ಸೇವೆ ಎಂಬುದು ಯಜ್ಞ. ಅದಕ್ಕೆ ಜಾತಿ, ಧರ್ಮದ ಅಡ್ಡಗೋಡೆ ಇಲ್ಲ. ಎಲ್ಲಾ ಕೆಲಸವೂ ಇಲ್ಲಿ ಶ್ರೇಷ್ಠವೇ. ಹೀಗಾಗಿಯೇ ಸುಳ್ಯದ ಸರಕಾರಿ ಆಸ್ಪತ್ರೆಯ ಡಿ ಗ್ರೂಪ್ ಕೆಲಸಗಳನ್ನು ಸುಳ್ಯದ ಎಸ್‍ಕೆಎಸ್‍ಎಸ್‍ಎಫ್ ವಿಖಾಯ ತಂಡ ಸ್ವಯಂ ಪ್ರೇರಿತರಾಗಿ ಸೇವೆಗಿಳಿದಿದೆ. ಈ ಸೇವಾ ಕಾರ್ಯ ಮಾದರಿ ಹಾಗೂ ಅನುಕರಣೀಯ.
Advertisement
ಸುಳ್ಯ: ಸುಳ್ಯ ತಾಲೂಕು ಆಸ್ಪತ್ರೆಯಲ್ಲಿ ಡಿಗ್ರೂಪ್ ನೌಕರರ ಕೊರತೆಯಿಂದ ಸ್ವಚ್ಛತೆ ಮತ್ತು ಇತರ ಕೆಲಸ ಕಾರ್ಯಗಳಿಗೆ ತೀವ್ರ ತೊಂದರೆ ಉಂಟಾಗುತ್ತಿರುವುದನ್ನು ಗಮನಿಸಿ ಎಸ್‍ಕೆಎಸ್‍ಎಸ್‍ಎಫ್ ವಿಖಾಯ ತಂಡ ಸ್ವಯಂ ಪ್ರೇರಿತರಾಗಿ ಸೇವೆಗಿಳಿದಿದೆ. ನೂರು ಬೆಡ್‍ನ ತಾಲೂಕು ಆಸ್ಪತ್ರೆಯಲ್ಲಿ ಇತ್ತೀಚಿನ ದಿನಗಳಲ್ಲಿ ಜ್ವರ ಮತ್ತಿತರ ರೋಗಗಳಿಂದ ಬಳಲಿ ಹೊರ ರೋಗಿಗಳಾಗಿ ಸುಮಾರು 350 ರಿಂದ 400 ಮಂದಿ ಆಗಮಿಸುತ್ತಾರೆ. ಆದರೆ ಡಿ ಗ್ರೂಪ್ ನೌಕರರ ಕೊರತೆಯಿಂದ ಸ್ವಚ್ಛತೆ ಮತ್ತಿತರ ಕೆಲಸ ಕಾರ್ಯಗಳಿಗೆ ತೀವ್ರ ಹಿನ್ನಡೆ ಉಂಟಾಗಿತ್ತು. ಇದನ್ನು ಮನಗಂಡು ಎಸ್‍ಕೆಎಸ್‍ಎಸ್‍ಎಫ್ ತಂಡ ಆಸ್ಪತ್ರೆಯಲ್ಲಿ ಸೇವೆಗೆ ಇಳಿದಿದೆ.
ಕೆಲಸ ಕಾರ್ಯ ಹೇಗೆ:
ಕಳೆದ ನಾಲ್ಕು ದಿನಗಳಿಂದ ಎಸ್‍ಕೆಎಸ್‍ಎಸ್‍ಎಫ್ ವಿಖಾಯ ತಂಡ ಆಸ್ಪತ್ರೆಯಲ್ಲಿ ಉಚಿತವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪ್ರತಿ ದಿನ ಐದು ಮಂದಿಯ ತಂಡ ಆಗಮಿಸಿ ಬೆಳಿಗ್ಗೆ ಒಂಭತ್ತರಿಂದ ಸಂಜೆ ಐದು ಗಂಟೆಯವರೆಗೆ ಆಸ್ಪತ್ರೆಯಲ್ಲಿ ವಿವಿಧ ಕೆಲಸಗಳನ್ನು ನಿರ್ವಹಿಸುತ್ತಿದ್ದಾರೆ. ಸುಳ್ಯ ತಾಲೂಕಿನ ಎಸ್‍ಕೆಎಸ್‍ಎಸ್‍ಎಫ್ ವಿಖಾಯ ತಂಡದಲ್ಲಿ 60 ಮಂದಿ ಇದ್ದಾರೆ. ಆಸ್ಪತ್ರೆಯ ಕೆಲಸಕ್ಕಾಗಿ ಒಟ್ಟು ಏಳು ತಂಡಗಳನ್ನು ರಚಿಸಲಾಗಿದೆ.
ಸೋಮವಾರ ಗೂನಡ್ಕ ತಂಡದ ನೇತೃತ್ವದಲ್ಲಿ, ಮಂಗಳವಾರ ಬೆಳ್ಳಾರೆ ಎ ತಂಡದ ನೇತೃತ್ವದಲ್ಲಿ, ಬುಧವಾರ ಅಜ್ಜಾವರ ತಂಡ, ಗುರುವಾರ ಬೆಳ್ಳಾರೆ ಬಿ ತಂಡ, ಶುಕ್ರವಾರ ವಿವಿಧ ತಂಡಗಳ ಸದಸ್ಯರು ಒಟ್ಟು ಸೇರಿ ಮತ್ತು ಶನಿವಾರ ಅಜ್ಜಾವರದ ಅಡ್ಕ ತಂಡದ ನೇತೃತ್ವದಲ್ಲಿ ಕೆಲಸ ನಿರ್ವಹಿಸುತ್ತಾರೆ. ಮುಖ್ಯವಾಗಿ ಡಿಗ್ರೂಪ್ ನೌಕರರು ಮಾಡುವ ಕೆಲಸಗಳನ್ನು ಇವರು ಮಾಡುತ್ತಾರೆ. ಸ್ವಚ್ಛತೆ ನಿರ್ವಹಿಸುವುದು, ವೀಲ್ ಚೆಯರ್‍ನಲ್ಲಿ ರೋಗಿಗಳನ್ನು ಕರೆದುಕೊಂಡು ಹೋಗುವುದು, ಹೊರ ರೋಗಿ ವಿಭಾಗದಲ್ಲಿ ಚೀಟಿ ಬರೆಯುವುದು, ಸೇರಿದಂತೆ ವಿವಿಧ ಕೆಲಸಗಳನ್ನು ಮಾಡುತ್ತಾರೆ. ಆಸ್ಪತ್ರೆಯ ಪರಿಸರದಲ್ಲೂ ಸ್ವಚ್ಛತೆಯನ್ನು ಮಾಡುತ್ತಾರೆ.
19 ಡಿ ಗ್ರೂಪ್ ನೌಕರರು ಬೇಕಾದಲ್ಲಿ ಇರುವುದು ಆರು ಮಂದಿ:
ಸುಳ್ಯ ತಾಲೂಕು ಆಸ್ಪತ್ರೆಯಲ್ಲಿ ವ್ಯವಸ್ಥಿತವಾಗಿ ಕೆಲಸ ಕಾರ್ಯಗಳು ನಡೆಯಲು ಕನಿಷ್ಠ 19 ಮಂದಿ ಡಿಗ್ರೂಪ್ ನೌಕರರು ಬೇಕಾಗಿದೆ. ಆದರೆ ಇಲ್ಲಿರುವುದು ಕೇವಲ ಆರು ಮಂದಿ ಮಾತ್ರ. ಇದರಿಂದ ಆಸ್ಪತ್ರೆಯಲ್ಲಿ ರೋಗಿಗಳು ಹೆಚ್ಚಾದಾಗ ಕೆಲಸ ಕಾರ್ಯಗಳು ತಾಳ ತಪ್ಪುತ್ತದೆ. ಸ್ವಚ್ಛತೆ ಕೆಡುತ್ತದೆ. ಇದನ್ನು ಮನಗಂಡು ವಿಖಾಯ ತಂಡದ ಸದಸ್ಯರು ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿಗಳ ಅನುಮತಿ ಪಡೆದು ಕಳೆದ ನಾಲ್ಕು ದಿನಗಳಿಂದ ಸೇವೆಯಲ್ಲಿ ನಿರತರಾಗಿದ್ದಾರೆ.
ಸಮಾಜ ಸೇವಾ ತಂಡ:
ಎಸ್‍ಕೆಎಸ್‍ಎಸ್‍ಎಫ್‍ನ ಸಮಾಜ ಸೇವೆ ಮಾಡುವ ತಂಡವೇ ಎಸ್‍ಕೆಎಸ್‍ಎಸ್‍ಎಫ್ ವಿಖಾಯ ತಂಡ. ಇದರ ಸದಸ್ಯರು ಬೇರೆ ಬೇರೆ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದರೂ ಒಂದಿಷ್ಟು ಸಮಯವನ್ನು ಸಮಾಜ ಸೇವೆಗೆ ಮೀಸಲಿಡುತ್ತಾರೆ. ಅಪಘಾತ, ಪ್ರಕೃತಿ ವಿಕೋಪ ಸಂದರ್ಭಗಳಲ್ಲಿ ಸಹಾಯ ಹಸ್ತ ಚಾಚುವುದು, ಸ್ವಚ್ಛತಾ ಕಾರ್ಯಕ್ರಮ, ಗಿಡ ನೆಡುವುದು ಮತ್ತಿತರ ಕೆಲಸಗಳನ್ನು ಇವರ ತಂಡ ನಿರಂತರ ಮಾಡುತ್ತಾ ಬಂದಿದೆ.
ಸುಳ್ಯ ಸರ್ಕಾರಿ ಆಸ್ಪತ್ರೆಯಲ್ಲಿ ಡಿಗ್ರೂಪ್ ನೌಕರರ ಕೊರತೆಯಿಂದ ತೀವ್ರ ಸಮಸ್ಯೆ ಉಂಟಾಗಿರುವುದು ಗಮನಕ್ಕೆ ಬಂದಿದೆ. ಆದುದರಿಂದ ರೋಗಿಗಳ ಸಂಖ್ಯೆ ಅಧಿಕ ಇರುವ ಈ ಸಂದರ್ಭದಲ್ಲಿ ಆಸ್ಪತ್ರೆಯ ಕೆಲಸಗಳು ಸುಸೂತ್ರವಾಗಿ ನಡೆಯಲಿ ಎಂಬ ದೃಷ್ಠಿಯಿಂದ ಪ್ರತಿ ದಿನ ನಮ್ಮ ತಂಡ ಸೇವೆ ಮಾಡುತ್ತಿದ್ದೇವೆ. ಇದಕ್ಕೆ ಜನರಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ – ಜಮಾಲುದ್ದೀನ್, ಎಸ್‍ಕೆಎಸ್‍ಎಸ್‍ಎಫ್ ವಿಖಾಯ ತಂಡದ ಚೆಯರ್‍ಮೆನ್
ಡಿಗ್ರೂಪ್ ನೌಕರರ ಕೊರತೆಯಿಂದ ಆಸ್ಪತ್ರೆಯಲ್ಲಿ ಸಮಸ್ಯೆಯಾಗುತ್ತಿರುವುದನ್ನು ಗಮನಿಸಿ ಎಸ್‍ಕೆಎಸ್‍ಎಸ್‍ಎಫ್ ತಂಡದ ಸದಸ್ಯರು ಸ್ವಯಂ ಪ್ರೇರಿತರಾಗಿ ಬಂದು ಇಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಇದರಿಂದ ಆಸ್ಪತ್ರೆಯ ಸ್ವಚ್ಛತೆ ಮತ್ತಿತರ ಕೆಲಸ ಕಾರ್ಯಗಳಿಗೆ ಸಹಾಯಕವಾಗಿದೆ – ಡಾ.ಭಾನುಮತಿ, ಮುಖ್ಯ ವೈದ್ಯಾಧಿಕಾರಿ. ಸುಳ್ಯ ತಾಲೂಕು ಆಸ್ಪತ್ರೆ