ಅಡಿಕೆಯ ಇತಿಹಾಸ ಈಗ ನಿರೀಕ್ಷೆಗಿಂತಲೂ ಸಾವಿರಾರು ವರ್ಷ ಹಿಂದಕ್ಕೆ ಹೋಗಿರುವ ಸಾಧ್ಯತೆಯನ್ನು ಹೊಸ ಪುರಾತತ್ವ ಅಧ್ಯಯನ ತೆರೆದಿಟ್ಟಿದೆ. ಇಂಡೋನೇಷ್ಯಾದ ಸುಲವೆಸಿ ದ್ವೀಪದಲ್ಲಿ ಪತ್ತೆಯಾದ ಸುಮಾರು 25,000 ವರ್ಷಗಳಷ್ಟು ಹಳೆಯ ಮಾನವ ಅವಶೇಷಗಳ ಹಲ್ಲುಗಳಲ್ಲಿ ಅಡಿಕೆ ಬಳಕೆಯ ಸುಳಿವು ಪತ್ತೆಯಾಗಿದ್ದು, ಇದು ಮಾನವರು ಸಸ್ಯ ಮೂಲದ ಪದಾರ್ಥವನ್ನು ನಿಯಮಿತವಾಗಿ ಬಳಸಿದ ಅತ್ಯಂತ ಹಳೆಯ ಪುರಾವೆಗಳಲ್ಲಿ ಒಂದಾಗಿದೆ ಎಂದು ಸಂಶೋಧಕರು ಹೇಳಿದ್ದಾರೆ.
ಈ ಅಧ್ಯಯನವನ್ನು ಆಸ್ಟ್ರೇಲಿಯಾದ Griffith University ಸೇರಿದಂತೆ ಇಂಡೋನೇಷ್ಯಾದ ಸಂಶೋಧಕರು ನಡೆಸಿದ್ದು, ಸಂಶೋಧನಾ ವರದಿ Science Advances ಜರ್ನಲ್‌ನಲ್ಲಿ ಪ್ರಕಟವಾಗಿದೆ.
ಹಲ್ಲುಗಳಲ್ಲಿ ಕಂಡುಬಂದ ವಿಚಿತ್ರ ಗುರುತು ಏನು? : ಸುಲವೆಸಿಯ ಎರಡು ಪ್ರಾಚೀನ ಮಾನವ ಅವಶೇಷಗಳ ಹಲ್ಲುಗಳಲ್ಲಿ ಸಾಮಾನ್ಯ ಬಳಕೆಯಿಂದ ಉಂಟಾಗದಂತಹ ಆಳವಾದ, ದುಂಡಾದ ಸವೆತದ ಗುರುತುಗಳು ಕಂಡುಬಂದಿದ್ದವು.
ಸಂಶೋಧಕರ ಪ್ರಕಾರ, ಈ ಗುರುತುಗಳು ಗಟ್ಟಿಯಾದ ದುಂಡನೆಯ ವಸ್ತುವನ್ನು ಬಾಯಿಯಲ್ಲಿ ನಿರಂತರವಾಗಿ ಹಿಡಿದು ಅಥವಾ ಹೀರುವುದರಿಂದ ಉಂಟಾಗಿರಬಹುದು. ಅಡಿಕೆಯ ಗಾತ್ರ ಮತ್ತು ಅದರ ಬಳಕೆಯ ವಿಧಾನವನ್ನು ಗಮನಿಸಿದಾಗ, ಪ್ರಾಚೀನ ಜನರು ಅಡಿಕೆಯನ್ನು ಜಗಿಯುವುದಕ್ಕಿಂತ ಹೆಚ್ಚಾಗಿ ಬಾಯಿಯಲ್ಲಿ ಇಟ್ಟು ಹೀರುತ್ತಿದ್ದಿರಬಹುದು ಎಂಬ ನಿರ್ಧಾರಕ್ಕೆ ಸಂಶೋಧಕರು ಬಂದಿದ್ದಾರೆ.
ಅಡಿಕೆಯಲ್ಲಿ ಇರುವ ‘ಅರೆಕೋಲಿನ್’ ಏನು ಮಾಡುತ್ತದೆ? : ಅಡಿಕೆ ಅಥವಾ ಅಡಿಕೆಯಲ್ಲಿ ಅರೆಕೋಲಿನ್ (Arecoline) ಎಂಬ ಸಂಯುಕ್ತವಿದೆ. ಇಂದಿನ ಸಾಂಪ್ರದಾಯಿಕ ಅಡಿಕೆ ಸೇವನೆಯಲ್ಲಿ ಸುಣ್ಣದೊಂದಿಗೆ ಬಳಸಿದಾಗ ಇದರ ಪರಿಣಾಮ ಹೆಚ್ಚಾಗುತ್ತದೆ. ಆದರೆ ಸಾವಿರಾರು ವರ್ಷಗಳ ಹಿಂದಿನ ಈ ಜನರು ಸುಣ್ಣವನ್ನು ಸೇರಿಸದೆ ನೇರವಾಗಿ ಅಡಿಕೆಯನ್ನು ಹೀರುತ್ತಿದ್ದಿರಬಹುದು ಎಂದು ಸಂಶೋಧಕರು ಹೇಳಿದ್ದಾರೆ.
ಪ್ರಯೋಗಾಲಯ ಪರೀಕ್ಷೆಗಳಲ್ಲಿ ಅಡಿಕೆಯನ್ನು ಕೃತಕ ಲಾಲಾರಸದಲ್ಲಿ ನೆನೆಸಿದಾಗ ಅರೆಕೋಲಿನ್ ಬಿಡುಗಡೆಯಾಗಿರುವುದು ಕಂಡುಬಂದಿದೆ. ಇದು ಬಾಯಿಯಲ್ಲಿ ಮರಗಟ್ಟುವಿಕೆ ಅಥವಾ ನೋವು ಕಡಿಮೆಯಾಗುವಂತಹ ಪರಿಣಾಮ ನೀಡಿರಬಹುದು ಎಂದು ಸಂಶೋಧಕರು ಅಂದಾಜಿಸಿದ್ದಾರೆ. ಪ್ರಾಚೀನ ಹಲ್ಲುಗಳಲ್ಲಿಯೂ ಅರೆಕೋಲಿನ್‌ನ ಗುರುತು ಪತ್ತೆಯಾಗಿದೆ.
ಹಲ್ಲುನೋವಿಗೆ ಪರಿಹಾರ ಹುಡುಕಿದರೇ? : ಸಂಶೋಧಕರ ಪ್ರಮುಖ ಊಹೆಯೊಂದರ ಪ್ರಕಾರ, ಈ ಜನರು ಅಡಿಕೆಯನ್ನು ಹಲ್ಲುನೋವು ಅಥವಾ ಬಾಯಿಯ ನೋವು ಕಡಿಮೆ ಮಾಡಲು ಬಳಸಿರಬಹುದು. ಆದರೆ ಇಲ್ಲಿ ಒಂದು ಕುತೂಹಲಕಾರಿ ಅಂಶವೂ ಕಾಣಿಸುತ್ತದೆ.
ಅಡಿಕೆಯನ್ನು ಹೀರುವುದರಿಂದ ತಾತ್ಕಾಲಿಕವಾಗಿ ಬಾಯಿ ಮರಗಟ್ಟಬಹುದು. ಆದರೆ ನಿರಂತರವಾಗಿ ಅಡಿಕೆಯನ್ನು ಹೀರುವುದರಿಂದ ಹಲ್ಲುಗಳು ತೀವ್ರವಾಗಿ ಸವೆದುಹೋಗಿವೆ. ಕೆಲವು ಹಲ್ಲುಗಳಲ್ಲಿ ಸವೆತವು ಒಳಗಿನ ಭಾಗದವರೆಗೂ ತಲುಪಿರುವ ಸಾಧ್ಯತೆ ಕಂಡುಬಂದಿದೆ. ಹೀಗಾಗಿ ನೋವು ಕಡಿಮೆ ಮಾಡಲು ಅಡಿಕೆ ಬಳಸುವುದು, ಮತ್ತೆ ಅದೇ ಅಭ್ಯಾಸದಿಂದ ಹಲ್ಲುಗಳಿಗೆ ಹೆಚ್ಚಿನ ಹಾನಿಯಾಗುವುದು ಎಂಬ ಅಂಶವನ್ನು ಸಂಶೋಧಕರು ಹೇಳಿದ್ದಾರೆ.
ಅಡಿಕೆ ಬಳಕೆ ಕೃಷಿಗಿಂತಲೂ ಹಳೆಯದೇ? : ಇಲ್ಲಿ ಅಧ್ಯಯನದ ಮತ್ತೊಂದು ಪ್ರಮುಖ ಅಂಶವಿದೆ. ಸುಲವೆಸಿಯ ಈ ಪ್ರಾಚೀನ ವ್ಯಕ್ತಿಗಳಲ್ಲಿ ಒಬ್ಬರು ಸುಮಾರು 16,000 ರಿಂದ 25,000 ವರ್ಷಗಳ ಹಿಂದಿನ ಅವಧಿಯಲ್ಲಿ ಬದುಕಿದ್ದರೆಂದು ಅಂದಾಜಿಸಲಾಗಿದೆ. ಮತ್ತೊಬ್ಬರು ಸುಮಾರು 7,600–6,300 ವರ್ಷಗಳ ಹಿಂದಿನವರು. ಇವರಿಬ್ಬರೂ ಮಾನವರು ಕೃಷಿ ಆರಂಭಿಸುವುದಕ್ಕೂ ಬಹಳ ಹಿಂದೆಯೇ ಅಡಿಕೆಯಂತಹ ಸಸ್ಯದ ಗುಣವನ್ನು ಗುರುತಿಸಿ ಬಳಸುತ್ತಿದ್ದಿರಬಹುದು ಎಂಬ ಸಾಧ್ಯತೆಯನ್ನು ಅಧ್ಯಯನ ಮುಂದಿಡುತ್ತದೆ.
ಅಡಿಕೆಯ ಇತಿಹಾಸದ ಹೊಸ ಅಧ್ಯಾಯ : ಅಡಿಕೆ ಇಂದು ದಕ್ಷಿಣ ಮತ್ತು ಆಗ್ನೇಯ ಏಷ್ಯಾ ಹಾಗೂ ಪೆಸಿಫಿಕ್ ಪ್ರದೇಶದ ಹಲವು ಸಮಾಜಗಳಲ್ಲಿ ದೀರ್ಘಕಾಲದ ಸಾಂಸ್ಕೃತಿಕ ಪರಂಪರೆಯ ಭಾಗವಾಗಿದೆ. ಆದರೆ ಈ ಹೊಸ ಅಧ್ಯಯನವು ಆ ಪರಂಪರೆಯ ಬೇರುಗಳು ಕನಿಷ್ಠ 25,000 ವರ್ಷಗಳಷ್ಟು ಹಿಂದಿನದಾಗಿರಬಹುದು ಎಂಬ ಸಾಧ್ಯತೆಯನ್ನು ತೋರಿಸುತ್ತದೆ. ಸಂಶೋಧಕರು ಇದನ್ನು ಇಂದಿನ ಅಡಿಕೆ ಜಗಿಯುವ ಪದ್ಧತಿಯ ಹಿಂದಿನ ಅತ್ಯಂತ ಪ್ರಾಚೀನ ಹಂತವೆಂದು ಪರಿಗಣಿಸಿದ್ದಾರೆ.
ಆದರೆ ಒಂದು ಪ್ರಮುಖ ವ್ಯತ್ಯಾಸ ಗಮನಿಸಬೇಕು : ಈ ಅಧ್ಯಯನವು ಅಡಿಕೆ ಕೃಷಿ 25,000 ವರ್ಷಗಳ ಹಿಂದೆಯೇ ನಡೆಯುತ್ತಿತ್ತು ಎಂದು ಹೇಳುವುದಿಲ್ಲ. ಹಾಗೆಯೇ ಇಂದಿನ ಅಡಿಕೆ ಜಗಿಯುವ ಪದ್ಧತಿ ಅದೇ ರೂಪದಲ್ಲಿ ಆಗಲೂ ಇತ್ತು ಎಂದೂ ಹೇಳುವುದಿಲ್ಲ. ಸಾಕ್ಷ್ಯವು ನಿರ್ದಿಷ್ಟವಾಗಿ ಕೆಲವು ಪ್ರಾಚೀನ ಮಾನವರು ಅಡಿಕೆಯನ್ನು ಬಾಯಿಯಲ್ಲಿ ಇಟ್ಟು ಹೀರುವ ಅಭ್ಯಾಸ ಹೊಂದಿದ್ದಿರಬಹುದೆಂಬುದನ್ನು ಸೂಚಿಸುತ್ತದೆ. ಅಂದರೆ ಇದು ಅಡಿಕೆ ಬಳಕೆಯ ಪುರಾತನ ಇತಿಹಾಸದ ಅಧ್ಯಯನ, ಅಡಿಕೆ ಕೃಷಿಯ ಇತಿಹಾಸದ ಅಧ್ಯಯನವಲ್ಲ.
ಇಂದಿನ ಅಡಿಕೆ ಬಳಕೆಗೆ ಇದರಿಂದ ಏನು ಅರ್ಥ? : ಇಂದಿನ ಅಡಿಕೆ ಸೇವನೆಯ ಆರೋಗ್ಯ ಪರಿಣಾಮಗಳನ್ನು ಈ ಪುರಾತತ್ವ ಪುರಾವೆಯಿಂದ ಸಮರ್ಥಿಸಲಾಗುವುದಿಲ್ಲ. ಆಧುನಿಕ ಅಧ್ಯಯನಗಳಲ್ಲಿ ಅಡಿಕೆ ಸೇವನೆ, ವಿಶೇಷವಾಗಿ ಸುಣ್ಣ ಮತ್ತು ತಂಬಾಕಿನೊಂದಿಗೆ ಬಳಸುವ ಅಭ್ಯಾಸದ ಬಗ್ಗೆ ಅಡಿಕೆಯಲ್ಲಿ ಇರುವ ಅರೆಕೋಲಿನ್ ಬಗ್ಗೆ ಕೂಡಾ ವಿವಿಧ ಅಧ್ಯಯನ ನಡೆಯುತ್ತಿದೆ. ಹೀಗಾಗಿ “25 ಸಾವಿರ ವರ್ಷಗಳಿಂದ ಅಡಿಕೆ ಬಳಸಲಾಗುತ್ತಿದೆ” ಎಂಬುದನ್ನು ನೋಡಬೇಕು. ಇದು ಮಾನವ ನಾಗರಿಕತೆಯ ಆರಂಭಿಕ ಹಂತದಲ್ಲಿಯೇ ಪ್ರಕೃತಿಯಲ್ಲಿದ್ದ ಸಸ್ಯಗಳ ಔಷಧೀಯ, ಉತ್ತೇಜಕ ಮತ್ತು ಇತರ ಗುಣಗಳನ್ನು ಮಾನವರು ಹೇಗೆ ಗುರುತಿಸಿ ಬಳಸಲು ಆರಂಭಿಸಿದರು ಎಂಬುದನ್ನು ತಿಳಿಯಲು ನೆರವಾಗುವ ಪುರಾತತ್ವ ಸಾಕ್ಷ್ಯ.
ಅಡಿಕೆ ಬೆಳೆಗಾರರಿಗೆ ಇದರ ಮಹತ್ವವೇನು? : ಅಡಿಕೆ ಕೃಷಿ ಮತ್ತು ಅಡಿಕೆ ಸೇವನೆ ಇವೆರಡನ್ನು ಪ್ರತ್ಯೇಕವಾಗಿ ನೋಡಬೇಕಾದರೂ, ಈ ಅಧ್ಯಯನವು ಒಂದು ಕುತೂಹಲಕಾರಿ ಸಂಗತಿಯನ್ನು ನೆನಪಿಸುತ್ತದೆ. ಅಡಿಕೆ ಕೇವಲ ಒಂದು ವಾಣಿಜ್ಯ ಬೆಳೆ ಮಾತ್ರವಲ್ಲ; ಏಷ್ಯಾದ ಮಾನವ ಸಂಸ್ಕೃತಿ ಮತ್ತು ಪರಂಪರೆಯೊಂದಿಗೆ ಸಾವಿರಾರು ವರ್ಷಗಳಿಂದ ಬೆಸೆದುಕೊಂಡಿರುವ ಸಸ್ಯ ಎಂಬುದನ್ನು ಗಮನಿಸಬೇಕು.
ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ-ಹವಾಮಾನ ಬದಲಾವಣೆ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಫಾಲೋಮಾಡಲು ಇಲ್ಲಿ ಕ್ಲಿಕ್ ಮಾಡಿ
Archaeologists have found evidence suggesting that humans in Sulawesi, Indonesia, may have habitually used whole betel or areca nuts as far back as 25,000 years ago. Unusual grooves on ancient teeth, combined with traces of arecoline, suggest that prehistoric hunter-gatherers repeatedly sucked betel nuts, possibly for their numbing or pain-relieving effects.
The discovery, published in Science Advances, could represent the earliest known direct evidence of habitual use of a psychoactive plant. Importantly, it indicates ancient betel-nut use, not the existence of organised areca cultivation 25,000 years ago.


