ಹಸಿರ ಸೌಂದರ್ಯದ ರಮಣೀಯ ಗಿರಿಶೃಂಗ ರಾಣಿಪುರಂ

June 14, 2019
8:00 AM

ಸುಳ್ಯ: ಕೇರಳ-ಕರ್ನಾಟಕ ರಾಜ್ಯಗಳ ಗಡಿ ಪ್ರದೇಶವಾದ ರಾಣಿಪುರಂನ ಸೌಂದರ್ಯ ವರ್ಣನಾತೀತ. ಸುತ್ತಲೂ ಪೋಣಿಸಿದಂತೆ ಕಾಣುವ ಹಸಿರು ಬೆಟ್ಟಗಳ ಸಾಲುಗಳು. ಅದರ ಮೇಲೆ ಮೊಲದ ಮರಿಗಳಂತೆ ಓಡಾಡುವ ಬಿಳಿ ಮೋಡ. ಹಾಲ್ನೊರೆ ಸೂಸುವಂತೆ ಪರಿಸರವನ್ನು ತಬ್ಬಿಕೊಳ್ಳುವ ಮಂಜಿನ ಕಣಗಳು. ಕ್ಷಣ ಮಾತ್ರದಲ್ಲಿ ನಮ್ಮನ್ನು ಮುತ್ತಿಕೊಳ್ಳುವ ಮಂಜು ಇಡೀ ಪ್ರದೇಶದಲ್ಲಿ ಬಿಳಿ ಚಿತ್ತಾರ ಬಿಡಿಸುತ್ತದೆ.

Advertisement

`ಕೇರಳದ ಊಟಿ’ ಎಂದೇ ಪ್ರಸಿದ್ಧವಾಗಿರುವ ರಾಣಿಪುರಂ ಎಂಬ ಹಸಿರ ಸೌಂದರ್ಯ ಖನಿ ಇರುವುದು ಕಾಸರಗೋಡು ಜಿಲ್ಲೆಯ ಪನತ್ತಡಿ ಗ್ರಾಮ ಪಂಚಾಯತ್ ನಲ್ಲಿದೆ.  ಸಮುದ್ರ ಮಟ್ಟದಿಂದ 2460 ಅಡಿ ಎತ್ತರದಲ್ಲಿರುವ ಗಿರಿಶಿಖರವಿದು. ಪನತ್ತಡಿಯಿಂದ ಹತ್ತು ಕಿಲೋಮೀಟರ್ ದೂರದಲ್ಲಿ ರಾಣಿಪುರಂ ಇದೆ. ಪಶ್ಚಿಮ ಘಟ್ಟ ತಪ್ಪಲಿನ ಸಹ್ಯಾದ್ರಿ ಬೆಟ್ಟಗಳ ಸಾಲಿಗೆ ಸೇರುವ ರಾಣಿಪುರಂ ಗಿರಿ ಶೃಂಗಕ್ಕೆ ತಲುಪಲು ಸುಮಾರು ಐದು ಕಿಲೋಮಿಟರ್ ಕಾಡಿನ ಮಧ್ಯೆ ನಡೆದು ಸಾಗಬೇಕು. ಚಿಕ್ಕ ಚಿಕ್ಕ ಜಲಪಾತಗಳ, ಸ್ಪಟಿಕದಂತೆ ಹೊಳೆಯುವ ನೀರು ಹರಿಯುವ ತೊರೆಗಳ ಜುಳು ಜುಳು ನಾದವನ್ನೂ, ಪಕ್ಷಿಗಳ ಕಲರವವನ್ನು ಆಲಿಸುತ್ತಾ, ಹಸಿರು ಹುಲ್ಲುಗಾವಲಿನ ಮತ್ತು ಭಾರೀ ಗಾತ್ರದ ಮರಗಳ ಸೌಂದರ್ಯವನ್ನು ಸವಿಯುತ್ತಾ ಕ್ರಮಿಸುವ ಈ ಪ್ರಯಾಣ ವಿಶಿಷ್ಟ ಅನುಭವವನ್ನು ನೀಡುತ್ತದೆ.

 

 

ಬೆಟ್ಟದ ತುತ್ತ ತುದಿಗೆ ತಲುಪಿದಾಗ ಸುತ್ತಲೂ ಹಸಿರಿನ ಅದ್ಭುತ ಲೋಕವೇ ತೆರೆದು ಕೊಳ್ಳುತ್ತದೆ. ಅತ್ಯಂತ ಅಪರೂಪದ ಸಸ್ಯ ಸಂಪತ್ತು ಮತ್ತು ವಿಶಿಷ್ಟ ಔಷಧ ಗಿಡಗಳು. ಪಕ್ಷಿಗಳು, ಆರ್ಕಿಡ್ ಗಿಡಗಳು, ವರ್ಣ ವೈಭವದ ಚಿಟ್ಟೆಗಳು ರಾಣಿಪುರಂನ ಸೌಂದರ್ಯವನ್ನು ಹೆಚ್ಚಿಸುತ್ತದೆ. ಪ್ರಕೃತಿಯ ಆರಾಧಕರಿಗೆ, ಪರಿಸರ ಸೌಂದರ್ಯದ ಆಸ್ವಾದಕರಿಗೆ, ಟ್ರಕ್ಕಿಂಗ್ ಪ್ರಿಯರಿಗೆ ರಾಣಿಪುರಂ ಅತ್ಯಂತ ಸೂಕ್ತ ಪ್ರದೇಶ. ಕಾಡಾನೆ ಹಿಂಡು, ಕಾಡು ಕೋಣ, ಜಿಂಕೆ, ಮಂಗ, ಮೊಲ ಹೀಗೆ ನಡೆದುಕೊಂಡು ಹೋಗುವಾಗ ದಾರಿ ಮಧ್ಯೆ ಹಲವು ಪ್ರಾಣಿಗಳ ದರ್ಶನವೂ ಆಗಬಹುದು.

ರಾಣಿಪುರಂನ ತುದಿಯಿಂದ ಸುತ್ತಲೂ ಕಣ್ಣಾಡಿಸಿದರೆ ಅಲ್ಲಲ್ಲಿ ಮುತ್ತು ಹರಡಿದಂತೆ ಕಾಣುವ ಕೇರಳ ಮತ್ತು ಕರ್ನಾಟಕದ ಗ್ರಾಮಗಳ ದರ್ಶನವೂ ಆಗುತ್ತದೆ. ಕೇರಳ ಮತ್ತು ಕರ್ನಾಟಕದ ಗಡಿ ಪ್ರದೇಶದಲ್ಲಿರುವ ರಾಣಿಪುರಂ ಬ್ರಹ್ಮಗಿರಿ ಬೆಟ್ಟದ ಸಾಲಿನೊಂದಿಗೆ ಪೋಣಿಸಿಕೊಂಡಿದೆ. ಕೆಲವು ಟ್ರಕ್ಕಿಂಗ್ ಉತ್ಸಾಹಿಗಳು ರಾಣಿಪುರಂ ಮೂಲಕ ಅರಣ್ಯ ದಾರಿಯಾಗಿ ತಲಕಾವೇರಿಗೂ ಟ್ರಕ್ಕಿಂಗ್ ಮಾಡುತ್ತಾರೆ.

ಬೆರಳ ತುದಿಯನ್ನೂ ಆವರಿಸುವ ಮಂಜು, ಶರೀರಕ್ಕೂ ಮನಸ್ಸಿಗೂ ಹಿತಾನುಭವವನ್ನು ನೀಡುವ ತಂಪು ಗಾಳಿ, ಹೀಗೆ ಹಚ್ಚ ಹಸಿರಿನ, ಶುದ್ಧವಾದ ವಾತಾವರಣದ ಪ್ರಕೃತಿಯ ಮಡಿಲಲ್ಲಿ ಸಮಯವನ್ನು ಕಳೆಯಲು ಇಚ್ಚಿಸುವವರು ರಾಣಿಪುರವನ್ನು ಅರಸಿ ಬರುತ್ತಾರೆ. ಕಡು ಬೇಸಗೆಯಲ್ಲೂ ತಂಪಾದ ಮತ್ತು ಹಿತವಾದ ಇಲ್ಲಿನ ವಾತಾವರಣ ಪ್ರವಾಸಿಗರನ್ನು ಸೆಳೆಯುತ್ತದೆ. ಅಕ್ಟೋಬರ್ ತಿಂಗಳಿನಿಂದ ಮೇ ತಿಂಗಳ ವರೆಗೆ ರಾಣಿಪುರಂಗೆ ಪ್ರವಾಸಿಗರ ದಂಡೇ ಆಗಮಿಸುತ್ತಾರೆ. ಮಳೆಯ ಅಧಮ್ಯ ಸೌಂದರ್ಯವನ್ನು ನೋಡ ಬಯಸುವ ಸಾಹಸಿಗರು ಮಳೆಗಾಲದಲ್ಲೂ ಇಲ್ಲಿಗೆ ಬರುತ್ತಾರೆ. ಸುಳ್ಯ ತಾಲೂಕಿನ ವಿವಿಧ ಭಾಗಗಳಿಂದ ನೂರಾರು ಮಂದಿ ರಾಣಿಪುರದ ಸೌಂದರ್ಯವನ್ನು ಹೋಗತ್ತಾರೆ.

ಹೋಗುವುದು ಹೇಗೆ.?
ಸುಳ್ಯದಿಂದ ಅಂತಾರಾಜ್ಯ ರಸ್ತೆಯಾದ ಸುಳ್ಯ-ಪಾಣತ್ತೂರು ರಸ್ತೆಯಲ್ಲಿ 22 ಕಿ.ಮೀ. ಪ್ರಯಾಣ ಮಾಡಿದರೆ ಕೇರಳದ ಪಾಣತ್ತೂರು ಪಟ್ಟಣ ಸಿಗುತ್ತದೆ. ಅಲ್ಲಿಂದ ಕಾಞಂಗಾಡ್ ರಸ್ತೆಯಲ್ಲಿ ಎಂಟು ಕಿ.ಮಿ. ಸಂಚರಿಸಿದರೆ ಪನತ್ತಡಿಗೆ ತಲುಪಬಹುದು. ಅಲ್ಲಿಂದ ಹತ್ತು ಕಿ.ಮಿ. ಪ್ರಯಾಣಿಸಿದರೆ ರಾಣಿಪುರಂ ಸಿಗುತ್ತದೆ. ಪಾಣತ್ತೂರಿನಿಂದಲೂ ನೇರವಾಗಿ ರಾಣಿಪುರಂಗೆ ಹೋಗಬಹುದು. ಕಾಸರಗೋಡಿನಿಂದ ಕಾಞಂಗಾಡಿಗೆ ಬಂದು ಅಲ್ಲಿಂದ ಪನತ್ತಡಿಗೆ ಬರಬಹುದು. ಕಾಞಂಗಾಡ್‍ನಿಂದ 35 ಕಿ.ಮೀ.ದೂರದಲ್ಲಿ ಪನತ್ತಡಿ ಇದೆ.

 

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

ಇದನ್ನೂ ಓದಿ

ಬಾಗಲಕೋಟೆ ಮುಧೋಳ ಸೇಬು ಬೆಳೆಗಾರನ ಬಗ್ಗೆ ಮನ್ ಕೀ ಬಾತ್ ನಲ್ಲಿ ಪ್ರಧಾನಿ ಮೋದಿ ಮೆಚ್ಚುಗೆ
April 28, 2025
7:02 AM
by: The Rural Mirror ಸುದ್ದಿಜಾಲ
“ದ ಹಿಂದೂ ಮ್ಯಾನಿಫ್ಯಾಸ್ಟೋ” ಕೃತಿ ಬಿಡುಗಡೆ | ಅಹಿಂಸೆಯೇ ಭಾರತದ ನೈಜ ಧರ್ಮ-ಮೋಹನ್ ಭಾಗವತ್
April 28, 2025
6:53 AM
by: ದ ರೂರಲ್ ಮಿರರ್.ಕಾಂ
ಕಾಶ್ಮೀರದ ಪಹಲ್ಗಾಮ್ ನಲ್ಲಿ ಉಗ್ರ ದಾಳಿ ಹಿನ್ನೆಲೆ | ಭಾರತದಲ್ಲಿ ಪಾಕ್ ಸರ್ಕಾರದ ಸಾಮಾಜಿಕ ಜಾಲತಾಣ ನಿಷೇಧ
April 28, 2025
6:49 AM
by: ದ ರೂರಲ್ ಮಿರರ್.ಕಾಂ
ರಾಜ್ಯದಲ್ಲಿ ಒಂದು ವಾರ ಗುಡುಗು ಸಹಿತ ಮಳೆ ಸಾಧ್ಯತೆ | 19 ಜಿಲ್ಲೆಗಳಿಗೆ ಎಲ್ಲೋ ಅಲರ್ಟ್ ಘೋಷಣೆ
April 28, 2025
6:44 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group