ರಾಜ್ಯದಲ್ಲಿ ನಿನ್ನೆ ಸಂಜೆಯಿಂದ 108 ಆಂಬ್ಯುಲೆನ್ಸ್ ಸೇವೆ ವ್ಯತ್ಯಯವಾಗಿದೆ. ತಾಂತ್ರಿಕ ಕಾರಣಗಳಿಂದ 108 ಸೇವೆಗೆ ಕರೆ ಹೋಗುತ್ತಿಲ್ಲ. ಹೀಗಾಗಿ ನಿನ್ನೆ ಸಂಜೆಯಿಂದ 108 ಆರೋಗ್ಯ ಕವಚ ಕರೆ ರಿಸೀವ್ ಆಗದೇ ಸಾರ್ವಜನಿಕರು ಪರದಾಟ ನಡೆಸಿದ್ದಾರೆ. ಗ್ರಾಮೀಣ ಭಾಗದಲೂ ಆರೋಗ್ಯ ಸೇವೆಗೆ ಜನರು ಸಂಕಷ್ಟ ಅನುಭವಿಸಿದರು.
ನಿನ್ನೆ ಸಂಜೆಯಿಂದ 108 ಅಂಬುಲೆನ್ಸ್ ಸೇವೆಯಲ್ಲಿ ವ್ಯತ್ಯಯ ಉಂಟಾಗಿ ಜನರಿಗೆ ಸಮಸ್ಯೆ ಎದುರಾಗಿದೆ. ತಾಂತ್ರಿಕ ಸಮಸ್ಯೆಯಿಂದ 108 ಸೇವೆ ಸಿಗುತ್ತಿಲ್ಲ ಎಂದು ಹೇಳಲಾಗಿದೆ. ಅಪಘಾತ, ವಿಷ ಸೇವನೆ, ಹೆರಿಗೆ ಪ್ರಕರಣ ಸೇರಿದಂತೆ ಅನೇಕ ತುರ್ತು ಚಿಕಿತ್ಸೆಗೆ ಸೂಕ್ತ ಸಮಯಕ್ಕೆ 108 ಆಂಬ್ಯುಲೆನ್ಸ್ ಸಿಗದೇ ಪರದಾಟ ನಡೆಸಿದ್ದಾರೆ. ಈ ಸಂಬಂಧ ಜಿವಿಕೆ ಟೆಕ್ನಿಕಲ್ ಟೀಂ ಪ್ರತಿಕ್ರಿಯಿಸಿ, 108 ಸೇವೆಯಲ್ಲಿ ತಾಂತ್ರಿಕ ಸಮಸ್ಯೆ ಆಗಿರುವುದು ನಿಜ. ಸರ್ವರ್ ಪ್ರಾಬ್ಲಂನಿಂದ ಕರೆ ಸ್ವೀಕರಿಸಲಾಗುತ್ತಿಲ್ಲ ಎಂದು ಸ್ಪಷ್ಟನೆ ನೀಡಿದೆ. ರಾಜ್ಯಾದ್ಯಂತ ದಿನಕ್ಕೆ ಸುಮಾರು 8 ಸಾವಿರ ಕರೆಗಳು 108 ಗೆ ಹೋಗುತ್ತವೆ. 8 ಸಾವಿರ ಕರೆಗಳಲ್ಲಿ 2 ಸಾವಿರ ಪ್ರಕರಣಗಳು ಗಂಭೀರ ಆಗಿರುತ್ತವೆ. ಆದರೆ ಈ ಅಂಬುಲೆನ್ಸ್ ಸೇವೆ ಸಿಗದೇ ಇದ್ದರೆ 2 ಸಾವಿರ ಗಂಭೀರ ಪ್ರಕರಣಗಳಲ್ಲಿ ಸಾವು ನೋವಾಗುವ ಸಾಧ್ಯತೆ ಹೆಚ್ಚಿರುತ್ತೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, 108 ಆ್ಯಂಬುಲೆನ್ಸ್ ಸೇವೆ ಸ್ಥಗಿತವಾಗಿರುವ ಬಗ್ಗೆ ಮಾಹಿತಿ ಪಡೆಯುತ್ತೇನೆ. ಕೂಡಲೇ 108 ಆ್ಯಂಬುಲೆನ್ಸ್ ಸೇವೆ ಆರಂಭಿಸಲು ಸೂಚಿಸಿರುವೆ. ಕುಟುಂಬ ಮತ್ತು ಕಲ್ಯಾಣ ಇಲಾಖೆಗೆ ಸೂಚನೆ ನೀಡಿದ್ದೇನೆ ಎಂದು ತಿಳಿಸಿದ್ದಾರೆ.