ಅನುಕ್ರಮ

ಹಲಸು ಮೇಳ ‘ವೀಕೆಂಡ್’ ಹಬ್ಬ ಅಲ್ಲ!

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಎರಡು ವರುಷದ ಹಿಂದೊಮ್ಮೆ ಹಲಸು ಮೇಳದಲ್ಲಿ ವಿಷಯಕ್ಕಾಗಿ ಹೊಂಚು ಹಾಕುತ್ತಿದ್ದೆ! “ಸರ್, ಇಂದು ವೀಕೆಂಡ್.. ಸಿಕ್ಕಾಪಟ್ಟೆ ಜನ ಬರ್ತಾರೆ” ಮಳಿಗೆದಾರರೊಬ್ಬರ ಖುಷಿ. ‘ವೀಕೆಂಡಿಗೂ, ಮೇಳಕ್ಕೂ ಏನು ಸಂಬಂಧ’ ಅರ್ಥಗೊತ್ತಾಗಲಿಲ್ಲ ಎಂದಾಗ, ‘ನೋಡ್ರಿ.. ಇಷ್ಟು ಐಟಂ ತಂದಿದೀನಿ. ವ್ಯಾಪಾರ ಆದ್ರೆ ಆಯಿತು.” ಎಂದ. ಆ ವಿಷಯ ಮರೆತಿದ್ದೆ.
ಮೊನ್ನೆ ಪುತ್ತೂರಿನಲ್ಲಿ ಹಲಸು ಮೇಳ ಸಂಪನ್ನವಾಗಿತ್ತು. ಮಳಿಗೆಗಳನ್ನು ಸುತ್ತುತ್ತಿದ್ದಾಗ ಅಂದಿನ ಘಟನೆ ನೆನಪಾಯಿತು. “ಜನ ಬರ್ತಾರೆ, ವ್ಯಾಪಾರವಾಗ್ತದೆ. ಇಂದು ಬಂದವರು ನಾಳೆಯೂ ಬರ್ತಾರೆ. ಐಟಂ ಮುಗಿಯುತ್ತದೆ..” ಇಂತಹುದೇ ಮಾತುಕತೆ.

Advertisement

‘ಹಲಸು ಮೇಳವೆಂದರೆ ವೀಕೆಂಡ್ ಹಬ್ಬವಾ’ ನನ್ನೊಳಗಿನ ಚೋದ್ಯ. ವೀಕೆಂಡ್ ಹಬ್ಬವಾದರೆ ಅದಕ್ಕೆ ಹಲಸಿನ ಮೇಳ ಎನ್ನುವ ಲೇಬಲ್ ಬೇಕೇ? ಪರ್ಸ್ ಖಾಲಿಯಾಗುವಷ್ಟು ತಿನ್ನುವುದು ಮಾತ್ರವಲ್ಲ, ಮನೆಗೂ ಕಟ್ಟಿ ಒಯ್ಯಬಹುದು. ಆಪ್ತೇಷ್ಟರಿಗೂ ಹಂಚಬಹುದು.

 

ಕಳೆದ ಹತ್ತು ವರುಷಗಳಲ್ಲಿ ಕರ್ನಾಟಕ-ಕೇರಳಗಳಲ್ಲಿ ಏನಿಲ್ಲವೆಂದರೂ ನೂರೈವತ್ತಕ್ಕೂ ಮಿಕ್ಕಿ ಹಲಸಿನ ಹಬ್ಬಗಳಾಗಿವೆ. ಆರಂಭದ ದಿನಮಾನಗಳಲ್ಲಿ ಹಲಸು ಪ್ರಿಯರನ್ನು ಸೆಳೆಯಲು ‘ಲೈವ್’ ಮಳಿಗೆಗಳು ಅನಿವಾರ್ಯ. ಹೊಸ ಹೊಸ ರುಚಿಗಳನ್ನು ತಿಂದು, ತಂತಮ್ಮ ಅಡುಗೆಮನೆಗಳಲ್ಲಿ ಅನುಷ್ಠಾನವಾಗಬೇಕೆಂಬ ದೃಷ್ಟಿಕೋನ. ಆದರೆ ಇಂದು ಹಾಗಾಗುತ್ತಿಲ್ಲ. ಮೇಳದಲ್ಲಿ ರುಚಿಯನ್ನು ಸವಿದು ಮನೆ ತಲಪುವುದರೊಳಗೆ ಮರೆತುಬಿಡುವಷ್ಟು ಜಾಣ ಮರೆವು. ಮರೆವಿನ ಮನಸ್ಸುಗಳಿಗೆ ಹಲಸು ಮೇಳವೂ ಒಂದೇ, ಯಂತ್ರಮೇಳವೂ ಒಂದೇ. ತಿಂದರಾಯಿತು!

ಒಂದು ಕಾಲಘಟ್ಟದಲ್ಲಿ ‘ನಿರ್ಲಕ್ಷಿತ’ ಹಣ್ಣಾಗಿದ್ದ ಹಲಸು ಆ ಶಾಪದಿಂದ ಹೊರಬಂದಿದೆ. ಹಲಸು ಕೃಷಿ ಅಭಿವೃದ್ಧಿಯಾಗಿದೆ. ಮೌಲ್ಯವರ್ಧಿತ ಉತ್ಪನ್ನಗಳು ಸಿದ್ಧವಾಗುತ್ತಿವೆ. ತಳಿಗಳು ಅಭಿವೃದ್ಧಿಯಾಗುತ್ತಿವೆ. ಇದೆಲ್ಲಾ ಹಲಸು ಮೇಳಗಳ ಫಲಶ್ರುತಿ. ಈ ಎಲ್ಲಾ ಆಭಿವೃದ್ಧಿಗಳ ಹಿಂದೆ ವೈಯಕ್ತಿಕವಾಗಿ ಹಲಸು ಪ್ರೀತಿಯನ್ನಿಟ್ಟುಕೊಂಡು ಮೇಳಕ್ಕೆ ಬರುವ ನಮ್ಮಲ್ಲಿ ಯಥಾಸಾಧ್ಯ ರುಚಿಗಳನ್ನು ‘ಸಬೂಬು ಹೇಳದೆ’ ನಮ್ಮ ಮನೆಗಳಲ್ಲೇ ಯಾಕೆ ಮಾಡಿಕೊಳ್ಳಬಾರದು?

 

“ಪುರುಸೊತ್ತಿಲ್ಲ, ಹಲಸನ್ನು ಬಿಡಿಸುವುದು ಸಮಸ್ಯೆ. ಸೊಳೆ ತೆಗೆಯುವುದು ಕಿರಿಕಿರಿ. ಮೇಣ ಬೇರೆ..” ಹೀಗೆ ನೂರಾರು ಕಾರಣಗಳು ರಾಚುತ್ತವೆ. ಇವೆಲ್ಲವನ್ನೂ ಮೀರಿ ಇಂದು ಎಷ್ಟೋ ಅಡುಗೆಮನೆಗಳಲ್ಲಿ ಹಲಸಿನ ಪರಿಮಳ ಬೀರುತ್ತದೆ. ಹೊಸ ರುಚಿಗಳನ್ನು ತಮಗಾಗಿ ಮಾಡುತ್ತಾರೆ. ಅಂತಹವರಲ್ಲಿ ಮಾತನಾಡಿಸಿದರೆ “ಹೊಸ ರುಚಿಯನ್ನು ಮೇಳದಿಂದ ಕಲಿತೆ” ಉತ್ತರ ಬರುತ್ತದೆ. ಹಲಸು ಮೇಳದಲ್ಲಿ ಇಂತಹ ಉತ್ತರಗಳನ್ನು ಕೇಳುವ ದಿನಮಾನಗಳು ಬರಬೇಕು.

ಹಲಸು ಮೇಳವು ಒಂದು ಕೈತಾಂಗು. ಅಲ್ಲಿ ಖಾದ್ಯಗಳನ್ನು ಸವಿದು ಹೊಸ ರುಚಿಯೊಂದು ಮನೆ ತಲುಪಬೇಕು. ಹೊಸ ಹೊಸ ವಿಚಾರಗಳು ಮನದೊಳಕ್ಕೆ ಇಳಿಯಬೇಕು. ಗಿಡಗಳನ್ನು ನೆಡಲು ಮನೆಯಲ್ಲಿ ಜಾಗ ಇಲ್ಲದವರು ಮನದಲ್ಲಿ ಅದಕ್ಕೆ ಜಾಗ ಕೊಡಬೇಕು. ನಮ್ಮ ಅಡುಗೆ ಮನೆಗಳಲ್ಲಿ ಹಲಸಿನ ಮೇಳವಾಗಬೇಕು.

 

ಸರಿ, ಹೀಗನ್ನುವಾಗ ಮೌಲ್ಯವರ್ಧಿತ ಉತ್ಪನ್ನಗಳು ನೂರಾರು ಸಿದ್ಧವಾಗುತ್ತಿವೆ. ಅದಕ್ಕೆ ಗಿರಾಕಿಗಳು ಯಾರು? ಎನ್ನುವ ಉಡಾಫೆ ಧುತ್ತೆಂದು ಎದುರು ನಿಲ್ಲುತ್ತವೆ. ಹಲಸಿನ ಪ್ರೀತಿಯಿದ್ದು ಉತ್ಪನ್ನಗಳನ್ನು ಕೊಳ್ಳುವ ವರ್ಗಕ್ಕೆ ಇದು ಪ್ರಯೋಜನಕಾರಿ. ಆ ಉತ್ಪನ್ನ ತಯಾರಿಯ ಹಿಂದಿರುವ ಕಷ್ಟ-ಸುಖಗಳು ಉತ್ಪನ್ನದ ಜತೆಗೆ ಮನೆ ಸೇರುತ್ತದೆ. ಮನೆಯಲ್ಲಿ ಮಾತಾಗುತ್ತದೆ.
ಸಮಾಜವೇ ನಮಗೆ ಪಾಠಶಾಲೆ. ಓರ್ವ ಪ್ರತಿಷ್ಠಿತ ವ್ಯಕ್ತಿ ಮೇಳದಲ್ಲಿ ಮಳಿಗೆ ತೆರೆದು ಹಲಸು, ಮಾವು, ಉತ್ಪನ್ನವನ್ನು ಮಾರಲು ನಿಂತರೆ, ದೂರದಲ್ಲಿ ನಿಂತು ನೋಡುತ್ತಿರುವ ಸಾಮಾನ್ಯ ವ್ಯಕ್ತಿಗೆ ಅದು ಮಾದರಿಯಾಗುತ್ತದೆ. ಮುಂದಿನ ಮೇಳಗಳಲ್ಲಿ ಆತನೂ ಹಣ್ಣನ್ನು ಮಾರಲು, ಉತ್ಪನ್ನ ತಯಾರಿಸಲು ಉತ್ಸುಕನಾಗುತ್ತಾನೆ. ಹೀಗೆ ಹಲಸಿನ ಗುಂಗನ್ನು ಹಬ್ಬಿಸುವುದೇ ಮೇಳಗಳ ಆಶಯ.

ಹಲಸು ‘ಬಡವರ ಹಣ್ಣು’ ಎಂದು ಬಾಲ್ಯವನ್ನು ನೆನಪಿಸಿಕೊಳ್ಳುತ್ತೇವೆ. ಅದನ್ನು ಬಡವರ ಹಣ್ಣೆಂದು ಕರೆಯುತ್ತಾ ‘ಬಡತನವನ್ನು’ ಗೇಲಿ ಮಾಡಿಸಿಕೊಳ್ಳುವ ದಿನಮಾನದಲ್ಲಿ ನಾವಿಲ್ಲ. ಯಾಕೆ ಹೇಳಿ, ಹಲಸು ಪಂಚತಾರಾ ಹೋಟೆಲನ್ನು ಪ್ರವೇಶಿಸಿದೆ. ಹೀಗಾಗಲು ಎಷ್ಟೋ ಮಂದಿಯ ಪರಿಶ್ರಮ ಇರುವುದು ಶ್ಲಾಘನೀಯ. ಇವರ ಶ್ರಮ ಎಲ್ಲೂ ದಾಖಲಾಗುವುದಿಲ್ಲ.

(ಚಿತ್ರಗಳು : ಸಾಂದರ್ಭಿಕ)

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ನಾ.ಕಾರಂತ ಪೆರಾಜೆ

ಪತ್ರಕರ್ತ , ಕಲಾವಿದ , ಅಂಕಣಕಾರ ನಾ.ಕಾರಂತ ಪೆರಾಜೆ ಅವರು ಪ್ರಸ್ತುತ ಅಡಿಕೆ ಪತ್ರಿಕೆಯ ಸಹಾಯಕ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಕರ್ತರಾಗಿ, ಕಲಾವಿದರಾಗಿ, ಅಂಕಣಕಾರರಾಗಿ ಗುರುತಿಸಿಕೊಂಡಿರುವ ನಾ.ಕಾರಂತ ಅವರು ತಾಳಮದ್ದಳೆಯಲ್ಲಿ ಅರ್ಥದಾರಿಯಾಗಿ ಹಾಗೂ ವಿವಿಧ ಮೇಳಗಳಲ್ಲಿ ವೇಷಧಾರಿಯೂ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಪುತ್ತೂರು ತಾಲೂಕಿನ 17ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.

Published by
ನಾ.ಕಾರಂತ ಪೆರಾಜೆ

Recent Posts

ಕದನ ವಿರಾಮ ಬಳಿಕ ಪರಿಸ್ಧಿತಿ ಸಾಮಾನ್ಯ ಸ್ಧಿತಿಗೆ | ಶಾಂತಿ ಸ್ಧಾಪನೆಯ ಉದ್ದೇಶಕ್ಕೆ ಪೂರಕ ವಾತಾವರಣ

ಕದನ ವಿರಾಮ ಘೋಷಣೆ ಬಳಿಕ ಪಾಕಿಸ್ತಾನ ಗಡಿಗೆ ಹೊಂದಿಕೊಂಡಿರುವ ರಾಜ್ಯಗಳ ಪರಿಸ್ಧಿತಿ ಸಾಮಾನ್ಯ…

5 hours ago

ಮುಳಿಯ ಕೃಷಿಗೋಷ್ಟಿ | ಕೃಷಿಕರೇ ಕೃಷಿ ಮಾರುಕಟ್ಟೆ ಸೃಷ್ಟಿಸಿಕೊಳ್ಳುವುದು ಹೇಗೆ..?

ಕೃಷಿಯಷ್ಟೇ ಅಲ್ಲ ಕೃಷಿ ವಸ್ತುಗಳ ಮಾರುಕಟ್ಟೆ ಹಾಗೂ ಕೃಷಿ ಬೆಳವಣಿಗೆಯ  ಬಗ್ಗೆ ಪುತ್ತೂರಿನ…

5 hours ago

ಈ ರಾಶಿಯವರಿಗೆ ಒಂಟಿಯಾಗಿರುವುದೇ ಇಷ್ಟ, ಫ್ರೆಂಡ್ಸೂ ಬೇಡ, ಫ್ಯಾಮಿಲಿಯವ್ರೂ ಬೇಡ…!

ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಾಭಕ್ತರದ ಜ್ಯೋತಿಷ್ಗಳನ್ನು ಸಂಪರ್ಕಿಸಿ 9535156490

20 hours ago

ಬದುಕು ಪುರಾಣ | ಮೂಡದಿರಲಿ, ಮಂಥರೆ ಮನಸ್ಸು

ಸಂಸ್ಕಾರದಿಂದ ಮೀಯದ ಮನಸ್ಸು, ತನ್ನ ಬಗ್ಗೆ ಯೋಚಿಸುವುದಿಲ್ಲ. ತನ್ನ ಭವಿಷ್ಯದತ್ತ ನೋಟ ಹರಿಸುವುದಿಲ್ಲ.…

20 hours ago

ಕದನ ವಿರಾಮ ಘೋಷಣೆ | ಭಾರತ ಮತ್ತು ಪಾಕಿಸ್ತಾನ ಗಡಿಯಾಚೆಗಿನ ದಾಳಿಯನ್ನು ಕೊನೆಗೊಳಿಸಲು ಒಪ್ಪಿಕೊಂಡಿವೆ

ಶನಿವಾರ ಸಂಜೆ 5 ಗಂಟೆಗೆ ಆರಂಭವಾದ ತೀವ್ರ ಘರ್ಷಣೆಗಳ ನಂತರ ಭಾರತ ಮತ್ತು…

1 day ago

ಕೃಷಿಕರ ಸಂಸ್ಥೆ ಕ್ಯಾಂಪ್ಕೊ ವತಿಯಿಂದ ರಾಷ್ಟ್ರೀಯ ರಕ್ಷಣಾ ನಿಧಿಗೆ 5 ಕೋಟಿ ರೂಪಾಯಿ ದೇಣಿಗೆ

ಪೆಹಲ್ಗಾಮ್ ಭಯೋತ್ಪಾದಕರ ವಿರುದ್ಧ ಪ್ರಧಾನಿ ನರೇಂದ್ರಮೋದಿಯವರು ತೆಗೆದುಕೊಂಡಿರುವ ಕಠಿಣ ಕ್ರಮವನ್ನು ಸಂಪೂರ್ಣ ಬೆಂಬಲಿಸುವುದಾಗಿ…

1 day ago