ಬಾಳುಗೋಡು: ಸೇತುವೆ ಇಲ್ಲದೆ ಹಲವಾರು ವರ್ಷಗಳಿಂದ ಸಂಕಷ್ಟಕ್ಕೆ ಒಳಗಾಗಿದ್ದಾರೆ ಇಲ್ಲಿಯ ಜನ. ಜನಪ್ರತಿನಿಧಿಗಳಿಗೆ ಸಾಕಷ್ಟು ಬಾರಿ ಮನವಿ ನೀಡಿದ್ದಾರೆ. ದಯವಿಟ್ಟು ಈ ಸೇತುವೆ ಪೂರ್ತಿ ಮಾಡಿಕೊಡಿ ಎಂದು ಜನ ಈಗ ಒತ್ತಾಯ ಮಾಡುತ್ತಿದ್ದಾರೆ.
ಹರಿಹರ ಪಳ್ಳತ್ತಡ್ಕ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಾಳುಗೋಡು ಗ್ರಾಮದಲ್ಲಿ ಕೊತ್ನಡ್ಕ ಎಂಬ ಸಣ್ಣ ಊರಿದೆ. ತೀರ ಕುಗ್ರಾಮ ಎನಿಸಿದ ಇಲ್ಲಿ ವಿರಳ ಸಂಖ್ಯೆಯ ಮನೆಗಳಿವೆ. ಬಾಳುಗೋಡು ಪೇಟೆಯಿಂದ ಐದಾರು ಕಿ. ಮಿ ದೂರದ ಅರಣ್ಯದ ಅಂಚಿನಲ್ಲಿ ಈ ಪ್ರದೇಶವಿದೆ. ಕಾಡು ದಾರಿಯ ಮೂಲಕ ಕಚ್ಚಾ ರಸ್ತೆಯಲ್ಲಿ ಇಲ್ಲಿಗೆ ತೆರಳಬೇಕು. ದಾರಿ ಮಧ್ಯೆ ಹೊಳೆ ಹರಿಯುತ್ತಿದೆ. ಇಲ್ಲಿಯವರು ಈ ಹೊಳೆ ದಾಟಲು ಮಳೆಗಾಲದಲ್ಲಿ ಹರಸಾಹಸ ಪಡುತ್ತಾರೆ. ಈ ಹೊಳೆಗೆ ಸೇತುವೆ ಬೇಕು ಎಂಬ ಜನತೆಯ ಒತ್ತಾಯಕ್ಕೆ ಮಣಿದು ನಾಲ್ಕು ವರ್ಷಗಳ ಹಿಂದೆ ಇಲ್ಲಿಗೆ ಕಿರು ಸೇತುವೆ ಮಂಜೂರುಗೊಂಡಿತ್ತು. ಸೇತುವೆ ನಿರ್ಮಾಣಕ್ಕೆ ನಿರೀಕ್ಷೆಯಷ್ಟು ಅನುದಾನ ದೊರಕದ ಪರಿಣಾಮ ಸೇತುವೆ ಅಪೂರ್ಣ ಹಂತದಲ್ಲಿದೆ.
ಬಹುಕಾಲದ ಬೇಡಿಕೆಯಂತೆ ಶಾಸಕರ ಪ್ರದೇಶ ಅಭಿವೃದ್ಧಿ ಯೋಜನೆಯಡಿ ಇಲ್ಲಿಗೆ ಮೂರು ವರ್ಷದ ಹಿಂದೆ 8.25 ಲಕ್ಷ ರೂ ಅನುದಾನ ಬಿಡುಗಡೆಗೊಂಡಿತ್ತು. ಗುತ್ತಿಗೆದಾರರು ಕಾಮಗಾರಿಗೆ ಬೇಕಿರುವ ಸಾಮಾಗ್ರಿ ಸಂಗ್ರಹಿಸಿ ಕೆಲಸ ಆರಂಬಿಸಿದ್ದರು. ಪಿಲ್ಲರ್ ತಲೆ ಎತ್ತಿ ನಿಂತಿತ್ತು. ಕಳೆದ ಮೂರು ವರ್ಷದ ಹಿಂದೆ ಇದ್ದಕ್ಕಿದ್ದಂತೆ ಕಾಮಗಾರಿ ಪೂರ್ಣ ಸ್ಥಗಿತಗೊಂಡಿದೆ. ಕಾರಣ ಈಗ ಒದಗಿ ಬಂದಿರುವ ಅನುದಾನ ಸಾಲುತಿಲ್ಲ. ಹೆಚ್ಚಿನ ಅಂದರೆ ಇನ್ನು ಹತ್ತು ಲಕ್ಷ ರೂಪಾಯಿಗಳ ಅನುದಾನದ ಅವಶ್ಯಕತೆ ಇದೆ. ಹೀಗಾಗಿ ರಸ್ತೆ ಕನಸು ಕಂಡಿದ್ದ ಈ ಭಾಗದ ನಾಗರಿಕರಿಗೆ ನಿರಾಶೆ ಆಗಿದೆ. ದೊರೆತ ಅನುದಾನದಲ್ಲಿ ಸೇತುವೆ ಕಾಮಗಾರಿ ನಡೆಸಿದ್ದಾಗಿ ಹೇಳಿ ಗುತ್ತಿಗೆದಾರರು ಜಾಗ ಖಾಲಿ ಮಾಡಿದ್ದಾರೆ. ಸೇತುವೆ ಕಾಮಗಾರಿ ಇನ್ನು ಪೂರ್ಣಗೊಂಡಿಲ್ಲ. ಸೇತುವೆ ನಿರ್ಮಾಣಕ್ಕೆಂದು ತಂದು ಹಾಕಿದ್ದ ಸಾಮಾಗ್ರಿಗಳು ಕಾಣೆಯಾಗಿವೆ. ಪಿಲ್ಲರಿಗೆ ಅಳವಡಿಸಿದ ಸಾಧನಗಳು ತುಕ್ಕು ಹಿಡಿದಿವೆ.
ಶಾಲಾ ಮಕ್ಕಳು, ನಾಗರಿಕರು ಈ ರಸ್ತೆಯ ಮೂಲಕ ನಿತ್ಯವೂ ಓಡಾಡುತ್ತಾರೆ. ನಿತ್ಯವೂ ತಮ್ಮ ಬೇಡಿಕೆಗಳನ್ನು ಈ ರಸ್ತೆ ಮೂಲಕವೇ ಸಂಚರಿಸಿ ಪೂರೈಸಿಕೊಳ್ಳುತ್ತಾರೆ. ಈ ಊರಿಗೆ ಖಾಸಗಿ ಜೀಪು ಹೊರತು ಪಡಿಸಿ ಇನ್ಯಾವುದೆ ವಾಹನ ಸೌಲಭ್ಯ ಕೂಡ ಇಲ್ಲ. ಪ್ರತಿ ವರ್ಷ ಮಳೆಗಾಲ ಹೊಳೆ ತುಂಬಿ ಹರಿವ ಕಾರಣ ಸ್ಥಳಿಯರು ತಾತ್ಕಾಲಿಕ ಮರದ ತೂಗು ಸೇತುವೆ ನಿರ್ಮಿಸಿಕೊಂಡು ಕಷ್ಟದಲ್ಲಿ ಮಳೆಗಾಲ ಕಳೆದಿದ್ದರು. ಮುಂದಿನ ವರ್ಷವಾದರೂ ಸೇತುವೆ ಕಾಮಗಾರಿ ಪೂರ್ಣಗೊಂಡು ಸಮಸ್ಯೆ ಪರಿಹಾರ ಕಾಣಬಹುದು ಅಂದುಕೊಂಡರೆ ಅವರ ನಿರೀಕ್ಷೆ ಹುಸಿಯಾಗಿದೆ.
“ಸೇತುವೆ ಮಂಜೂರಾಗಿ ನಾಲ್ಕು ವರ್ಷಗಳು ಆಗಿವೆ. ಇನ್ನು ಸೇತುವೆ ಅರ್ಧದಲ್ಲೆ ಇದೆ. ಸ್ಥಳಿಯರಾದ ನಾವು ಇನ್ನು ಸಮಸ್ಯೆ ಅನುಭವಿಸುತ್ತಲೇ ಇದ್ದೇವೆ. ಇನ್ನಾದರೂ ಕಾಮಗಾರಿ ಚುರುಕು ಮುಟ್ಟಿಸಿ ಮಳೆಗಾಲದ ಅವಧಿ ಮುಂಚಿತ ಪೂರ್ಣಗೊಳಿಸಿಕೊಡಬೇಕು” ಎಂದು ಸ್ಥಳೀಯ ನಿವಾಸಿ ಚೇತನ್ ಕಜೆಗದ್ದೆ “ಸುಳ್ಯನ್ಯೂಸ್.ಕಾಂ”ನೊಂದಿಗೆ ಮಾತನಾಡುತ್ತಾ ಅಭಿಪ್ರಾಯ ಹಂಚಿಕೊಂಡರು.
ವಿಶ್ವ ಆರೋಗ್ಯ ಸಂಸ್ಥೆಯು(WHO) ಅಡಿಕೆ ಕ್ಯಾನ್ಸರ್ ಕಾರಕವೆಂದು ಸಾಬೀತುಪಡಿಸಲು ಸಂಶೋಧನಾ ವರದಿಗಳನ್ನೇ ತಿರುಚಿ…
ಅಡಿಕೆಯ ಔಷಧೀಯ ಗುಣಗಳು ಹಲವಾರು ಇವೆ. ಅಡಿಕೆಯ ಚೊಗರಿನಿಂದ ತಯಾರು ಮಾಡುವ ಸೋಪು…
ಮಂಗಳೂರಿನಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ 2025ನೇ ಸಾಲಿನ ಇಂಡಿಯನ್ ಅಕಾಡೆಮಿ ಆಫ್ ಓರಲ್…
ಕೃಷಿಗಾಗಿ, ಕೃಷಿ ಉಳಿಸುವುದಕ್ಕಾಗಿ ಸುರಂಗ ಕೊರೆದು ನೀರು ಹರಿಸಿದ ವಿಶೇಷ ಸಾಧನೆಯನ್ನು ಮಾಡಿದ್ದಾರೆ…
ದೇಶಾದ್ಯಂತ ಅಳಿವಿನಂಚಿಗೆ ತಲುಪಿರುವ ಗುಬ್ಬಚ್ಚಿ ಸಂಕುಲದ ರಕ್ಷಣೆಗೆ ಪ್ರಧಾನಿ ನರೇಂದ್ರ ಮೋದಿ ಅವರು…
ಸ್ವಾವಲಂಬನೆಯ ಜೀವನ ಕಟ್ಟಿಕೊಳ್ಳುತ್ತಿರುವ ಅನೇಕ ಮಹಿಳಾ ಉದ್ಯಮಿದಾರರಿಗೆ ಎನ್ಆರ್ ಎಲ್ಎಮ್ ಯೋಜನೆಯು ಸ್ಪೂರ್ತಿಯ…