ಕೊರೋನಾ ಸಂಕಷ್ಟದ ಕಾರಣದಿಂದ ಶಾಲೆ-ಕಾಲೇಜುಗಳು ನಡೆಯುತ್ತಿಲ್ಲ. ಕೆಲಸಕ್ಕೆ ತೆರಳುವ ಮಂದಿಗೂ ಸಂಕಷ್ಟ. ಇಂತಹ ಸನ್ನಿವೇಶದಲ್ಲಿ ವೇಗದ ಇಂಟರ್ನೆಟ್ ಇಂದು ಅಗತ್ಯವಾಗಿದೆ. ಹಳ್ಳಿಯಲ್ಲೂ ಇಂದು ಇಂಟರ್ನೆಟ್ ಎಲ್ಲಾ ವರ್ಗದವರಿಗೂ ಅಗತ್ಯವಾದ ಸಂಗತಿಯಾಗಿದೆ. ನಗರದಲ್ಲಿ ಇಂತಹ ಯಾವುದೇ ಸಮಸ್ಯೆಗಳು ಎದುರಾಗದೇ ಇದ್ದರೂ ಹಳ್ಳಿಗಳಲ್ಲಿ ಇಂಟರ್ನೆಟ್ ಬಿಡಿ ಕಾಲ್ ಮಾಡುವುದಕ್ಕೂ ಪರದಾಟ ಮಾಡಬೇಕಾದ ಸ್ಥಿತಿ ಇದೆ. ಈಗ ಆನ್ ಲೈನ್ ಕ್ಲಾಸ್ ಗೆ ಗುಡ್ಡದ ತುದಿಯಲ್ಲಿ ಗಾಳಿ ಮಳೆಯ ನಡುವೆಯೂ ಮರದ ಅಡಿಯಲ್ಲಿ , ರಸ್ತೆ ಬದಿ ಒದ್ದೆಯಾಗಿ ನಿಲ್ಲುವ ಸ್ಥಿತಿಯನ್ನು ತಪ್ಪಿಸಿ ಸುರಕ್ಷತೆಯ ದಾರಿ ಬೇಕಾಗಿತ್ತು. ಇಂತಹ ಸನ್ನಿವೇಶದಲ್ಲಿ ಇದೀಗ ಪಿ ಎಂ ವಾಣಿ ಚಾಲೂಗೊಂಡಿದೆ. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಕಮಿಲದಲ್ಲಿ ಈಗ ಪಿ ಎಂ ವಾಣಿ ಚಾಲೂಗೊಂಡಿದ್ದು “ಏಕಾನೆಟ್ “ ಎಂಬ ಹೆಸರಿಲ್ಲಿ ಈಗ ಲಭ್ಯವಾಗುತ್ತಿದೆ.
ಏನಿದು ಏಕಾನೆಟ್ :
ಕೇಂದ್ರ ಸರಕಾರವು ಸಾರ್ವಜನಿಕ ವೈ ಫೈ ನೀಡಲು ಪಿ ಎಂ ವಾಣಿ ಎಂಬ ಯೋಜನೆಯಲ್ಲಿ ಕಳೆದ ಡಿಸೆಂಬರ್ ನಲ್ಲಿ ಟೆಲಿಕಾಂ ಇಲಾಖೆಯ ಮೂಲಕ ವ್ಯವಸ್ಥೆಗೆ ಮುಂದಾಗಿತ್ತು. ದೇಶದ ಹಲವು ಕಡೆಗಳಲ್ಲಿ ಈ ಯೋಜನೆಯನ್ನು ಜಾರಿ ಮಾಡಲು ಕೂಡಾ ಸೂಚಿಸಿತ್ತು. ಇದರ ಅನ್ವಯ ಟೆಲಿಕಾಂ ಇಲಾಖೆಗಳನ್ನು ಸಂಪರ್ಕಿಸಿದ ಸುಳ್ಯದ ಸಾಯಿರಂಜನ್ ಕಲ್ಚಾರು ಹಾಗೂ ಸದಾಶಿವ ಕೊಡಪ್ಪಾಲ ಅವರು ಇದಕ್ಕೆ ಬೇಕಾದ ವ್ಯವಸ್ಥೆಗೆ ಮುಂದಾದರು. ಇಲಾಖೆಗಳನ್ನು, ವ್ಯವಸ್ಥೆಗಳನ್ನು ದೂರುತ್ತಾ ಕೂರುವ ಬದಲು ಇರುವ ವ್ಯವಸ್ಥೆಗಳನ್ನು ಹೇಗೆ ಬಳಕೆ ಮಾಡಬಹುದು ಹಾಗೂ ಸುಧಾರಿಸಬಹುದು ಎಂದು ಈ ಯುವಕರಿಬ್ಬರು ಯೋಚಿಸಿದರು. ಈಗ ಗ್ರಾಮೀಣ ಭಾಗಗಳಲ್ಲಿ ವಿದ್ಯಾರ್ಥಿಗಳು ಆನ್ ಲೈನ್ ಕ್ಲಾಸಿಗೆ ಪರದಾಟ ನಡೆಸುವ ಸ್ಥಿತಿಯನ್ನು ಕಂಡು ತಕ್ಷಣವೇ ಇಲಾಖೆಗಳಿಂದ ಅನುಮತಿ ಪಡೆದು ಇದೀಗ ಸುಳ್ಯದ ಕಮಿಲದಲ್ಲಿ ಈ ವ್ಯವಸ್ಥೆಗೆ ಮುಂದಾದರು. ಈ ನೆಟ್ವರ್ಕ್ ಗೆ ಏಕಾನೆಟ್ ಎಂಬ ಹೆಸರು ಇರಿಸಲಾಗಿದ್ದು, ಏಕ ಎಂದರೆ ಒಂದು ಹಾಗೂ ನೆಟ್ ಎಂದರೆ ನೆಟ್ವರ್ಕ್ ಎಂಬ ಅರ್ಥ ಒಳಗೊಂಡಿದ್ದು , ಒಂದು ನೆಟ್ವರ್ಕ್ ಎಲ್ಲರಿಗಾಗಿ ಎಂಬ ಸಂದೇಶ ಇದರ ಹಿಂದಿದೆ. ಸೇವಾ ಉದ್ದೇಶ ಇದಾದರೂ ಇದಕ್ಕೆ ಬೇಕಾದ ಇಂಟರ್ನೆಟ್ ಹಾಗೂ ಇತರ ಉಪಕರಣಗಳಿಗೆ ವೆಚ್ಚಗಳಾಗುವುದರಿಂದ ಬಳಸುವ ಡಾಟಾಗಳ ಮೇಲೆ ಕನಿಷ್ಟ ದರ ವಿಧಿಸಲಾಗುತ್ತದೆ. ಸದ್ಯ ಸುಮಾರು 2000 ಚದರ ಅಡಿಯಲ್ಲಿ ಈ ಸಿಗ್ನಲ್ ಲಭ್ಯವಿರುತ್ತದೆ. ತೀರಾ ಅಗತ್ಯ ಇರುವ ವಿದ್ಯಾರ್ಥಿಗಳಿಗೆ, ತುರ್ತು ಇಂಟರ್ನೆಟ್ ಅಗತ್ಯ ಇದ್ದವರಿಗೆ, ವರ್ಕ್ ಫ್ರಂ ಹೋಂ ವ್ಯವಸ್ಥೆಯ ಮಂದಿಗೆ ಈ ಸಾರ್ವಜನಿಕ ವೈ ಫೈ ಬಳಕೆ ಮಾಡಬಹುದು. ಈ ಯೋಜನೆಯಲ್ಲಿ ಸುಧಾರಣೆಗೆ ಸಾಕಷ್ಟು ಅವಕಾಶಗಳು ಇದ್ದು ನೆಟ್ವರ್ಕ್ ಲೋಪದೋಷಗಳ ಕಡೆಗೂ ಗಮನಹರಿಸಲಾಗುತ್ತಿದೆ.
ಹೇಗೆ ಕೆಲಸ ಮಾಡುತ್ತದೆ ?
ಟೆಲಿಕಾಂ ಇಲಾಖೆಗಳು ಅನುಮತಿಯೊಂದಿಗೆ ಆರಂಭವಾಗುವ ಈ ಯೋಜನೆಗೆ ವೇಗದ ಇಂಟರ್ನೆಟ್ ಅಗತ್ಯವಿದೆ. ಕಮಿಲದಲ್ಲಿ ಬಿ ಎಸ್ ಎನ್ ಎಲ್ ಭಾರತ್ ಏರ್ ಫೈಬರ್ ಮೂಲಕ ಇಂಟರ್ನೆಟ್ ಸಂಪರ್ಕ ಪಡೆದು ಪ್ರತ್ಯೇಕ ಡಿವೈಸ್ ಮೂಲಕ ಸಾರ್ವಜನಿಕ ವೈ ಫೈ ನೀಡಲಾಗುತ್ತಿದೆ. ಗ್ರಾಮೀಣ ಭಾಗದಲ್ಲಿ ಸಾಮಾನ್ಯ ಜನರಿಗೂ ವೇಗದ ಇಂಟರ್ನೆಟ್ ಸಂಪರ್ಕ ಪಡೆಯಲು ಇಂದು ವಿವಿಧ ಕಾರಣಗಳಿಂದ ಕಷ್ಟವಾಗಿದೆ. ಈ ಕಾರಣದಿಂದ ಸಾರ್ವಜನಿಕ ವೈ ಫೈ ಉದ್ದೇಶ ಉತ್ತಮವಾಗಿದೆ. ಗ್ರಾಮೀಣ ಭಾಗದಲ್ಲಿ ವಿದ್ಯುತ್ ಕೈ ಕೊಡುವ ಸಂದರ್ಭ 2G, 3G ನೆಟ್ವರ್ಕ್ ಸಮಸ್ಯೆ ಹೆಚ್ಚಾಗುತ್ತದೆ, ಆದರೆ ಭಾರತ್ ಏರ್ ಫೈಬರ್ ಅಥವಾ ಫೈಬರ್ ವ್ಯವಸ್ಥೆಗಳು ಪ್ರತ್ಯೇಕ ಬ್ಯಾಟರಿಯಿಂದ ಚಾಲೂಗೊಳ್ಳುವ ಕಾರಣದಿಂದ ಸದ್ಯಕ್ಕೆ ಈ ವ್ಯವಸ್ಥೆ ಯಾವುದೇ ತೊಂದರೆಗೆ ಒಳಗಾಗದು ಎಂದು ನಂಬಲಾಗಿದೆ. ಬಿ ಎಸ್ ಎನ್ ಎಲ್ ಇತರ ಸಮಸ್ಯೆಗಳು ಮಾತ್ರಾ ಇಲ್ಲಿ ಅಡಚಣೆಗೆ ಕಾರಣವಾದೀತು. ಈ ವೈ ಫೈ ತಾಲೂಕಿನ ವಿವಿಧ ಕಡೆಗಳಲ್ಲಿ ಒಂದೇ ಹೆಸರಿನಲ್ಲಿ ಅಳವಡಿಕೆಯಾದರೆ ರೋಮಿಂಗ್ ಮೂಲಕವೂ ಪಡೆಯಲು ಸಾಧ್ಯವಿದೆ.
ಇಲ್ಲಿ ವೈ ಫೈ ಬೇಕಾದವರು ಆರಂಭದಲ್ಲಿ ದಾಖಲೀಕರಣ ಮಾಡಬೇಕಾಗುತ್ತದೆ. ಈ ಸಂದರ್ಭ ಟೆಲಿಕಾಂ ನಿಯಮದಂತೆ OTP ಬರುತ್ತದೆ. ಅದಾದ ನಂತರ ಕೆಲ ಹೊತ್ತು ಉಚಿತ ಡಾಟಾ ದೊರೆಯುತ್ತದೆ. ಬಳಿಕ ತಮಗೆ ಬೇಕಾದ ಡಾಟಾಗಳನ್ನು ಒಂದು ತಿಂಗಳ ವ್ಯಾಲಿಡಿಟಿಯಿಂದಿಗೆ ಬಳಕೆ ಮಾಡಬಹುದು. ಗೂಗಲ್ ಪೇ ಅಥವಾ ನಗದು ಮೂಲಕ ಈ ಡಾಟಾ ಪಡೆಯುವ ಅವಕಾಶ ಸದ್ಯಕ್ಕಿದೆ.
ಹೇಗೆ ಆರಂಭವಾದ್ದು ಪಿಎಂ ವಾಣಿ:
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟವು 2020 ಡಿಸೆಂಬರ್ 9 ರಂದು ಪ್ರಧಾನ ಮಂತ್ರಿಯ ವೈ-ಫೈ ಆಕ್ಸೆಸ್ ನೆಟ್‌ವರ್ಕ್ ಇಂಟರ್ಫೇಸ್ (ಪಿಎಂ-ವಾಣಿ) ಚೌಕಟ್ಟಿನಡಿಯಲ್ಲಿ ಸಾರ್ವಜನಿಕ ವೈ-ಫೈ ನೆಟ್‌ವರ್ಕ್‌ಗಳ ಮೂಲಕ ಬ್ರಾಡ್‌ಬ್ಯಾಂಡ್ ಅನ್ನು ಹೆಚ್ಚಿಸುವ ಟೆಲಿಕಾಂ ಇಲಾಖೆಯ ಪ್ರಸ್ತಾವನೆಯನ್ನು ಅಂಗೀಕರಿಸಿತ್ತು. ಡಿಜಿಟಲ್ ಸಂವಹನ ಮೂಲಸೌಕರ್ಯವನ್ನು ರಚಿಸುವ ರಾಷ್ಟ್ರೀಯ ಡಿಜಿಟಲ್ ಸಂವಹನ ನೀತಿಯ ಮುಂದುವರಿದ ಭಾಗ ಇದಾಗಿದೆ. ಸಾರ್ವಜನಿಕ ವೈ-ಫೈ ಹಾಟ್‌ಸ್ಪಾಟ್ ಪೂರೈಕೆದಾರರ ಮೂಲಕ ಬ್ರಾಡ್‌ಬ್ಯಾಂಡ್ ಒದಗಿಸುವುದು ಕೂಡಾ ಸರಕಾರದ ಉದ್ದೇಶವಾಗಿತ್ತು. ಇದಕ್ಕೆ ಒಟಿಪಿ ಮೂಲಕ ರಿಜಿಸ್ಟರ್ ಮಾಡುವುದು ಹಾಗೂ ಡಾಟಾಗಳ ಬಳಕೆಯ ಮೇಲೆ ನಿಗಾ ಇರಿಸುವ ವ್ಯವಸ್ಥೆಯನ್ನೂ ಹೊಂದಿದೆ. ಹೀಗಾಗಿ ದುರ್ಬಳಕೆ ತಡೆಗೆ ಸರಕಾರವೇ ವ್ಯವಸ್ಥೆ ಮಾಡಿದೆ.
ಪೇಸ್ ಬುಕ್ ಲಿಂಕ್ ಇದೆ ಆಸಕ್ತರು ಇಲ್ಲಿ ಮೆಸೇಜ್ ಮಾಡಬಹುದು….. ಮಾಹಿತಿ ಪಡೆಯಬಹುದು
https://m.facebook.com/oneaekanet/?tsid=0.19705065877718764&source=result