ಭಾರೀ ಮಳೆಯಿಂದಾಗಿ ಉತ್ತರ ಭಾರತದ ಹಲವಾರು ಭಾಗಗಳಲ್ಲಿ ಭೂಕುಸಿತ, ಪ್ರವಾಹದ ಕಂಡುಬಂದಿದೆ. ನದಿಗಳು ಉಕ್ಕಿ ಹರಿಯುತ್ತಿದ್ದು, ಈಗಿನ ಮಾಹಿತಿ ಪ್ರಕಾರ 15 ಮಂದಿ ಸಾವನ್ನಪ್ಪಿದ್ದಾರೆ ಎಂದು ಸುದ್ದಿಸಂಸ್ಥೆ ಪಿಟಿಐ ವರದಿ ಮಾಡಿದೆ.
ಭಾನುವಾರ ಉತ್ತರ ಭಾರತದ ಹಲವು ಭಾಗಗಳಲ್ಲಿ ಧಾರಾಕಾರ ಮಳೆ ಸುರಿದಿದ್ದು, ಭೂಕುಸಿತ ಮತ್ತು ಇತರ ಮಳೆ ಸಂಬಂಧಿತ ಘಟನೆಗಳಲ್ಲಿ 15 ಜನರು ಸಾವನ್ನಪ್ಪಿದ್ದಾರೆ. ದೆಹಲಿಯ ಯಮುನಾ ಸೇರಿದಂತೆ ಹೆಚ್ಚಿನ ನದಿಗಳು ಉಕ್ಕಿ ಹರಿಯುತ್ತಿವೆ. ದಾಖಲೆ ಪ್ರಮಾಣದ ಮಳೆಯ ಕಾರಣದಿಂದ ಅನೇಕ ರಸ್ತೆಗಳು ಮತ್ತು ವಸತಿ ಪ್ರದೇಶಗಳು ನೀರಿನಲ್ಲಿ ಮುಳುಗಿವೆ. ಪ್ರವಾಹದ ಕಾರಣದಿಂದ ಗುಡ್ಡಗಾಡು ಪ್ರದೇಶಗಳಲ್ಲಿನ ರಸ್ತೆಗಳನ್ನು ಕೊಚ್ಚಿಕೊಂಡು ಹೋಗಿ ಸಂಪರ್ಕ ಕಡಿತವಾಗಿದೆ.

ಹಿಮಾಚಲ ಪ್ರದೇಶದಲ್ಲಿ ಮೂರು ಬಾರಿ ಭೂಕುಸಿತ ಸಂಭವಿಸಿದ್ದು, ಏಳು ಜಿಲ್ಲೆಗಳಿಗೆ ಅತಿ ಹೆಚ್ಚು ಮಳೆಯಾಗುವ ರೆಡ್ ಅಲರ್ಟ್ ಘೋಷಿಸಲಾಗಿದ್ದು, ಐವರು ಸಾವನ್ನಪ್ಪಿದ್ದಾರೆ. ಶಿಮ್ಲಾ ಜಿಲ್ಲೆಯ ಕೋಟ್‌ಗಢ ಪ್ರದೇಶದಲ್ಲಿ ಭೂಕುಸಿತದಿಂದ ಮನೆ ಕುಸಿದು ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ್ದರೆ, ಕುಲು ಮತ್ತು ಚಂಬಾ ಜಿಲ್ಲೆಗಳಲ್ಲಿ ತಲಾ ಒಬ್ಬರು ಸಾವನ್ನಪ್ಪಿದ್ದಾರೆ.
ರಾಜ್ಯದ ಕಾಶಿಪುರ ಪ್ರದೇಶದಲ್ಲಿ ಎರಡು ಮನೆಗಳು ಕುಸಿದು ದಂಪತಿ ಸಾವನ್ನಪ್ಪಿದ್ದಾರೆ. ಜಮ್ಮು ಮತ್ತು ಕಾಶ್ಮೀರದಲ್ಲಿ ದೋಡಾ ಜಿಲ್ಲೆಯಲ್ಲಿ ಪ್ರಯಾಣಿಕರ ಬಸ್‌ಗೆ ಭೂಕುಸಿತ ಸಂಭವಿಸಿ ಇಬ್ಬರು ಸಾವನ್ನಪ್ಪಿದ್ದಾರೆ.
ಹಲವು ಕಡೆ ರೈಲ್ವೆ ಸೇವೆಗಳಿಗೂ ಸಮಸ್ಯೆಯಾಗಿದೆ. ಸುಮಾರು 17 ರೈಲುಗಳನ್ನು ರದ್ದುಗೊಳಿಸಲಾಗಿದೆ ಮತ್ತು ಸುಮಾರು 12 ರೈಲುಗಳನ್ನು ಬೇರೆಡೆಗೆ ತಿರುಗಿಸಲಾಗಿದೆ ಎಂದು ಉತ್ತರ ರೈಲ್ವೆ ಇಲಾಖೆ ಹೇಳಿದೆ.