ರಾಜ್ಯದಲ್ಲಿ ಅಡಿಕೆ ಮಾರುಕಟ್ಟೆ ಮತ್ತು ಬೆಳೆಗಾರರ ನಡುವೆ ಆತಂಕ ಮೂಡಿಸಿರುವ ರೀತಿಯಲ್ಲಿ, ಕೋಲಾರದಿಂದ ಬೆಂಗಳೂರಿಗೆ ಸಾಗಿಸಲಾಗುತ್ತಿದ್ದ ಸುಮಾರು 10 ಟನ್ ಸಿಂಥೆಟಿಕ್ ಅಡಿಕೆಯನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ. ಅಡಿಕೆಗೆ ಅಪಾಯಕಾರಿ ಬಣ್ಣಗಳನ್ನು ಮಿಶ್ರಣ ಮಾಡಿರುವ ಸಾಧ್ಯತೆಯ ಬಗ್ಗೆಯೂ ಅಧಿಕಾರಿಗಳು ಗಮನ ಹರಿಸಿದ್ದಾರೆ.
ರಾಜ್ಯದಲ್ಲಿ ಪಾನ್ ಮಸಾಲಾ, ಗುಟ್ಕಾ ಸೇರಿದಂತೆ ವಿವಿಧ ಉತ್ಪನ್ನಗಳಿಗೆ ಅಡಿಕೆಯ ಬಳಕೆ ಇರುವ ಹಿನ್ನೆಲೆಯಲ್ಲಿ, ಹೊರಗಿನಿಂದ ಅಕ್ರಮವಾಗಿ ತರಲಾಗುತ್ತಿರುವ ಅಥವಾ ಕೃತಕವಾಗಿ ತಯಾರಿಸಲಾಗುತ್ತಿರುವ ಅಡಿಕೆ ನಿಜವಾದ ಅಡಿಕೆ ಬೆಳೆಗಾರರ ಮಾರುಕಟ್ಟೆ ಮೇಲೆ ಪರಿಣಾಮ ಬೀರುವ ಆತಂಕವಿದೆ.
ಕೋಲಾರ ಸಮೀಪದ ಚೆಕ್‌ಪೋಸ್ಟ್‌ನಲ್ಲಿ ಬೆಂಗಳೂರಿಗೆ ಸಾಗಿಸಲಾಗುತ್ತಿದ್ದ ಅಡಿಕೆಯನ್ನು ಅಧಿಕಾರಿಗಳು ಪರಿಶೀಲಿಸಿದಾಗ ಈ ಅಡಿಕೆ ಪತ್ತೆಯಾಗಿದೆ. ಸುಮಾರು 10 ಟನ್ ತೂಕದ ಅಡಿಕೆಯನ್ನು ವಶಪಡಿಸಿಕೊಳ್ಳಲಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿ ಆರೋಗ್ಯ ಸಚಿವ ಯು ಟಿ ಖಾದರ್ ಅವರ ಸೂಚನೆಯಂತೆ ತನಿಖೆ ನಡೆಸಲಾಗುತ್ತಿದೆ ಎಂದು ವರದಿಯಾಗಿದೆ. ಆಹಾರ ಉತ್ಪನ್ನಗಳಲ್ಲಿ ಬಳಸುವ ಬಣ್ಣಗಳು ಮತ್ತು ಅವುಗಳ ಸುರಕ್ಷತೆ ಕುರಿತಂತೆಯೂ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ವಶಪಡಿಸಿಕೊಂಡ ಅಡಿಕೆಯಲ್ಲಿ ವಿವಿಧ ರೀತಿಯ ಬಣ್ಣಗಳ ಬಳಕೆಯಾಗಿರುವುದು ಕಂಡುಬಂದಿದ್ದು, ಇಂತಹ ವಸ್ತುಗಳು ಗ್ರಾಹಕರ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದೆ.
ಅಡಿಕೆ ಬೆಳೆಗಾರರಿಗೆ ಏಕೆ ಆತಂಕ? : ಅಡಿಕೆ ಮಾರುಕಟ್ಟೆಯಲ್ಲಿ ಈಗಾಗಲೇ ಆಮದು ಅಡಿಕೆ, ಅಕ್ರಮ ಸಾಗಾಟ ಮತ್ತು ಕಡಿಮೆ ಗುಣಮಟ್ಟದ ಅಡಿಕೆಯ ವಿಚಾರಗಳು ಚರ್ಚೆಯಲ್ಲಿವೆ. ಇಂತಹ ಸಂದರ್ಭದಲ್ಲಿ ಸಿಂಥೆಟಿಕ್ ಅಥವಾ ಕೃತಕವಾಗಿ ತಯಾರಿಸಿದ , ರಾಸಾಯನಿಕ ಮಿಶ್ರಿತ ಅಡಿಕೆ ಮಾರುಕಟ್ಟೆಗೆ ಪ್ರವೇಶಿಸಿದರೆ, ಗುಣಮಟ್ಟದ ಅಡಿಕೆ ಉತ್ಪಾದಿಸುವ ರೈತರಿಗೆ ಮಾರುಕಟ್ಟೆಯಲ್ಲಿ ಅನ್ಯಾಯದ ಸ್ಪರ್ಧೆ ಎದುರಾಗುವ ಸಾಧ್ಯತೆ ಇದೆ.
ಆದ್ದರಿಂದ ವಶಪಡಿಸಿಕೊಂಡಿರುವ ಅಡಿಕೆಯ ಮೂಲ, ಸಾಗಾಟದ ಜಾಲ, ಅದರಲ್ಲಿ ಬಳಸಿರುವ ವಸ್ತುಗಳು ಹಾಗೂ ಮಾರುಕಟ್ಟೆಯಲ್ಲಿ ಅದರ ವಿತರಣೆಯ ಕುರಿತು ಸಮಗ್ರ ತನಿಖೆ ನಡೆಯಬೇಕಿದೆ, ಈಗಲೇ ಸಿಂಥೆಟಿಕ್ ಅಡಿಕೆಯೇ ಎನ್ನುವಂತಿಲ್ಲ ಎಂದೂ ಅಧಿಕಾರಿಗಳು ಹೇಳಿದ್ದಾರೆ. ಪ್ರಕರಣದ ಸಂಪೂರ್ಣ ವಿವರ ತನಿಖೆಯ ಬಳಿಕವೇ ಸ್ಪಷ್ಟವಾಗಲಿದೆ.
Around 10 tonnes of synthetic or “China areca nut” allegedly mixed with artificial colours were seized near Kolar while being transported towards Bengaluru, according to the newspaper report. The authorities are investigating the source and supply network, while the incident has raised concerns about consumer safety and the possible impact of such products on genuine areca nut growers and the market.


