ಸುಳ್ಯ: ವಿವಿಧ ಮಾಧ್ಯಮಗಳ ಮೂಲಕ ಮೆಸ್ಕಾಂ ಗ್ರಾಹಕರ ಸೇವಾ ಕೇಂದ್ರ 1912 ಸೌಲಭ್ಯದ ಬಗ್ಗೆ ವಿವಿಧ ಭಾಗಗಳಲ್ಲಿ ಸಾರ್ವಜನಿಕರಿಗೆ ಮಾಹಿತಿ ನೀಡುವ ಉದ್ದೇಶ ಹೊಂದಲಾಗಿದೆ ಎಂದು ಸ್ಕಾಡಾ ಮತ್ತು ಕೇಂದಿಕೃತ ಗ್ರಾಹಕರ ಸೇವಾ ಕೇಂದ್ರದ ಅಧೀಕ್ಷಕ ಎಂಜಿನಿಯರ್ ಪಿ.ಡಿ.ಬಿ.ರಾವ್ ಹೇಳಿದರು.
ಅವರು ತಾ.ಪಂ.ಸಭಾಂಗಣದಲ್ಲಿ ಮಂಗಳವಾರ ಸ್ಕಾಡಾ ಮತ್ತು ಕೇಂದಿಕೃತ ಗ್ರಾಹಕರ ಸೇವಾ ಕೇಂದ್ರ 1912 ಕುರಿತು ಮೆಸ್ಕಾಂ ಸುಳ್ಯ ಉಪ ವಿಭಾಗದ ಅಧಿಕಾರಿ ನೌಕರರುಗಳಿಗೆ ನಡೆದ ತರಬೇತಿ ಕಾರ್ಯಕ್ರಮದಲ್ಲಿ ಮಾಹಿತಿ ನೀಡಿದರು.
ಬಿಎಸ್‍ಎನ್‍ಎಲ್ ನೆಟ್‍ವರ್ಕ್ ಇಲ್ಲದೆ ಸೇವಾ ಕೇಂದ್ರದ ದೂರವಾಣಿ ಸಂಪರ್ಕ ಸಾಧ್ಯವಾಗದ ಬಗ್ಗೆ ನೌಕರರು ಪ್ರಸ್ತಾವಿಸಿದರು. ಇಂತಹ ಸಮಸ್ಯೆ ಇರುವುದು ನಿಜ. ಆದರೆ ನೆಟ್‍ವರ್ಕ್ ಇಲ್ಲದ ಕಡೆ ಸಂವಹನ ಕಷ್ಟ. ಆದರೆ ಲಭ್ಯ ಇರುವ ಕಡೆ ಸಮರ್ಪಕ ಸೇವೆ ನೀಡಲು ಆ ಸಂಸ್ಥೆಗೆ ಮನವಿ ಮಾಡಲಾಗಿದೆ ಎಂದು ಪಿಡಿಬಿ ರಾವ್ ಹೇಳಿದರು.
ಕರೆ ಮಾಡುವ ಗ್ರಾಹಕರು ಸಮಸ್ಯೆ ಕುರಿತು ಸಮರ್ಪಕ ಮಾಹಿತಿ ನೀಡಬೇಕು. ಶೇ. 99 ಪ್ರಕರಣಗಳಲ್ಲಿ ಸೂಕ್ತ ಮಾಹಿತಿ ದಾಖಲಿಸಲು ಸಾಧ್ಯವಿದೆ. ಶೇ.1 ರಷ್ಟು ಮಾಹಿತಿ ನೀಡಲು ಸಾಧ್ಯವಿಲ್ಲದ ಸಂದರ್ಭ ಇರಬಹುದಷ್ಟೆ. ಕರೆ ಮಾಡಿದ ಗ್ರಾಹಕರು ಸಮಸ್ಯೆ ಇರುವ ವ್ಯಾಪ್ತಿಯ ಆರ್ ಆರ್ ನಂಬರ್, ಪ್ರದೇಶದ ಬಗ್ಗೆ ಮಾಹಿತಿ ಕೊಡಬೇಕು. ಬಳಿಕ ಅದನ್ನು ಸಂಬಂಧಿಸಿದ ಮೆಸ್ಕಾಂ ವಿಭಾಗಕ್ಕೆ ವರ್ಗಾಯಿಸಲಾಗುತ್ತದೆ. ಸಾಪ್ಟ್ ವೇರ್ ಕೂಡ ಅದೇ ತರಹ ಇದ್ದು, ವಾರ್ಡ್ ಪ್ರಕಾರವೇ ಅಪ್ಲೋಡ್ ಮಾಡುವ ನಿಯಮವಿದೆ ಎಂದು ಪಿ.ಡಿ.ಬಿ.ರಾವ್ ಹೇಳಿದರು.
ಈ ಸಂದರ್ಭದಲ್ಲಿ ಸ್ಕಾಡಾ ಮತ್ತು ಕೇಂದಿಕೃತ ಗ್ರಾಹಕರ ಸೇವಾ ಕೇಂದ್ರದ ಸಹಾಯಕ ಎಂಜಿನಿಯರ್ ನಂದ ಕುಮಾರ್, ಸುಳ್ಯ ಮೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಹರೀಶ್ ನಾಯ್ಕ ಮೊದಲಾದವರು ಉಪಸ್ಥಿತರಿದ್ದರು.