ಉಡುಪಿ: ಪೇವಾವರ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಅವರ ಆರೋಗ್ಯ ತೀವ್ರ ಹದಗೆಟ್ಟ ಹಿನ್ನೆಲೆಯಲ್ಲಿ ಪೇಜಾವರ ಸ್ವಾಮೀಜಿಯನ್ನು ಇಂದು ಬೆಳಗ್ಗೆ 6:55ರ ಸುಮಾರಿಗೆ ಉಡುಪಿ ಪೇಜಾವರ ಮಠಕ್ಕೆ ಸ್ಥಳಾಂತರಿಸಲಾಯಿತು.
ತೀವ್ರ ಉಸಿರಾಟದ ಸಮಸ್ಯೆಯಿಂದ ಡಿ. 20ರಂದು ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದ ಸ್ವಾಮೀಜಿಗೆ ತಜ್ಞ ವೈದ್ಯರ ತಂಡ ಚಿಕಿತ್ಸೆಯನ್ನು ನೀಡಿತ್ತು. ಆದರೆ ಈವರೆಗೆ ಅವರ ಆರೋಗ್ಯದಲ್ಲಿ ಸುಧಾರಣೆ ಕಾಣದ ಹಾಗೂ ಶನಿವಾರ ಮೆದುಳು ಸಂಪೂರ್ಣ ನಿಷ್ಕ್ರಿಯಗೊಂಡ ಬಳಿಕ ಗಳ ಶ್ರೀಗಳ ಕೊನೆಯಾಸೆಯಂತೆ ಅವರನ್ನು ಆದಿತ್ಯವಾರ ಬೆಳಗ್ಗಿನ ಜಾವ ಮಠಕ್ಕೆ ಸ್ಥಳಾಂತರ ಮಾಡುತ್ತಿದ್ದೇವೆ ಎಂದು ಪೇಜಾವರ ಮಠದ ಕಿರಿಯ ಶ್ರೀಗಳು ಹೇಳಿದ್ದಾರೆ. ಮಠದಲ್ಲೇ ವೆಂಟಿಲೇಟರ್ ವ್ಯವಸ್ಥೆ ಮಾಡಲಾಗುವುದು ಅಲ್ಲದೇ ಮಠಕ್ಕೆ ಭಕ್ತರ ಪ್ರವೇಶವನ್ನ ನಿರ್ಬಂಧಿಸ ಲಾಗುವುದು ಎಂದು ಕಿರಿಯ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಗಳು ತಿಳಿಸಿದ್ದಾರೆ.
ಇದೀಗ ಮಠಕ್ಕೆ ಬಿಗಿ ಪೊಲೀಸ್ ಭದ್ರತೆಯೊಂದಿಗೆ ವೈದ್ಯರನ್ನೊಳಗೊಂಡ ಕೃತಕ ಉಸಿರಾಟದ ವ್ಯವಸ್ಥೆ ಮಾಡಲಾಗುತ್ತಿದೆ. ಮುಖ್ಯಮಂತ್ರಿ ಯಡಿಯೂರಪ್ಪನವರು ಉಡುಪಿಯಲ್ಲಿದ್ದು ಶ್ರೀಗಳ ಆರೋಗ್ಯ ಸ್ಥಿತಿ ಬಗ್ಗೆ ವಿಚಾರಿಸುತ್ತಿದ್ದಾರೆ. ಪೇಜಾವರ ಶ್ರೀಗಳಿಂದಲೇ ಸನ್ಯಾಸ ದೀಕ್ಷೆ ಪಡೆದಿದ್ದ ಕೇಂದ್ರದ ಮಾಜಿ ಸಚಿವೆ ಉಮಾ ಭಾರತಿ ಅವರು ಒಂದು ವಾರದಿಂದ ಉಡುಪಿಯಲ್ಲೇ ಇದ್ದು ಶ್ರೀಗಳ ಚೇತರಿಕೆಗಾಗಿ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ವಿವಿಧ ಮಠಗಳ ಶ್ರೀಗಳು ಆಗಮಿಸಿದ್ದು, ಪೇಜಾವರ ಮಠದಲ್ಲಿ ಭಕ್ತರು ಹಾಗೂ ಯತಿಗಳು ವಿಷ್ಣುಸಹಸ್ರನಾಮ ಪಾರಾಯಣ ಮಾಡುತ್ತಿದ್ದಾರೆ. ಪೇಜಾವರ ಮಠದಲ್ಲಿ ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ.