ಮಂಗಳೂರು: ಸೌರಮಂಡಲದ ಅಪರೂಪದ ಕ್ಷಣಗಳು ಈಗ ಕಾಣುತ್ತಿವೆ. ಅತ್ಯಂತ ಅಪರೂಪ ಎನಿಸಿದ ಕಂಕಣ ಸೂರ್ಯಗ್ರಹಣ ಕರಾವಳಿ ಭಾಗದಲ್ಲಿ ಸ್ಪಷ್ಟವಾಗಿ ಗೋಚರಿಸಿದೆ. ಬೆಳಗ್ಗೆ 8:06 ಕ್ಕೆ ಸಂಭವಿಸಿದ ಕಂಕಣ ಸೂರ್ಯಗ್ರಹಣ 11.11 ಕ್ಕೆ ಮುಕ್ತಾಯಗೊಳ್ಳಲಿದೆ. ಸೂರ್ಯ ಬಳೆ ರೀತಿಯಲ್ಲಿ ಸುಮಾರು 9.24 ರಿಂದ 9.29 ರವರೆಗೆ ಹಲವು ಕಡೆ ಕಂಡುಬಂದಿದೆ. ಮಂಗಳೂರು ಸೇರಿದಂತೆ ಸುಳ್ಯ, ಪುತ್ತೂರು ಸೇರಿದಂತೆ ಜಿಲ್ಲೆಯಾದ್ಯಂತ ಸೂರ್ಯಗ್ರಹಣ ಗೋಚರಿಸುತ್ತಿದೆ. ಇದೇ ವೇಳೆ ಮಾನಸಿಕ ನೆಮ್ಮದಿಗಾಗಿ, ದೋಷ ನಿವಾರಣೆಗಾಗಿ ವಿವಿಧ ದೇವಸ್ಥಾನಗಳಲ್ಲಿ ಶಾಂತಿ ಹವನ ನಡೆಯುತ್ತಿದೆ.
ಬಹಳ ಅಪರೂಪವಾದ ಈ ಸೂರ್ಯಗ್ರಹಣ ಬೆಳಿಗ್ಗೆ 9 ರ ಸುಮಾರಿಗೆ ದರ್ಶನವಾಗಿದೆ. ಬಳಿಕ ಸ್ಪಷ್ಟವಾಗಿ ಗೋಚರಿಸುತ್ತಿದೆ. ಈ ರೀತಿಯ ಸೂರ್ಯಗ್ರಹಣ ಆಕಾಶದಲ್ಲಿ ಕಾಣುವುದು ಮುಂದೆ 2064 ನೇ ವರ್ಷದಲ್ಲಿ.
ಕಂಕಣ ಸೂರ್ಯಗ್ರಹಣ ಏನಿದು ? : ಸೂರ್ಯ, ಭೂಮಿಯ ಮಧ್ಯೆ ಚಂದ್ರ ಬಂದಾಗ ಸೂರ್ಯ ಗ್ರಹಣ ಸಂಭವಿಸುತ್ತದೆ. ಕಂಕಣ ಗ್ರಹಣದಲ್ಲಿ ಸೂರ್ಯನನ್ನು ಚಂದ್ರ ಪೂರ್ಣವಾಗಿ ಮರೆ ಮಾಡುವುದಿಲ್ಲ. ಗ್ರಹಣವಾದಾಗ ಚಂದ್ರನ ಸೂತ್ತಲೂ ಬೆಳಕು ತೂರಿ ಬಂದು ಹೊಳೆಯುವ ಬಂಗಾರದ ಬಳೆಯಾಕಾರದಲ್ಲಿ ಸೂರ್ಯ ಗೋಚರಿಸುತ್ತಾನೆ. ಭೂಮಿ, ಸೂರ್ಯ ಹಾಗೂ ಚಂದ್ರನ ನಡುವಿನ ಅಂತರಗಳ ಪ್ರಕಾರ ಸೂರ್ಯನ ಕೋನೀಯ ಗಾತ್ರವು ಚಂದ್ರನದಕ್ಕಿಂತ ದೊಡ್ಡದಾಗಿರುತ್ತದೆ. ಹಾಗಾಗಿ ಸೂರ್ಯ ಬಳೆಯಂತೆ ಗೋಚರಿಸುತ್ತಾನೆ. ಈ ಕೌತುಕ ತಮಿಳುನಾಡು, ಕೇರಳ, ಕರ್ನಾಟಕ ಭಾಗಗಳಲ್ಲಷ್ಟೇ ದರ್ಶನ ಸಾಧ್ಯವಿದೆ.
ಶಾಂತಿಹವನ : ಸೂರ್ಯಗ್ರಹಣದಿಂದ ಮೂಲ ನಕ್ಷತ್ರ ಸೇರಿದಂತೆ ವಿವಿಧ ರಾಶಿಯವರಿಗೆ ದೋಚ ಇರುವುದರಿಂದ ವಿವಿಧ ದೇವಸ್ಥಾನಗಳಲ್ಲಿ ಶಾಂತಿ ಹವನ ನಡೆಯಿತು. ಸುಳ್ಯ ತಾಲೂಕಿನ ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನ, ಪಂಜ ಪಂಚಲಿಂಗೇಶ್ವರ ದೇವಸ್ಥಾನ, ಹರಿಹರ ದೇವಸ್ಥಾನ, ಬೆಳ್ಳಾರೆ, ಕಾಯರ್ತೋಡಿ, ತೊಡಿಕಾನ, ಕಾಂತಮಂಗಲ ಸೇರಿದಂತೆ ವಿವಿಧ ದೇವಸ್ಥಾನಗಳಲ್ಲಿ ಶಾಂತಿ ಹವನ ನಡೆಯಿತು.
Advertisement