10 ಗ್ರಾಮಗಳಲ್ಲಿ ವ್ಯಾಪಿಸಿದೆ ಹಳದಿ ಮಹಾ ಮಾರಿ- ಹಸಿರು ತೋಟಗಳು ಇಲ್ಲಿ ಹಳದಿಯಾಗಿದೆ

January 9, 2020
9:18 AM

ಸುಳ್ಯ:  ಹಲವು ಗ್ರಾಮಗಳ ಅಡಕೆ ಕೃಷಿಯನ್ನು ಆಪೋಷನ ತೆಗೆದುಕೊಂಡು ಅಡಕೆ ಕೃಷಿಕರ ಬದುಕನ್ನು ಮೂರಾಬಟ್ಟೆ ಮಾಡಿದ ಹಳದಿ ಎಲೆ ರೋಗ ಎಂಬ ಮಹಾಮಾರಿ ಸುಳ್ಯ ತಾಲೂಕಿನ 10 ಕ್ಕೂ ಹೆಚ್ಚು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ತನ್ನ ಕದಂಬ ಬಾಹು ಚಾಚಿದೆ.

Advertisement

ಕಳೆದ ಕೆಲವು ವರ್ಷಗಳಿಂದ ಸುಳ್ಯ ತಾಲೂಕಿನ ಹಲವು ಗ್ರಾಮಗಳಲ್ಲಿ ವ್ಯಾಪಕವಾಗಿ ಮತ್ತು ಅತ್ಯಂತ ವೇಗವಾಗಿ ಹಳದಿ ಹರಡುತ್ತಿರುವುದು ಅಡಕೆ ಕೃಷಿಕರನ್ನು ಆತಂಕಕ್ಕೆ ತಳ್ಳಿದೆ. ಜೊತೆಗೆ ಹಲವು ಗ್ರಾಮಗಳಲ್ಲಿ ಹಳದಿ ಮಹಾ ಮಾರಿ ಹರಡುವ ಭೀತಿ ಎದುರಾಗಿದೆ. ಸುಮಾರು 25 ವರ್ಷಗಳ ಹಿಂದೆ ಸಂಪಾಜೆ ಭಾಗದಲ್ಲಿ ಕಾಣಿಸಿಕೊಂಡ ಹಳದಿ ಎಲೆ ರೋಗವು ಕಳೆದ ಕೆಲವು ವರ್ಷಗಳಿಂದ ಸುಳ್ಯ ತಾಲೂಕಿನ ಹಲವು ಗ್ರಾಮಗಳನ್ನು ಆಪೋಷನ ತೆಗೆದುಕೊಳ್ಳುತ್ತಿದೆ. ಇಡೀ ಗ್ರಾಮದ ತೋಟಗಳೇ ಹಳದಿಯಿಂದ ನಾಶವಾಗಿ ಹೋಗುತ್ತಿದೆ. ಸಂಪಾಜೆ, ಅರಂತೋಡು, ತೊಡಿಕಾನ, ಆಲೆಟ್ಟಿ, ಮರ್ಕಂಜ, ಮಡಪ್ಪಾಡಿ ಮತ್ತಿತರ ಗ್ರಾಮಗಳಲ್ಲಿನ ಅಡಕೆ ಕೃಷಿಯನ್ನು ಹಳದಿ ಎಲೆ ರೋಗ ಸಂಪೂರ್ಣ ನುಂಗಿ ಹಾಕಿದೆ. ಕೊಡಿಯಾಲ, ಉಬರಡ್ಕ ಮಿತ್ತೂರು, ಕೊಲ್ಲಮೊಗ್ರ, ಕಲ್ಮಕ್ಕಾರು, ನೆಲ್ಲೂರು ಕೆಮ್ರಾಜೆ, ಹರಿಹರ ಪಳ್ಳತ್ತಡ್ಕ ಗ್ರಾಮಗಳು ಹಳದಿಯ ಹೊಡೆತಕ್ಕೆ ಸಿಲುಕಿ ನಲುಗಿ ಹೋಗಿದೆ.

ಅಡಕೆಯನ್ನೇ ನಂಬಿ ಬದುಕು ಸಾಗಿಸುವ ಕೃಷಿ ಪ್ರಧಾನವಾದ ಸುಳ್ಯ ತಾಲೂಕಿನ ಹಲವು ಗ್ರಾಮಗಳಲ್ಲಿರುವ ಅಡಕೆ ಕೃಷಿಯನ್ನು ಪೂರ್ತಿಯಾಗಿ ಹಳದಿ ನುಂಗಿ ಹಾಕಿದರೆ ಕೆಲವು ಗ್ರಾಮಗಳ ಅಡಕೆ ಕೃಷಿಯ ಶೇ.50-60 ಭಾಗ ನಾಶವಾಗಿದ್ದು ನಾಶದ ಅಂಚಿನಲ್ಲಿದೆ. ಕೆಲವು ಗ್ರಾಮಗಳಲ್ಲಿ ಹಳದಿಯ ಜೊತೆಗೆ ಬೇರು ಹುಳ ರೋಗ ಬಾದೆ ಹರಡಿದೆ. ಒಟ್ಟಿನಲ್ಲಿ ಹಸಿರಿನಿಂದ ನಳ ನಳಿಸಿದ್ದ ತೋಟಗಳು ಹಸಿರು ಮಾಯವಾಗಿ ಈಗ ಹಳದಿಯಾಗಿದೆ.

 

ಕೃಷಿಕರ ಕಣ್ಣೀರು ಹರಿಸಿದ ಹಳದಿಯ ಹಾದಿ: ಸಂಪಾಜೆಯಲ್ಲಿ ಭಾಗದಲ್ಲಿ  ಸುಮಾರು 25 ವರ್ಷಗಳ ಹಿಂದೆ ಕಂಡು ಬಂದ ಹಳದಿ ರೋಗ ಬಾದೆಯು ಕೊಡಗು ಜಿಲ್ಲೆಯ ಸಂಪಾಜೆ, ಚೆಂಬು ಮತ್ತು ದ.ಕ.ಸಂಪಾಜೆ ಗ್ರಾಮದ ಅಡಕೆ ಕೃಷಿಯನ್ನು ಸಂಪೂರ್ಣ ನಾಶಪಡಿಸಿತು. ಬಳಿಕ ಸುಳ್ಯ ತಾಲೂಕಿನ ಒಂದೊಂದೇ ಗ್ರಾಮವನ್ನು ಆಫೋಷನ ತೆಗೆದುಕೊಳ್ಳುತ್ತಾ ಹೋಯಿತು. ಆರ್ಥಿಕತೆಯ ಆಧಾರ ಸ್ತಂಭವಾಗಿದ್ದ ಅಡಕೆ ಕೃಷಿ ನಾಶವಾದ ಕಾರಣ ಇಲ್ಲಿಯ ಕೃಷಿಕರು ಹಲವು ವರ್ಷಗಳಿಂದ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಭತ್ತದ ಗದ್ದೆಗಳಾಗಿದ್ದ ಪ್ರದೇಶವು ಕ್ರಮೇಣ ಅಡಕೆ ತೋಟಗಳಾಗಿ ಪರಿವರ್ತನೆಯಾಯಿತು. ಮಣ್ಣಿನಲ್ಲಿ ಬೆವರು ಸುರಿಸಿ ಅಡಕೆ ಬೆಳೆದಾಗ ಹಳದಿಯ ರೂಪದಲ್ಲಿ ಬರ ಸಿಡಿಲಿನಂತೆ ಅಪ್ಪಳಿಸಿದೆ. ಹಲವಾರು ವರ್ಷಗಳಿಂದ ಸುಳ್ಯ ತಾಲೂಕಿನ ಅಡಕೆ ಕೃಷಿಕರ ಕಣ್ಣೀರ ಕೋಡಿ ಹರಿಸಲು ಕಾರಣವಾಗುತ್ತಿರುವ ಹಳದಿ ರೋಗ ಇತ್ತೀಚಿನ ದಿನಗಳಲ್ಲಿ ವೇಗವಾಗಿ ಹರಡುತ್ತಿರುವುದು ಅಡಕೆಯನ್ನೇ ನಂಬಿರುವ ಕೃಷಿಕರಲ್ಲಿ ದಿಗಿಲು ಹುಟ್ಟಿಸಿದೆ.

Advertisement

 

ಏನಿದು ಹಳದಿ ಮಹಾ ಮಾರಿ.? ಹಳದಿ ಎಲೆ ಎಂಬುದು ಇತ್ತೀಚಿನ ವರ್ಷಗಳಲ್ಲಿ ಅಡಕೆಗೆ ಕಾಣಿಸಿಕೊಳ್ಳುವ ಮಾರಕ ರೋಗವಾಗಿದೆ. `ಫೈಟೋಪ್ಲಾಸ್ಮಾ’ ಎಂಬ ರೋಗಾಣುವಿನಿಂದ ಈ ರೋಗ ಉಂಟಾಗತ್ತದೆ. `ಪ್ರೋಟಿಸ್ಟಾ ಮೊಯಿಷ್ಟಾ’ ಈ ರೋಗವನ್ನು ಹರಡುತ್ತದೆ. ಅಡಕೆ ಬೆಳೆಯುವ ಪ್ರದೇಶಗಳಾದ ಕರ್ನಾಟಕದ ದಕ್ಷಿಣ ಕನ್ನಡ, ಚಿಕ್ಕಮಗಳೂರು, ಕೊಡಗು ಜಿಲ್ಲೆಯ ಭಾಗಗಳಲ್ಲಿ, ಕೇರಳ, ತಮಿಳುನಾಡು, ಮಹಾರಾಷ್ಟ್ರ ರಾಜ್ಯದ ಕೆಲವು ಭಾಗಗಳಲ್ಲಿ ಕಾಣಿಸಿಕೊಂಡಿದೆ. ಎಲ್ಲಾ ವಿಧದ ಮಣ್ಣಿನಲ್ಲಿಯೂ ಈ ರೋಗ ಬರುತ್ತದೆ. ರೋಗ ಕಾಣಿಸಿಕೊಂಡ ಮೂರು ವರ್ಷದಲ್ಲಿ ಶೇ.50ರಷ್ಟು ಇಳುವರಿ ಕಡಿಮೆಯಾಗುತ್ತದೆ. ಅಡಕೆ ಮರದ ಮಧ್ಯ ಸುತ್ತಿನಲ್ಲಿರುವ ಎಲೆಗಳು ತುದಿಯಿಂದ ಹಳದಿಯಾಗಲು ಆರಂಭಗೊಂಡು ನಂತರ ಪೂರ್ತಿಯಾಗಿ ಎಲೆಗಳನ್ನು ಆವರಿಸುತ್ತದೆ. ಕ್ರಮೇಣ ಹಳದಿ ಬಣ್ಣ ಎಲ್ಲಾ ಎಲೆಗಳನ್ನೂ ಆಕ್ರಮಿಸುತ್ತದೆ ಮತ್ತು ಎಲೆಗಳು ಒಣಗಿ ಕೆಳಗೆ ಬೀಳುತ್ತದೆ. ರೋಗ ತೀವ್ರಗೊಂಡಂತೆ ಅಡಕೆ ಮರದ ಎಲೆಗಳು ಸಣ್ಣದಾಗುತ್ತಾ ಬಂದು ಮರದ ತುದಿಯ ಗಾತ್ರ ಚಿಕ್ಕದಾಗುತ್ತದೆ. ಕಾಯಿಗಳ ಗಾತ್ರವೂ ಕಿರಿದಾಗುತ್ತದೆ ಮತ್ತು ಬೆಳೆಯುವ ಮೊದಲೇ ಉದುರಿ ಬೀಳುತ್ತದೆ. ಕಾಯಿಗಳ ತಿರುಳು ಮೆದುವಾಗಿದ್ದು ಕಪ್ಪು ಬಣ್ಣಕ್ಕೆ ತಿರುಗಿ ಸ್ಪಂಜಿನಂತಹಾ ರಚನೆ ಕಾಣಿಸಿಕೊಳ್ಳುತ್ತದೆ. ಬೇರುಗಳ ಉತ್ಪಾದನೆ ಕುಂಟಿತವಾಗುತ್ತದೆ. ಇರುವ ಬೇರುಗಳು ಕೊಳೆತು ಹೋಗಿ ಅಡಕೆ ಮರ ಸಾಯುತ್ತದೆ. ಈ ರೋಗವನ್ನು ನಿಯಂತ್ರಿಸಲು ಸರಿಯಾದ ಪರಿಹಾರ ಇನ್ನೂ ಕಂಡುಕೊಳ್ಳಲು ಸಾಧ್ಯವಾಗಿಲ್ಲ. ರೋಗ ತಗುಲಿದ ಮೇಲೆ ಸರಿಯಾದ ನಿರ್ವಹಣಾ ಕ್ರಮದಿಂದ ಸ್ವಲ್ಪ ವರ್ಷಗಳ ಕಾಲ ಮರವನ್ನು ಉಳಿಸಬಹುದಷ್ಟೇ ಸಾಧ್ಯ ಎನ್ನುತ್ತಾರೆ ವಿಜ್ಞಾನಿಗಳು.

 

ಕೃಷಿ ನಾಶದ ಬಗ್ಗೆ ನಿಖರ ಮಾಹಿತಿ ಇಲ್ಲ: ಅಡಕೆ ಕೃಷಿಯನ್ನೇ ನಂಬಿ ಬದುಕುವ ಸುಳ್ಯ ತಾಲೂಕಿನಲ್ಲಿ 16,824 ಹೆಕ್ಟೇರ್ ಅಡಕೆ ಕೃಷಿ ಇದೆ. ಅದರಲ್ಲಿ 12ಕ್ಕೂ ಹೆಚ್ಚು ಗ್ರಾಮಗಳಲ್ಲಿ ಹಳದಿ ರೋಗ ತಾಂಡವಾಡಿದೆ. ಆದರೆ ಎಷ್ಟು ಪ್ರದೇಶ ಅಡಕೆ ಹಳದಿಯಿಂದ ನಾಶವಾಗಿದೆ ಎಂಬ ನಿಖರವಾದ ಅಂಕಿ ಅಂಶ ಲಭ್ಯವಿಲ್ಲ. ಸುಮಾರು 2500 ಹೆಕ್ಟೇರ್ ಪ್ರದೇಶದಲ್ಲಿ ಅಡಕೆ ಕೃಷಿ ಹಳದಿ ರೋಗದಿಂದ ನಾಶವಾಗಿರುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ. ಹಳದಿ ರೋಗದಿಂದ ಅಡಕೆ ಕೃಷಿ ನಾಶವಾದ ಪ್ರದೇಶದ ನಿಖರವಾದ ಅಂಕಿ ಅಂಶ ತಿಳಿಯಲು ಡಿ.30ರಿಂದ ಹಳದಿ ಬಾದಿತ ಪ್ರದೇಶದ ಸಮೀಕ್ಷೆ ಆರಂಭಗೊಳ್ಳಲಿದೆ.

Advertisement
Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹಲಸಿನ ಬೀಜದ ಖಾರಾ ಸೇವ್‌ – ನೀವೂ ಮಾಡಿನೋಡಿ
July 13, 2025
10:15 PM
by: The Rural Mirror ಸುದ್ದಿಜಾಲ
ರಾಜ್ಯಾದ್ಯಂತ ಲಕ್ಷ ವೃಕ್ಷ ಗಿಡಗಳ ನಾಟಿ ಕಾರ್ಯಕ್ರಮ | ಹೆಬ್ರಿಯ ಉದ್ಯಾನವನದಲ್ಲಿ ಗಿಡ ನೆಡುವ ಮೂಲಕ ಚಾಲನೆ
July 13, 2025
7:50 AM
by: The Rural Mirror ಸುದ್ದಿಜಾಲ
ಮಾರುಕಟ್ಟೆ ಶುಲ್ಕ ಬದಲಾವಣೆ ಮಾಡಬಾರದೆಂಬ ಕ್ಯಾಂಪ್ಕೋ ಬೇಡಿಕೆ ಪರಿಗಣನೆ
July 12, 2025
7:32 AM
by: The Rural Mirror ಸುದ್ದಿಜಾಲ
ಕೋಲಾರದಲ್ಲಿ ಸಾರ್ವಜನಿಕರು ಎಲ್ಲೆಂದರಲ್ಲಿ ಕಸ ಎಸೆದರೆ ಕ್ರಿಮಿನಲ್‌ ಕೇಸು – ಎಚ್ಚರಿಕೆ
July 11, 2025
7:22 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group