ಸೆಪ್ಟೆಂಬರ್ 20, 2019. ಪಂಜಾಬ್ ನ ಫೈಸಲಾಬಾದ್ ನ ಗ್ರಾಮವೊಂದರಲ್ಲಿ ಮೀರಾಬಾಯಿ ಅವರ ಮನೆಯಲ್ಲಿ ಹಬ್ಬದ ವಾತಾವರಣ. ಕಳೆದ 15 ವರ್ಷಗಳಿಂದ ಮನೆಯಿಂದ ದೂರವಾಗಿ ಕಾಣೆಯಾಗಿದ್ದ ಮನೆ ಯಜಮಾನ ವಿಂದುಪ್ರಸಾದ್ ಯಾದವ್ ಪುನಃ ಮನೆ ಸೇರಿದ ಸಂತಸದ ದಿನವದು. ಈ ಸಂದರ್ಭದಲ್ಲಿ ಮನೆ ಮಂದಿಯೆಲ್ಲ ಕೃತಜ್ಞತಾ ಪೂರ್ವಕವಾಗಿ ಅಭಿನಂದಿಸುತ್ತಿರುವುದು ದೈಗೋಳಿಯ ಸಾಯಿನಿಕೇತನ ಸೇವಾಶ್ರಮವನ್ನು.
15 ವರ್ಷಗಳ ಹಿಂದೆ ಕೃಷಿಕರಾಗಿದ್ದ ವಿಂದೂ ಪ್ರಸಾದ್ ಯಾದವ್ ಮಾನಸಿಕ ವಿಕಲಚೇತನರಾದ ಕಾರಣದಿಂದ ತಮ್ಮ ಊರನ್ನು ಬಿಟ್ಟು ಹೋಗಿದ್ದರು.ಅವರ ಕುಟುಂಬಸ್ಥರು ಪೋಲಿಸ್ ಠಾಣೆಯಲ್ಲಿ ದೂರು ನೀಡಿ ಸಾಕಷ್ಟು ಹುಡುಕಿದರೂ ಪ್ರಯೋಜನವಾಗಲಿಲ್ಲ. ಇದೀಗ ಒಂದು ತಿಂಗಳ ಹಿಂದೆ ದಿಢೀರನೆ ಪೋಲೀಸ್ ಸ್ಟೇಷನ್ ನಿಂದ ಬಂದ ಫೋನ್ ಕಾಲ್ ಆಧರಿಸಿ ಕಾಣಚ್ಚೂರು ಆಸ್ಪತ್ರೆಯ ಮಾನಸಿಕ ವಿಭಾಗಕ್ಕೆ ಬಂದ ಅವರ ಮಗ ಮಿಸ್ರೀಲಾಲರಿಗೆ ತಮ್ಮ ತಂದೆಯನ್ನು ಕಂಡು ಅತೀವ ಸಂತಸ. ಆದರೆ 15 ವರ್ಷಗಳ ಹಿಂದೆ ನೋಡಿದ್ದ ಮಾನಸಿಕ ರೋಗಿ ತತ್‍ಕ್ಷಣ ತನ್ನ ಮಗನನ್ನು ಗುರುತಿಸಲಿಲ್ಲ. ಮುಂದಿನ ಒಂದು ತಿಂಗಳ ಚಿಕಿತ್ಸೆಯ ನಂತರ ಇದೀಗ ವಿಂದುಪ್ರಸಾದ್ ತನ್ನ ಮನೆಗೆ ಹೋಗಲು ಸಮ್ಮತಿಸಿದ್ದು ದಿಲ್ಲಿಯಲ್ಲಿ ಕೆಲಸ ಮಾಡುತ್ತಿರುವ ಮಿಸ್ರೀಲಾಲ್ ತನ್ನ ತಂದೆ ಯನ್ನು ಮನೆಗೆ ಕರೆದೊಯ್ದಿದ್ದಾರೆ.
ಹೀಗಾಯಿತು ಇದು :ಊರು ಬಿಟ್ಟು ಎಲ್ಲೆಲ್ಲೋ ಅಲೆದಾಡುತ್ತಿದ್ದ ವಿಂದೂ ಪ್ರಸಾದ್ ಕಳೆದ ಆರು ತಿಂಗಳ ಹಿಂದೆ ಮಂಜೇಶ್ದರ ಅಸುಪಾಸಿನಲ್ಲಿ ತಿರುಗಾಡುತ್ತಿದ್ದ ವಿಚಾರ ತಿಳಿದು ದೈಗೋಳಿಯ ಸಾಯಿ ನಿಕೇತನ ಸೇವಾಶ್ರಮದ ಮುಖ್ಯಸ್ಥ ಡಾ. ಉದಯಕುಮಾರ್ ಅವರನ್ನು ಕರೆತಂದು, ಆರೈಕೆ, ಔಷಧೋಪಚಾರ ನೀಡಿ ಸಲಹಿದರು.
ಹೆಚ್ಚಿನ ಮಾನಸಿಕ ಚಿಕಿತ್ಸೆಗಾಗಿ ಅವರನ್ನು ಕಾಣಚ್ಚೂರು ಆಸ್ಪತ್ರೆಗೆ ಸೇರಿಸಲಾಯಿತು. ಅಲ್ಲಿಯ ಡಾ.ಪ್ರದ್ಯುಮ್ನ ಹಾಗೂ ತಂಡದವರ ಚಿಕಿತ್ಸಾ ಸಮಯದಲ್ಲಿ ಅವರು ನೀಡಿದ ಮಾಹಿತಿಯನುಸಾರ ಪೋಲಿಸರ ಸಹಕಾರದಿಂದ ಮನೆ ಮಂದಿಯನ್ನು ಪತ್ತೆ ಹಚ್ಚಲಾಯಿತು.
ಇಂತಹ ಮಾನವೀಯ ಕಾರ್ಯದ ಕಡೆಗೆ ಬೆಳಕು ನೀಡುತ್ತಿರುವ ಸಾಯಿನಿಕೇತನ ಸೇವಾಶ್ರಮ ಈಗ ಮಾದರಿ ಎನಿಸಿದೆ.