆಗಳ ಬಗ್ಗೆ ಚರ್ಚೆ ನಡೆದಿತ್ತು. ಆದರೆ ಮೂರು ಬಾರಿ ಆಡಳಿತ ನಡೆಸಿದ ಬಿಜೆಪಿ ಆಡಳಿತ ಈ ಸಮಸ್ಯೆಗಳ ಪರಿಹಾರಕ್ಕೆ ಪ್ರಯತ್ನ ನಡೆಸಿಲ್ಲ. ಜ್ವಲಂತ ಸಮಸ್ಯೆಗಳು ಹಾಗೆಯೇ ಉಳಿದಿದೆ. ಇದೀಗ ನಗರ ಪಂಚಾಯತ್ ಚುನಾವಣೆ ಘೋಷಣೆ ಯಾಗಿರುವ ಹಿನ್ನಲೆಯಲ್ಲಿ ನಗರದ ಈ ಸಮಸ್ಯೆಗಳ ಅವಲೋಕನ ಮಾಡಿ ಸಮಸ್ಯೆಗಳನ್ನು ಜನರ ಮುಂದಿಡುವ ಉದ್ದೇಶದಿಂದ ನಗರ ಪರ್ಯಟನೆ ನಡೆಸುತ್ತಿದ್ದೇವೆ ಎಂದು ಎಂ.ವೆಂಕಪ್ಪ ಗೌಡ ಹೇಳಿದರು.
ನಗರ ಪಂಚಾಯತ್ ಮಾಜಿ ಸದಸ್ಯರಾದ ಕೆ.ಎಂ.ಮುಸ್ತಫಾ, ಜೂಲಿಯಾ ಕ್ರಾಸ್ತಾ, ಯುವ ಕಾಂಗ್ರೆಸ್ ಅಧ್ಯಕ್ಷ ಸಿದ್ದಿಕ್, ಲಕ್ಷ್ಮಣ ಶೆಣೈ, ರಿಯಾಝ್ ಕಟ್ಟೆಕ್ಕರ್, ಧೀರಾ ಕ್ರಾಸ್ತಾ, ಶರೀಫ್ ಕಂಠಿ, ವಿಜಯ ಬಂಗ್ಲೆಗುಡ್ಡೆ, ಬಾಲಕೃಷ್ಣ ಬೀರಮಂಗಲ ಮತ್ತಿತರರು ತಂಡದಲ್ಲಿದ್ದರು.