ಬೆಂಗಳೂರು: 17 ಮಂದಿ ಅನರ್ಹ ಶಾಸಕರಿಗೆ ರಿಲೀಫ್ ಸಿಕ್ಕಿದೆ. ಉಪಚುನಾವಣೆಗೆ ಸ್ಪರ್ಧಿಸಬಹುದು ಎಂದು ಸುಪ್ರೀಂ ಕೋರ್ಟ್ ತೀರ್ಪು ಪ್ರಕಟಿಸಿದೆ. ಇದರ ಬೆನ್ನಲ್ಲೇ ಎಲ್ಲಾ 17 ಮಂದಿ ನಾಳೆ ಬೆಳಗ್ಗೆ ಬಿಜೆಪಿಗೆ ಸೇರ್ಪಡೆಗೊಳ್ಳುತ್ತಾರೆ ಎಂದು ಉಪ ಮುಖ್ಯಮಂತ್ರಿ ಡಾ.ಅಶ್ವತ್ಥ ನಾರಾಯಣ ಹೇಳಿದ್ದಾರೆ.
ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅನರ್ಹ ಮಾಡಿದ್ದನ್ನು ಪ್ರಶ್ನಿಸಿ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ್ದ ನ್ಯಾ. ಎನ್.ವಿ. ರಮಣ, ನ್ಯಾ. ಸಂಜೀವ್ ಖನ್ನಾ, ನ್ಯಾ. ಕೃಷ್ಣ ಮುರಾರಿ ನೇತೃತ್ವದ ಪೀಠ ಬುಧವಾರ ಆದೇಶ ಪ್ರಕಟಿಸಿದೆ. 17 ಮಂದಿ ಶಾಸಕರನ್ನು ಅನರ್ಹ ಮಾಡಿದ ಸ್ಪೀಕರ್ ನಿರ್ಧಾರ ಸರಿ. ಆದರೆ ವಿಧಾನಸಭೆ ಅವಧಿ ಮುಗಿಯವರೆಗೆ ಅನರ್ಹ ಮಾಡಿದ ಸ್ಪೀಕರ್ ನಿರ್ಧಾರ ಸರಿಯಲ್ಲ. ಹೀಗಾಗಿ ಅನರ್ಹ ಶಾಸಕರು ಚುನಾವಣೆಗೆ ಸ್ಪರ್ಧಿಸಬಹುದು ಎಂದು ತೀರ್ಪು ನೀಡಿದೆ. ಮರು ಚುನಾವಣೆಯಲ್ಲಿ ಆಯ್ಕೆಯಾಗದ ಹೊರತು ಸರ್ಕಾರದಲ್ಲಿ ಯಾವುದೇ ಅಧಿಕಾರ ಹೊಂದುವಂತಿಲ್ಲ ಎಂದು ತಿಳಿಸಿದೆ.
ಈ ತೀರ್ಪು ಪ್ರಕಟದ ಬಳಿಕ ಎಲ್ಲಾ 17 ಅನರ್ಹ ಶಾಸಕರು ನವೆಂಬರ್ 14ರಂದು ಬಿಜೆಪಿ ಸೇರಲಿದ್ದಾರೆ ಎಂದು ಉಪ ಮುಖ್ಯಮಂತ್ರಿ ಡಾ.ಅಶ್ವತ್ಥ ನಾರಾಯಣ ಅವರು ಹೇಳಿದ್ದಾರೆ. ಅನರ್ಹ ಶಾಸಕರು ಬಿಜೆಪಿ ಸೇರಲು ಆಸಕ್ತಿ ತೋರಿಸುತ್ತಿದ್ದು, ಈ ಸಂಬಂಧ ಈಗಾಗಲೇ ನಮ್ಮ ಪಕ್ಷದ ಹಿರಿಯ ನಾಯಕರನ್ನು ಭೇಟಿ ಮಾಡಿದ್ದಾರೆ. ಅವರನ್ನು ಪಕ್ಷಕ್ಕೆ ಸ್ವಾಗತಿಸಲಾಗುತ್ತಿದೆ ಎಂದು ಹೇಳಿದ್ದಾರೆ. ನಾವೆಲ್ಲರೂ ಬಿಜೆಪಿಗೆ ಸೇರ್ಪಡೆಯಾಗುತ್ತೇವೆ ಎಂದು ಅನರ್ಹ ಶಾಸಕ ನಾರಾಯಣಗೌಡ , ಬಿ.ಸಿ ಪಾಟೀಲ್, ರಮೇಶ್ ಜಾರಕಿಹೊಳಿ ಮಾಧ್ಯಮದ ಮುಂದೆ ಹೇಳಿದ್ದಾರೆ.