ತಾಲೂಕಿನಲ್ಲಿ ದಾಖಲೆಯ ಶೇ.84.10 ಮತದಾನ
ಸುಳ್ಯ: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಚುನಾವಣೆಗೆ ಸುಳ್ಯದಲ್ಲಿ ಶಾಂತಿಯುತ ಮತದಾನ ನಡೆಯಿತು. ಯಾವುದೇ ಅಹಿತಕರ ಘಟನೆಗಳು ವರದಿಯಾಗಿಲ್ಲ. ಸಂಜೆಯ ವೇಳೆಗೆ ಒಟ್ಟು ಶೇ.84.10 ಮತದಾನವಾಗಿದೆ. ದಾಖಲೆ ಪ್ರಮಾಣದಲ್ಲಿ ಮತದಾನ ಸುಳ್ಯ ತಾಲೂಕಿನಲ್ಲಿ ನಡೆದಿದ್ದು ಜಿಲ್ಲೆಯಲ್ಲಿ ಅತ್ಯಧಿಕ ಮತದಾನವಾದ ತಾಲೂಕಾಗಿದೆ.
ಬೆಳಿಗ್ಗೆ ಏಳು ಗಟೆಯಿಂದ ಮತದಾನ ಕಾರ್ಯ ಆರಂಭಗೊಂಡಿದ್ದು ಕೆಲವು ಬೂತ್‍ಗಳಲ್ಲಿ ಬೆಳಿಗ್ಗೆ ಆರು ಗಂಟೆಯಿಂದಲೇ ಸರತಿ ಸಾಲು ಇತ್ತು. ಬೆಳಿಗ್ಗೆ ಬಿರುಸಿನ ಮತದಾನ ನಡೆದರೆ ಬಳಿಕ ಸರತಿ ಸಾಲು ಕಡಿಮೆಯಾಗಿ ನಿಧಾನವಾಯಿತು. ಮಧ್ಯಾಹ್ನದ ಬಳಿಕ ಮತ್ತೆ ಬಿರುಸು ಪಡೆದುಕೊಂಡಿತ್ತು. ಕೆಲವು ಕಡೆಗಳಲ್ಲಿ ಮತಯಂತ್ರದಲ್ಲಿ ದೋಷ ಕಂಡು ಬಂದ ಹಿನ್ನಲೆಯಲ್ಲಿ ಅಂತಹಾ ಕಡೆಗಳಲ್ಲಿ ಕೂಡಲೇ ಬೇರೆ ಮತ ಯಂತ್ರವನ್ನು ಒದಗಿಸಿ ಮತದಾನ ಮುಂದುವರಿಸಲಾಯಿತು.
ಸುಳ್ಯ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ನಕ್ಸಲ್ ಬಾದಿತ ಬೂತ್‍ಗಳಲ್ಲಿ, ಸೂಕ್ಷ್ಮ ಮತಗಟ್ಟೆಗಳಲ್ಲಿಯೂ ಬಿರುಸಿನ ಮತದಾನ ನಡೆಯಿತು. ಜನರು ನಿರಾಂತಕವಾಗಿ ಮತದಾನ ಮಾಡಿದರು. ಬಿಗು ಬಂದೋಬಸ್ತ್ ಏರ್ಪಡಿಸಲಾಗಿತ್ತು. ಕೇಂದ್ರೀಯ ಮೀಸಲು ಪಡೆ, ಪೊಲೀಸ್, ಗೃಹ ರಕ್ಷಕ ದಳ ಭದ್ರತೆಯನ್ನು ಒದಗಿಸಿತು. ಕ್ಷೇತ್ರದಲ್ಲಿ ನಕ್ಸಲ್ ಬಾದಿತ ಬೂತ್‍ಗಳು ಸೇರಿದಂತೆ ಕ್ರಿಟಿಕಲ್ ಬೂತ್‍ಗಳಲ್ಲಿ ವಿಶೇಷ ಭದ್ರತಾ ವ್ಯವಸ್ಥೆಯನ್ನು ಒದಗಿಸಲಾಯಿತು. 18 ಮೊಬೈಲ್ ಸ್ಕ್ವಾಡ್‍ಗಳು ಕ್ಷೇತ್ರದಲ್ಲಿ ಸಂಚಾರ ನಡೆಸಿದ್ದರು.
13 ಕಡೆ ವೆಬ್ ಕಾಸ್ಟಿಂಗ್:
13 ಬೂತ್‍ಗಳಲ್ಲಿ ವೆಬ್ ಕಾಸ್ಟಿಂಗ್, 15 ಬೂತ್‍ಗಳಲ್ಲಿ ವೀಡಿಯೋಗ್ರಾಫಿ ಮಾಡಲಾಯಿತು. 58 ಮೈಕ್ರೋ ವೀಕ್ಷಕರನ್ನು ನೇಮಕ ಮಾಡಲಾಗಿತ್ತು.
ಬೆಳಿಗ್ಗೆ ಎಲ್ಲಾ ಮತಗಟ್ಟೆಗಳಲ್ಲೂ ಉದ್ದದ ಸರತಿ ಸಾಲಿದ್ದು ಬಿರುಸಿನ ಮತದಾನ ನಡೆದರೆ ಬಳಿಕ ನಿಧಾನವಾಯಿತು. ಮಧ್ಯಾಹ್ನ ಒಂದು ಗಂಟೆ ಗಂಟೆಯ ವೇಳೆಗೆ ಶೇ.53.13 ಮತದಾನವಾಗಿತ್ತು. ಮಧ್ಯಾಹ್ನ ಮೂರು ಗಂಟೆಗೆ ಶೇ.65.04 ಮತದಾನವಾಗಿತ್ತು. ಕೆಲವು ಬೂತ್‍ಗಳಲ್ಲಿ ಮಧ್ಯಾಹ್ನದ ಬಳಿಕ ಮತ್ತು ಚುನಾವಣಾ ಸಮಯ ಮುಗಿಯುವ ವೇಳೆಗೆ ಮತದಾನ ಬಿರುಸುಗೊಂಡಿತು.