ಸುಳ್ಯದಲ್ಲಿ ನಡೆಯುತ್ತಿರುವ ಜಲಾಂದೋಲನ ಭವಿಷ್ಯದ ದೃಷ್ಠಿಯಿಂದ, ಸಮಾಜದ ದೃಷ್ಠಿಯಿಂದಲೂ, ಸಾಮಾಜಿಕ ಕಳಕಳಿಯಿಂದಲೂ ಈ ಅಭಿಯಾನ ಭರವಸೆ ಮೂಡಿಸಿದೆ. ಶಾಲೆಗಳಲ್ಲಿ ನಡೆಸುತ್ತಿರುವ ಇಂಗುಗುಂಡಿ ಅಭಿಯಾನದ ಮೂಲಕ ಮಕ್ಕಳು ಮನೆಮನೆಯಲ್ಲಿ ಸಣ್ಣ ಸಣ್ಣ ಇಂಗುಗುಂಡಿ ಮಾಡುತ್ತಿದ್ದಾರೆ. ಯಾವುದೇ ಖರ್ಚಿಲ್ಲದೆ ಮಾಡಬಹುದಾದ ಈ ಕಾರ್ಯದ ಮೇಲೆ ಇಂದಿನ ಬೆಳಕು..
ಸುಳ್ಯ: ಧನ್ಯವಾದ……
ನಿಹಾರಿಕಾ, 5 ನೇ ತರಗತಿ ಕುಮಾರಸ್ವಾಮಿ ಶಾಲೆ…
ಶುಭಾಶಯ ಇಂಚರ ಶೆಟ್ಟಿ , 7 ನೇ ತರಗತಿ ಕುಮಾರಸ್ವಾಮಿ ಶಾಲೆ…..
ಕಂಗ್ರಾಟ್ಸ್ ರಮೀಜ್..! 9 ನೇ ತರಗತಿ ತೆಕ್ಕಿಲ್ ಶಾಲೆ..
ಇಷ್ಟೇ ಅಲ್ಲ, ಇನ್ನಷ್ಟು ಹೆಸರುಗಳ ಪಟ್ಟಿ ಇದೆ. ಇವರೆಲ್ಲಾ ಮನೆಯಲ್ಲಿ ಇಂಗುಗುಂಡಿ ನಿರ್ಮಾಣ ಮಾಡಿರುವ ವಿದ್ಯಾರ್ಥಿಗಳು.
ಸುಳ್ಯದ ಸ್ನೇಹ ಶಿಕ್ಷಣ ಸಂಸ್ಥೆಯ ಸಂಚಾಲಕ ಡಾ.ಚಂದ್ರಶೇಖರ ದಾಮ್ಲೆ ಅವರ ನೇತೃತ್ವದಲ್ಲಿ ತಾಲೂಕಿನ ವಿವಿಧ ಶಾಲೆಗಳಲ್ಲಿ ಜಲಸಂರಕ್ಷಣೆಗಾಗಿ ಮನೆಮನೆಇಂಗುಗುಂಡಿ ಅಭಿಯಾನ ನಡೆಯುತ್ತಿದೆ. ಜಲಾಮೃತ ಎಂಬ ಹೆಸರಿನಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮಕ್ಕೆ ಶಿಕ್ಷಣ ಇಲಾಖೆಯೂ ಸಹಕಾರ ನೀಡಿದೆ.
ತಾಲೂಕಿನ ಬಹುಪಾಲು ಶಾಲೆಗಳಲ್ಲಿ ಈಗಾಗಲೇ ಈ ಅಭಿಯಾನ ನಡೆದಿದೆ.ಸುಮಾರು 2 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಇಂಗುಗುಂಡಿ ರಚನೆ ಹಾಗೂ ಜಲಸಂರಕ್ಷಣೆಯ ಅನಿವಾರ್ಯತೆಯ ಬಗ್ಗೆ ಮಾಹಿತಿ ನೀಡಲಾಗಿದೆ. ಇದರ ಫಲವಾಗಿ ಇಂದು ವಿದ್ಯಾರ್ಥಿಗಳು ಮನೆಮನೆಗಳಲ್ಲಿ ಇಂಗುಗುಂಡಿ ಮಾಡಿ ಶಾಲೆಯ ಅಧ್ಯಾಪಕರಿಗೆ ಮಾಹಿತಿ ನೀಡುತ್ತಿದ್ದಾರೆ. ಒಂದು ಇಂಗುಗುಂಡಿ ಮೂಲಕ ಸಣ್ಣ ಪ್ರಮಾಣದಲ್ಲಿ ಜಲ ಮರುಪುರಣವಾಗುತ್ತದೆ. ಭವಿಷ್ಯದಲ್ಲಿ ಇದರ ಪ್ರಯೋಜನ ಸಾಕಷ್ಟು ಮಂದಿಗೆ ಅರಿವಿಗೆ ಬರುತ್ತದೆ. ಹೀಗಾಗಿ ಸ್ನೇಹ ಶಾಲೆಯ ಈ ಯೋಜನೆ ಹಾಗೂ ಶಿಕ್ಷಣ ಇಲಾಖೆಯ ಸಹಕಾರ ಸಮಾಜಕ್ಕೆ ಕೊಡುಗೆಯನ್ನು ನೀಡಿದೆ.
ಇನ್ನಷ್ಟು ಶಾಲೆಗಳಲ್ಲಿ ಇಂಗುಗುಂಡಿ ರಚನೆಗೆ ಪ್ರೇರೇಪಣೆ ದೊರೆಯಬೇಕಿದೆ. ಶಾಲೆಗಳಲ್ಲಿ ಒಂದು ಅವಧಿಯಲ್ಲಿ ಜಲಸಂರಕ್ಷಣೆಯ ಮಹತ್ವವನ್ನೇ ತಿಳಿಸುವ ಕೆಲಸ ಆಗಬೇಕಿದೆ.
ಮನೆಮನೆ ಇಂಗುಗುಂಡಿ ಅಭಿಯಾನದ ಸಂದರ್ಭ ಮರ್ಕಂಜ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಮಹಾಬಲ ಅವರ ಅನುಭವವನ್ನು ಡಾ.ಚಂದ್ರಶೇಖರ ದಾಮ್ಲೆ ಹೀಗೆ ಹಂಚಿಕೊಂಡಿದ್ದಾರೆ, ಮರ್ಕಂಜ ಸರಕಾರಿ ಶಾಲೆಯ ಬಾವಿಯಲ್ಲಿ ಈ ವರ್ಷ ನೀರು ಆರಿತ್ತು. ಅಲ್ಲಿಯ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ಮಹಾಬಲರು ಕಳೆದವಾರ ಬಾವಿಯಿಂದ ಆರು ಅಡಿ ದೂರದಲ್ಲಿ ಎರಡು ಬದಿಗಳಲ್ಲಿ ಒಂದೊಂದು ಇಂಗು ಗುಂಡಿಗಳನ್ನು ಮಾಡಿದರು. ಅಂಗಳದ ಮಳೆನೀರನ್ನು ಆ ಇಂಗು ಗುಂಡಿಗಳಿಗೆ ಹೋಗುವಂತೆ ಮಾಡಿದರು. ಒಂದೇ ದಿನದಲ್ಲಿ ಪರಿಣಾಮ ಕಾಣಿಸಿತು. ಈಗ ಬಾವಿಯಲ್ಲಿ ನೀರು ತುಂಬಿದೆ. ಇದನ್ನು ಶಾಲಾ ಮುಖ್ಯೋಪಾಧ್ಯಾಯ ರಾಜೀವ್ ಹಾಗೂ ಶಿಕ್ಷಕ ಬಳಗದವರು ಸಂತಸದಿಂದ ಈ ಸುದ್ದಿ ಹೇಳುತ್ತಾರೆ.
Advertisement