ಸುಳ್ಯ: ರಕ್ತದಾನವೆಂಬುದು ಮಹಾದಾನ. ಮನುಷ್ಯತ್ವ ಅಭಿವ್ಯಕ್ತಗೊಳ್ಳುವ ರೂಪವೂ ರಕ್ತದಾನ. ರಕ್ತಕ್ಕೆ ಜಾತಿ, ಧರ್ಮದ ಹಂಗಿಲ್ಲ. ಎಲ್ಲರ ರಕ್ತ, ಎಲ್ಲಾ ರಕ್ತ ಕೆಂಪು. ಹೀಗಾಗಿ ವ್ಯಕ್ತಿಗಳನ್ನು ಬೆಸೆಯುವ ರಕ್ತದಾನ ಮಾಡುವುದು ಶ್ರೇಷ್ಟ ಕಾರ್ಯ. ಇಂತಹ ಕಾರ್ಯದಲ್ಲಿ ಕಳೆದ 41 ವರ್ಷಗಳಿಂದ ತೊಡಗಿಸಿಕೊಂಡವರು ಸುಳ್ಯದ ಪಿ.ಬಿ.ಸುಧಾಕರ ರೈ.
ರಕ್ತದಾನವನ್ನು ಹವ್ಯಾಸವಾಗಿಸಿ ಕಳೆದ 41 ವರ್ಷಗಳಿಂದ ವರ್ಷಕ್ಕೆ ಮೂರು-ನಾಲ್ಕು ಬಾರಿಯಂತೆ ಒಟ್ಟು 105 ಬಾರಿ ರಕ್ತದಾನ ಮಾಡುವ ಮೂಲಕ ಹಲವರ ಜೀವ ಉಳಿಸಲು ನೆರವು ನೀಡಿದವರು ಸುಳ್ಯದ ವರ್ತಕರ ಸಂಘದ ಅಧ್ಯಕ್ಷ, ನೆಟ್ ಕಾಂ ಮಾಲಕ ಪಿ.ಬಿ.ಸುಧಾಕರ ರೈ.
ದೇಶ ಮಾತ್ರವಲ್ಲದೆ ವಿದೇಶದಲ್ಲಿಯೂ ಇವರು ರಕ್ತದಾನ ಮಾಡಿದ್ದಾರೆ. ತನ್ನ 17ನೇ ವಯಸ್ಸಿನಲ್ಲಿ ಆರಂಭಗೊಂಡ ರಕ್ತದಾನ ಮಾಡುವ ಸೇವೆ 58ನೇ ವರ್ಷದಲ್ಲಿಯೂ ಮುಂದುವರಿಸಿದ್ದಾರೆ. ಮೂರು ತಿಂಗಳಿಗೊಮ್ಮೆ ಎಂಬ ರೀತಿ ವರ್ಷಕ್ಕೆ ಗರಿಷ್ಠ ನಾಲ್ಕು ಬಾರಿ ಒಬ್ಬ ವ್ಯಕ್ತಿ ರಕ್ತದಾನ ಮಾಡಬಹುದು. ವರ್ಷಕ್ಕೆ ಮೂರು ಅಥವಾ ನಾಲ್ಕು ಬಾರಿ ಇವರು ತಪ್ಪದೇ ರಕ್ತದಾನ ಮಾಡುತ್ತಾರೆ. ತನ್ನ ಮತ್ತು ಮಕ್ಕಳ ಜನ್ಮ ದಿನದ ದಿನ ಇವರು ರಕ್ತದಾನ ಮಾಡುವ ಹವ್ಯಾಸ ಬೆಳೆಸಿಕೊಂಡಿದ್ದಾರೆ. ರಕ್ತ ಬೇಕಾಗಿದೆ ಎಂಬ ಮಾಹಿತಿ ಎಲ್ಲಿಂದ ಬಂದರೂ ಕೂಡಲೇ ಸ್ಪಂದಿಸುವ ಅವರು ರೋಗಿಗಳಿಗೆ ರಕ್ತದ ವ್ಯವಸ್ಥೆ ಮಾಡಲು ಮುಂಚೂಣಿಯಲ್ಲಿರುತ್ತಾರೆ.
ಪಿಯುಸಿಯಲ್ಲಿ ಓದುತ್ತಿದ್ದಾಗ ತನ್ನ ಸಹಪಾಠಿಯ ಸಹೋದರಿಯ ಜೀವ ಉಳಿಸಲು ಸುಳ್ಯದಿಂದ ಲಾರಿ ಹತ್ತಿ ಮಂಗಳೂರಿಗೆ ತೆರಳಿ ಪ್ರಥಮವಾಗಿ ರಕ್ತದಾನ ಮಾಡಿದ್ದರು ಸುಧಾಕರ ರೈ. ಆಗ ಅವರಿಗೆ ರಕ್ತದಾನದ ಮಹತ್ವವಾಗಲೀ ತನ್ನ ರಕ್ತ ಗುಂಪು ಆಗಲೀ ಗೊತ್ತಿರಲಿಲ್ಲ. ಬಳಿಕ ಪದವಿಗಾಗಿ ಮಂಗಳೂರಿಗೆ ಹೋದಾಗ ಅಲ್ಲಿ ಬಂಟ್ಸ್ ಹಾಸ್ಟೇಲ್‍ನಲ್ಲಿ ವಾಸವಿದ್ದಾಗ ಇವರು ನಿರಂತರವಾಗಿ ರಕ್ತ ನೀಡುವ ಹವ್ಯಾಸ ಬೆಳೆಸಿದರು. ತನ್ನ ಮಿತ್ರರನ್ನೂ ರಕ್ತದಾನ ಮಾಡುವಂತೆ ಪ್ರೇರೇಪಿಸಿದರು. 1985ರಲ್ಲಿ ಇವರು ವೃತ್ತಿಗಾಗಿ ದುಬಾಯಿಗೆ ತೆರಳಿದರು. ಅಲ್ಲಿ ರಕ್ತದಾನ ಮಾಡುವವರ ಸಂಖ್ಯೆ ತೀರಾ ಕಡಿಮೆ. ರಕ್ತದಾನ ಮಾಡುವವರಿಗೆ ಸ್ವಾಗತ ಎಂಬ ಬೋರ್ಡ್‍ನ್ನು ಆಸ್ಪತ್ರೆಗಳಲ್ಲಿ, ಕಂಪೆನಿಗಳಲ್ಲಿ ನೋಟೀಸ್ ಬೋರ್ಡ್‍ನಲ್ಲಿ ಹಾಕುತ್ತಿದ್ದರು. ಇದನ್ನು ಗಮನಿಸಿದ ಇವರು ಅಲ್ಲಿ ರಕ್ತದಾನ ನೀಡಲು ಆರಂಭಿಸಿದರು. ಸುಮಾರು 40ಕ್ಕೂ ಹೆಚ್ಚು ಮಂದಿಯ ರಕ್ತದಾನಿಗಳ ಗುಂಪನ್ನು ಕಟ್ಟಿದ್ದರು. ದುಬೈ ಸರಕಾರ ನೀಡುತ್ತಿದ್ದ ಬ್ಲಡ್ ರಕ್ತದಾನಿಗಳ ಕಾರ್ಡ್ ಇವರಲ್ಲಿ ಈಗಲೂ ಇದೆ. ವಿದೇಶದಲ್ಲಿದ್ದ 15 ವರ್ಷವೂ ಇವರು ತಪ್ಪದೇ ರಕ್ತದಾನ ಮಾಡುತ್ತಾ ಬಂದಿದ್ದರು.
2000 ದಲ್ಲಿ ವಿದೇಶದಿಂದ ಬಂದು ಸುಳ್ಯದ ಕುರುಂಜಿಭಾಗ್‍ನಲ್ಲಿ ಉದ್ಯಮ ಆರಂಭಿಸಿದ ಬಳಿಕ ಕೆ.ವಿ.ಜಿ ಕ್ಯಾಂಪಸ್‍ನ ವಿದ್ಯಾರ್ಥಿಗಳ ತಂಡವನ್ನು ಕಟ್ಟಿ ರಕ್ತದಾನ ಮಾಡುತ್ತಾ ಬಂದರು. ಕೆ.ವಿ.ಜಿ ಮೆಡಿಕಲ್ ಕಾಲೇಜು ಆರಂಭವಾದ ಮೇಲೆ ಇವರು ಮತ್ತು ತಂಡ ನಿರಂತರ ರಕ್ತದಾನ ಮಾಡುತ್ತಿದ್ದಾರೆ. ಪುಸ್ತಕದಲ್ಲಿ ರಕ್ತದಾನ ಮಾಡುವವರ ಹೆಸರು ವಿಳಾಸ, ರಕ್ತದ ಗುಂಪು, ರಕ್ತದಾನ ಮಾಡಿದ ದಿನಾಂಕವನ್ನು ದಾಖಲಿಸಲು ಆರಂಭಿಸಿದರು. ಕೆ.ವಿ.ಜಿ ಕ್ಯಾಂಪಸ್‍ನ ಹಲವಾರು ವಿದ್ಯಾರ್ಥಿಗಳು ಇವರ ಕರೆಗೆ ಓಗೊಟ್ಟು ಬಂದು ರಕ್ತದಾನದಲ್ಲಿ ಭಾಗವಹಿಸುತ್ತಿದ್ದರು. ಕೆ.ವಿ.ಜಿ ಮೆಡಿಕಲ್ ಕಾಲೇಜಿನ ವತಿಯಿಂದ ಪ್ರತಿ ಬಾರಿ ರಕ್ತದಾನ ಮಾಡಿದಾಗಲೂ ಪ್ರಮಾಣ ಪತ್ರವನ್ನೂ ನೀಡುತ್ತಾರೆ. ಹಲವಾರು ರಕ್ತದಾನ ಕ್ಯಾಂಪ್‍ಗಳನ್ನೂ ಇವರ ನೇತೃತ್ವದಲ್ಲಿ ಸಂಘಟಿಸಿದ್ದಾರೆ.
ವಾಟ್ಸಾಪ್ ಆಪ್ ಬಂದ ಮೇಲಂತೂ ಇವರ ರಕ್ತದಾನ ಕಾರ್ಯ ಇನ್ನಷ್ಟು ವಿಸ್ತಾರಗೊಂಡಿತು. ರಕ್ತದಾನಿಗಳದ್ದೇ ಹಲವಾರು ವಾಟ್ಸಾಪ್ ಗ್ರೂಪ್‍ಗಳನ್ನು ರಚಿಸಿ ನೂರಾರು ಮಂದಿಯನ್ನು ಸೇರಿಸಿ ಹಲವರನ್ನು ರಕ್ತದಾನಿಗನ್ನಾಗಿ ಮಾಡಿದ್ದಾರೆ. ಈಗ ವಾಟ್ಸಾಪ್ ಗ್ರೂಪ್‍ಗಳ ಮೂಲಕ ಮಾಹಿತಿ ನೀಡಿ ರಕ್ತ ಅಗತ್ಯವಿದ್ದವರಿಗೆ ಕೂಡಲೇ ವ್ಯವಸ್ಥೆ ಮಾಡಲು ಸಹಾಯಕವಾಗುತ್ತದೆ. ಹತ್ತಕ್ಕೂ ಹೆಚ್ಚು ರಕ್ತದಾನ ಗ್ರೂಪ್‍ಗಳನ್ನು ಇವರೇ ನಿರ್ವಹಿಸುತ್ತಿದ್ದಾರೆ. ವಿವಿಧ ಕಡೆಗಳಲ್ಲಿಯೂ ರಕ್ತದಾನ ಗ್ರೂಪ್‍ಗಳನ್ನು ರಚಿಸಿ ಯುವಕರನ್ನು ಸೇರಿಸಿದ್ದಾರೆ. ವಾಟ್ಸಾಪ್ ಗ್ರೂಪಲ್ಲಿ ಹಾಕಿದರೆ ಹಲವರು ಯುವಕರು ರಕ್ತ ನೀಡಲು ಮುಂದೆ ಬರುತ್ತಾರೆ. ವಾಟ್ಸಾಪ್ ಗ್ರೂಪ್‍ಗಳು ಬಂದ ಮೇಲೆ ಇದಕ್ಕೆ ಒಂದು ಶಿಸ್ತು ಬಂದಿದೆ ಎನ್ನುತ್ತಾರೆ ಸುಧಾಕರ ರೈ.
ನಾಳೆ ಸನ್ಮಾನ:
ಭಾರತೀಯ ರೆಡ್‍ಕ್ರಾಸ್ ಸಂಸ್ಥೆಯ ಕರ್ನಾಟಕ ಶಾಖೆಯ ವತಿಯಿಂದ ನಾಳೆ(ಜೂ.14) ಬೆಂಗಳೂರಿನಲ್ಲಿ ನಡೆಯುವ ರಕ್ತದಾನಿಗಳ ದಿನಾಚರಣೆಯಲ್ಲಿ ನೂರಕ್ಕೂ ಹೆಚ್ಚು ಬಾರಿ ರಕ್ತದಾನ ಮಾಡಿದಕ್ಕೆ ಸುಧಾಕರ ರೈ ಅವರನ್ನು ಗುರುತಿಸಿ ಸನ್ಮಾನಿಸಲಾಗುತ್ತದೆ.
ಸುಧಾಕರ ರೈ ಮಾತ್ರವಲ್ಲದೆ ಇವರ ಕುಟುಂಬದ ಎಲ್ಲರೂ ರಕ್ತದಾನಿಗಳಾಗಿದ್ದಾರೆ. ಇವರ ಹಿರಿಯ ಸಹೋದರ ಪಿ.ಬಿ.ದಿವಾಕರ ರೈ ಸೇರಿ ನಾಲ್ಕು ಮಂದಿ ಸಹೋದರರು ಮತ್ತು ಮೂವರು ಸಹೋದರಿಯರು ಹಲವು ಬಾರಿ ರಕ್ತದಾನ ಮಾಡಿದ್ದಾರೆ. ಸುಧಾಕರ ರೈ ಪುತ್ರ ಸ್ವಸ್ತಿಕ್ ಕೂಡ ರಕ್ತದಾನ ಮಾಡಲು ಆರಂಭಿಸಿದ್ದಾರೆ.
ಸಂಘಟನೆಗಳಲ್ಲೂ ಸಕ್ರಿಯರು ಇವರು:
ಹಲವಾರು ಸಂಘ ಸಂಸ್ಥೆಗಳಲ್ಲೂ ಸುಧಾಕರ ರೈ ಸಕ್ರೀಯರು. ಸುಳ್ಯದ ವರ್ತಕರ ಸಂಘದ ಅಧ್ಯಕ್ಷರಾಗಿರುವ ಇವರು ಸುಳ್ಯ ಅಯ್ಯಪ್ಪ ಭಕ್ತ ವೃಂದದ ಅಧ್ಯಕ್ಷರು. ಅಯ್ಯಪ್ಪ ಸೇವಾ ಟ್ರಸ್ಟ್, ಕುರುಂಜಿ ಭಾಗ್ ಶ್ರೀಕೃಷ್ಣ ಜನ್ಮಾಷ್ಟಮಿ ಸಮಿತಿ, ಆಳ್ವಾಸ್ ನುಡಿಸಿರಿ-ವಿರಾಸತ್ ಸುಳ್ಯ ಘಟಕದ ಅಧ್ಯಕ್ಷರಾಗಿದ್ದಾರೆ. ಕಾಞಂಗಾಡ್-ಕಾಣಿಯೂರು ರೈಲ್ವೇ ಹಳಿ ನಿರ್ಮಾಣ ಕ್ರಿಯಾ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ. ಜಯಕರ್ನಾಟಕ ಸಂಘಟನೆಯ ತಾಲೂಕು ಸಂಚಾಲಕರಾಗಿ, ಅಮೆಚೂರ್ ಕಬಡ್ಡಿ ಅಸೋಸಿಯೇಶನ್‍ನ ಜಿಲ್ಲಾ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅಲ್ಲದೆ ಹತ್ತು ಹಲವು ಸಂಘನಟಗಳಲ್ಲೂ ಸಕ್ರಿಯರಾಗಿ ದುಡಿಯುತ್ತಿದ್ದಾರೆ.