ಎಲ್ಲಾ ಸರ್ಕಾರಿ ಕಾರ್ಯಗಳಲ್ಲಿ ವ್ಯತ್ಯಯ ಆಗಿದ್ದನ್ನು ಮನಗಂಡ ಸರ್ಕಾರ, ಸರ್ಕಾರಿ ನೌಕರರ ಮುಷ್ಕರಕ್ಕೆ ಮಣಿದು ಶೇಕಡಾ 17ರಷ್ಟು ವೇತನ ಹೆಚ್ಚಳ ಮಾಡಿ ಆದೇಶಿಸಿದೆ. ಸರ್ಕಾರದ ಈ ನಿರ್ಧಾರವನ್ನು ನೌಕರರ ಸಂಘ ಸ್ವಾಗತಿಸಿದೆ. ಈ ಮೂಲಕ ಮುಷ್ಕರವನ್ನು ವಾಪಸ್ ಪಡೆದುಕೊಂಡಿದೆ.
7ನೇ ವೇತನ ಆಯೋಗ ವರದಿ ಜಾರಿಗೆ ಆಗ್ರಹಿಸಿ ಸರ್ಕಾರಿ ನೌಕರರು ರಾಜ್ಯಾದ್ಯಂತ ಇಂದು ಮುಷ್ಕರ ಕೈಗೊಂಡಿದ್ದರು. ಇದರಿಂದ ರಾಜ್ಯದಲ್ಲಿ ಸರ್ಕಾರಿ ಸೇವೆಗಳಲ್ಲಿ ವ್ಯತ್ಯಯವಾಗಿದ್ದು ಭಾರೀ ಸಮಸ್ಯೆಗಳು ಎದುರಾಗಿದ್ದವು. ಸದ್ಯ ಈ ಬಗ್ಗೆ ಸಭೆ ನಡೆಸಿ ಅಂತಿಮ ತೀರ್ಮಾನಕ್ಕೆ ಬಂದ ಸಿಎಂ ಬಸವರಾಜ ಬೊಮ್ಮಾಯಿ, ರಾಜ್ಯ ನೌಕರರ ಶೇ.17ರಷ್ಟು ವೇತನ ಹೆಚ್ಚಳಕ್ಕೆ ನಿರ್ಧರಿಸಲಾಗಿದೆ. ಶೇ.17ರಷ್ಟು ಸರ್ಕಾರಿ ನೌಕರರ ವೇತನ ಹೆಚ್ಚಳಕ್ಕೆ ರಾಜ್ಯ ಸರ್ಕಾರ ಮಧ್ಯಂತರ ಪರಿಹಾರ ಘೋಷಣೆ ಮಾಡಿದರು.
ಮುಷ್ಕರ ಹಿಂಪಡೆದ ರಾಜ್ಯ ಸರ್ಕಾರಿ ನೌಕರರ ಸಂಘ
ಶೇಕಡಾ 17ರಷ್ಟು ವೇತನ ಹೆಚ್ಚಿಸಿ ಸರ್ಕಾರದಿಂದ ಆದೇಶ ಹಿನ್ನೆಲೆ ಮುಷ್ಕರ ಕೈಬಿಟ್ಟಿದ್ದಾಗಿ ರಾಜ್ಯ ಸರ್ಕಾರಿ ನೌಕರರ ಸಂಘ ಘೋಷಣೆ ಮಾಡಿದೆ. ತಕ್ಷಣದಿಂದಲೇ ಕರ್ತವ್ಯಕ್ಕೆ ಹಾಜರಾಗುವಂತೆ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ C.S.ಷಡಕ್ಷರಿ ಸೂಚಿಸಿದ್ದಾರೆ. ಹಾಗೂ ಕರ್ತವ್ಯ ಬಹಿಷ್ಕರಿಸಿದ್ದರಿಂದ ಜನರಿಗೆ ಆಗಿರುವ ತೊಂದರೆಗೆ ಕ್ಷಮೆಯಾಚಿಸಿದ್ದಾರೆ.