ಸುಳ್ಯ: ಮುಂಗಾರು ಬಿರುಸುಗೊಂಡಿದ್ದು ಸುಳ್ಯ ತಾಲೂಕಿನಲ್ಲಿ ಭಾರೀ ಮಳೆಯಾಗಿದೆ. ಸೋಮವಾರ ರಾತ್ರಿಯಿಂದ ಆರಂಭಗೊಂಡ ಭಾರೀ ಮಳೆ ಮಂಗಳವಾರ ದಿನಪೂರ್ತಿ ಮುಂದುವರಿಯಿತು. ಮಂಗಳವಾರ ಬೆಳಿಗ್ಗೆ ಸ್ವಲ್ಪ ಹೊತ್ತು ಬಿಡುವು ನೀಡಿದ ಮಳೆ 11 ಗಂಟೆಯ ವೇಳೆಗೆ ಬಿರುಸುಗೊಂಡಿತು. 60 ಗಂಟೆಯಲ್ಲಿ 355 ಮಿಮೀ ಮಳೆಯಾಗಿದೆ. ಜೂನ್ ತಿಂಗಳು ಪೂರ್ತಿ ಬಂದ ಮಳೆ ಈಗ ಕೇವಲ 60 ಗಂಟೆಯಲ್ಲಿ ಸುರಿದಿದೆ. ಹೀಗಾಗಿ ಜಿಲ್ಲೆಯ ವಿವಿದೆಡೆ ಅವಾಂತರ ಸೃಷ್ಟಿಸಿದೆ.
ಸುಳ್ಯ ತಾಲೂಕಿನಾದ್ಯಂತ ಎಲ್ಲೆಡೆ ಭಾರೀ ಮಳೆ ಸುರಿದಿದೆ. ಕತ್ತಲು ಕವಿದು ನಿರಂತವಾಗಿ ಎಡೆ ಬಿಡದೆ ಸುರಿದ ಜಡಿ ಮಳೆ ಜನ ಜೀವನವನ್ನು ಅಸ್ತವ್ಯಸ್ತಗೊಳಿಸಿತು. ಜನರು ಮನೆಯಿಂದ ಹೊರ ಬರಲಾಗದ ರೀತಿಯಲ್ಲಿ ಮಳೆ ಮತ್ತು ಶೀತ ಗಾಳಿ ಬೀಸುತ್ತಿತ್ತು. ಮಧ್ಯಾಹ್ನದ ಬಳಿಕ ಮಳೆ ಮತ್ತಷ್ಟು ಬಿರುಸಾಯಿತು. ಹೀಗಾಗಿ ವಾತಾವರಣ ಶೀತಮಯವಾಗಿದೆ. ಪಯಸ್ವಿನಿ ಸೇರಿದಂತೆ ನದಿ, ಹಳ್ಳ ಕೊಳ್ಳಗಳಲ್ಲಿ ನೀರಿನ ಪ್ರಮಾಣ ಅಧಿಕವಾಗಿದೆ. ಮಳೆಯಿಂದಾಗಿ ಅಲ್ಲಲ್ಲಿ ಕೃಷಿ ತೋಟಗಳಿಗೆ ನೀರು ನುಗ್ಗಿದ, ಗಾಳಿ ಮಳೆಗೆ ಮರಗಳು ಧರಾಶಾಹಿಯಾಗಿ ರಸ್ತೆ ತಡೆ ಉಂಟಾದ ಘಟನೆಗಳು ನಡೆದಿದೆ. ಪ್ರತೀ ಬಾರಿಯೂ ಮಳೆಯಂತೆ ಈ ಬಾರಿಯೂ ಬರೆ ಕುಸಿತ, ಪಾಲ ಕುಸಿತ, ಗೋಡೆ ಕುಸಿತ ಹಲವು ಕಡೆ ನಡೆದಿದೆ. ಯಾವುದೇ ಆತಂಕಕಾರಿ ದುರ್ಘಟನೆ ನಡೆಯಲಿಲ್ಲ. ಮಳೆಯಿಂದ ಅಲ್ಲಲ್ಲಿ ವಿದ್ಯುತ್ ವ್ಯತ್ಯಯಗೊಂಡಿತು. ಸುಳ್ಯ ನಗರದಲ್ಲಿ ಸೋಮವಾರ ರಾತ್ರಿಯಿಂದಲೇ ವಿದ್ಯುತ್ ವ್ಯತ್ಯಯಗೊಂಡಿತ್ತು. ಚರಂಡಿಗಳು ಬ್ಲಾಕ್ ಆಗಿ ಅಲ್ಲಲ್ಲಿ ನೀರು ರಸ್ತೆಯಲ್ಲಿಯೇ ಹರಿದು ರಸ್ತೆಗಳೂ ಹೊಳೆಯಂತಾಗಿತ್ತು. ಇದರಿಂದ ಸಾರ್ವಜನಿಕರು, ವಾಹನ ಸವಾರರು ಸಮಸ್ಯೆಯಲ್ಲಿ ಸಿಲುಕಿಕೊಂಡರು.
ಮಳೆ ಬಂದರೆ ರಸ್ತೆಯಲ್ಲಿಯೇ ಹರಿಯುವ ನೀರು:
ಮಳೆ ಬಿರುಸುಗೊಂಡಾಗ ಸುಳ್ಯ ನಗರದ ದುಸ್ಥಿತಿಯೂ ಆರಂಭಗೊಂಡಿದೆ. ಕೆಸರು ಮಿಶ್ರಿತ ಮಳೆಯ ನೀರು ರಸ್ತೆಯಲ್ಲಿಯೇ ಹರಿಯುತಿದೆ. ನಗರದಲ್ಲಿ ಬಹುತೇಕ ಕಡೆಗಳಲ್ಲಿ ಸಮರ್ಪಕವಾದ ಚರಂಡಿಗಳೇ ಇಲ್ಲ. ಮಳೆ ಬಂದರೆ ನೀರು ಸರಿಯಾಗಿ ಚರಂಡಿಗೆ ಸೇರದೆ ರಸ್ತೆಯಲ್ಲಿಯೇ ಹರಿಯುತ್ತಿದ್ದು ರಸ್ತೆ ತೋಡಿನಂತಾಗುತ್ತದೆ. ಸುಳ್ಯ ನಗರದ ಹಳೆಗೇಟಿನಲ್ಲಿ ರಸ್ತೆಯ ಮಧ್ಯೆ ಕೆಸರು ನೀರು ಶೇಖರಣೆಯಾಗಿದ್ದು ಹಳ್ಳದಂತೆ ಭಾಸವಾಗುತ್ತಿತ್ತು. ವಾಹನಗಳು ಸಂಚರಿಸುವಾಗ ಕೆಸರು ನೀರು ಪರಿಸರವಿಡೀ ಕಾರಂಜಿಯಂತೆ ಚಿಮ್ಮುತಿದೆ. ಪಾದಚಾರಿಗಳ ಮೇಲೂ ಕೆಸರ ನೀರ ಸಿಂಚನವಾಗುತಿದೆ. ಮಳೆ ಬಂದ ಕೂಡಲೇ ಇಲ್ಲಿ ರಸ್ತೆಯ ಮೇಲೆ ಕೆಸರು ನೀರಿನ ಕೃತಕ ಕೆರೆ ನಿರ್ಮಾಣವಾಗುತ್ತದೆ.
ಹರಿವು ಹೆಚ್ಚಿಸಿದ ಗೌರಿ ಹೊಳೆ, ಮುಳುಗಿದ ಕಿಂಡಿ ಅಣೆಕಟ್ಟು
ನಿರಂತರ ಸುರಿಯುತ್ತಿರುವ ಮಳೆಯಿಂದಾಗಿ ಬೆಳ್ಳಾರೆಯಿಂದ ಪೆರುವಾಜೆ-ಕುಂಡಡ್ಕ -ನಾಡೋಳಿ-ಸಾರಕರೆ-ಸರ್ವೆ-ಮೂಲಕ ವೀರಮಂಗಲ ಮೂಲಕ ಕುಮಾರಧಾರ ತಲುಪುವ ಗೌರಿ ಹೊಳೆ ತನ್ನ ಹರಿವು ಹೆಚ್ಚಿಸಿಕೊಂಡಿದೆ. ಹೀಗೆಯೇ ನಿರಂತರವಾಗಿ ಮಳೆ ಸುರಿದರೆ ಹೊಳೆತಟದ ಕೃಷಿತೋಟಗಳು ಮುಳುಗಡೆಯಾಗಲಿದೆ.ಅಲ್ಲದೆ ಕಡಬ ತಾಲೂಕಿನ ಪಾಲ್ತಾಡಿ ಗ್ರಾಮ ಹಾಗೂ ಸುಳ್ಯ ತಾಲೂಕಿನ ಪೆರುವಾಜೆ ಗ್ರಾಮವನ್ನು ಜೋಡಿಸುವಲ್ಲಿ ಗೌರಿಹೊಳೆಗೆ ಅಡ್ಡಲಾಗಿರುವ ಕುಂಡಡ್ಕ ಕಿರು ಸೇತುವೆಯಲ್ಲಿ ನೀರು ಅಪಾಯಕಾರಿ ಮಟ್ಟದಲ್ಲಿ ಇದೆ.ಆಲ್ಲದೆ ತೀರಾ ಶಿಥಿಲಾವಸ್ಥೆಗೆ ತಲುಪಿ ಕುಸಿಯುವ ಹಂತಕ್ಕೆ ಬಂದಿರುವ ಸೇತುವೆಯೂ ಕೊಚ್ಚಿಹೋಗುವ ಭೀತಿಯನ್ನು ಜನತೆ ಎದುರಿಸುತ್ತಿದ್ದಾರೆ. ಈ ಸೇತುವೆ ಕುಸಿದು ಸಂಪರ್ಕ ಕಡಿತವಾದರೆ ಪಾಲ್ತಾಡಿ ಭಾಗದಿಂದ ಸವಣೂರು ,ಕಾಣಿಯೂರು ,ಪೆರುವಾಜೆಗೆ ಹೋಗಲು ಪುತ್ತೂರು ಅಥವಾ ಬೆಳ್ಳಾರೆ ಮೂಲಕ ಸುತ್ತಿ ಬಳಸಿ ಹೋಗಬೇಕಾದ ಪರಿಸ್ಥಿತಿ ಬರಲಿದೆ. ಬೆಳ್ಳಾರೆಯ ಗೌರಿ ಹೊಳೆಯ ಕೆಳಸೇತುವೆ ಮುಳುಗಡೆಯಾಗಿದ್ದು, ಅಕ್ಕಪಕ್ಕದ ತೋಟಗಳಿಗೆ ನೀರು ನುಗ್ಗಿ ತೋಟವೂ ಜಲಾವೃತ್ತಗೊಂಡಿದೆ. ತೀರಾ ಅಪಾಯಕಾರಿ ಮಟ್ಟದಲ್ಲಿ ನೀರಿನ ಹರಿವಿದೆ
ತೋಟಕ್ಕೆ ನೀರು ನುಗ್ಗುವ ಭೀತಿ:
ಬೆಳ್ಳಾರೆಯಿಂದ ಪೆರುವಾಜೆ-ಕುಂಡಡ್ಕ -ನಾಡೋಳಿ-ಸಾರಕರೆ-ಸರ್ವೆ-ಮೂಲಕ ವೀರಮಂಗಲ ತನಕವೂ ಹೊಳೆಯ ಎರಡೂ ಬದಿಗಳಲ್ಲಿ ತೋಟಗಳಿದ್ದು,ಮಳೆ ಇದೇ ರೀತಿ ಮುಂದುವರಿದರೆ ತೋಟಕ್ಕೆ ಮಳೆ ನೀರು ನುಗ್ಗುವ ಭೀತಿಯನ್ನು ಕೃಷಿಕರು ಎದುರಿಸುತ್ತಿದ್ದಾರೆ.
ವೀರಮಂಗಲ : ಗುಡ್ಡ ನಿರ್ಮಾಣ ಹಂತದ ಮನೆಗೆ ಹಾನಿ:
ನಿರಂತರ ಸುರಿಯುತ್ತಿರುವ ಮಳೆಯಿಂದ ಗುಡ್ಡ ಕುಸಿದು ನಿರ್ಮಾಣಹಂತದಲ್ಲಿದ್ದ ಮನೆಯೊಂದಕ್ಕೆ ಹಾನಿಯಾಗಿ ಲಕ್ಷಾಂತರ ರೂ.ನಷ್ಟ ಸಂಭವಿಸಿದ ಘಟನೆ ಶಾಂತಿಗೋಡು ಗ್ರಾಮದ ವೀರಮಂಗಲ ಎಂಬಲ್ಲಿ ನಡೆದಿದೆ. ವೀರಮಂಗಲ ಹೊಸಮನೆ ನಿವಾಸಿ ಚಂದ್ರಶೇಖರ ಗೌಡರ ನಿರ್ಮಾಣ ಹಂತದ ಮನೆ ಮೇಲೆಯೇ ಗುಡ್ಡ ಕುಸಿದ ಪರಿಣಾಮ ನಷ್ಟ ಸಂಭವಿಸಿದೆ . ಜೆಸಿಬಿಯಿಂದ ಮಣ್ಣು ತೆರವು ಕಾರ್ಯ ಮಾಡಲಾಗುತ್ತಿದೆ.
ವೀರಮಂಗಲ-ಕೈಲಾಜೆ ರಸ್ತೆ ಕುಸಿತ:
ಇದೇ ಪರಿಸರದಲ್ಲಿರುವ ವೀರಮಂಗಲ-ಕೈಲಾಜೆ ಸಣಪರ್ಕಿಸುವ ರಸ್ತೆಯೂ ಮಳೆಯಿಂದಾಗಿ ಕುಸಿಯುತ್ತಿದ್ದು,ಸಂಪರ್ಕ ಕಡಿತದ ಭೀತಿ ಎದುರಾಗಿತ್ತು.ಕಳೆದ ಬಾರಿ ಕೂಡ ನಿರಂತರ ಮಳೆಯಿಂದಾಗಿ ವೀರಮಂಗಲದ ಹಲವೆಡೆ ಕುಮಾರಾಧಾರ ನದಿ ನೀರು ನುಗ್ಗಿ ಕೆಲವು ಮನೆಗಳು ದ್ವೀಪದಂತಾಗಿತ್ತು.
ಕುಮಾರಧಾರಾ ಸ್ನಾನಘಟ್ಟ ಮುಳುಗಡೆ: ಭಾರೀ ಮಳೆಯ ಕಾರಣದಿಂದ ಕುಮಾರಧಾರಾ ಸ್ನಾನಘಟ್ಟ ಮುಳುಗಡೆಯಾಗಿದೆ. ಹೀಗಾಗಿ ಮುಂಜಾಗ್ರತಾ ಕ್ರಮಗಳನ್ನು ಇಲ್ಲಿ ಕೈಗೊಳ್ಳಲಾಗಿದೆ.