ದೆಹಲಿಯಲ್ಲಿ ಆಯೋಜಿಸಿದ್ದ 58ನೇ ಜ್ಞಾನಪೀಠ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು, ಚಿತ್ರಕೂಟದ ತುಳಸಿ ಪೀಠದ ಸಂಸ್ಥಾಪಕ ಮತ್ತು ಮುಖ್ಯಸ್ಥ ಜಗದ್ಗುರು ರಾಮಭದ್ರಾಚಾರ್ಯ ಅವರಿಗೆ ಜ್ಞಾನಪೀಠ ಪ್ರಶಸ್ತಿ ಪ್ರದಾನ ಮಾಡಿದರು.
22 ಭಾಷೆಗಳನ್ನು ಮಾತನಾಡಬಲ್ಲ, ಸಂಸ್ಕೃತ, ಹಿಂದಿ, ಅವಧಿ, ಮೈಥಿಲಿ ಭಾಷೆಗಳಲ್ಲಿ ಪ್ರವೀಣರಾಗಿರುವ ಜಗದ್ಗುರು ರಾಮಭದ್ರಾಚಾರ್ಯ ಅವರು, 100ಕ್ಕೂ ಹೆಚ್ಚು ಪುಸ್ತಕಗಳು ಮತ್ತು 50 ಪ್ರಬಂಧಗಳನ್ನು ಬರೆದಿದ್ದಾರೆ. ಸಂಸ್ಕೃತ ವ್ಯಾಕರಣ, ನ್ಯಾಯ ಮತ್ತು ವೇದಾಂತ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ನಿಪುಣರಾಗಿದ್ದಾರೆ. ಇದೇ ಸಂದರ್ಭದಲ್ಲಿ ಕವಿ ಗುಲ್ಜಾರ್ ಅವರಿಗೂ ಅವರ ಅನುಪಸ್ಥಿತಿಯಲ್ಲಿ ಜ್ಞಾನಪೀಠ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಬಳಿಕ ರಾಷ್ಟ್ರಪತಿ ದ್ರೌಪದಿ ಮುರ್ಮು, ಸಾಹಿತ್ಯ ಸಮಾಜವನ್ನು ಜೋಡಿಸುತ್ತದೆ. ಸಾಹಿತ್ಯ ಮಾನವೀಯತೆಯ ಸಂಸ್ಕೃತಿ, ನಂಬಿಕೆಗಳು ಮತ್ತು ಸಂಪ್ರದಾಯಗಳ ಅಡಿಪಾಯವಾಗಿದೆ. ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿರುವ ಹಲವು ಮಹನೀಯರನ್ನು ಹೊಂದಿರುವ ದೇಶ ಭಾರತ. ಸಾಹಿತ್ಯ, ಜ್ಞಾನ ಮತ್ತು ಬುದ್ಧಿವಂತಿಕೆಯ ಪ್ರತಿರೂಪವಾಗಿದೆ.ಇದು ಸಮಾಜದ ಪ್ರತಿಬಿಂಬ ಮಾತ್ರವಲ್ಲದೇ, ಸಕಾರಾತ್ಮಕ ಬದಲಾವಣೆಯ ಅಗತ್ಯವನ್ನು ಕಂಡುಕೊಳ್ಳಬಹುದಾದ ಕನ್ನಡಿಯಾಗಿ ಕಾರ್ಯನಿರ್ವಹಿಸುತ್ತದೆ ಎಂದರು. ಭಾರತದ ಭಾ಼ಷೆಯ ಉತ್ಕೃಷ್ಟತೆಯನ್ನು ಹೆಚ್ಚಿಸಲು ಶ್ರಮಿಸಿರುವವರಿಗೆ ನೀಡುತ್ತಿರುವ ಜ್ಞಾನಪೀಠ ಪ್ರಶಸ್ತಿ ಸಾಧಕರ ಮೈಲುಗಲ್ಲಿಗೆ ಸಹಕಾರಿಯಾಗಿದೆ ಎಂದರು.
ಪ್ರಶಸ್ತಿ ಸ್ವೀಕರಿಸಿದ ಜಗದ್ಗುರು ರಾಮಭದ್ರಾಚಾರ್ಯ, ಸಂಸ್ಕೃತ ಮತ್ತು ಸಂಸ್ಕೃತಿ ಭಾರತದ ಮೂಲ ಮಂತ್ರವಾಗಿದೆ. ಸಂಸ್ಕೃತದಲ್ಲಿ ಕಾವ್ಯಗಳನ್ನು ಬರೆಯುವ ಮೂಲಕ ದೇಶದ ಸಂಸ್ಕೃತಿಯನ್ನು ಇನ್ನಷ್ಟು ಹೆಚ್ಚಿಸುವ ಪ್ರಯತ್ನ ಮಾಡಲಾಗಿದೆ ಎಂದು ತಿಳಿಸಿದರು. ವೇದ ಮಂತ್ರಗಳು ಭಾರತದ ಉಸಿರಾಗಿವೆ. ದೇಶವನ್ನು ನಾಶ ಮಾಡಲು ಪ್ರಯತ್ನ ಪಟ್ಟವರನ್ನು ಸಂಪೂರ್ಣ ಸಮಾಪ್ತಿ ಮಾಡಬೇಕು ಎಂದು ವೇದದಲ್ಲಿ ಉಲ್ಲೇಖಿಸಲಾಗಿದೆ. ಆಪರೇಷನ್ ಸಿಂಧೂರ್ ನಲ್ಲಿ ಕೂಡ ಪ್ರಧಾನಿ ನರೇಂದ್ರ ಮೋದಿ ಅವರು ವೇದದಲ್ಲಿ ಉಲ್ಲೇಖವಾಗಿರುವ ಕಾರ್ಯವನ್ನೇ ಮಾಡಿದ್ದಾರೆ ಎಂದು ಹೇಳಿದರು. ಉಗ್ರರನ್ನು ಗುರಿಯಾಗಿಸಿಕೊಂಡು ನಡೆಸಿದ ದಾಳಿಯಲ್ಲಿ ಒಬ್ಬ ನಾಗರಿಕನೂ ಸಾವನ್ನಪ್ಪದಂತೆ ನೋಡಿಕೊಂಡಿರುವುದು ಈ ದೇಶದ ಹೆಮ್ಮೆಯ ವಿಷಯ ಎಂದರು.