ಉಪ್ಪಿನಂಗಡಿ: ಈ ಹಾಲಿನ ಸೊಸೈಟಿಗೆ ರೈತರ ಮೇಲೆ ಯಾಕಿಷ್ಟು ಕೋಪ ಹೇಳಿ…? ರೈತರು, ಹೈನುಗಾರರು ಎಂದರೆ ಬಿಟ್ಟಿ ಹಣಕ್ಕಾಗಿ ಕಾಯುವವರಲ್ಲ, ಕಾಯುವುದೂ ಇಲ್ಲ.
ಈ ಸೊಸೈಟಿಯಲ್ಲಿ ಮಾತ್ರಾ ಹಾಲಿನಲ್ಲಿ ಡಿಗ್ರಿ ಇಲ್ಲ ಅಂತ ಕಳೆದ ಕೆಲವು ದಿನಗಳಿಂದ ರಿಜೆಕ್ಟ್ ಮಾಡುತ್ತಿದ್ದಾರೆ. ಹೀಗಾಗಿ ಮಂಗಳವಾರ ಹಾಲು ಸೊಸೈಟಿ ಮುಂದೆ ಪ್ರತಿಭಟನೆ ಮಾಡಿದ್ದಾರೆ. ಅದರ ವಿವರ ಹೀಗಿದೆ…
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೈನುಗಾರಿಕೆ ಈಗ ಸಾಕಷ್ಟು ಬೆಳೆಯುತ್ತಿದೆ. ರೈತರು ಕೂಡಾ ಸಾವಯವ ಕೃಷಿಯತ್ತ ಆಸಕ್ತರಾಗಿ ಹೈನುಗಾರಿಕೆಯನ್ನೂ ಮಾಡುತ್ತಿದ್ದಾರೆ. ಹೀಗಾಗಿ ಹಸುವಿನ ಹಾಲನ್ನು ಸೊಸೈಟಿಗೆ ನೀಡುತ್ತಾರೆ. ಅದೇ ರೀತಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ತಣ್ಣಿರುಪಂತ ಹಾಲು ಉತ್ಪಾದಕರ ಸಹಕಾರ ಸಂಘದ ಮೂರುಗೋಳಿ ಶಾಖೆಯಲ್ಲೂ ಹಾಲು ಸಂಗ್ರಹ ನಡೆಯುತ್ತದೆ. ಸುಮಾರು 2000 ಲೀಟರ್ ಗಿಂತಲೂ ಹೆಚ್ಚು ಹಾಲು ಇಲ್ಲಿ ಸಂಗ್ರಹವಾಗುತ್ತದೆ. ಬಡವರು , ಮಹಿಳೆಯರು ಸೇರಿದಂತೆ ಅನೇಕ ಹೈನುಗಾರರು ಹಾಲು ಹಾಕುತ್ತಾರೆ.
ಸೊಸೈಟಿಗೆ ಹಾಲು ನೀಡುವ ವೇಳೆ ಸಹಜವಾಗಿಯೇ ಗುಣಮಟ್ಟದ ಬಗ್ಗೆ ಮಾತು ಬರುತ್ತದೆ. ಎಲ್ಲಾ ಕೃಷಿಕರೂ ಇದೆಲ್ಲವನ್ನೂ ಪಾಲನೆ ಮಾಡುತ್ತಾರೆ. ಹಾಲಿನ ಗುಣಮಟ್ಟದ ಬಗ್ಗೆ ಖಾತ್ರಿ ಮಾಡುತ್ತಾರೆ. ತಮ್ಮಿಂದಾದ ಎಲ್ಲಾ ಪ್ರಯತ್ನ ಮಾಡುತ್ತಾರೆ. ಆದರೆ ಕೆಲವೊಮ್ಮೆ ಆಹಾರದ ವ್ಯತ್ಯಾಸದ ಕಾರಣದಿಂದ ಹಸುವಿನಲ್ಲೂ ದೇಹದಲ್ಲೂ ವ್ಯತ್ಯಾಸವಾಗುತ್ತದೆ. ಹೀಗಾಗಿ ಹಾಲಿನ ಗುಣಮಟ್ಟದಲ್ಲೂ ಕೆಲವೊಮ್ಮೆ ವ್ಯತ್ಯಾಸವಾಗುತ್ತದೆ. ವಿಪರೀತ ಬಿಸಿಲು ಕೂಡಾ ಹಾಲಿನ ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತದೆ.
ಇಲ್ಲಿ ಗಮನಿಸಬೇಕಾದ್ದು ಎಂದರೆ ಹಾಲಿನ ಜಿಡ್ಡಿನ ಅಂಶ ಶೇ 3.5 ಹಾಗೂ ಸಿಹಿ ಅಂಶ 28 ಡಿಗ್ರಿಗಿಂತ ಹೆಚ್ಚಿರಬೇಕು. ಅದಕ್ಕೆ ಪೂರಕವಾಗಿ ಹಾಲಿನ ಉಷ್ಣತೆಯೂಈ ಇರಬೇಕು. ಈಗ ವಾತಾವರಣದ ಉಷ್ಣತೆಯ ಕಾರಣದಿಂದ ಇದೆಲ್ಲಾ ಏರುಪೇರಾಗುತ್ತದೆ.
ಆದರೆ ತಣ್ಣೀರುಪಂತದ ಮೂರುಗೋಳಿ ಶಾಖೆಯಲ್ಲಿ ಕಳೆದ ಕೆಲವು ದಿನಗಳಿಂದ ಕೆಲವು ಹೈನುಗಾರರು ಹಾಕುವ ಹಾಲನ್ನು ರಿಜೆಕ್ಟ್ ಮಾಡಲಾಗುತ್ತಿದೆ. ಇದರಿಂದ ಹೈನುಗಾರರು ಆಕ್ರೋಶಗೊಂಡಿದ್ದಾರೆ. ಎಲ್ಲಾ ಪ್ರಯತ್ನ ಮಡಿಯೂ ಈ ರೀತಿ ಮಾಡುವುದು ಸರಿಯಲ್ಲ ಎಂದು ವಿರೋಧ ವ್ಯಕ್ತಪಡಿಸಿದ ಎಲ್ಲಾ ಹೈನುಗಾರರೂ ಇದಕ್ಕೆ ಸಹಮತ ವ್ಯಕ್ತಪಡಿಸಿ ಮಂಗಳವಾರ ಪ್ರತಿಭಟನೆ ಮಾಡಿದ್ದಾರೆ, ವಿರೋಧ ಮಾಡಿದ್ದಾರೆ. ಹಾಲು ಒಕ್ಕೂಟ ಈ ಬಗ್ಗೆ ತಕ್ಷಣವೇ ಗಮನಹರಿಸಬೇಕಿದೆ.
ಇನ್ನೊಂದು ಮುಖ್ಯ ಅಂಶವೆಂದರೆ ಹೈನುಗಾರರು ನೀಡುವ ಹಾಲಿನ ಗುಣಮಟ್ಟವನ್ನು ಸೊಸೈಟಿಯಲ್ಲಿ ಪರಿಶೀಲನೆ ಮಾಡುವ ಜೊತೆಗೇ ಒಕ್ಕೂಟವು ಅಥವಾ ಯಾವುದೇ ಸಂಸ್ಥೆಗಳು ತಾವು ನೀಡುವ ಹಿಂಡಿ ಸಹಿತ ಇತರ ವಸ್ತುಗಳ ಗುಣಮಟ್ಟದ ಬಗ್ಗೆಯೂ ಖಾತ್ರಿ ನೀಡಬೇಕು ಎಂಬುದು ಹೈನುಗಾರರ ಒತ್ತಾಯ ಎಲ್ಲಾ ಕಡೆ ಇದೆ. ಆದರೆ ಅದು ಜಾರಿಯಾಗುತ್ತಿಲ್ಲ. ಈ ಹಿಂಡಿ ತಿಂದೇ ಅನೇಕ ಹಸುಗಳಿಗೆ ಸಮಸ್ಯೆಯಾಗುತ್ತದೆ ಈ ಬಗ್ಗೆಯೂ ಗಮನಹರಿಸಬವೇಕು ಎಂಬುದು ಹೈನುಗಾರ ಸೋಮಶೇಖರ್ ಅಭಿಪ್ರಾಯ. ಗುಣಮಟ್ಟದ ಖಾತ್ರಿ ಎರಡೂ ಕಡೆಗೂ ಒಂದೇ ಮಾನದಂಡ ಇರಬೇಕು. ಹಿಂಡಿಯ ಗುಣಮಟ್ಟದ ಬಗ್ಗೆ ಖಾತ್ರಿ ಮಾಡಲು ಹೈನುಗಾರರು ಮೈಸೂರಿಗೆ ಪರೀಕ್ಷೆಗೆ ತೆರಳಬೇಕಂತೆ..! ಇದೆಂತಾ ನ್ಯಾಯ..!