ಸುಳ್ಯ: ಕಾಮಗಾರಿ ವಿಳಂಬವಾದ ಕಾರಣ ತಾಲೂಕು ಪಂಚಾಯತ್ ಅನುದಾನದಲ್ಲಿ ಲಿಂಕ್ ಡಾಕ್ಯುಮೆಂಟ್ ಅನುದಾನದಲ್ಲಿ ನಿರ್ವಹಿಸಿದ 46 ಕಾಮಗಾರಿಗಳಲ್ಲಿ ಒಟ್ಟು 32,81,478 ರೂಪಾಯಿ ಲ್ಯಾಪ್ಸ್‍ಗೊಂಡಿದೆ. ಈ ಕಾಮಗಾರಿಗಳನ್ನು ನಿರ್ವಹಿಸಿದ ಗುತ್ತಿಗೆದಾರರಿಗೆ ಅನುದಾನ ಪಾವತಿಯಾಗದೇ ಈಗ ಪರದಾಟ ನಡೆಸುವಂತಾಗಿದೆ.
ಮಾ.25 ರಂದು ಆದ ಎಲ್ಲಾ ಕಾಮಗಾರಿಗಳ ಬಿಲ್ಲುಗಳನ್ನು ತಾಲೂಕು ಖಜಾನೆಯಲ್ಲಿ ನೀಡುವಂತೆ ಜಿ.ಪಂ.ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಗುತ್ತಿಗೆದಾರರಿಗೆ ಸೂಚಿಸಿದ್ದರು. ಆದರೆ ಗುತ್ತಿಗೆದಾರರು ತಾವು ನಿರ್ವಹಿಸಿದ ಕಾಮಗಾರಿಗಳ ಬಿಲ್ಲು ನೀಡದೇ ಇದ್ದುದರಿಂದ ಬಾಕಿಯಾಗಿದ್ದು, ತಾಪಂ ಮತ್ತು ತಾಲೂಕು ಖಜಾನೆಯ ಒಪ್ಪಂದದಲ್ಲಿ ಕಾಮಗಾರಿಗಳ ಬಿಲ್ಲುಗಳನ್ನು ಮಾ.25ರ ಮೊದಲೇ ನೀಡುವಂತೆ ಸೂಚಿಸಲಾಗಿತ್ತು. 2018 ನವಂಬರ್‍ನಲ್ಲಿ ಟೆಂಡರ್ ಕರೆದ ಗುತ್ತಿಗೆದಾರರಿಗೆ ಕಾಮಗಾರಿಗಳನ್ನು ವಹಿಸಲಾಗಿತ್ತಾದರೂ ಮರಳಿನ ಸಮಸ್ಯೆ ಬಂದುದರಿಂದ ಕಾಮಗಾರಿಯನ್ನು ಸಮಯಕ್ಕೆ ಸರಿಯಾಗಿ ಪೂರೈಸಲು ಗುತ್ತಿಗೆದಾರರಿಗೆ ಆಗಲಿಲ್ಲ. ಕೆಲವೊಂದು ಕಾಮಗಾರಿಗಳು ಸಂಪೂರ್ಣವಾಗಿದ್ದರೂ ಬಿಲ್ಲು ನೀಡುವಲ್ಲಿ ವಿಳಂಬವಾದ ಕಾರಣ ಅನುದಾನ ರದ್ದುಗೊಳಿಸಲಾಯಿತು.