ಮಾನವ ಹಾಗೂ ಪ್ರಾಣಿಗಳ ಸಂಘರ್ಷ ಅದು ನಿರಂತರ. ಆದರೆ ಇತ್ತೀಚಿನ ದಿನಗಳಲ್ಲಿ ಇದು ಜಾಸ್ತಿಯಾಗುತ್ತಿದೆ. ಅದರಲ್ಲೂ ಆನೆ ಹಾಗೂ ಮಾನವನ ನಡುವಿನ ಸಂಘರ್ಷ ಅತಿಯಾಗುತ್ತಿದೆ. ಇದು ಆನೆಗಳ ಜೀವಕ್ಕೆ ಕುತ್ತು ತರುತ್ತಿದೆ. ಇತ್ತೀಚೆಗಂತೂ ಆನೆಗಳ ಸಾವಿನ ಸರಮಾಲೆ ನಡೆಯುತ್ತಿದೆ.
ಧರ್ಮಪುರಿ ಜಿಲ್ಲೆಯ ಪೆನ್ನಾಗರಂ ಹಾಗೂ ಹೊಗೇನಕಲ್‌ನ ಅರಣ್ಯದಲ್ಲಿ ಸಂಭವಿಸಿದ ಎರಡು ಆನೆಗಳ ಸಾವಿಗೆ ಏನು ಕಾರಣ ಎಂಬುದನ್ನು ಅನ್ವೇಷಿಸಲು ತಮಿಳುನಾಡು ಅರಣ್ಯ ಇಲಾಖೆ ಮುಂದಾಗಿದೆ. ವರದಿಗಳ ಪ್ರಕಾರ ಒಂದು ತಿಂಗಳಲ್ಲಿ ಆರು ಆನೆಗಳು ಸಾವನ್ನಪ್ಪಿದ್ದು ರಾಜ್ಯದ ಅನೇಕ ಪರಿಸರ ಕಾರ್ಯಕರ್ತರು ಹಾಗೂ ಪ್ರಾಣಿ ಕಲ್ಯಾಣ ಇಲಾಖೆಗಳನ್ನು ದಿಗ್ಮೂಢಗೊಳಿಸಿದೆ.
ಆಹಾರ ನೀರು ಅರಸಿಕೊಂಡು ಹಳ್ಳಿಗಳಿಗೆ ಆಗಮಿಸುವ ಆನೆಗಳು : ಜಿಲ್ಲೆಯಲ್ಲಿ ಅರಣ್ಯ ಇಲಾಖೆಯ ಪ್ರಕಾರ ನದಿ ಜಲಾನಯನ ಪ್ರದೇಶದಲ್ಲಿರುವ ಪೆನ್ನಾಗರಂ ಮತ್ತು ಹೊಗೇನಕಲ್ ಅರಣ್ಯದಲ್ಲಿ 50ಕ್ಕೂ ಹೆಚ್ಚು ಆನೆಗಳಿದ್ದು, ಇವುಗಳಲ್ಲಿ ಹೆಚ್ಚಿನ ಆನೆಗಳು ಕಾಡಿನಲ್ಲಿ ಅಲೆದಾಡುತ್ತವೆ. ಬೇಸಿಗೆಯಲ್ಲಿ ನೀರು ಹಾಗೂ ಆಹಾರಕ್ಕಾಗಿ ಸಮೀಪದ ಹಳ್ಳಿಗಳಿಗೂ ಭೇಟಿ ನೀಡುತ್ತವೆ. ಈ ಸಮಯದಲ್ಲಿ ಸ್ಥಳೀಯರು ಆನೆಗಳು ಹಳ್ಳಿಗಳಿಗೆ ಬಂದಿರುವುದರ ಮಾಹಿತಿಯನ್ನು ಅರಣ್ಯ ಇಲಾಖೆಗೆ ತಿಳಿಸುತ್ತಾರೆ ಅಂತೆಯೇ ಅಧಿಕಾರಿಗಳು ಅವುಗಳ ಮನವೊಲಿಸಿ ಮತ್ತೆ ಅರಣ್ಯಕ್ಕೆ ಕಳುಹಿಸುತ್ತಾರೆ.
ಗಂಡು ಆನೆ ಹಾಗೂ ಹೆಣ್ಣಾನೆಯ ಮೃತದೇಹ ಪತ್ತೆ : ಹೊಗೇನಕಲ್ ಮೀಸಲು ಅರಣ್ಯದಲ್ಲಿ ಗಂಡು ಆನೆಯೊಂದರ ಮೃತದೇಹ ಪತ್ತೆಯಾಗಿದ್ದು, 15 ವರ್ಷದ ಹೆಣ್ಣು ಆನೆಯೊಂದು ಪೆನ್ನಾಗರಂ ಮೀಸಲು ಅರಣ್ಯದ ಚಿನ್ನಾರು ಜಲಾನಯನ ಪ್ರದೇಶದಲ್ಲಿ ಸತ್ತು ಬಿದ್ದಿರುವುದು ಏಪ್ರಿಲ್ 3ರಂದು ಪತ್ತೆಯಾಗಿದೆ. ಖಚಿತ ಮಾಹಿತಿ ಮೇರೆಗೆ ಅರಣ್ಯ ಇಲಾಖೆಯು ಪಶುವೈದ್ಯರ ನೇತೃತ್ವದಲ್ಲಿ ಶೋಧ ತಂಡವೊಂದನ್ನು ಸ್ಥಳಕ್ಕೆ ರವಾನಿಸಿದೆ.
ಆನೆಗಳ ಸಾವಿಗೆ ಕಾರಣವೇನು? : ಇಲಾಖೆಯ ಕೆಲವು ಅಧಿಕಾರಿಗಳ ತಿಳಿಸಿರುವ ಪ್ರಕಾರ, ಆರೋಗ್ಯ ಸಮಸ್ಯೆಯಿಂದ ಒಂದು ಆನೆ ಸಾವನ್ನಪ್ಪಿದೆ. ಮತ್ತೊಂದು ಆನೆ ನದಿಯನ್ನು ದಾಟಲು ಮುಂದಾದಾಗ ನದಿಯ ಕೆಸರಿನಲ್ಲಿ ಸಿಕ್ಕಿ ಬಿದ್ದು ಮೃತಗೊಂಡಿದೆ ಎಂದು ವರದಿ ತಿಳಿಸಿದೆ. ಮರಣೋತ್ತರ ಪರೀಕ್ಷೆಯ ಆಧಾರದ ಮೇಲೆ ವೈದ್ಯಕೀಯ ತಂಡವು ನೀಡುವ ವರದಿಯ ಆಧಾರದ ಮೇಲೆ ವಿಚಾರಣೆ ನಡೆಸಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.
ಹೆಚ್ಚುತ್ತಿರುವ ಆನೆಗಳ ಸಾವು: ಮಾರ್ಚ್‌ನಲ್ಲಿ ಧರ್ಮಪುರಿ ಜಿಲ್ಲೆಯ ಮಾರಂಡ ಅಳ್ಳಿ ಬಳಿ ಅಕ್ರಮ ವಿದ್ಯುತ್ ಬೇಲಿಗೆ ಸಿಲುಕಿ ಮೂರು ಹೆಣ್ಣು ಆನೆಗಳು ಪ್ರಾಣ ಕಳೆದುಕೊಂಡಿದ್ದು, ತಿಂಗಳ ಕೊನೆಯಲ್ಲಿ ಧರ್ಮಪುರಿಯ ಕಂಬೈನಲ್ಲೂರು ಬಳಿ ವಿದ್ಯುತ್ ತಂತಿಗೆ ಅಡ್ಡಲಾಗಿ ಆನೆ ಸಾವನ್ನಪ್ಪಿತ್ತು.
ಧರ್ಮಪುರಿಯ ಹೊಗೇನಕಲ್ ಮತ್ತು ಪೆನ್ನಾಗರಂ ಅರಣ್ಯದಲ್ಲಿ ಸತತ ಎರಡು ದಿನಗಳಿಂದ ಎರಡು ಆನೆಗಳು ಸಾವನ್ನಪ್ಪಿವೆ. ಇತ್ತೀಚೆಗಷ್ಟೇ ಧರ್ಮಪುರಿಯಲ್ಲಿ ಬಾವಿಯಿಂದ ರಕ್ಷಿಸಿ ಮುದುಮಲೈನ ತೆಪ್ಪಕಾಡು ಶಿಬಿರಕ್ಕೆ ಕಳುಹಿಸಿದ್ದ ಎಳೆಯ ಮರಿ ಕೂಡ ಅನಾರೋಗ್ಯದಿಂದ ಮೃತಪಟ್ಟಿದೆ ಎಂದು ವರದಿಯಾಗಿದೆ.
ಧರ್ಮಪುರಿ ವಲಯದಲ್ಲಿ ಒಮ್ಮೆಗೆ ಆರು ಆನೆಗಳು ಮೃತ: ಇದಕ್ಕೂ ಮುನ್ನ ರಕ್ಷಣೆ ಮಾಡಿದ ನಂತರ ನಾಲ್ಕು ತಿಂಗಳ ಮರಿಯಾನೆಯನ್ನು ಆಸ್ಕರ್ ಖ್ಯಾತಿಯ ಬೊಮ್ಮನ್ ಹಾಗೂ ಬೆಲ್ಲಿ ದಂಪತಿಗಳಿಗೆ ಹಸ್ತಾಂತರಿಸಲಾಯಿತು. ಈ ನಡುವೆ ಜಿಲ್ಲೆಯಲ್ಲಿ ಕೇವಲ ಒಂದು ತಿಂಗಳ ಅವಧಿಯಲ್ಲಿ ಒಟ್ಟು ಆರು ಆನೆಗಳು ಸಾವನ್ನಪ್ಪಿರುವುದು ಪರಿಸರ ಮತ್ತು ಪ್ರಾಣಿ ದಯಾ ರಕ್ಷಕರನ್ನು ಬೆಚ್ಚಿ ಬೀಳಿಸಿದೆ. ಧರ್ಮಪುರಿ ಪ್ರದೇಶದಲ್ಲಿ ಆರು ಆನೆಗಳು ಒಮ್ಮೆಲೇ ಸಾವನ್ನಪ್ಪಿರುವುದು ಇದೇ ಮೊದಲ ಬಾರಿಯಾಗಿದ್ದು ಇಂತಹ ಘಟನೆ ಮರುಕಳಿಸದಂತೆ ತಡೆಯಲು ಭವಿಷ್ಯದ ದುರಂತಗಳನ್ನು ತಡೆಗಟ್ಟಲು ಅರಣ್ಯ ಇಲಾಖೆ ಇನ್ನಷ್ಟು ಸಮಗ್ರ ತನಿಖೆಮಾಡಬೇಕು ಎಂದು ಪ್ರಾಣಿ ದಯಾ ಸಂಘಗಳು ಒತ್ತಾಯಿಸಿವೆ. ಆನೆಗಳ ರಕ್ಷಣೆಗೆ ಅರಣ್ಯ ಇಲಾಖೆ ಉತ್ತಮ ತಂತ್ರಗಳನ್ನು ಅಭಿವೃದ್ಧಿಪಡಿಸಬೇಕು ಹಾಗೂ ತಜ್ಞರೊಂದಿಗೆ ಸಮಾಲೋಚಿಸಬೇಕು ಎಂದು ರಕ್ಷಕರು ವಿನಂತಿಸಿದ್ದಾರೆ.
ಅಂಕಿ–ಅಂಶ ಏನು ಹೇಳುತ್ತದೆ?: ಇದಲ್ಲದೆ, ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆಯ ಪ್ರಾಜೆಕ್ಟ್ ಆನೆ ವಿಭಾಗದ ಅಂಕಿಅಂಶಗಳ ಪ್ರಕಾರ, ಕಳೆದ ಹತ್ತು ವರ್ಷಗಳಲ್ಲಿ ತಮಿಳುನಾಡಿನಲ್ಲಿ 89 ಆನೆಗಳು ವಿದ್ಯುತ್ ಸ್ಪರ್ಶದಿಂದ ಸಾವನ್ನಪ್ಪಿವೆ. ತಮಿಳುನಾಡಿನಲ್ಲಿ 2012-13 ಮತ್ತು 2021-22 ರ ಆರ್ಥಿಕ ವರ್ಷಗಳ ನಡುವೆ ಒಟ್ಟು 82 ಆನೆಗಳು ಸಾವನ್ನಪ್ಪಿವೆ ಎಂದು ಇತ್ತೀಚಿನ ಆರ್‌ಟಿಐ ವರದಿ ಬಹಿರಂಗಪಡಿಸಿದೆ. ರಾಜ್ಯ ಅರಣ್ಯ ಏಜೆನ್ಸಿ ಪ್ರಕಾರ, ಏಪ್ರಿಲ್ 2022 ಮತ್ತು ಮಾರ್ಚ್ 7, 2023 ರ ನಡುವೆ ಹೆಚ್ಚುವರಿ ಏಳು ಆನೆಗಳು ಸಾವನ್ನಪ್ಪಿವೆ ಎಂದು ವರದಿಯಾಗಿದೆ.