ಸುಳ್ಯ: ಸುಳ್ಯಕ್ಕೆ 110 ಕೆ.ವಿ.ವಿದ್ಯುತ್ ಸಬ್ ಸ್ಟೇಷನ್ ಅನುಷ್ಠಾನಕ್ಕೆ ವೇಗ ದೊರಕುವ ನಿಟ್ಟಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಮಂಗಳೂರಿನಲ್ಲಿ ಸಭೆ ನಡೆಯಲಿದೆ ಎಂದು ಶಾಸಕ ಎಸ್.ಅಂಗಾರ ಹೇಳಿದ್ದಾರೆ.
ಸುಳ್ಯ ಮತ್ತು ಸುಬ್ರಹ್ಮಣ್ಯ ಉಪ ವಿಭಾಗಗಳ ಮೆಸ್ಕಾಂ ಜನ ಸಂಪರ್ಕ ಸಭೆಯಲ್ಲಿ ಅವರು ಮಾತನಾಡಿದರು. ಸಭೆಯಲ್ಲಿ ಮಾಹಿತಿ ನೀಡಿದ ಕೆಪಿಟಿಸಿಎಲ್ ಬೃಹತ್ ಕಾಮಗಾರಿ ಘಟಕದ ಕಾರ್ಯನಿರ್ವಾಹಕ ಇಂಜಿನಿಯರ್ ಗಂಗಾಧರ ವಿದ್ಯುತ್ ಲೈನ್ ಕಾಮಗಾರಿಗಾಗಿ 8.9 ಹೆಕ್ಟೇರ್ ಸ್ಥಳದ ಅನುಮತಿಗಾಗಿ ಅರಣ್ಯ ಇಲಾಖೆಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲಾಗಿದೆ. ಇದರ ಕ್ಷೇತ್ರ ಕಾರ್ಯ ಮತ್ತಿತರ ಪ್ರಕ್ರಿಯೆಗಳು ನಡೆಯುತಿದೆ. ಅಲ್ಲದೆ 4.11 ಹೆಕ್ಟೇರ್ ಖಾಸಗೀ ಡೀಮ್ಡ್ ಫಾರೆಸ್ಟ್ ಭೂಮಿಗಾಗಿ ಮತ್ತೆ ಅನುಮತಿ ಪಡೆಯುವಂತೆ ಅರಣ್ಯ ಇಲಾಖೆ ಸೂಚಿಸಿದೆ ಎಂದು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಎಸ್.ಅಂಗಾರ 110 ಕೆ.ವಿ.ವಿದ್ಯುತ್ ಲೈನ್‍ನ ಎಲ್ಲಾ ಸಮಸ್ಯೆಗಳ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತರಲಾಗಿದೆ. ಈ ಕುರಿತು ಚಚಿಸಲು ಜ.24 ಅಥವಾ 25 ರಂದು ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳ ಸಭೆಯನ್ನು ಮಂಗಳೂರಿನಲ್ಲಿ ಕರೆಯಲಾಗುವುದು. ಅಲ್ಲದೆ ವಿದ್ಯುತ್‍ಲೈನ್ ಕಾಮಗಾರಿಯ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೂ ತರಲಾಗುವುದು ಎಂದು ಹೇಳಿದರು.
ಭಾಗ್ಯಜ್ಯೋತಿ ಯೋಜನೆಯಡಿಯಲ್ಲಿ ಎಸ್‍ಸಿ ಮತ್ತು ಎಸ್‍ಟಿ ವಿಭಾಗಕ್ಕೆ ಉಚಿತ ವಿದ್ಯುತ್ ಎಂದು ಘೋಷಿಸಿದ್ದರೂ ಈಗ ಸಾವಿರಾರು ರೂಗಳ ಬಿಲ್ ಬಂದಿದೆ ಎಂದು ಸೋಮಶೇಖರ ಕೊಯಿಂಗಾಜೆ ಹೇಳಿದರು. ಇದಕ್ಕೆ ಉತ್ತರಿಸಿದ ಮೆಸ್ಕಾಂ ಅಧೀಕ್ಷಕ ಇಂಜಿನಿಯರ್ ಮಂಜಪ್ಪ. 40 ಯೂನಿಟ್ ವಿದ್ಯುತ್ ಮಾತ್ರ ಉಚಿತ. 40 ಯೂನಿಟ್‍ಗಿಂತ ಹೆಚ್ಚಾದರೆ ಬಿಲ್ ಪಾವತಿ ಮಾಡಬೇಕು. ಸಾವಿರಾರು ರೂ ಹೇಗೆ ಬಿಲ್ ಬಂದಿದೆ ಎಂಬುದರ ಬಗ್ಗೆ ಪರಿಶೀಲನೆ ನಡೆಸುವುದಾಗಿ ಹೇಳಿದರು. ಜಾಲ್ಸೂರಿನಲ್ಲಿ ಮೆಸ್ಕಾಂ ಸೆಕ್ಷನ್‍ಗೆ 2015ರಲ್ಲಿಯೇ ಅನುಮತಿ ನೀಡಿದ್ದರೂ ಇನ್ನೂ ಆರಂಭಿಸಿಲ್ಲ. ಅದನ್ನು ಕೂಡಲೇ ಆರಂಭಿಸಬೇಕು ಎಂದು ಪದ್ಮನಾಭ ಭಟ್ ಕನಕಮಜಲು ಆಗ್ರಹಿಸಿದರು. ಜಾಲ್ಸೂರು ಸೆಕ್ಷನ್‍ಗೆ ಸೇರ್ಪಡೆ ಮಾಡಿರುವುದಕ್ಕೆ ಅಜ್ಜಾವರ, ಅಮರಮುಡ್ನೂರು, ಉಬರಡ್ಕ ಮಿತ್ತೂರು ಗ್ರಾಮಗಳ ವಿರೋಧ ಇದೆ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಹರೀಶ್ ಕಂಜಿಪಿಲಿ ಹೇಳಿದರು. ಈ ಕುರಿತು ಚರ್ಚೆ ನಡೆದು ವಿರೋಧ ಇರುವ ಗ್ರಾಮಗಳನ್ನು ಹೊರತುಪಡಿಸಿ ಕನಕಮಜಲು, ಜಾಲ್ಸೂರು ಮತ್ತಿತರ ಬೆಂಬಲಿಸುವ ಗ್ರಾಮಸ್ಥರ ಬೇಡಿಕೆಯಂತೆ ಸೆಕ್ಷನ್ ಕಾರ್ಯಾರಂಭ ಮಾಡಬೇಕು ಎಂದು ಪದ್ಮನಾಭ ಭಟ್ ಹೇಳಿದರು.
ಎಲಿಮಲೆ ಭಾಗದವರನ್ನು ಸುಬ್ರಹ್ಮಣ್ಯ ಉಪವಿಭಾಗಕ್ಕೆ ಸೇರಿಸಿರುವುದರಿಂದ ಸುಬ್ರಹ್ಮಣ್ಯಕ್ಕೆ ಹೋಗಿ ಬಿಲ್ ಪಾವತಿ ಮಾಡುವುದು ಸಮಸ್ಯೆ ಆಗುತಿದೆ. ಅವರನ್ನು ಸುಳ್ಯಕ್ಕೆ ಸೇರ್ಪಡೆ ಮಾಡಿ ಎಂದು ಶೈಲೇಶ್ ಅಂಬೆಕಲ್ಲು ಒತ್ತಾಯಿಸಿದರು. ಬೆಳ್ಳಾರೆ ಸೆಕ್ಷನ್ ಹತ್ತಿರ ಇದ್ದರೂ ಸುಬ್ರಹ್ಮಣ್ಯಕ್ಕೆ ಬಿಲ್ ಪಾವತಿಗೆ ಹೋಗಲು ಗ್ರಾಹಕರಿಗೆ ಸಮಸ್ಯೆ ಉಂಟಾಗಿದೆ. ಆದುದರಿಂದ ಗ್ರಾಹಕರಿಗೆ ಅನುಕೂಲ ಆಗುವ ರೀತಿಯಲ್ಲಿ ಬಿಲ್ ಪಾವತಿಗೆ ಕ್ರಮ ಕೈಗೊಳ್ಳಬೇಕು ಎಂದು ಶಂಕರನಾರಾಯಣ ಕುಂಞಹಿತ್ಲು ಆಗ್ರಹಿಸಿದರು. ಈ ಕುರಿತು ಸಭೆಯಲ್ಲಿ ಚರ್ಚೆ ನಡೆಯಿತು. ಬಿಲ್ ಆನ್‍ಲೈನ್ ಪಾವತಿಗೆ ಗ್ರಾಹಕರಿಗೆ ವ್ಯವಸ್ಥೆ ಮಾಡಲಾಗುವುದು ಎಂದು ನಂಜಪ್ಪ ಹೇಳಿದರು. ಬೆಳ್ಳಾರೆ ಸೆಕ್ಷನ್‍ನಲ್ಲಿ 380 ಟಿಸಿ ಇದ್ದು ನಿರ್ವಹಣೆಗೆ ಸಮಸ್ಯೆ ಆಗುತಿದೆ. ಆದುದರಿಂದ ಬೆಳ್ಳಾರೆ ಸೆಕ್ಷನ್ ವಿಭಜನೆ ಮಾಡಬೇಕು ಎಂದು ಸಚಿನ್‍ರಾಜ್ ಶೆಟ್ಟಿ ಒತ್ತಾಯಿಸಿದರು. ಸಂಪಾಜೆ ಸಬ್‍ಸ್ಟೇಷನ್ ಮಂಜೂರು ಪ್ರಕ್ರಿಯೆ ಯಾವ ಹಂತದಲ್ಲಿದೆ ಎಂಬ ಬಗ್ಗೆ ಜಿ.ಕೆ.ಹಮೀದ್ ಪ್ರಶ್ನಿಸಿದರು. ತಾಲೂಕಿನ ವಿವಿಧೆಡೆ ಟಿಸಿ ಅಳವಡಿಕೆ, ದುರಸ್ಥಿ ಮತ್ತಿತರ ಸಮಸ್ಯೆಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು.
ಜನಪ್ರತಿನಿಧಿಗಳಿಗೆ ಮೆಸ್ಕಾಂ ಜನಸಂಪರ್ಕ ಸಭೆಯ ಮಾಹಿತಿ ನೀಡಿಲ್ಲ ಎಂದು ತಾ.ಪಂ.ಸ್ಥಾಯಿ ಸಮಿತಿ ಅಧ್ಯಕ್ಷೆ ಜಾಹ್ನವಿ ಕಾಂಚೋಡು ಮತ್ತು ಸದಸ್ಯ ರಾಧಾಕೃಷ್ಣ ಬೊಳ್ಳೂರು ಪ್ರಶ್ನಿಸಿದರು. ಜನಸಂಪರ್ಕ ಸಭೆಯಲ್ಲಿ ಬಂದ ಎಲ್ಲಾ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಿ ಅದರ ಪರಿಹಾರ ಆಗಬೇಕು. ಆಗ ಮಾತ್ರ ಜನರಿಗೆ ಜನಸಂಪರ್ಕ ಸಭೆಯ ಬಗ್ಗೆ ಜನರಿಗೆ ನಂಬಿಕೆ ಬರುತ್ತದೆ ಎಂದು ಶಾಸಕ ಎಸ್.ಅಂಗಾರ ಹೇಳಿದರು.
ತಾ.ಪಂ.ಉಪಾಧ್ಯಕ್ಷೆ ಶುಭದಾ ಎಸ್.ರೈ, ಸದಸ್ಯರಾದ ಯಶೋಧಾ ಬಾಳೆಗುಡ್ಡೆ, ಪುಷ್ಪಾ ಮೇದಪ್ಪ, ಮೆಸ್ಕಾಂ ಪುತ್ತೂರು ವಿಭಾಗದ ಕಾರ್ಯನಿರ್ವಾಹಕ ಅಭಿಯಂತರಾದ ನರಸಿಂಹ, ಕೆಪಿಟಿಸಿಎಲ್ ಸಹಾಯಕ ಇಂಜಿನಿಯರ್ ಬಸವರಾಜ್, ಸುಳ್ಯ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್(ಪ್ರಭಾರ) ಹರೀಶ್, ಸುಬ್ರಹ್ಮಣ್ಯ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್(ಪ್ರಭಾರ) ಚಿದಾನಂದ ಸುಳ್ಯ ಮತ್ತು ಸುಬ್ರಹಮಣ್ಯ ಉಪವಿಭಾಗಗಳ ಇಂಜಿನಿಯರ್ ಗಳು ಉಪಸ್ಥಿತರಿದ್ದರು.