ಹರಿಹರಪಳ್ಳತ್ತಡ್ಕ: ಮೊಬೈಲ್ ಸೇವೆಯಲ್ಲಿ ವ್ಯತ್ಯಯ ಆಗುತ್ತಿರುವುದಕ್ಕೆ ಬೇಸತ್ತ ಹರಿಹರ ಪಳ್ಳತ್ತಡ್ಕ ಗ್ರಾಮದ ಗ್ರಾಮಸ್ಥರು ಮಂಗಳವಾರ ಮೊಬೈಲ್ ಟವರಿಗೆ ತರಕಾರಿ ಗಿಡಗಳನ್ನು ಹಬ್ಬಿಸುವ ಮೂಲಕ ಮಂಗಳವಾರ ವಿನೂತನ ಶೈಲಿಯಲ್ಲಿ ಸಾಂಕೇತಿಕ ಪ್ರತಿಭಟಿಸಿದರು.
ಹರಿಹರ ಪಳ್ಳತ್ತಡ್ಕ ಗ್ರಾಮದಲ್ಲಿ ಕಾರ್ಯಾಚರಿಸುತ್ತಿರುವ ಬಿಎಸ್‍ಎನ್‍ಎಲ್ ಮೊಬೈಲ್ ಟವರು ಕಳೆದ ಎಂಟು ತಿಂಗಳಿಂದ ಸರಿಯಾಗಿ ಕಾರ್ಯಚರಿಸುತ್ತಿ ರಲಿಲ್ಲ. ಇದರಿಂದ ಹರಿಹರ, ಬಾಳುಗೋಡು, ಐನಕಿದು, ಕಲ್ಲೇಮಠ, ಕಲ್ಲೇರಿಕಟ್ಟ, ಮಿತ್ತಮಜಲು, ಕಿರಿಭಾಗ ಮೊದಲಾದ ಭಾಗದ ಜನತೆ ತೊಂದರೆ ಅನುಭವಿಸುತ್ತಿದ್ದರು. ಟವರು ಸಿಗ್ನಲ್ ಸಮಸ್ಯೆ ಸರಿಪಡಿಸುವಂತೆ ಗ್ರಾಮಸ್ಥರು ಅನೇಕ ಭಾರಿ ಅಧಿಕಾರಿಗಳ, ಜನಪ್ರತಿನಿಧಿಗಳ ಗಮನಕ್ಕೆ ತಂದಿದ್ದರೂ ಸರಿ ಹೋಗಿರಲಿಲ್ಲ. ಇದಕ್ಕೆ ಬೇಸತ್ತ ಗ್ರಾಮಸ್ಥರು ಉಪಯೋಗಕ್ಕೆ ಬಾರದ ಮೊಬೈಲ್ ಟವರಿಗೆ ತರಕಾರಿ ಗಿಡಗಳನ್ನು ನೆಟ್ಟು ಪ್ರತಿಭಟಿಸಿದರು.
ಈ ಭಾಗದಲ್ಲಿ ಬಿಎಸ್‍ಎನ್‍ಎಲ್ ಮೊಬೈಲ್ ಹೊರತು ಪಡಿಸಿ ಇನ್ಯಾವುದೇ ಖಾಸಗಿ ಮೊಬೈಲ್ ಸೇವೆಗಳಿಲ್ಲ. ಇತ್ತೀಚಿನ ದಿನಗಳಲ್ಲಿ ಇಲ್ಲಿರುವ ಮೊಬೈಲ್ ಸಿಗ್ನಲ್ ದಿನದ ಬಹುತೇಕ ಹೊತ್ತು ಕಣ್ಮರೆಯಾಗುತ್ತಿದೆ. ಮೊದಲೆಲ್ಲ ಕರೆಂಟು ಇದ್ದಾಗ ಇರುತಿದ್ದ ಸಿಗ್ನಲ್ ಈಗೀಗ ಕರೆಂಟು ಇದ್ದರೂ ಸ್ಥಗಿತಗೊಳ್ಳುತ್ತಿದೆ. ಹೀಗಾಗಿ ಇಲ್ಲಿನ ಟವರು ಊಟಕಿಲ್ಲದ ಉಪ್ಪಿನಕಾಯಿ ಅಂತಾಗಿದೆ.ಇದರಿಂದ ಬೇಸತ್ತು ಗ್ರಾಮಸ್ಥರು ಅಧಿಕಾರಿಗಳ, ಜನಪ್ರತಿನಿಧಿಗಳ ಗಮನ ಸೆಳೆಯಲು ಶಾಂತಿಯುತವಾಗಿ ಸಾಂಕೇತಿಕ ರೀತಿಯಲ್ಲಿ ಈ ಪ್ರತಿಭಟನೆ ಹಮ್ಮಿಕೊಂಡಿದ್ದರು.
ಇಲ್ಲಿನ ಮೊಬೈಲ್ ಟವರು ಸೇವೆ ಅಗತ್ಯಕ್ಕೆ ಸಿಗುತಿಲ್ಲ. ಟವರಿನ ಸಿಗ್ನಲ್ ಸರಿಪಡಿಸುವಂತೆ ಎಲ್ಲ ಪ್ರಯತ್ನ ನಡೆಸಿದ ಮೇಲೆಯೂ ಸರಿ ಹೋಗಿಲ್ಲ. ಹೀಗಾಗಿ ನಮ್ಮ ಬೇಡಿಕೆ ಅರಣ್ಯರೋಧನವಾಗಿದೆ.ಮುಂದೆ ಬಳಕೆಗೆ ಸಿಗದ ಟವರು ಸ್ಥಳಾಂತರಕ್ಕೆ ಪ್ರತಿಭಟನೆ ನಡೆಸುತ್ತೇವೆ ಎಂದು ಈ ಸಂದರ್ಭ ಪ್ರತಿಭಟನೆಗಾರ ವಿನೂಪ ಮಲ್ಲಾರ ತಿಳಿಸಿದರು.
ಪ್ರತಿಭಟನೆಯಲ್ಲಿ ಸ್ಥಳಿಯರಾದ ಮಧುಸೂಧನ ಕಾಪಿಕಾಡು, ಸಂತೋಷ ಪಳಂಗಾಯ, ಬಾಲಸುಬ್ರಹ್ಮಣ್ಯ ಎಂ, ಲವಮಲ್ಲಾರ, ಕುಸುಮಾಧರ ಐಪಿನಡ್ಕ, ಉಮೇಶ್ ಕಜ್ಜೋಡಿ, ಉಲ್ಲಾಸ ಮುಚ್ಚಾರ, ಯೋಗಿಶ್ ಮೆತ್ತಡ್ಕ, ಪ್ರಸಾದ್ ತಂಟೆಪ್ಪಾಡಿ, ಸೋಮಶೇಖರ ಬಟ್ಟೋಡಿ, ಹವೀನ ಕಲ್ಲೆಮಠ, ನಂದನ್, ಬಾಲಕೃಷ್ಣ ಭೀಮಗುಳಿ ಮತ್ತಿತರರು ಉಪಸ್ಥಿತರಿದ್ದರು.