ಸುಳ್ಯ: ಸುಳ್ಯ ಮತ್ತು ಮಡಿಕೇರಿ ಸಂಪರ್ಕಕ್ಕೆ ಇರುವ ಪ್ರಮುಖ ಪರ್ಯಾಯ ರಸ್ತೆ ಸುಳ್ಯದಿಂದ ಆಲೆಟ್ಟಿ ,ಬಡ್ಡಡ್ಕ, ಪಾಣತ್ತೂರು, ಕರಿಕೆ ಭಾಗಮಂಡಲ ಮೂಲಕ ಮಡಿಕೇರಿ ತಲುಪುವ ರಸ್ತೆ. ಆದರೆ ದಕ್ಷಿಣ ಕನ್ನಡ ಜಿಲ್ಲೆ, ಕಾಸರಗೋಡು ಮತ್ತು ಕೊಡಗು ಸಂಪರ್ಕ ಕಲ್ಪಿಸುವ ಈ ರಸ್ತೆ ಅಭಿವೃದ್ಧಿ ಕಾಣದೆ ವಾಹನ ಸಂಚಾರಕ್ಕೆ ತೊಡಕಾಗಿದೆ. ಅನುದಾನವಿದ್ದರೂ ಈ ಬಹುಮುಖ್ಯ ರಸ್ತೆಯ ದುರಸ್ಥಿ ಮಾಡಿಲ್ಲ.
25 ಲಕ್ಷ ಅನುದಾನವಿದ್ದರೂ ದಿವ್ಯ ನಿರ್ಲಕ್ಷ್ಯ:
ಸುಳ್ಯ-ಪಾಣತ್ತೂರು ರಸ್ತೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಭಾಗ 10 ಕಿ.ಮಿ. ಸುಳ್ಯ ಆಲೆಟ್ಟಿ ಬಡ್ಡಡ್ಕದ ಮೂಲಕ ಬಾಟೋಳಿ ಗಡಿವರೆಗೆ ಡಾಮರೀಕರಣ ಕಂಡಿದ್ದರೂ ಹೊಂಡ ಗುಂಡಿ ಬಿದ್ದು ರಸ್ತೆ ಎಕ್ಕುಟ್ಟಿ ಹೋಗಿದೆ. ಕಳೆದ ಮಳೆಗಾಲದ ಮಹಾ ಮಳೆಗೆ ರಸ್ತೆ ಹೊಂಡ ಗುಂಡಿ ಬಿದ್ದು ಸಂಚಾರ ದುಸ್ಥರವಾಗಿದೆ. ಆದುದರಿಂದಲೇ ನಿರಂತರ ಒತ್ತಾಯದ ಮೇರೆಗೆ ಶಾಸಕ ಎಸ್.ಅಂಗಾರ ನಿರ್ದೇಶನದ ಮೇರೆಗೆ ಈ ರಸ್ತೆಯ ದುರಸ್ಥಿಗೆ ಮಳೆಹಾನಿ ದುರಸ್ಥಿ ಯೋಜನೆಯಡಿ 25 ಲಕ್ಷ ಅನುದಾನ ಮೀಸಲಿರಿಸಲಾಗಿತ್ತು. ಆದರೆ ಮತ್ತೊಂದು ಮಳೆಗಾಲ ಬಂದರೂ ರಸ್ತೆಯ ದುರಸ್ಥಿ ಕಾರ್ಯ ಮಾತ್ರ ಮಾಡಿಲ್ಲ. ಸಂಪೂರ್ಣ ಎಕ್ಕುಟ್ಟಿ ಹೋಗಿದ್ದ ರಸ್ತೆಯಲ್ಲಿ ಕಳೆದ ಮಳೆಗಾಲದ ಬಳಿಕ ಗಾಂಧೀನಗರದಿಂದ ಗುರುಂಪುವರೆಗೆ ಕಾಂಕ್ರೀಟೀಕರಣ ಮತ್ತು ನಾಗಪಟ್ಟಣದಿಂದ ಗುಂಡ್ಯವರೆಗೆ ರಸ್ತೆಯಲ್ಲಿ ತೇಪೆ ಮಾಡಿ ದುರಸ್ಥಿ ಮಾಡಲಾಗಿತ್ತು. ಸಂಪೂರ್ಣ ಹದಗೆಟ್ಟಿರುವ ಗುಂಡ್ಯದಿಂದ ಬಡ್ಡಡ್ಕವರೆಗೆ ದುರಸ್ಥಿ ಬಾಕಿಯಾಗಿದೆ. ಇದೀಗ ಮಳೆಗಾಲ ಆರಂಭಗೊಂಡಾಗ ಹೊಂಡಗಳು ಬಾಯ್ದೆರೆದು ಕೆಸರು, ಮಳೆ ನೀರು ನಿಂತು ವಾಹನಗಳು ಸಂಚಾರಕ್ಕೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಕಳೆದ ಜನವರಿಯಲ್ಲಿ ಅನುದಾನ ಮಂಜೂರಾಗಿದ್ದರೂ ಹಣ ಬಿಡುಗಡೆಗೆ ವಿಳಂಬ ಹಾಗು ಚುನಾವಣಾ ನೀತಿ ಸಂಹಿತೆ ಮತ್ತಿತರ ಕಾರಣಗಳಿಂದ ಟೆಂಡರ್ ನಡೆಯಲು ವಿಳಂಬವಾಗಿ ಕಾಮಗಾರಿ ನಡೆಸಲಾಗಲಿಲ್ಲ ಎಂಬುದು ಜಿಲ್ಲಾ ಪಂಚಾಯತ್ ಇಂಜಿನಿಯರ್ ಗಳು ನೀಡುವ ಸ್ಪಷ್ಟೀಕರಣ.
ಮಡಿಕೇರಿ ರಸ್ತೆಗೆ ಪರ್ಯಾಯ:
ಸುಳ್ಯ-ಮಡಿಕೇರಿ ರಸ್ತೆಯ ಪರ್ಯಾಯ ರಸ್ತೆ ಸುಳ್ಯ ಕರಿಕೆ ರಸ್ತೆ. ಕಳೆದ ಮಳೆಗಾಲದಲ್ಲಿ ಭೂಕುಸಿತ, ರಸ್ತೆ ಕೊಚ್ಚಿ ಹೋಗಿ ಸಂಪಾಜೆ-ಮಡಿಕೇರಿ ಮಧ್ಯೆ ರಸ್ತೆ ಮುಚ್ಚಿದಾಗ ಪರ್ಯಾಯ ರಸ್ತೆಯಾಗಿ ಸುಳ್ಯ-ಪಾಣತ್ತೂರು-ಕರಿಕೆ ರಸ್ತೆಯನ್ನು ಬಳಸಿಕೊಳ್ಳಲಾಗಿತ್ತು. ಕೆಲವು ತಿಂಗಳ ಕಾಲ ಈ ರಸ್ತೆಯಲ್ಲಾಗಿ ಮಡಿಕೇರಿ ಸಂಪರ್ಕ ಕಲ್ಪಿಸಲಾಗಿತ್ತು. ಸುಳ್ಯದಿಂದ ಮಡಿಕೇರಿಗೆ ದಿನಾಲು ಸಾವಿರಾರು ವಾಹನಗಳು ಓಡಾಟ ನಡೆಸಿದದವು. ಮಡಿಕೇರಿಯಿಂದ ಸುಳ್ಯಕ್ಕೆ ಕೆಎಸ್‍ಆರ್‍ಟಿಸಿ ಬಸ್ ಸರ್ವೀಸ್ ಕೂಡ ನಡೆಸಿತ್ತು. ಸುಳ್ಯದಿಂದ ಕರಿಕೆ ಮೂಲಕ ಮಡಿಕೇರಿಗೆ 90 ಕಿ.ಮಿ.ದೂರವಿದೆ. ಇದರಲ್ಲಿ ಅಂತಾರಾಜ್ಯ ಸಂಪರ್ಕ ಕಲ್ಪಿಸುವ ಸುಳ್ಯ-ಪಾಣತ್ತೂರು ರಸ್ತೆ ಎರಡೂ ರಾಜ್ಯಗಳಲ್ಲಿ ತಲಾ 10 ಕಿ.ಮಿ.ನಂತೆ 20 ಕಿ.ಮಿ.ದೂರವಿದೆ. ಅಗಲ ಕಿರಿದಾದ ತಿರುವುಗಳನ್ನೊಳಗೊಂಡ ರಸ್ತೆಯ ಪ್ರಯಾಣ ದುಸ್ತರವಾಗಿದೆ. ಕರ್ನಾಟಕದ ಭಾಗದಲ್ಲಿ 10 ಕಿ.ಮಿ.ರಸ್ತೆ ಡಾಮರೀಕರಣ ಕಂಡಿದ್ದರೂ ಹೊಂಡ ಗುಂಡಿ ಬಿದ್ದ ಕಾರಣ ಪ್ರಯಾಣಿಕರು ಪರದಾಡುವಂತಾಗಿದೆ. ಇದೀಗ ಇದೀಗ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಡಿಕೇರಿ ಸಮೀಪ ರಸ್ತೆಯಲ್ಲಿ ಬಿರುಕುಗಳು ಕಾಣಿಸಿಕೊಂಡಿದ್ದು ಆತಂಕ ಹೆಚ್ಚಿದೆ, ಜೊತೆಗೆ ಪರ್ಯಾಯ ರಸ್ತೆಯ ಸ್ಥಿತಿಯೂ ಅಯೋಮಯವಾಗಿದೆ. ಈಗಾಗಲೇ ಬಸ್‍ಗಳು ಸೇರಿ ನೂರಾರು ವಾಹನಗಳು ಓಡಾಟ ನಡೆಸುತಿವೆ. ಅನುದಾನವಿದ್ದರೂ ಸಾರ್ವಜನಿಕರಿಗೆ ಬಹು ಉಪಯೋಗಿ ಸಂಪರ್ಕ ರಸ್ತೆಯ ದುರಸ್ಥಿ ನಡೆಸದ ಬಗ್ಗೆ ಸಾರ್ವಜನಿಕರು ಮತ್ತು ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಸ್ತೆಯ ಎರಡೂ ಬದಿ ಅಗಲೀಕರಣ ಮಾಡಿ ದುರಸ್ಥಿಪಡಿಸಬೇಕು ಎಂಬ ಬೇಡಿಕೆ ನಿರಂತರವಾಗಿದೆ. ಆದರೆ ರಸ್ತೆಯ ಬಗ್ಗೆ ನಿರ್ಲಕ್ಷ್ಯ ವಹಿಸಲಾಗಿದೆ.
ಮಳೆಹಾನಿ ದುರಸ್ಥಿ- ಅರ್ಧದಷ್ಟು ಕಾಮಗಾರಿಯೂ ಪೂರ್ತಿಯಾಗಿಲ್ಲ:
ಸುಳ್ಯ ವಿಧಾನಸಭಾ ಕ್ಷೇತ್ರಕ್ಕೆ ಮಳೆಹಾನಿ ದುರಸ್ಥಿ ಯೋಜನೆಯಡಿಯಲ್ಲಿ ಆರು ಕೋಟಿ ಅನುದಾನ ಮಂಜೂರಾಗಿತ್ತು. ಅದರಲ್ಲಿ ಸುಳ್ಯ ತಾಲೂಕಿಗೆ 3.80 ಕೋಟಿ ಮೀಸಲಿರಿಸಿದ್ದು ಆಲೆಟ್ಟಿ ಬಡ್ಡಡ್ಕ ರಸ್ತೆ ಸೇರಿ 105 ಕಾಮಗಾರಿ ಕೈಗೆತ್ತಿಕೊಳ್ಳಲಾಗಿತ್ತು. ಇದರಲ್ಲಿ ಕೇವಲ 48 ಕಾಮಗಾರಿ ಮಾತ್ರ ಪೂರ್ತಿಯಾಗಿದೆ. ಉಳಿದವು ಕೆಲವು ಅರ್ಧದಲ್ಲಿದ್ದರೆ ಕೆಲವು ಕಾಮಗಾರಿ ಇನ್ನೂ ಆರಂಭವಾಗಿಲ್ಲ. ಆರು ಕೋಟಿಯಲ್ಲಿ ಉಳಿದ 2.20 ಕೋಟಿ ಕಡಬ ತಾಲೂಕಿಗೆ ಮೀಸಲಿರಿಸಲಾಗಿದೆ.