ಸುಬ್ರಹ್ಮಣ್ಯ: ಒಂದು ಕಡೆ ಭಾರೀ ಮಳೆ. ಇನ್ನೊಂದು ಕಡೆ ಚಾರಣಕ್ಕೆ ಸೂಕ್ತವಲ್ಲದ ಸಮಯ. ಪಶ್ಚಿಮ ಘಟ್ಟದ ಪ್ರಕೃತಿ ಸೌಂದರ್ಯ ಸವಿಯಲು ಈಗ ಸುಂದರವಾಗಿರುತ್ತದೆ. ಆದರೆ ಈ ಸಮಯ ಚಾರಣಕ್ಕೆ ಸೂಕ್ತವಲ್ಲ. ನವೆಂಬರ್ ನಂತರವೇ ಕುಮಾರಪರ್ವತ ಚಾರಣಕ್ಕೆ ಇಲ್ಲಿ ಸೂಕ್ತ . ಈಗ ಕಾಡುಪ್ರಾಣಿಗಳ ಹಾವಳಿ ಹೆಚ್ಚಿದೆ. ಹುಲಿ, ಆನೆಯಂತಹ ಪ್ರಾಣಿಗಳ ಸಂಚಾರವೂ ಇರುತ್ತದೆ. ಇದೇ ಈಗ ಸಮಸ್ಯೆಗೆ ಕಾರಣವಾಯಿತಾ ಎಂಬ ಸಂದೇಹ ಹೆಚ್ಚಾಗಿದೆ.
ಬೆಂಗಳೂರಿನಲ್ಲಿ ವಿವಿಧ ಖಾಸಗಿ ಕಂಪನಿಗಳಲ್ಲಿ ಉದ್ಯೋಗಿಯಾಗಿದ್ದವರು ಕುಮಾರಪರ್ವತ ಚಾರಣಕ್ಕೆ ಶನಿವಾರ ಕುಕ್ಕೆ ಸುಬ್ರಹ್ಮಣ್ಯಕ್ಕೆ ಬಂದು ಅದೇ ದಿನ ಸಂಜೆ ಗಿರಿಗದ್ದೆಗೆ ತಂಡವಾಗಿ ತೆರಳಿದರು. ಅಲ್ಲಿಂದ ಶೇಷಪರ್ವತ ಏರಿದರು. ಎಲ್ಲರೂ 25 ವರ್ಷದ ಯುವಕರು. ಸುಸ್ತು ಅನ್ನೋದು ಮೈಯಲ್ಲಿಲ್ಲ. ಗಿರಿಗದ್ದೆಯಲ್ಲಿರುವ ಅರಣ್ಯ ಇಲಾಖೆಯ ತಪಾಸಣಾ ಕೇಂದ್ರದಲ್ಲಿ ಮುಚ್ಚಳಿಕೆ ಬರೆದು 12 ಜನ ಸೇರಿ ಒಟ್ಟು 4200 ರೂಪಾಯಿ ನೀಡಿ ಪರ್ವತ ಏರಿದರು.
ಪ್ರಕೃತಿ ಸೌಂದರ್ಯ ಸವಿದು ಹಿಂತಿರುಗುತ್ತಿರುವಾಗ ಸಂಜೆ ವೇಳೆಗೆ ಬೆಂಗಳೂರು ಗಾಯತ್ರಿ ನಗರದ ನಿವಾಸಿ ಸಂತೋಷ ಎಂಬಾತನು ಕಾಣೆಯಾಗಿದ್ದನು. ಹುಡುಕಾಡಿದಾಗ ಸಿಗದೆ ಪೊಲೀಸರಿಗೆ, ಅರಣ್ಯ ಇಲಾಖೆಗೆ ದೂರು ನೀಡಿದ್ದಾರೆ.
ಇದು ಚಾರಣಕ್ಕೆ ಸೂಕ್ತವಾದ ಸಮಯವಲ್ಲ. ಇದನ್ನು ಅರಣ್ಯ ಇಲಾಖೆ ಸೂಚನೆ ಕಡ್ಡಾಯವಾಗಿ ನೀಡಬೇಕು. ಈ ಮಳೆಗಾಲದ ಸಮಯದಲ್ಲಿ ಕಾಡಿನಲ್ಲಿ ಆನೆಗಳ ಕಾಟ, ಹುಲಿ , ಚಿರತೆಗಳ ಓಡಾಟ ಹೆಚ್ಚಾಗಿರುತ್ತದೆ. ಈ ಕಾರಣದಿಂದ ಮಳೆಗಾಲದ ಅವಧಿಯಲ್ಲಿ ಚಾರಣ ಸೂಕ್ತವಲ್ಲ ಎಂಬ ಸೂಚನೆ ಕಡ್ಡಾಯವಾಗಿ ನೀಡಬೇಕಾಗಿದೆ. ಇಲ್ಲೂ ಹಾಗೆಯೇ ಆಗಿರುವ ಬಗ್ಗೆ ಸಂದೇಹ ಇದೆ. ಯುವಕರ ತಂಡದಲ್ಲಿ 5 ಮಂದಿ ಯುವಕರು ಮುಂದೆ ಬಂದರೆ ಅವರ ಹಿಂದೆ 6 ಜನರ ತಂಡ ಇತ್ತು. ಈ ನಡುವೆ ಒಬ್ಬ ಹೋಗುತ್ತಿದ್ದರು. ಈ ಸಂದರ್ಭ ಹುಲಿಯ ಸದ್ದು ಕೇಳುತ್ತದೆ ಎಂದು ಗಿರಿಗದ್ದೆಯ ಕಡೆಗೆ 3 ಯುವಕರು ಓಡಿದ್ದಾರೆ ಎಂಬ ಮಾಹಿತಿಯನ್ನೂ ಸ್ಥಳೀಯರ ಬಳಿ ಯುವಕರ ತಂಡ ಹೇಳಿದೆ. ಹೀಗಾಗಿ ಈಗ ಯುವಕ ಸಮಸ್ಯೆಗೆ ಸಿಲುಕಿಹಾಕಿಕೊಂಡಿರುವ ಸಾಧ್ಯತೆ ಹೆಚ್ಚಿದೆ ಎಂದು ಸ್ಥಳೀಯರು ಅನುಮಾನ ಪಡುತ್ತಾರೆ. ಮಂಗಳವಾರ ಬೆಳಗ್ಗೆ ತಂಡವಾಗಿ ಹುಡುಕಾಟ ನಡೆಸಲಾಗುತ್ತಿದೆ. ಆ ಬಳಿಕವೇ ಸ್ಪಷ್ಟವಾದ ಮಾಹಿತಿ ಲಭ್ಯವಾಗಲಿದೆ.