2017 ದಶಂಬರದಲ್ಲಿ ಕಡಬದಲ್ಲಿ ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಜರುಗಿತ್ತು. ಅನಿರೀಕ್ಷಿತವಾಗಿ ಸಮ್ಮೇಳನದ ಅಧ್ಯಕ್ಷೀಯ ಗೌರವ ಪ್ರಾಪ್ತವಾಗಿತ್ತು. ಖುಷಿ ನೀಡಿದ ಕ್ಷಣಗಳು. ಅಧ್ಯಕ್ಷತೆ ಅಂದರೆ ಸಮ್ಮೇಳನಕ್ಕೆ ಸೀಮಿತ. ಆ ಸ್ವಸ್ವರೂಪ ಜ್ಞಾನವಿಟ್ಟುಕೊಂಡೇ ಭೋಜನ ಸಮಯದಲ್ಲಿ ಮಳಿಗೆಗಳನ್ನು ಸುತ್ತುತ್ತಿದ್ದೆ.
ಪುತ್ತೂರಿನ ಜ್ಞಾನಗಂಗಾ ಪುಸ್ತಕ ಮಳಿಗೆಯಲ್ಲಿ ಶ್ಯಾಮ್ ಬ್ಯುಸಿಯಾಗಿದ್ದರು.
ಒಂದೈದು ನಿಮಿಷ ಮಳಿಗೆಯಲ್ಲಿ ಕುಳಿತಿದ್ದೆ. ಪರಿಚಿತ ವ್ಯಕ್ತಿಯೊಬ್ಬರು (ಹೆಸರು ನೆನಪಿಲ್ಲ) ಮಳಿಗೆಗೆ ಬಂದು, “ನಿಮ್ಮ ಅಣ್ಣನನ್ನು ವೇದಿಕೆಯನ್ನು ನೋಡಿದೆ. ಅವರಿಗೆ ಅಭಿನಂದನೆ ಹೇಳಿ” ಎಂದು ಪುಸ್ತಕಗಳನ್ನು ಆಯ್ಕೆ ಮಾಡಿಕೊಂಡರು. ಮತ್ತೊಮ್ಮೆ ಓರೆಗಣ್ಣಿನಿಂದ ನೋಡಿ ಹೊರಟರು.
ಅವರ ಓರೆಗಣ್ಣಿನ ತೀಕ್ಷ್ಣತೆ ಅರ್ಥವಾಗಲಿಲ್ಲ. ‘ನಿಮ್ಮಣ್ಣನಿಗೆ ಅಭಿನಂದನೆ ಹೇಳಿ’ ಎಂದರು. ಯಾರು ಅಣ್ಣ? ಯಾರಿಗೆ ಅಣ್ಣ? ಒಟ್ಟೂ ಗೊಂದಲ. ಸಮ್ಮೇಳನದ ಸಂತೋಷವು ಮುರುಟಬಾರದೆಂದು ಘಟನೆಯನ್ನು ಮರೆತಿದ್ದೆ. ಯಾರಲ್ಲೂ ಹಂಚಿಕೊಂಡಿಲ್ಲ. ಮೂರ್ನಾಲ್ಕು ತಿಂಗಳು ಕಳೆದಿರಬಹುದಷ್ಟೇ. ಅದೇ ವ್ಯಕ್ತಿ ಪ್ರತ್ಯಕ್ಷ. “ಹೇಗಿದೆ ವ್ಯಾಪಾರ, ಜೀವನಕ್ಕೆ ಸಾಕಾಗ್ತದಾ. ಛೇ.. ಇಂತಹ ಸ್ಥಿತಿ ಬರಬಾರದಾಗಿತ್ತು.” ಎನ್ನುತ್ತಾ ಅನುಕಂಪದಿಂದ ಹತ್ತಾರು ಬಾರಿ ಲೊಚಗುಟ್ಟುತ್ತಾ ನಖಶಿಖಾಂತ ನೋಡಿದರು. ಮಾತು ಸ್ವಲ್ಪ ಸಡಿಲವೇ ಆಗಿತ್ತು.
ವಿಷಯ ಸ್ಪಷ್ಟವಾಯಿತು. ಅಂದು ಪುಸ್ತಕದ ಮಳಿಗೆಯಲ್ಲಿ ಕುಳಿತಿದ್ದೇನಲ್ಲಾ.. ನಾನೀಗ ಪುಸ್ತಕ ವ್ಯಾಪಾರ ಮಾಡುತ್ತಿದ್ದೇನೆಂದು ತಪ್ಪಾಗಿ ಗ್ರಹಿಸಿದ್ದರು. ಆ ಆತ್ಮಕ್ಕೆ ವೇದಿಕೆಯಲ್ಲಿದ್ದುದು ನಾನೇ ಎನ್ನುವುದೂ ಗೊತ್ತಾಗಲಿಲ್ಲ! ನನ್ನ ಅಣ್ಣ ಎಂದು ಊಹಿಸಿದ್ದರು. ಇರಲಿ, ಪುಸ್ತಕ ವ್ಯಾಪಾರದಲ್ಲಿ ಅಷ್ಟೊಂದು ಕನಿಷ್ಠತೆಯನ್ನು ಯಾಕೆ ಕಂಡುಕೊಂಡರೋ ಗೊತ್ತಿಲ್ಲ.
ವಾರದ ಹಿಂದೆ ಪುನಃ ಸಿಕ್ಕರು. ಪ್ರಮಾದ ಅವರಿಗೆ ಅರ್ಥವಾಗಿ ಮುಜುಗರಪಟ್ಟರು. “ಸರಿ… ಪುಸ್ತಕ ವ್ಯಾಪಾರವೂ ಒಂದು ವೃತ್ತಿಯಲ್ವಾ. ಅದನ್ಯಾಕೆ ಕನಿಷ್ಠವಾಗಿ ಕಾಣುತ್ತೀರಿ” ಎಂದಾಗ ನಿರುತ್ತರಿ. “ನೋಡಿ.. ಪ್ರಕಾಶ್ ಕುಮಾರ್ ಕೊಡೆಂಕಿರಿ ಅವರಿಗೆ ಪುಸ್ತಕವೇ ಸರ್ವಸ್ವ. ಅದುವೇ ಬದುಕು. ಜತೆಗೆ ವೃತ್ತಿ ಧರ್ಮದ ಪಾಲನೆ. ಸಮಾಜದಲ್ಲಿ ಅವರಿಗೆ ಗೌರವದ ಸ್ಥಾನ ಇಲ್ವಾ..” ಎಂದು ಮಾತಿಗೆಳೆದಾಗ ಸಬೂಬು ಹೇಳಿ ಜಾಗ ಖಾಲಿ ಮಾಡಿದರು.
ಸಮಾಜದಲ್ಲಿ ತುಂಬಾ ಮಂದಿಯನ್ನು ನೋಡುತ್ತೇವೆ. ಒಬ್ಬನ ವೃತ್ತಿಯನ್ನು ಕೀಳಾಗಿ ಕಂಡು ತಾನು ಸ್ಥಾಪಿತನಾಗುವ ಪರಿ. ಇಂತಹ ವ್ಯಕ್ತಿಗಳನ್ನು ಮನಸ್ಸಿಗೆ ತಂದುಕೊಂಡಾಗ ಪುತ್ತೂರು ಕೊಕೊ ಗುರು ಉದ್ಯಮದ ಶಿವಶಂಕರ ಭಟ್ ಈಚೆಗೆ ಹೇಳಿದ ವಿಚಾರ ನೆನಪಿಗೆ ಬಂತು – “ನನ್ನ ಮನೆಯ ಮೇಣ ರಹಿತ ಹಲಸಿನ ಹಣ್ಣನ್ನು ಅಂಗಡಿಯಲ್ಲಿ ತಂದಿಟ್ಟಿದ್ದೆ. ಯಾರಾದರೂ ಆಸಕ್ತರಿಗೆ ಪ್ರಯೋಜನವಾಗಲಿ. ಕನಿಷ್ಠ ದರವನ್ನೂ ನಿಗದಿಪಡಿಸಿದ್ದೆ. ಹಲಸಿನ ಹಣ್ಣನ್ನೂ ಮಾರುವುದೇ… ಎಂದು ಕೆಲವರು ಗೇಲಿ ಮಾಡಿದರು. ನಮ್ಮ ಉತ್ಪನ್ನಗಳನ್ನು ನಾವು ಮಾರುವುದು ಅವಮಾನವಾ. ಅದು ಗೌರವ ಅಲ್ವಾ.. ”
ಯಾವಾಗಲೂ ಪರರನ್ನೇ ಚಿಂತಿಸುವ, ಮಾತನಾಡುವ, ಗೊಣಗಾಡುವ ಮಂದಿಗೆ ಇವೆಲ್ಲಿ ಅರ್ಥವಾಗಬೇಕು? ಮಾನ, ಅಪಮಾನಗಳ ಶಬ್ದಾರ್ಥಗಳನ್ನು ತಿಳಿಯದೆ ಒದ್ದಾಡುತ್ತಿದ್ದಾರೆ. “ನಿಮ್ಮ.. ಕರಾವಳಿಯವರಿಗೆ ಬಡತನದ ಅನುಭವ ಇಲ್ಲಾರಿ. ಕೈಯಲ್ಲಿ ಹಣ ಬೇಕಾದಷ್ಟು ಓಡಾಡುತ್ತೆ. ನಮ್ಮ ಕಡೆಗೆ ಬನ್ನಿ. ಬದುಕು ಅರ್ಥವಾಗುತ್ತೆ” – ಹಿಂದೊಮ್ಮೆ ಉತ್ತರ ಕರ್ನಾಟಕಕ್ಕೆ ಪ್ರವಾಸ ಹೋದಾಗ ಕೃಷಿಕರೊಬ್ಬರು ಆಡಿದ ಮಾತು ಸತ್ಯವೆಂದು ತೋರುತ್ತದೆ.
ಓರ್ವನ ವೃತ್ತಿಯು ಅವನಿಗೆ ದೊಡ್ಡದು. ಅವನಿಗೆ ಗೌರವ. ಇನ್ನೊಬ್ಬರಿಗೆ ಢಾಳಾಗಿ ಕಾಣಬಹುದು. ವೃತ್ತಿಯಲ್ಲಿ ಯಾವುದೂ ಶ್ರೇಷ್ಟವಲ್ಲ, ಕನಿಷ್ಠವಲ್ಲ. ವೃತ್ತಿಯನ್ನು ನೋಡಿ ವ್ಯಕ್ತಿತ್ವವನ್ನು ಅಳತೆ ಮಾಡುವಾತನಲ್ಲಿ ಬೌದ್ಧಿಕ ದಾರಿದ್ರ್ಯ ಇದೆ ಎನ್ನುವುದಕ್ಕೆ ಕನ್ನಡಿ ಬೇಕಾಗಿಲ್ಲ.
ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆಯ ಬಗ್ಗೆ ಅಧ್ಯಯನ ಮಾಡಲು ಶ್ರೀಲಂಕಾದಿಂದ 38 ಮಂದಿ “ಲಂಕಾ…
ಬದಲಾದ ಕಾಲದಲ್ಲಿ ನಾವು ಇಂತಹ ಪರಿಕರಕೊಳ್ಳುವ ಮೊದಲು ನಮಗೆಷ್ಟು ಇದು ಪ್ರಯೋಜನಕಾರಿ ಎಂದು…
ಐತಿಹಾಸಿಕ ಕುಂಭಮೇಳ ನಡೆಯುತ್ತಿರುವ ಪ್ರಯಾಗ್ ರಾಜ್ ನಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಧ್ಯಕ್ಷತೆಯಲ್ಲಿ …
ರಾಸಾಯನಿಕಗಳನ್ನು ಹೊಂದಿರುವ ಗೊಬ್ಬರದ ಅತಿಯಾದ ಬಳಕೆಯಿಂದಾಗಿ ಭೂಮಿಯಲ್ಲಿ ಎರೆಹುಳು ಸೇರಿದಂತೆ ಎಲ್ಲ ಜೀವಿಗಳು…
ಕರ್ನಾಟಕದ ಹಲವೆಡೆ ಕಾಫಿ ನವೋದ್ಯಮಕ್ಕೆ ಅವಕಾಶಗಳನ್ನು ಸೃಷ್ಟಿಸಿ, ಸ್ವ ಸಹಾಯ ಗುಂಪುಗಳ ಸುಮಾರು…
ಕೃಷಿ ಸದೃಢವಾಗಿದ್ದರೆ ದೇಶ ಸದೃಢವಾಗಿರುತ್ತದೆ ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅಭಿಪ್ರಾಯಪಟ್ಟಿದ್ದಾರೆ. …