ಸುಳ್ಯ: ದಾದಿಯರು ಕೇವಲ ಅನಾರೋಗ್ಯದ ಸಂದರ್ಭದಲ್ಲಿ ಮಾತ್ರ ಸೇವೆಗೆ ಸೀಮಿತರಲ್ಲ. ಅವರು ವಿವಿಧ ಪಾತ್ರಗಳನ್ನು ಆರೋಗ್ಯಕ್ಷೇತ್ರದಲ್ಲಿ ಸಮರ್ಥವಾಗಿ ನಿಭಾಯಿಸುವವರು ಎಂದು ಕೆವಿಜಿ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲರಾದ ಪ್ರೇಮ ಬಿ ಎಂ ಅವರು ಹೇಳಿದರು.
ವಿದ್ಯಾರ್ಥಿಗಳಿಗೆ ನರ್ಸಿಂಗ್ ಕ್ಷೇತ್ರದಲ್ಲಿ ಇರುವ ವಿಫುಲ ಅವಕಾಶಗಳ ಕುರಿತು ಅಗತ್ಯ ಮಾಹಿತಿಯನ್ನೂ ನೀಡುವ ಮೂಲಕ ನರ್ಸಿಂಗ್ ಕ್ಷೇತ್ರದ ಅಗಾಧತೆಯ ಬಗ್ಗೆ ಬೆಳಕು ಚೆಲ್ಲಿದರು. ಸೇವಾ ಮನೋಭಾವದಿಂದ ಕರ್ತವ್ಯ ನಿರ್ವಹಿಸುವ ಇವರು ಓರ್ವ ಆಡಳಿತಗಾರಳಾಗಿ, ಶಿಕ್ಷಕಿಯಾಗಿ, ಮಾರ್ಗದರ್ಶಕಳಾಗಿ ಹೀಗೆ ಹತ್ತು ಹಲವು ಪಾತ್ರಗಳನ್ನು ಸೇವಾ ಬದ್ಧತೆಯಿಂದ ನಿರ್ವಹಿಸುತ್ತಾ ಸಮಾಜದ ಆರೋಗ್ಯವನ್ನು ವರ್ಧಿಸುವ ಕಾರ್ಯಗಳನ್ನು ಮಾಡುವವರು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಶೈಕ್ಷಣಿಕ ಸಲಹೆಗಾರರಾದ ಪ್ರೊ. ಬಾಲಚಂದ್ರ ಗೌಡ ಅವರು ಮಾತನಾಡಿ ಪ್ರಪಂಚದಲ್ಲಿ ನರ್ಸಿಂಗ್ ಶಿಕ್ಷಣ ಇಂದು ಬಹಳ ಬೇಡಿಕೆಯ ವಿಷಯವಾಗಿದೆ ಮತ್ತು ಸೇವೆ ನೀಡುವ ನಿಟ್ಟಿನಲ್ಲಿ ಈ ಕ್ಷೇತ್ರ ಶ್ಲಾಘನೀಯ ಕಾರ್ಯ ನಿರ್ವಹಿಸುತ್ತಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲರು ಮಾತನಾಡಿ ಸಂಪಾದನೆಗೆ ಮಾತ್ರ ಸೀಮಿತವಿರುವ ಉದ್ಯೋಗಾವಕಾಶಗಳು ಬಹಳಷ್ಟಿವೆ. ಆದರೆ ಮನುಷ್ಯನಿಗೆ ಸೇವಾ ಮನೋಭಾವದಿಂದ ಉದ್ಯೋಗವನ್ನು ನಿರ್ವಹಿಸುವಲ್ಲಿ ಈ ಕ್ಷೇತ್ರ ಉತ್ತಮ ಅವಕಾಶಗಳನ್ನು ಒದಗಿಸಿಕೊಡುತ್ತದೆ ಎಂದರು.
ವೇದಿಕೆಯಲ್ಲಿ ವಿದ್ಯಾರ್ಥಿ ಕ್ಷೇಮಪಾಲಕ ಲಕ್ಷ್ಮಣ್ ಏನೆಕಲ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿ ರಾಜಿತ ಪ್ರಾರ್ಥಿಸಿ, ಮೈಥಿಲಿ ಸ್ವಾಗತಿಸಿದರು. ದೀಕ್ಷಾ ಕಾರ್ಯಕ್ರಮ ನಿರ್ವಹಿಸಿ ಅಶ್ರಿಯ ವಂದಿಸಿದರು.